ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿಗೆ ಮಗ್ಗುಲ ಮುಳ್ಳಾದ ಅನಧಿಕೃತ ಹೋಂಸ್ಟೇಗಳು

|
Google Oneindia Kannada News

ಮಡಿಕೇರಿ, ಅಕ್ಟೋಬರ್ 26: ನಿಯಮಗಳನ್ನು ಉಲ್ಲಂಘಿಸಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಅನಧಿಕೃತ ಹೋಂಸ್ಟೇಗಳು ಪ್ರವಾಸಿಗರ ಸುಲಿಗೆ ಮಾಡುತ್ತಿರುವುದು ಮತ್ತು ನಿರ್ವಹಣೆ ಕೊರತೆಯಿಂದ ಪ್ರವಾಸಿಗರ ಪ್ರಾಣಕ್ಕೆ ಕುತ್ತು ತರುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸರ್ಕಾರದ ಅನುಮತಿ ಪಡೆದು ನಿಯತ್ತಾಗಿ ಕಾರ್ಯನಿರ್ವಹಿಸುವ ಹೋಂಸ್ಟೇಗಳಿಗೂ ಮುಳುಗು ನೀರು ತರುವುದರೊಂದಿಗೆ ಕೊಡಗಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸುವುದಂತು ಖಚಿತವಾಗಿದೆ.

ಕಳೆದೊಂದು ದಶಕದಿಂದೀಚೆಗೆ ಕೊಡಗು ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಹೋಂಸ್ಟೇಗಳು ಹುಟ್ಟಿಕೊಂಡಿವೆ. ಈ ಪೈಕಿ ಕೆಲವು ಮಾತ್ರ ಸರ್ಕಾರದ ಕಾನೂನು ಕ್ರಮಗಳನ್ನು ಪಾಲಿಸಿ, ಪ್ರವಾಸೋದ್ಯಮ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡು ಕಾರ್ಯ ನಿರ್ವಹಿಸಿದರೆ, ಉಳಿದಂತೆ ಹೆಚ್ಚಿನ ಹೋಂಸ್ಟೇಗಳು ನೋಂದಣಿ ಮಾಡಿಸದೆ ಪ್ರವಾಸಿಗರ ಸುಲಿಗೆಗೆ ಮತ್ತು ಅನೈತಿಕ ಚಟುವಟಿಕೆಗೆ ಬಾಗಿಲು ತೆರೆದು ನಿಂತಿವೆ.

 ತಲೆ ಎತ್ತುತ್ತಲೇ ಇರುವ ಅನಧಿಕೃತ ಹೋಂಸ್ಟೇಗಳು!

ತಲೆ ಎತ್ತುತ್ತಲೇ ಇರುವ ಅನಧಿಕೃತ ಹೋಂಸ್ಟೇಗಳು!

ಈಗಾಗಲೇ ಕೊಡಗಿನ ಹೋಂಸ್ಟೇಗಳಲ್ಲಿ ನಡೆದ ವೇಶ್ಯಾವಾಟಿಕೆಗಳ ಬಗ್ಗೆ ಪ್ರಕರಣಗಳು ದಾಖಲಾಗುವುದಲ್ಲದೆ, ಗಲಾಟೆಗಳು, ಗುಂಡು ತುಂಡು, ರೇವ್ ಪಾರ್ಟಿಗಳ ಸುದ್ದಿಗಳು ಬೆಳಕಿಗೆ ಬಂದಿವೆ. ಬಹಳಷ್ಟು ಹೋಂಸ್ಟೇಗಳು ಹೊರ ಜಿಲ್ಲೆಯವರ ಹಿಡಿತದಲ್ಲಿದೆ. ಹೀಗಾಗಿ ಅವುಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇಲ್ಲದೆ, ಅಲ್ಲಿ ಏನೇ ಅನೈತಿಕ ಚಟುವಟಿಕೆ ನಡೆದರೂ ಅದು ಹೊರಗೆ ಬರುವುದಿಲ್ಲ. ಹೋಂಸ್ಟೇಗಳಲ್ಲಿ ನಡೆಯುತ್ತಿರುವ ಸುಲಿಗೆ, ಅನೈತಿಕ ಚಟುವಟಿಕೆಗಳನ್ನು ಹತ್ತಿಕ್ಕಿ, ನೋಂದಾಯಿತ ಹೋಂಸ್ಟೇಗಳಿಗೆ ಮಾತ್ರ ಅವಕಾಶ ನೀಡಬೇಕು. ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಬೇಕೆಂಬ ಒತ್ತಾಯವನ್ನು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಲೇ ಬರುತ್ತಿದೆ. ಆದರೆ ಇದು ಇಲ್ಲಿತನಕವೂ ಆಗದಿರುವುದರಿಂದಾಗಿ ಅನಧಿಕೃತ ಹೋಂಸ್ಟೇಗಳು ತಲೆ ಎತ್ತುತ್ತಲೇ ಇವೆ.

