• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ಹಾಸಿ ಹೊದ್ದುಕೊಳ್ಳುವಷ್ಟಿದೆ ಈ ಅಕ್ಷರದ ವಿಷ್ಯ

By ಶ್ರೀನಾಥ್ ಭಲ್ಲೆ
|
Google Oneindia Kannada News

ಕೆಲವೊಮ್ಮೆ ನಾನು ಆಯ್ದುಕೊಳ್ಳುವ ವಿಷಯ ಒಂದು ಪದವಾಗಿದ್ದು, ಅದನ್ನು ಗೋಡೆಗೆ ಗೂಟ ಹೊಡೆದು ನಿಲ್ಲಿಸಿ, ಆನಂತರ ಗಡಿಯಾರದ ಮುಳ್ಳಿನಂತೆ 360 ಡಿಗ್ರಿ ಸುತ್ತಿ ಬರುತ್ತೇನೆ. ಜೀವನದಲ್ಲಿ ನಡೆದ ಯಾವುದಾದರೂ ಘಟನೆಯನ್ನು ನೆನೆದು ಅದರಿಂದ ಏನಾದರೂ ವಿಷಯ ಆಯ್ದುಕೊಂಡು ಬರೆದರೆ ಸ್ವಲ್ಪ ಭಿನ್ನವಾಗಿರುತ್ತದೆ ಅಲ್ಲವೇ ಅಂತ ಅಂದುಕೊಂಡೆ. ಆಗ ನೆನಪಾಗಿದ್ದೇ ಈ ಕೆಳಗಿನ ಕಾಲ್ಪನಿಕ ಘಟನೆ.

ಹಾಯಾಗಿ ಹಾಲ್'ನಲ್ಲಿ ಕೂತು ಟಿವಿಯಲ್ಲಿ ಕ್ರಿಕೆಟ್ ನೋಡುವಾಗ, ಅಮ್ಮ ಹಾಲಿಟ್ಟಿದ್ದೀನಿ ಗಮನ ಇರಲಿ ಉಕ್ಕಿ ಚೆಲ್ಲಿ ಹಾಳಾದೀತು, ಎಂದು ಹಾಯ್ದು ಹೋಗುವಾಗ ಆಡಿದ ಮಾತು ಕಿವಿಯ ಹಾಳೆಗೆ ಬಡಿದು ಒಳಗೆ ಸಾಗಿತ್ತು. ಸರಿ ಅಂತ, ಸ್ಟೋವ್ ಬಳಿ ನಿಂತು ಅದು ಉಕ್ಕಲಿ ಅಂತ ಹಾತೊರೆದು ಕಾಯುವಾಗ, ಆ ತರಲೆ ಹಾಲು ಒಂದೊಂದೂ ಕೆನೆಯ ಪದರ ಮೂಡಲು ಒಂದೊಂದು ಗಂಟೆ ತೆಗೆದುಕೊಳ್ಳಲು, ಆಟದ ಕಡೆ ಗಮನ ಹರಿಸಿದ್ದೇ ತಪ್ಪಾಯ್ತು ನೋಡಿ. ಉಕ್ಕಿ ಚೆಲ್ಲಿದ ಹಾಲು, ಹಾಲಾಹಲವನ್ನೇ ಸೃಷ್ಟಿ ಮಾಡಿತು. ಹಾತೆಯನ್ನು ಕಂಡು ಹಾರುವ ಹಾಗೆ, ಚೆಲ್ಲಿದ ಹಾಲನ್ನು ಕಂಡು ಹಾರಾಡಿದ ನಾರಿ, ಬೈಗುಳ ಹಾರವನ್ನೇ ಹಾಕಬಹುದೇ?

