ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದ ಗಡಿಭಾಗದ ಕೊಡಗಿನ 'ಕರಿಕೆ’ ಮೇಲೇಕೆ ಇಷ್ಟೊಂದು ನಿರ್ಲಕ್ಷ್ಯ?

|
Google Oneindia Kannada News

ಮಡಿಕೇರಿ, ನವೆಂಬರ್ 23: ನವೆಂಬರ್ ತಿಂಗಳಲ್ಲಿ ಕನ್ನಡದ ಬಗ್ಗೆ ಮಾತನಾಡುವ ನಾವು ನಮ್ಮದೇ ರಾಜ್ಯದ ಗಡಿಭಾಗಗಳಲ್ಲಿರುವ ಗ್ರಾಮಗಳ ಬಗ್ಗೆ ಗಮನಿಸುವುದೇ ಇಲ್ಲ. ಅಲ್ಲಿನ ಜನಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತೇವೆ. ಹೀಗಾಗಿ ಗಡಿಭಾಗದ ಗ್ರಾಮಗಳ ಜನರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಇದಕ್ಕೆ ಕೊಡಗು ಮತ್ತು ಕೇರಳ ಗಡಿಭಾಗದಲ್ಲಿರುವ ಕರಿಕೆ ಗ್ರಾಮವೇ ಸಾಕ್ಷಿಯಾಗಿದೆ.

ಈ ಗ್ರಾಮ ಕೊಡಗಿಗೆ ಸೇರಿದ್ದರೂ ವ್ಯಾವಹಾರಿಕವಾಗಿ ಕೇರಳದೊಂದಿಗೆ ಬೆಸೆದುಕೊಂಡಿದೆ ಎಂದರೆ ತಪ್ಪಾಗಲಾರದು. ಇಲ್ಲಿನ ಹೆಚ್ಚಿನ ಜನ ಕನ್ನಡ ಮರೆಯುತ್ತಿದ್ದಾರೆ. ಕೇರಳದ ಪ್ರಭಾವದಿಂದಾಗಿ ಜನರಲ್ಲಿ ಮಲಯಾಳಂ ಭಾಷೆ ಬೆಳೆಯುತ್ತಿದೆ. ಅದಕ್ಕಿಂತ ಹೆಚ್ಚಾಗಿ ಕೇರಳದ ಕಾಂಞಂಗಾಡ್ ಮತ್ತು ದಕ್ಷಿಣ ಕನ್ನಡದ ಸುಳ್ಯ ಸ್ವಲ್ಪ ಹತ್ತಿರವಾಗುವುದರಿಂದ ಇಲ್ಲಿನ ಹೆಚ್ಚಿನ ಜನರು ತಮ್ಮ ಅಗತ್ಯ ವಸ್ತುಗಳನ್ನು ಖರೀದಿಸಲು ಅಲ್ಲಿಗೆ ತೆರಳುವುದು ಮಾಮೂಲಿಯಾಗಿದೆ.

 ಮಡಿಕೇರಿಗೆ ಸೇರಿದ್ದರೂ ಇಲ್ಲಿ ಸುಳಿಯುವುದಿಲ್ಲ

ಮಡಿಕೇರಿಗೆ ಸೇರಿದ್ದರೂ ಇಲ್ಲಿ ಸುಳಿಯುವುದಿಲ್ಲ

ಕರಿಕೆ ಗ್ರಾಮ ಮಡಿಕೇರಿ ತಾಲೂಕಿಗೆ ಸೇರಿದೆ. ಆದರೆ ಯಾರೂ ಇತ್ತ ಬರುವುದೇ ಇಲ್ಲ. ಕಚೇರಿ ಕೆಲಸಗಳಿಗೆ ಸಂಬಂಧಿಸಿದಂತೆ ಬರುತ್ತಾರೆ ವಿನಃ ಬೇರೆ ಯಾವುದೇ ಖರೀದಿಗೆ ಇತ್ತ ಸುಳಿಯುವುದೇ ಇಲ್ಲ. ಇದಕ್ಕೆ ಕಾರಣವೂ ಇದೆ. ಒಂದು ರೀತಿ ಕರಿಕೆ ಗ್ರಾಮ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಗ್ರಾಮವಾಗಿ ಉಳಿದು ಹೋಗಿದೆ. ಇನ್ನು ಕರಿಕೆಯಿಂದ ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಬರಬೇಕಾದರೆ ಜನ ಸುಮಾರು 70 ಕಿ.ಮೀ. ದೂರ ಕ್ರಮಿಸಬೇಕು. ಆದರೆ ಇವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ 22 ಕಿ.ಮೀ. ಕೇರಳದ ಪ್ರಮುಖ ಪಟ್ಟಣ ಕಾಂಞಂಗಾಡ್ ‌ಗೆ 20 ಕಿ.ಮೀ ಅಂತರವಾಗುತ್ತದೆ. ಹೀಗಾಗಿ ಅವರು ತಮಗೆ ಹತ್ತಿರವಿರುವ ಪಟ್ಟಣದೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ.

