ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಯೊಬ್ಬರು ನೋಡಲೇಬೇಕಾದ ಕೊಡಗಿನ ಟಾಪ್‌ 20 ಪ್ರವಾಸಿ ತಾಣಗಳು

|
Google Oneindia Kannada News

ಕೊಡಗು, ಜನವರಿ 13: ಕೊಡಗಿಗೊಂದು ಸುತ್ತು ಹೊಡೆದರೆ ಹಲವು ಪ್ರವಾಸಿ ತಾಣಗಳು ಕಣ್ಮನ ಸೆಳೆಯುತ್ತವೆ. ಇಲ್ಲಿನ ಬೆಟ್ಟಗುಡ್ಡ, ಕಾಫಿ, ಗದ್ದೆ ಬಯಲುಗಳ ನಡುವೆ ಹತ್ತು ಹಲವು ಪ್ರವಾಸಿ ತಾಣಗಳಿದ್ದು, ಕೆಲವು ತಾಣಗಳು ಪಟ್ಟಣಗಳಿಗೆ ಹತ್ತಿರವಾಗಿರುವುದರಿಂದ ಪ್ರವಾಸಿಗರು ಸುಲಭವಾಗಿ ಹೋಗಬಹುದಾಗಿದೆ.

ಈಗಾಗಲೇ ಕೊಡಗಿನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಲುವಾಗಿಯೇ ಕೊಡಗು ಪ್ರವಾಸಿ ಉತ್ಸವವನ್ನು ಮುಖ್ಯಪಟ್ಟಣ ಮಡಿಕೇರಿಯಲ್ಲಿ ಆಚರಿಸಲಾಗುತ್ತಿದೆ. ಕೊಡಗಿನತ್ತ ಆಗಮಿಸುವ ಪ್ರವಾಸಿಗರಿಗಾಗಿ ಒಂದಷ್ಟು ಪ್ರವಾಸಿ ತಾಣಗಳ ಪರಿಚಯ ಇಲ್ಲಿದೆ.

ಮಡಿಕೇರಿಯಲ್ಲಿ ಕಣ್ಮನ ಸೆಳೆಯುತ್ತಿರುವ ಕೊಡಗು ಪ್ರವಾಸಿ ಉತ್ಸವಮಡಿಕೇರಿಯಲ್ಲಿ ಕಣ್ಮನ ಸೆಳೆಯುತ್ತಿರುವ ಕೊಡಗು ಪ್ರವಾಸಿ ಉತ್ಸವ

ಮುಖ್ಯ ಪಟ್ಟಣ ಮಂಜಿನ ನಗರಿ ಮಡಿಕೇರಿಗೊಂದು ಸುತ್ತು ಹೊಡೆದರೆ ಇತಿಹಾಸದ ಕಥೆ ಹೇಳುವ ಕೋಟೆ, ಅರಮನೆ, ಗದ್ದುಗೆ, ಭಕ್ತರ ಸೆಳೆಯುವ ಓಂಕಾರೇಶ್ವರ ದೇಗುಲ, ನಿಸರ್ಗ ಸೌಂದರ್ಯದ ರಾಜಾಸೀಟ್, ನೆಹರು ಮಂಟಪ, ಭೋರ್ಗರೆದು ಧುಮುಕುವ ಅಬ್ಬಿ ಜಲಪಾತ ಎಲ್ಲವೂ ಗಮನಸೆಳೆಯುತ್ತವೆ.