 ಹೋಂಸ್ಟೇನಲ್ಲಿಯೇ ಯುವತಿಯ ಪ್ರಾಣ ಹೋಯ್ತು

ಹೋಂಸ್ಟೇನಲ್ಲಿಯೇ ಯುವತಿಯ ಪ್ರಾಣ ಹೋಯ್ತು

ಇದೀಗ ಪ್ರವಾಸಕ್ಕೆಂದು ಗೆಳತಿಯರೊಂದಿಗೆ ಬಂದಿದ್ದ ಬಳ್ಳಾರಿಯ ಯುವತಿ ವಿಘ್ನೇಶ್ವರಿ ಎಂಬಾಕೆ ತಾನು ವಾಸ್ತವ್ಯ ಹೂಡಿದ್ದ ಮಡಿಕೇರಿ ನಗರದ ಡೈರಿ ಫಾರಂನಲ್ಲಿರುವ ಕೂರ್ಗ್ ವ್ಯಾಲಿ ವ್ಯೂ ಹೋಮ್ ಸ್ಟೇನಲ್ಲಿ ಸ್ನಾನಕ್ಕೆಂದು ತೆರಳಿದ ವೇಳೆ ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಈ ಹೋಂ ಸ್ಟೇ ಮಾಲೀಕ ದುಬೈನಲ್ಲಿದ್ದು, ಹೋಂ ಸ್ಟೇ ಯಾವುದೇ ನೋಂದಣಿಯಾಗಿಲ್ಲ. ಇಲ್ಲಿನ ಕಾರ್ಯ ನಿರ್ವಹಿಸುವವರ ನಿರ್ಲಕ್ಷ್ಯದಿಂದ ಅಮಾಯಕ ಯುವತಿಯ ಜೀವ ಹೋಗಿದೆ. ಇದು ಹೋಂ ಸ್ಟೇ ಮಾಲೀಕರ ನಿರ್ಲಕ್ಷ್ಯ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