ಮನಸ್ಸಿಗೆ ಹಾಯ್ ಎನಿಸಿದ್ದು ಸುಳ್ಳಲ್ಲ

ಈ ಸನ್ನಿವೇಶ ಬಹುಶಃ ನಮ್ಮೆಲ್ಲರ ಬಾಲ್ಯದಲ್ಲೂ ಆಗಿರುವುದೇ. ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ವಿಶೇಷ ಅನ್ನಿಸಿದ್ದೇ ಇಡೀ ಸನ್ನಿವೇಶವನ್ನು ಕಟ್ಟಿರುವ ಈ ಅಕ್ಷರವನ್ನು ಕಂಡಾಗ. ಆಗ ಮನಸ್ಸಿಗೆ ಹಾಯ್ ಎನಿಸಿದ್ದು ಸುಳ್ಳಲ್ಲ. ಅದುವೇ "ಹಾ' ಅಕ್ಷರ. ಅದುವೇ "ಹಾ ಸೀತೆ"ಯಲ್ಲಿನ "ಹಾ".

ಹಾಟ್ ಆಗುತ್ತಾ ಬಂದ ಹಾಲು ಉಕ್ಕಿ ಸುರಿದಾಗ ಶುಭ ಸಂಕೇತ ಎಂದೇ ಭಾವಿಸಿ ಹೆಚ್ಚು ತಲೆ ಕೆಡಿಸಿಕೊಳ್ಳದವರು ಕೆಲವು ಮಂದಿ. ಮನೆಗೆ ಒಳಿತಾಗುತ್ತದೆ ಎಂದುಕೊಳ್ಳುವವರು ಕೆಲವರು. ಒಂದು ಗೃಹಪ್ರವೇಶದ ದಿನ, ಬೇರೇನೇ ಪೂಜೆ ಪುನಸ್ಕಾರ ಮಾಡದವರೂ ಹಾಲು ಉಕ್ಕಿಸುವುದನ್ನು ಮಾಡುತ್ತಾರೆ ಎಂದು ನೋಡಿ ಬಲ್ಲೆ. ಹೊಸ ಸ್ಟೋವ್ ಅಥವಾ Burner ಆಗಿದ್ದರೂ ಹಾಲು ಉಕ್ಕಿ ಸುರಿದಾಗ ಅದೊಂದು ಸಮೃದ್ಧಿಯ ಸಂಕೇತ ಎಂದೇ ನಂಬಿಕೆ ಇರಿಸಿಕೊಂಡಿರುತ್ತಾರೆ. ಆ ಶುಭ ಸಂದರ್ಭದಲ್ಲಿ ಹಾಲು ಉಕ್ಕಿ ಸುರಿಯಲಿ ಎಂದು ಕಾಯುವವರು ಬಹುಶಃ ಅದಾದ ಮೇಲೆ ಹಾಲು ಉಕ್ಕಿ ಚೆಲ್ಲಲು ಕಾರಣರಾದವರಿಗೆ ಬೈಗುಳ ಗ್ಯಾರಂಟಿ.

