ಸಂತ್ರಸ್ತರಿಗೆ ಮನೆ ಹಂಚಿಕೆಯಲ್ಲಿ ಅಕ್ರಮ; ಅಧಿಕಾರಿ ಅಮಾನತಿಗೆ ಸೋಮಣ್ಣ ಆದೇಶ
ಮಡಿಕೇರಿ, ಸೆಪ್ಟೆಂಬರ್ 14: ಮಡಿಕೇರಿಯಲ್ಲಿ ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ಕಟ್ಟಿಸಿಕೊಡಲಾಗಿರುವ ಮನೆಗಳ ಹಂಚಿಕೆಯಲ್ಲಿ ಅಕ್ರಮ ಎಸಗಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಸಚಿವ ವಿ.ಸೋಮಣ್ಣ ಆದೇಶಿಸಿದ್ದಾರೆ.
ಭಾರೀ ಮಳೆಯಿಂದ ಪ್ರವಾಹ, ನೆರೆಗೆ ಸಿಲುಕಿ, ಮನೆ ಕಳೆದುಕೊಂಡು ಜನರು ಕಷ್ಟ ಅನುಭವಿಸುತ್ತಿದ್ದಾರೆ. ಇಂಥ ಕಷ್ಟಕರ ಸಂದರ್ಭದಲ್ಲಿ ಅಧಿಕಾರಿಗಳು ಲಂಚಕ್ಕೆ ಕೈಚಾಚುತ್ತಿದ್ದಾರೆ. ಹೀಗೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.
ಗಜಗಿರಿ ಬೆಟ್ಟ ಭೂಕುಸಿತ ಪ್ರದೇಶ ಪರಿಶೀಲಿಸಿದ ಕೇಂದ್ರ ತಂಡ
ಇಂದು ನಗರದಲ್ಲಿ ಮಾತನಾಡಿದ ಅವರು, "ಹಣ ಪಡೆದು ಅಕ್ರಮವಾಗಿ ಮನೆ ಹಂಚಿಕೆ ಮಾಡುವ ಮೂಲಕ ಎಸಿ ಕಚೇರಿಯಲ್ಲಿ ಡೆಪ್ಟೇಷನ್ ನಲ್ಲಿ ಇದ್ದ ಹೇಮಂತ್ ಸಂತ್ರಸ್ತರಿಗೆ ಮೋಸ ಮಾಡಿದ್ದ. ಸುಮಾರು 60 ಜನರಿಗೆ ಅಕ್ರಮವಾಗಿ ಮನೆಗಳ ಹಂಚಿಕೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ, ಶಾಸಕರ ಗಮನಕ್ಕೂ ಬಾರದೆ ಮನೆ ಹಂಚಿಕೆ ಮಾಡಿದ್ದು, ಇದರಿಂದಾಗಿ ಅತಿ ಅಗತ್ಯವಿದ್ದವರಿಗೆ ಹಣ ತಲುಪಿಲ್ಲ. ಹೀಗಾಗಿ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರು ಡ್ರಗ್ಸ್ ಜಾಲದಲ್ಲಿ ಇದ್ದರು ಎಂಬ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹರಿಪ್ರಸಾದ್ ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ಹಿರಿಯರು. ಅವರು ಏನು ಹೇಳಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಅಂತಹವರ ಬಾಯಿಯಲ್ಲಿ ಈ ರೀತಿಯ ಮಾತುಗಳು ಬರಬಾರದು. ಯಾವುದನ್ನೂ ಮುಚ್ಚಿಕೊಳ್ಳುವ ಪ್ರಶ್ನೆ ಇಲ್ಲ. ಡ್ರಗ್ಸ್, ಗಾಂಜಾ ಸಮಾಜಕ್ಕೆ ಕಂಟಕ. ಯಡಿಯೂರಪ್ಪನವರ ಸರ್ಕಾರ ಇದನ್ನು ಮಟ್ಟ ಹಾಕಲಿದೆ" ಎಂದು ಹೇಳಿದರು.