ಕರಿಕೆ ಗ್ರಾಮ ಪಂಚಾಯಿತಿಯ ಜನರು ತಮ್ಮ ಕೆಲಸ ಕಾರ್ಯಗಳಿಗೆ 70 ಕಿ.ಮೀ. ದೂರದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಪ್ರತಿನಿತ್ಯ ಬರುವುದು ಅನಿವಾರ್ಯ. ಹೀಗಾಗಿ ಅವರು ಭಾಗಮಂಡಲ-ಕರಿಕೆ ರಸ್ತೆ ಮೂಲಕ ಮಡಿಕೇರಿಗೆ ಬರುತ್ತಾರೆ. ಆದರೀಗ ಇಲ್ಲಿನ ಜನಕ್ಕೆ ಸಮಸ್ಯೆಯಾಗಿರುವುದೇ ಈ ರಸ್ತೆ.

 ಸಮಸ್ಯೆಯಾಗಿ ಉಳಿದಿರುವ ರಸ್ತೆ

ಸಮಸ್ಯೆಯಾಗಿ ಉಳಿದಿರುವ ರಸ್ತೆ

ಇಲ್ಲಿನ ರಸ್ತೆ ಹೇಗಿದೆ ಎಂದರೆ, ಅಲ್ಲಲ್ಲಿ ಹೊಂಡ ಬಿದ್ದು, ವಾಹನ ಚಲಿಸುವುದಿರಲಿ, ಜನ ನಡೆಯುವುದೇ ಕಷ್ಟವಾಗಿದೆ. ಆದರೂ ಈ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಪ್ರತಿನಿತ್ಯ ಅವಘಡಗಳು ನಡೆಯುತ್ತಿದ್ದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಗೋಜಿಗೆ ಯಾರೂ ಹೋದಂತೆ ಕಾಣುತ್ತಿಲ್ಲ. ಹೀಗಾಗಿ ದಿನವೂ ನರಕ ಅನುಭವಿಸುತ್ತಾ ಜನ ಸಾಗಲೇಬೇಕಾಗಿದೆ.

ಈ ಭಾಗಮಂಡಲ-ಕರಿಕೆ ರಸ್ತೆ ಅಂತರರಾಜ್ಯಗಳ ಸಂಪರ್ಕ ರಸ್ತೆಯಾಗಿದ್ದರೂ, ಲೋಕೋಪಯೋಗಿ ಇಲಾಖೆಯ ದಾಖಲೆಗಳ ಪ್ರಕಾರ ಇದು ಜಿಲ್ಲಾ ಮುಖ್ಯ ರಸ್ತೆ (ಎಂಡಿಆರ್) ಯಾಗಿ ಪರಿಗಣಿಸಲ್ಪಟ್ಟಿದೆ. ಈ ರಸ್ತೆಗೆ ಕಾಯಕಲ್ಪ ನೀಡುವ ಬಗ್ಗೆ ಲೋಕೋಪಯೋಗಿ ಇಲಾಖೆಯಾಗಲಿ, ಕರ್ನಾಟಕ ರಾಜ್ಯ ಸರಕಾರವಾಗಲಿ ಆಸಕ್ತಿ ತೋರದಿರುವುದರಿಂದ ಇಲ್ಲಿನ ಜನ ನರಕಯಾತನೆ ಅನುಭವಿಸಲು ಕಾರಣವಾಗಿದೆ.

ದಕ್ಷಿಣ ಕನ್ನಡ ಸಂಸದರು, ಶಾಸಕರಿಗೆ ಶೇಮ್ ಶೇಮ್...!ದಕ್ಷಿಣ ಕನ್ನಡ ಸಂಸದರು, ಶಾಸಕರಿಗೆ ಶೇಮ್ ಶೇಮ್...!