ಈ ಅರಮನೆ 1681ರಲ್ಲಿ ನಿರ್ಮಾಣವಾದಾಗ ಅದರ ಸುತ್ತ ಬರೀ ಮಣ್ಣಿನಿಂದ ನಿರ್ಮಿಸಿದ ಕೋಟೆಯಾಗಿತ್ತು. ಮುದ್ದುರಾಜ ನಿರ್ಮಿಸಿದ ಕೋಟೆಯನ್ನು ನಂತರ ವಶಪಡಿಸಿಕೊಂಡ ಟಿಪ್ಪು ಸುಲ್ತಾನ್ ಮಣ್ಣಿನಕೋಟೆಯನ್ನು ಕಲ್ಲಿನ ಕೋಟೆಯಾಗಿ ಮಾರ್ಪಡಿಸಿದನಲ್ಲದೆ, 'ಜಾಫರಾಬಾದ್' ಎಂಬ ಹೆಸರಿಟ್ಟನು. ಆ ಬಳಿಕ 1734ರಲ್ಲಿ ಇದು ಬ್ರ್ರಿಟಿಷರ ವಶವಾಯಿತು.

ಮಡಿಕೇರಿ ನಗರದ ನಡುವೆ ಸ್ವಲ್ಪ ಎತ್ತರ ಪ್ರದೇಶದಲ್ಲಿ ಕೋಟೆ ಹಾಗೂ ಅರಮನೆ ನಿರ್ಮಾಣಗೊಂಡಿದೆ. ಅರಮನೆಯು 1814ರ ನಂತರದ ವರ್ಷಗಳಲ್ಲಿ ಪುನರ್ರಚನೆಗೊಂಡಿದ್ದು, ಎರಡನೆಯ ಲಿಂಗರಾಜನ ಕಾಲದಲ್ಲಿದ್ದ ಹುಲ್ಲಿನ ಛಾವಣಿಯನ್ನು ತೆಗೆದು ಬ್ರಿಟಿಷರು ಹೆಂಚು ಹಾಕಿದರು. ಅರಮನೆಯ ಆರಂಭ ಮತ್ತು ಮುಕ್ತಾಯದ ಬಗೆಗೆ ಇಲ್ಲಿನ ಹಿತ್ತಾಳೆಯ ಫಲಕ ಮಾಹಿತಿ ನೀಡುತ್ತದೆ.

'ಮುಗಿಲುಪೇಟೆ'ಯಲ್ಲಿ ಕೊಂಡ ಆ ಮಂಜಿನ ಹನಿಗಳು..! 'ಮುಗಿಲುಪೇಟೆ'ಯಲ್ಲಿ ಕೊಂಡ ಆ ಮಂಜಿನ ಹನಿಗಳು..!

ಎರಡು ಅಂತಸ್ತನ್ನು ಹೊಂದಿರುವ ಅರಮನೆಯು ಚೌರಸ್ ಸ್ಥಳ ವಿನ್ಯಾಸವನ್ನು ಹೊಂದಿದೆ. ವಿಶಾಲ ಹಜಾರಗಳನ್ನು ಸಭಾಭವನವನ್ನು ಹೊಂದಿರುವ ಅರಮನೆಯ ಭಿತ್ತಿಗಳಲ್ಲಿ ವಿವಿಧ ಚಿತ್ರಗಳು ಮೂಡಿವೆ. ವಾಸ್ತುಶಿಲ್ಪ ವಿನ್ಯಾಸದಲ್ಲಿ ಹೊಸತನವಿದ್ದು, ಆಕರ್ಷಣೀಯವಾಗಿದೆ. ಸುಮಾರು 110 ಅಡಿಯಷ್ಟು ಅಗಲವಿರುವ ಕಟ್ಟಡದಲ್ಲಿ ಕಮಾನು ಹಾಗೂ ಎತ್ತರವಾದ ಚೌಕಾಕಾರದ ಕಿಟಕಿಗಳು ಬಣ್ಣದ ಗಾಜುಗಳಿಂದ ಕೂಡಿದ್ದು ಗಮನಸೆಳೆಯುತ್ತವೆ. ಮುಂಭಾಗದ ಪ್ರವೇಶ ದ್ವಾರದಲ್ಲಿ ಎರಡು ಕುದುರೆಗಳು ನೆಗೆಯುತ್ತಿರುವ ಕೆತ್ತನೆಯ ವೀಕ್ಷಕ ಮಂಟಪ ಕಾಣಸಿಗುತ್ತದೆ. ಅರಮನೆಯ ಎಡ ಪಾರ್ಶ್ವದ ಮುಂಭಾಗದಲ್ಲಿ ಕಲ್ಲಿನಿಂದ ಕೆತ್ತಲಾದ ಎರಡು ಆನೆಗಳು ಆಕರ್ಷಕವಾಗಿವೆ. ಅರಮನೆಯ ಒಂದು ಪಾರ್ಶ್ವದಲ್ಲಿ ಗಡಿಯಾರ ಗೋಪುರ ಕಂಡು ಬರುತ್ತದೆ.