 ಹೋಂಸ್ಟೇಗಳಲ್ಲಿ ಉತ್ತಮ ವಾತಾವರಣವಿತ್ತು

ಹೋಂಸ್ಟೇಗಳಲ್ಲಿ ಉತ್ತಮ ವಾತಾವರಣವಿತ್ತು

ಮೊದಮೊದಲಿಗೆ ಸೇವೆಯ ಉದ್ದೇಶದಿಂದ ಆರಂಭಗೊಂಡ ಹೋಂಸ್ಟೇಗಳು ಈಗ ಪ್ರವಾಸಿಗರನ್ನು ಸುಲಿಗೆ ಮಾಡಲೆಂದೇ ಹುಟ್ಟಿಕೊಂಡಿವೆ. ಒಂದೆರಡು ದಶಕಗಳ ಹಿಂದೆ ಕೊಡಗು ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಕಂಡಿರಲಿಲ್ಲ. ಜತೆಗೆ ಕಾಡು, ತೋಟಗಳ ನಡುವೆ ಇರುವ ಪ್ರವಾಸಿ ತಾಣಗಳನ್ನು ನೋಡಲು ತೆರಳುವುದು ಕಷ್ಟಸಾಧ್ಯವಾಗಿತ್ತು. ದೂರದಿಂದ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕೊಡಗಿನ ಕೆಲವು ಬೆಳೆಗಾರರು ತಮ್ಮದೇ ತೋಟದ ನಡುವೆ ಇರುವ ಮನೆಯಲ್ಲಿ ಕಾಟೇಜ್‌ಗಳನ್ನು ನಿರ್ಮಿಸಿ ಹೊರಗಿನಿಂದ ಬರುವ ಪ್ರವಾಸಿಗರಿಗೆ ವಾಸ್ತವ್ಯದ ವ್ಯವಸ್ಥೆ ಮಾತ್ರವಲ್ಲದೆ ಕೊಡಗಿನ ತಿನಿಸುಗಳನ್ನು ತಮ್ಮದೇ ಮನೆಯಲ್ಲಿ ಮಾಡಿಕೊಡುವುದರೊಂದಿಗೆ ಅವರಿಗೆ ಮನೆಯಲ್ಲಿದ್ದೇವೆ ಎನ್ನುವ ವಾತಾವರಣವನ್ನು ನಿರ್ಮಿಸಿ ಕೊಡುತ್ತಿದ್ದರು. ಆ ಮೂಲಕ ಹೊರಗಿನಿಂದ ಬಂದವರಿಗೆ ಕೊಡಗಿನ ಸಂಸ್ಕೃತಿ, ಸಂಪ್ರದಾಯ ಮತ್ತು ತಿನಿಸುಗಳನ್ನು ಪರಿಚಯಿಸಿಕೊಟ್ಟು ಜತೆಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಕರೆದೊಯ್ದು ತೋರಿಸಿಕೊಂಡು ಬರುತ್ತಿದ್ದರು.

 ಆದಾಯ ತಂದುಕೊಡುವ ಉದ್ಯಮ

ಆದಾಯ ತಂದುಕೊಡುವ ಉದ್ಯಮ

ಇದು ಎಷ್ಟೊಂದು ಚೆನ್ನಾಗಿತ್ತೆಂದರೆ ಹೊರಗಿನಿಂದ ಬಂದವರಿಗೆ ನಾವು ಪ್ರವಾಸಿಗರಾಗಿ ಬಂದಿಲ್ಲ. ಸಂಬಂಧಿಕರ ಮನೆಗೆ ಬಂದಿದ್ದೇವೆ ಎಂಬ ಮನೋಭಾವ ಉಂಟಾಗುತ್ತಿತ್ತು. ದೂರದಿಂದ ಬಂದ ಪ್ರವಾಸಿಗರು ಇಲ್ಲಿನ ಆತಿಥ್ಯವನ್ನು ಮರೆಯುವಂತಿರಲಿಲ್ಲ. ಅವತ್ತಿನ ದಿನಗಳಲ್ಲಿ ಇದು ಹೊಸತಲೆಮಾರಿನ ಟ್ರೆಂಡ್ ಆಗಿತ್ತು. ಜತೆಗೆ ಕಾಫಿ ದರ ಇಳಿಕೆಯಿಂದ ಕುಗ್ಗಿದ ಬೆಳೆಗಾರರಿಗೆ ಒಂದಷ್ಟು ಆದಾಯ ತಂದು ಕೊಡುವ ಉದ್ಯಮವೂ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಹೋಂಸ್ಟೇ ಉದ್ಯಮ ಯಾವ ರೀತಿಯಲ್ಲಿ ಬೆಳೆಯಿತೆಂದರೆ ಕೆಲವರು ತಮ್ಮ ಮನೆಯನ್ನೇ ಹೋಂಸ್ಟೇಯನ್ನಾಗಿ ಬದಲಿಸಿದರೆ, ಮತ್ತೆ ಕೆಲವರು ಲಕ್ಷಾಂತರ ರೂ. ಬಂಡವಾಳ ಸುರಿದು ಹೋಂಸ್ಟೇ ಆರಂಭಿಸಲಾರಂಭಿಸಿದರು.