 ಭೂಕುಸಿತದ ನಂತರ ಮತ್ತಷ್ಟು ಹದಗೆಟ್ಟ ರಸ್ತೆ

ಭೂಕುಸಿತದ ನಂತರ ಮತ್ತಷ್ಟು ಹದಗೆಟ್ಟ ರಸ್ತೆ

ಈ ಹಿಂದೆ ಈ ರಸ್ತೆ ಸ್ವಲ್ಪ ಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೆ ಕಳೆದ ಬಾರಿ ಮಡಿಕೇರಿ ಮತ್ತು ಸುಳ್ಯ ನಡುವೆ ಭೂಕುಸಿತ ಸಂಭವಿಸಿ ರಸ್ತೆ ಬಂದ್ ಆದ ಸಂದರ್ಭ ವಾಹನಗಳು ಮಡಿಕೇರಿ, ಭಾಗಮಂಡಲ ಕರಿಕೆ ಮೂಲಕ ಸುಳ್ಯಕ್ಕೆ ತೆರಳಲಾರಂಭಿಸಿದವು. ಈ ವೇಳೆ ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಯೂ ಹಾಳಾಗಿ ಹೋಯಿತು. ಆದರೆ ಆ ನಂತರ ರಸ್ತೆಯನ್ನು ಅಭಿವೃದ್ಧಿಪಡಿಸುವ ಗೋಜಿಗೆ ಯಾರೂ ಹೋಗಲೇ ಇಲ್ಲ. ಇದರಿಂದ ಈಗ ಕರಿಕೆಯ ಜನ ಪರದಾಡುವಂತಾಗಿದೆ.

ಸ್ಥಳೀಯರು ಹೇಳುವ ಪ್ರಕಾರ ಕೇರಳ ರಾಜ್ಯದ ಕಾಂಞಂಗಾಡ್ ‌ನಿಂದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಭಾಗಮಂಡಲ-ಕರಿಕೆ ರಸ್ತೆ ಅಭಿವೃದ್ಧಿ ಕಾಣದೆ ದಶಕಗಳೇ ಕಳೆದು ಹೋಗಿವೆಯಂತೆ. ಈ ಬಾರಿ ಭಾರೀ ಮಳೆ ಸುರಿದ ಪರಿಣಾಮ ಮಳೆಯ ಹೊಡೆತಕ್ಕೆ ರಸ್ತೆಗಳು ಹೊಂಡ ಬಿದ್ದು ಹಾಳಾಗಿವೆ. ಮುಖ್ಯ ರಸ್ತೆಯ ಸ್ಥಿತಿ ಹೀಗಾದ ಮೇಲೆ ಕರಿಕೆ ಗ್ರಾಪಂಗೆ ಒಳಪಡುವ ಸಂಪರ್ಕ ರಸ್ತೆಗಳ ಪರಿಸ್ಥಿತಿಯಂತೂ ದೇವರಿಗೆ ಪ್ರೀತಿ.

 ಡಿಸೆಂಬರ್ 4ಕ್ಕೆ ಕರಿಕೆ ಬಂದ್ ಮಾಡಿ ಪ್ರತಿಭಟನೆ

ಡಿಸೆಂಬರ್ 4ಕ್ಕೆ ಕರಿಕೆ ಬಂದ್ ಮಾಡಿ ಪ್ರತಿಭಟನೆ

ಹಾಗೆನೋಡಿದರೆ ಭಾಗಮಂಡಲ- ಕರಿಕೆ ರಸ್ತೆಯು ಅಂತರ ರಾಜ್ಯ ಸಂಪರ್ಕ ರಸ್ತೆಯಾಗಿರುವುದು ಮಾತ್ರವಲ್ಲದೆ, ಕೊಡಗಿನ ಪ್ರಮುಖ ತೀರ್ಥಕ್ಷೇತ್ರವಾದ ತಲಕಾವೇರಿ ಹಾಗೂ ಇಸ್ಲಾಂನ ಧಾರ್ಮಿಕ ಕೇಂದ್ರ ಎಮ್ಮೆಮಾಡು ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಯೂ ಆಗಿದೆ. ಅಷ್ಟೇ ಅಲ್ಲದೆ ಕೊಡಗು ಮತ್ತು ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಗೂ ಪೂರಕವಾಗಿರುವುದರಿಂದ ಇದನ್ನು ಮನಗಂಡಾದರೂ ಸರ್ಕಾರ ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕಾಗಿತ್ತು. ಆದರೆ ಕಣ್ಮುಚ್ಚಿ ಕುಳಿತಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದುವರೆಗೆ ಕಾದು ನೋಡಿದ ಇಲ್ಲಿನ ಗ್ರಾಮಸ್ಥರು ಇನ್ನು ಕಾಯುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ರಾಜ್ಯ ಸರಕಾರ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಡಿಸೆಂಬರ್ 4ರಂದು ಕರಿಕೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕರಿಕೆಗೆ ಮೂಲ ಸೌಲಭ್ಯವಾದ ರಸ್ತೆ ಹಾಗೂ ಇನ್ನಿತರ ಅನುಕೂಲಗಳನ್ನು ಕಲ್ಪಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

English summary
Government not ensure to provide basic facilities to the people of state's border villages. kodagu's border village karki is one of the example for this,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X