ಮಂಜಿನ ಮಡಿಕೇರಿಯಲ್ಲಿ ಮುದ ನೀಡುವ ತಾಣಗಳುಮಂಜಿನ ಮಡಿಕೇರಿಯಲ್ಲಿ ಮುದ ನೀಡುವ ತಾಣಗಳು

ಅರಮನೆ ಆವರಣದಲ್ಲಿ ವಸ್ತು ಸಂಗ್ರಹಾಲಯವಿದ್ದು, ಈ ಸಂಗ್ರಹಾಲಯದ ಕಟ್ಟಡ ಹಿಂದೆ ಚರ್ಚ್ ಆಗಿತ್ತಂತೆ. ಕೋನಾಕಾರದ ಗಾಥಿಕ್ ಶೈಲಿಯ ಗೋಪುರವನ್ನು ಹೊಂದಿರುವ ಈ ಕಟ್ಟಡ ಕೋನಾಕಾರದ ಕಮಾನುಗಳ ಕಿಟಿಕಿಯೊಂದಿಗೆ ಸುಂದರವಾಗಿದೆ. ಪಕ್ಕದಲ್ಲಿಯೇ ಮಹಾತ್ಮಗಾಂಧಿ ಕೇಂದ್ರ ಗ್ರಂಥಾಲಯವಿದೆ. ಹಿಂದೆ ತಪ್ಪಿತಸ್ಥರನ್ನು ಗಲ್ಲಿಗೇರಿಸುತ್ತಿದ್ದರೆನ್ನಲಾದ ಬಾವಿಯಿದ್ದು, ಇದರತ್ತ ತೆರಳುವ ಪ್ರವಾಸಿಗರು ಕುತೂಹಲದ ನೋಟ ಬೀರುತ್ತಾರೆ.

 ಐತಿಹಾಸಿಕ ಸ್ಮಾರಕ ಗದ್ದಿಗೆ

ಐತಿಹಾಸಿಕ ಸ್ಮಾರಕ ಗದ್ದಿಗೆ

ಮಡಿಕೇರಿ ಪಟ್ಟಣದ ಎತ್ತರವಾದ ಗುಡ್ಡಪ್ರದೇಶದಲ್ಲಿ ನೆಲೆ ನಿಂತಿರುವ ಗದ್ದಿಗೆ ಒಂದು ಐತಿಹಾಸಿಕ ಸ್ಮಾರಕವಾಗಿದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ ಮಧ್ಯದಲ್ಲಿದ್ದು, ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ ಬಲಭಾಗದಲ್ಲಿದೆ. ಇನ್ನು ಎಡಭಾಗದಲ್ಲಿ 1834ರಲ್ಲಿ ನಿರ್ಮಿಸಿರುವ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್‌ನೊಂದಿಗೆ ನಡೆದ ಯುದ್ದದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಗಳನ್ನು ಕೂಡ ಕಾಣಬಹುದು. ಇಂಡೋಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗದ್ದಿಗೆಗಳು ಅಪರೂಪದ ವಾಸ್ತುಶಿಲ್ಪವನ್ನು ಹೊಂದಿವೆ. ಇಲ್ಲಿ ಕೆತ್ತಲಾಗಿರುವ ಕಲ್ಲಿನ ಕೆತ್ತನೆಗಳು ಕೂಡ ಆಕರ್ಷಕವಾಗಿದೆ. ಕಟ್ಟಡವು ಪ್ರಧಾನ ಗುಮ್ಮಟ ಹಾಗೂ ನಾಲ್ಕು ಮೂಲೆಯಲ್ಲಿ ಚಿಕ್ಕದಾದ ಗುಮ್ಮಟವನ್ನು ಹೊಂದಿ ಗಮನಸೆಳೆಯುತ್ತದೆ. ಕಿಟಕಿಗೆ ಪಂಚಲೋಹದ ಸರಳುಗಳನ್ನು ಅಳವಡಿಸಲಾಗಿದೆ.