ಉಕ್ಕಿ ಹರಿದ ಹಾಲಾಹಲವನ್ನು ಉಂಡವ ನಂಜುಂಡ

ಹಾಲಿನ ವಿಷಯವನ್ನೇ ಮುಂದುವರೆಸಿದರೆ, ಪಾಲ್ಗಡಲನ್ನು ಮಂಥನ ಮಾಡಿದಾಗ ಉಕ್ಕಿ ಹರಿದ ಹಾಲಾಹಲವನ್ನು ಉಂಡವ ಆ ನಂಜುಂಡ. ಉಕ್ಕಿದ್ದು ಅನಿಲವೋ? ದ್ರವವೋ? ಅಥವಾ ಘನವೋ? ಗಾಳಿಯನ್ನು ಅಥವಾ ದ್ರವವನ್ನೋ ಕುಡಿಯುತ್ತೇವೆ. ಹಿಟ್ಟು ಘನ, ಅದನ್ನು ತಿನ್ನುವುದನ್ನು ಹಿಟ್ಟು ಉಣ್ಣೋದು ಅಂತಾರೆ. ಹಾಗೆ ತಿಂದವರು ಉಂಡವರು. ಈ ಹಾಲಾಹಲ ಎಂಬುದು ವಿಷವಾಯು ಆಗಿದ್ದರೂ, ಉಂಡ ಎಂಬ ಪದಬಳಕೆ ಹೇಗೆ ಬಂತು? ನನಗೆ ಅರ್ಥವಾಗಿರುವಂತೆ ಆ ನಂಜನ್ನು ಜಗದ ಹಿತಕ್ಕಾಗಿ ಪ್ರೀತಿಯಿಂದಲೇ ಇಷ್ಟಪಟ್ಟು ಸ್ವೀಕರಿಸಿದ ಎಂಬುದನ್ನಾಗಿ ಅರ್ಥೈಸಿಕೊಂಡರೆ ನಂಜನ್ನು ಉಂಡವ ನಂಜುಂಡ ಎಂದಾಗುತ್ತದೆ. ವರ್ಷಕ್ಕೊಮ್ಮೆ ಘನರೂಪದ ಬೇವನ್ನು ಉಂಡು ಬೇವುಂಡ ಆಗಲು ಬೆದರುವ ನಾವು, ವರ್ಷದುದ್ದಕ್ಕೂ ಕಾಣದ ಬೇವಿನ ಕಹಿಯನ್ನು ಉಣ್ಣುತ್ತಲೇ ಸಾಗೋದು ಸೋಜಿಗ ಅಲ್ಲವೇ?

ವೈರಾಣು ಇಂದಿನ ಜನಜೀವನದಲ್ಲಿ ಹಾಸುಹೊಕ್ಕಾಗಿದೆ

ಕೊರೊನಾ ಎಂಬ ವೈರಾಣು ಇಂದಿನ ಜನಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬ ಮಾತು ಕನಿಷ್ಠ ಒಂದು ವರ್ಷದಿಂದೀಚೆಗೆ ಸಾಮಾನ್ಯ ಮಾತಾಗಿದೆ. ಒಂದು ಬಟ್ಟೆಯಲ್ಲಿ ಉದ್ದದ ದಾರದ ಎಳೆಗಳು ಎಷ್ಟು ಮುಖ್ಯ ಅಷ್ಟೇ ಮುಖ್ಯ ಅಡ್ಡ ದಾರದ ಎಳೆಗಳು. ಮಗ್ಗದಲ್ಲಿರುವ ಈ ಅಡ್ಡ-ಉದ್ದದ ದಾರದ ಎಲೆಗಳನ್ನು ಹಾಸುಹೊಕ್ಕು ಎನ್ನುತ್ತಾರೆ. ಒಂದು ಬಟ್ಟೆಯಲ್ಲಿ ಇವು ಲೀನ. ಧನಾತ್ಮಕ ಅಂಶಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾದಾಗ ಸಂದರ್ಭಕ್ಕೆ ಅನುಸಾರವಾಗಿ ಆ ಅಂಶಗಳನ್ನು ಬರಮಾಡಿಕೊಳ್ಳುವ ವಿಷಯವೇ ಏಳುವುದಿಲ್ಲ. ಒಂದು ಸಂದರ್ಭದಲ್ಲಿ ಸುಳ್ಳನ್ನು ಹೇಳಿದ್ದಾಗ, ಪ್ರತೀ ಬಾರಿಯೂ ಅದನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಆದರೆ ಸತ್ಯವನ್ನು ಹೇಳಿದ್ದಾಗ ಈ ಸಂದರ್ಭವೇ ಏಳುವುದಿಲ್ಲ.