 ಹೋಂಸ್ಟೇ ಗೌರವ ಗಾಳಿಗೆ ತೂರಿದರು

ಹೋಂಸ್ಟೇ ಗೌರವ ಗಾಳಿಗೆ ತೂರಿದರು

ಬಹುಶಃ ಸ್ಥಳೀಯರೇ ಇದನ್ನು ನಡೆಸಿಕೊಂಡು ಹೋಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಹೊರಗಿನವರು ಬಂದು ಜಾಗ ಖರೀದಿಸಿ ಕೋಟ್ಯಂತರ ಬಂಡವಾಳ ಸುರಿದು ಹೋಂಸ್ಟೇ ಮಾತ್ರವಲ್ಲ, ರೆಸಾರ್ಟ್ ತೆರೆದರು. ಹಾಕಿದ ಬಂಡವಾಳವನ್ನು ತೆಗೆಯುವ ಕಾರಣಕ್ಕೆ ಸುಲಿಗೆ ಅನೈತಿಕ ಮಾರ್ಗವನ್ನು ಕಂಡುಕೊಂಡ ಪರಿಣಾಮ ಆರಂಭದಲ್ಲಿದ್ದ ಹೋಂಸ್ಟೇ ಮೇಲಿನ ಗೌರವನ್ನೆಲ್ಲ ಗಾಳಿಗೆ ತೂರುವಂತೆ ಮಾಡಿದರು. ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. 2018, 2019-20 ಮೂರು ವರ್ಷಗಳ ಕಾಲ ನಡೆದ ಭೂಕುಸಿತ, ಮಹಾಮಳೆ, ಕಳೆದ ವರ್ಷದಿಂದೀಚೆಗೆ ಕೊರೊನಾ ಮಹಾಮಾರಿಯಿಂದಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಹೋಂಸ್ಟೇ ನಿರ್ಮಾಣಕ್ಕಾಗಿ ಮಾಡಿದ ಸಾಲದ ಹೊರೆಯೂ ಮಾಲೀಕರ ಮೇಲಿದೆ. ಹೀಗಾಗಿ ಕೆಲವರು ಪ್ರವಾಸಿಗರಿಗೆ ದುಪ್ಪಟ್ಟು ದರ ವಿಧಿಸಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಪ್ರವಾಸಿಗರ ವಲಯದಿಂದ ಕೇಳಿ ಬರುತ್ತಿದೆ.

 ಅನಧಿಕೃತ ಹೋಂಸ್ಟೇಗೆ ಬೀಗ ಹಾಕುವ ಕೆಲಸವಾಗಲಿ

ಅನಧಿಕೃತ ಹೋಂಸ್ಟೇಗೆ ಬೀಗ ಹಾಕುವ ಕೆಲಸವಾಗಲಿ

ಸದ್ಯ ಜಿಲ್ಲೆಯಲ್ಲಿ ಯಾರೇ ಆಗಲಿ ಹೋಂಸ್ಟೇ ಆರಂಭಿಸುವ ಮುನ್ನ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದಿಂದ ನೋಂದಣಿ ಮಾಡಿಸುವುದು ಮತ್ತು ಕಠಿಣ ನಿಯಮ ಪಾಲನೆ ಕಡ್ಡಾಯವಾಗಿದೆ. ಇದನ್ನೆಲ್ಲ ಪಾಲಿಸಿಕೊಂಡು ನಿಯತ್ತಾಗಿ ನಡೆಸಿಕೊಂಡು ಮಾಲೀಕರಿಗೆ ಈಗ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಹೋಂಸ್ಟೇಗಳು ಮಗ್ಗುಲಿನ ಮುಳ್ಳಾಗಿ ಚುಚ್ಚುತ್ತಿದೆ. ಜಿಲ್ಲಾಡಳಿತ ಇನ್ನಾದರೂ ಕಠಿಣ ಕ್ರಮ ಕೈಗೊಂಡು ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ತಪ್ಪಿದಲ್ಲ.

Recommended Video

ಭಾರತ ಇರಕವ ಗುಂಪಿನ ಮಹತ್ವವಾದ ಪಂದ್ಯ | Oneindia Kannada

English summary
Unauthorized homestays have been built in Kodagu district in violation of rules
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X