 ಓಂಕಾರೇಶ್ವರ ದೇವಸ್ಥಾನ

ಓಂಕಾರೇಶ್ವರ ದೇವಸ್ಥಾನ

1820ರಲ್ಲಿ ಎರಡನೇ ಲಿಂಗರಾಜೇಂದ್ರನು ಕಟ್ಟಿಸಿದ ಓಂಕಾರೇಶ್ವರ ದೇಗುಲ ಇಂಡೋಸಾರ್ಸನಿಕ್ ಶೈಲಿಯಲ್ಲಿರುವುದು ವಿಶೇಷ. ಇದು ನಾಲ್ಕೂ ಮೂಲೆಗಳಲ್ಲೂ ಉದ್ದನೆಯ ಗೋಪುರಗಳನ್ನು ಹೊಂದಿದ್ದು ನಡುವೆ ಬೃಹತ್ ಗುಮ್ಮಟವಿದ್ದು ಆಕರ್ಷಣೀಯವಾಗಿದೆ. ಲಿಂಗರಾಜೇಂದ್ರನು ಪರಮ ದೈವ ಭಕ್ತನಾಗಿದ್ದ ಸುಬ್ಬನರಸಯ್ಯ ಎಂಬ ಬ್ರಾಹ್ಮಣನನ್ನು ಅನ್ಯಾಯವಾಗಿ ಶಿಕ್ಷಿಸಿದ್ದರಿಂದ ಆತ ಸಾವಿಗೀಡಾದನೆಂದೂ. ಇದರಿಂದಾಗಿ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಲು ಜ್ಯೋತಿಷಿಗಳ, ಮಂತ್ರವಾದಿಗಳ ಹಾಗೂ ನೀಲೇಶ್ವರ ತಂತ್ರಿಗಳ ಸಲಹೆಯಂತೆ ಈ ಶಿವನ ದೇವಸ್ಥಾನವನ್ನು ನಿರ್ಮಿಸಿದನೆಂಬ ಐತಿಹ್ಯ ಇಲ್ಲುಂಟು. ಲಿಂಗರಾಜೇಂದ್ರನು ಪರಮ ಪಾವನೆ ಗಂಗೆ ಹರಿಯುವ ಮಹಾಪುಣ್ಯ ಕ್ಷೇತ್ರವಾದ ಕಾಶಿವಿಶ್ವನಾಥನ ಪುಣ್ಯ ಸ್ಥಳದಿಂದ ಶಿವಲಿಂಗವನ್ನು ಸಕಲ ಸಂಪ್ರದಾಯ ಸಹಿತ ವಿಧಿ ವತ್ತಾಗಿ ಇಲ್ಲಿಗೆ ತಂದು ಶಾಸ್ತ್ರೋಕ್ತವಾಗಿ ವ್ರತಾದಿ ಪೂಜೆ ಪುನಸ್ಕಾರಗಳ ಪ್ರಕಾರ 1820ಮಾರ್ಚ್ 26 ರಂದು ಚೈತ್ರಶುದ್ಧ ದ್ವಾದಶಿಯ ದಿನ ಈ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಂದು ನೀಲೇಶ್ವರ ತಂತ್ರಿಗಳು ಕಾಶಿಯಿಂದ ತಂದ ಈ ಶಿವಲಿಂಗವನ್ನು ಓಂಕಾರೇಶ್ವರ ಲಿಂಗವೆಂದು ಕರೆದಿದ್ದರಿಂದ ಇದು ಓಂಕಾರೇಶ್ವರ ದೇವಸ್ಥಾನವೆಂದೇ ಹೆಸರಾಗಿದೆ.