ಬಿಚ್ಚಿಟ್ಟ ಹಾಸಿಗೆಗಳು ಮತ್ತೆ ಸುತ್ತಿಕೊಳ್ಳಲೇ ಇಲ್ಲ

ಹಾಸು ಎಂಬ ಪದಕ್ಕೆ spread ಅಥವಾ ಹರವು ಎಂಬ ಅರ್ಥವೇ ಇದ್ದರೂ ಬೇರೆ ಬೇರೆ ಸಂದರ್ಭದಲ್ಲಿ ಇದು ನಾಮಪದವೋ ಅಥವಾ ಕ್ರಿಯಾಪದವೋ ಆಗಬಹುದು. ಪಗಡೆ ಆಟ ಆಡಿರುವವರಿಗೆ ಪ್ಲಸ್ ಆಕಾರದ ಹಾಸು ನೆನಪಿರುತ್ತದೆ. ವಿನ್ಯಾಸ ಸ್ವರೂಪದಲ್ಲಿ ನೆಲದ ಮೇಲೆ ಹಾಸುವ ಕಾರ್ಪೆಟ್ ಅನ್ನು ನೆಲಹಾಸು ಎನ್ನುತ್ತಾರೆ.

ಕಾಲ ಒಂದಿತ್ತು, ಉದಾಹರಣೆಗೆ ನಮ್ಮ ಮನೆಯಲ್ಲೇ ಅಂದುಕೊಳ್ಳಿ. ರಾತ್ರಿ ಎಲ್ಲರ ಊಟವಾದ ಮೇಲೆ. ಗೋಮ ಹಚ್ಚಿ ನೆಲಸ ಒರೆಸಿ ಒಣಗಿದ ಮೇಲೆ. ಸುತ್ತಿಟ್ಟಿದ್ದ ಹಾಸಿಗೆಗಳನ್ನು ನೆಲದ ಮೇಲೆ ಹಾಸಿ ಮಲಗುತ್ತಿದ್ದೆವು. ಮನೆ ತುಂಬಾ ಜನರಿರುವ ಮಧ್ಯಮ ವರ್ಗದ ಮನೆಗಳಲ್ಲಿ, ದೇಹಕ್ಕೊಂದು ಮಂಚ ಇರಲಿಲ್ಲ. ಮನೆ ದೊಡ್ಡದಾಗಿ, ಮನೆಯ ಜನರು ಕಡಿಮೆಯಾದಾಗ, ದೇಹಕ್ಕೆರಡು ಮಂಚ ಇದ್ದರೂ ಅಚ್ಚರಿಯಿಲ್ಲ ಬಿಡಿ. ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ, ಮಂಚ ಬಂದಂತೆ ಬಿಚ್ಚಿಟ್ಟ ಹಾಸಿಗೆಗಳು ಮತ್ತೆ ಸುತ್ತಿಕೊಳ್ಳಲೇ ಇಲ್ಲ. ಹಾಸಿಗೆಯು ನೆಲದ ಮೇಲಿರಲಿ ಅಥವಾ ಮಂಚದ ಮೇಲಿರಲಿ ಒಟ್ಟಿನಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚೋಣ.

ಹಾಸಿಗೆಗೂ ಹಾಸ್ಯಕ್ಕೂ ಏನಾದರೂ ಲಿಂಕ್ ಇದೆಯೇ?

ಎಲ್ಲಾ ಮಾತುಗಳು ಬಹಳ ಸೀರಿಯಸ್ ಅಂತಪ್ಪ, ಥತ್ ಎಂದಿರಾ? ಬೇಡಾ ಬಿಡಿ. ಹಾ-ಕಾರದಲ್ಲಿ ಹಾಹಾಕಾರ ಇದೆ, ಅದರಂತೆಯೇ ಹಾಹಾಕಾರದಲ್ಲಿ ಹಾಕಾರ ಇದೆ. ಹಾ-ಕಾರದಲ್ಲಿ ನವರಸಗಳಲ್ಲಿ ನನಗೆ ಅತ್ಯಂತ ಪ್ರಿಯವಾದ ಹಾಸ್ಯವೂ ಇದೆ. ಈ ಹಾಸಿಗೆಗೂ ಹಾಸ್ಯಕ್ಕೂ ಏನಾದರೂ ಲಿಂಕ್ ಇದೆಯೇ? ಹಾಸಿಗೆ ಮಾತು ಬಂದ ಕೂಡಲೇ ಈ ಮಾತು ಬಂದದ್ದೇಕೆ? ಹಾಸಿದ ಹಾಸಿಗೆಯನ್ನು ಬೆಳಿಗ್ಗೆ ಎದ್ದ ಮೇಲೆ ಸುತ್ತಿ ಇಡುವುದು ಅಭ್ಯಾಸ ಎನ್ನಬೇಡಿ, ಅನಿವಾರ್ಯತೆ. ಇಲ್ಲದಿದ್ದರೆ ಓಡಾಡಲಿಕ್ಕೆ ಜಾಗ ಇರುತ್ತಿರಲಿಲ್ಲ. ಸುತ್ತುವುದು ಎಂದರೆ ರೋಲ್ ಮಾಡಿ ಇಡೋದು ಅಂತ. ಹಾಸ್ಯ ಜೋರಾಗಿದ್ದರೆ ನೆಲದ ಮೇಲೆ ಉರುಳಾಡಿಕೊಂಡು ನಗುವುದಕ್ಕೆ ROFL ಎನ್ನುತ್ತಾರೆ ಹ್ರಸ್ವ ಜಗತ್ತಿನವರು.

ಅಪಹಾಸ್ಯ ಎಂಬುದು ಹಾಸ್ಯದ ವಿರುದ್ಧ ಪದ

ಹಾಸ್ಯ ನಮ್ಮ ಅವಿಭಾಜ್ಯ ಅಂಗವಾಗಬೇಕು. ಹಾಸ್ಯಪ್ರವೃತ್ತಿಯವರು ಯಾವುದೇ ಸನ್ನಿವೇಶದಲ್ಲೂ ಹಾಸ್ಯ ಕಾಣುತ್ತಾರೆ. ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಹಾಸ್ಯ ಮಾಡುವವ ಹಾಸ್ಯಗಾರ. ಹಾಸ್ಯ ಮಾಡಲು ಹೋಗಿ ತಾವೇ ಹಾಸ್ಯಕ್ಕೆ ಆಹಾರವಾಗಿ ಆಸ್ಪದ ನೀಡುವುದು ಹಾಸ್ಯಾಸ್ಪದ. ಒಬ್ಬರನ್ನು ನಗಿಸುವುದು ಹಾಸ್ಯ, ಅದೇ ಮತ್ತೊಬ್ಬರನ್ನು ಆಡಿಕೊಂಡು ಹಾಸ್ಯ ಮಾಡಿದರೆ ಅದು ಅಪಹಾಸ್ಯವಾಗುತ್ತದೆ. ಅಪಹಾಸ್ಯ ಎಂಬುದು ಹಾಸ್ಯ ಪದದ ವಿರುದ್ಧ ಪದ. ಹಾಗೆಂದು ಒಂದು ಪದದಲ್ಲಿರುವ "ಅಪ' ತೆಗೆದರೆ, ಆ ಪದ ವಿರುದ್ಧ ಪದವಾಗುವುದಿಲ್ಲ. ಉದಾಹರಣೆಗೆ ಅಪರಾಧ ಎಂಬ ಪದದಲ್ಲಿ ಅಪ ತೆಗೆದರೆ ಅಪರಾಧದ ವಿರುದ್ಧ ಪದ "ರಾಧ" ಎಂದರೆ ಕೃಷ್ಣನಿಗೆ ಬೇಸರವಾಗುತ್ತದೆ.

ನಮಗೇ ಹಾಸಿಹೊದ್ದುಕೊಳ್ಳುವಷ್ಟಿದೆ

ಕ್ಯಾಂಪಿಂಗ್ ನಲ್ಲಿ ಬಳಸುವ Sleeping Bag ಬಗ್ಗೆ ಕೇಳಿರಬಹುದು. ಅದನ್ನು ಹರಡಿ, ಜಿಪ್ ಎಳೆದುಕೊಂಡು ಚೀಲದಂತೆ ಮಾಡಿಕೊಂಡರೆ ಅದೇ ಹಾಸಿಗೆ, ಅದೇ ಹೊದಿಕೆ. ಜೀವನದಲ್ಲಿ ವಿಪರೀತ ಸಮಸ್ಯೆಗಳು ಎದುರಾಗಿ ಮತ್ಯಾರಾದರೂ ಅವರ ಸಮಸ್ಯೆಯನ್ನು ಇವರ ಮುಂದೆ ಹೇಳಿಕೊಂಡಾಗ, ನಮಗೇ ಹಾಸಿಹೊದ್ದುಕೊಳ್ಳುವಷ್ಟಿದೆ, ಇನ್ನು ನಿಮ್ಮ ಸಮಸ್ಯೆ ನಮಗೇಕೆ ಹೇಳಿಕೊಳ್ಳುತ್ತೀರಿ ಎನ್ನಬಹುದು.

ಹಾ-ಕಾರದ ಈ ಬರಹ ನಿಮಗೆ ಇಷ್ಟವಾಗಿದ್ದರೆ ಹಾರೈಕೆ ತಿಳಿಸಿ, ಎದುರಿಗೆ ಬಂದಾಗ ಹಾರೈಸಿ, ಹಾರ್ದಿಕ ಶುಭಾಶಯಗಳನ್ನು ಕಳುಹಿಸಿ. ಚೆನ್ನಾಗಿದೆ ಎಂಬ ಹಾರಿಕೆ ಮಾತು ಕೂಡ ನಡೆಯುತ್ತದೆ ಆಯ್ತಾ? ಲೈಕ್ ಒತ್ತಿ ಹಾಜರಾತಿ ಹಾಕಿದರೂ ನಡೆಯುತ್ತದೆ. ಬಹಳ ಇಷ್ಟವಾಯ್ತು ಮುಂದಿನ ಬರಹಕ್ಕೆ ಹಾತೊರೆದು ಕಾದಿದ್ದೇನೆ ಎಂದರಂತೂ ನನಗೆ ಆಕಾಶದಲ್ಲಿ ಹಾರಾಡುವಂತೆ ಅನುಭವವಾಗುತ್ತದೆ. ಹಾತೊರೆದು ಎಂಬುದು ಒಂದು ಪದ ಆಯ್ತಾ? ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇನೆ ಎಂದು ಅದನ್ನು "ಹಾ ತೊರೆದು' ಎಂದರೆ "ಹಾ" ಕಾರ ಬಿಡಬೇಕಾದೀತು.

ಹಾನಿಕಾರಕ ವೈರಾಣುವನ್ನು ತೊಲಗಿಸಿ

ಇರಲಿ ಬಿಡಿ, ಸುಮ್ಮನೆ ಹೇಳಿದೆ. ಎಲ್ಲೆಲ್ಲೂ ಇರುವ ಹಾಹಾಕಾರ ತೊಲಗಿ "ಆಹಾ'ಕಾರ ಹರಡಲಿ. ಜಗತ್ತಿನ ನೆಮ್ಮದಿಯನ್ನು ಹಾಳುಗೆಡವುತ್ತಿರುವ ಹಾನಿಕಾರಕ ವೈರಾಣುವನ್ನು ತೊಲಗಿಸಿ, ಹಾಯಾಗಿ ಈ ಸಂಸಾರದ ದೋಣಿಯನ್ನು ಹಾಯಿಸು ಎಂದು ಆ ಹಾರವ ಅವತಾರಿಯನ್ನು ಕೇಳಿಕೊಳ್ಳೋಣ. ಅಂದ ಹಾಗೆ ಈ ಬರಹದಲ್ಲಿ ಎಷ್ಟು ಬಾರಿ "ಹಾ' ಅಕ್ಷರವನ್ನು ಕಂಡಿರಿ?

English summary
Srinath Bhalle Column: Maintain social distance and stay away from coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X