 ಗಾಂಧಿ ಮಂಟಪ

ಗಾಂಧಿ ಮಂಟಪ

ರಾಜಾಸೀಟ್ ಬಳಿಯಿರುವ ಗಾಂಧಿ ಮಂಟಪ ಗಾಂಧಿ ಮಡಿಕೇರಿಗೆ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ನೆನಪುಗಳ ಸ್ಮಾರಕವಾಗಿದೆ. ಇದರೊಳಗೆ ಆಕರ್ಷಣೀಯವಾದ ಗಾಂಧೀಜಿಯ ಸುಂದರ ಪ್ರತಿಮೆ ಇದೆ. ಪ್ರತಿ ವರ್ಷವೂ ಗಾಂಧಿಜಯಂತಿಯಂದು ಗಾಂಧಿಯ ಚಿತಾಭಸ್ಮವನ್ನಿರಿಸಿ ಪ್ರಾರ್ಥನೆ ಮಾಡಲಾಗುತ್ತದೆ.

 ನಿಸರ್ಗ ರಮಣೀಯ ರಾಜಾಸೀಟ್

ನಿಸರ್ಗ ರಮಣೀಯ ರಾಜಾಸೀಟ್

ಇವತ್ತು ಸುಂದರ ಉದ್ಯಾನವನವಾಗಿ ಕಂಗೊಳಿಸುವ ರಾಜಾಸೀಟ್ ಒಂದು ಕಾಲದಲ್ಲಿ ಬ್ರಿಟೀಷರ ಮಸಣವಾಗಿತ್ತು. ಕಾಲಕ್ರಮೇಣ ಇಲ್ಲಿದ್ದ ಬ್ರಿಟೀಷರ ಶವಪೆಟ್ಟಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ. ಈ ಉದ್ಯಾನಕ್ಕೆ ರಾಜಾಸೀಟ್ ಎಂಬ ಹೆಸರು ಹೇಗೆ ಬಂತೆಂಬುವುದರ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿದರೆ ಒಂದಷ್ಟು ಮಾಹಿತಿ ದೊರೆಯುತ್ತದೆ. ಹಿಂದೆ ಚಿಕ್ಕವೀರರಾಜನ ಕಾಲದಲ್ಲಿ ರಾಜ ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ನೋಡುತ್ತಿದ್ದಂತೆ. ರಾಜ ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಆಯಿತು. ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು. ಈ ಮಂಟಪ ಅಂದಿನಿಂದ ಇಂದಿನವರೆಗೆ ರಾಜಾಸೀಟಿನ ಪ್ರಮುಖ ಆಕರ್ಷಣೆಯಾಗಿದೆ.

ಬಳಿಯಲ್ಲಿಯೇ ಪುಟಾಣಿ ರೈಲು ಕೂಡ ಇದೆ. ರೈಲು ಸಂಪರ್ಕವನ್ನೇ ಕಾಣದ ಕೊಡಗಿಗೆ ಇದೇ ಏಕೈಕ ರೈಲು. ಈ ರೈಲನ್ನು ನೋಡಿ ಇಲ್ಲಿನ ಮಕ್ಕಳು ರೈಲಿನ ಕಲ್ಪನೆ ಮಾಡಿಕೊಳ್ಳುತ್ತಾರೆ. ಕಾವೇರಿ ಪಟ್ಟಣದಿಂದ ಹೊರಡುವ ರೈಲು ಬ್ರಹ್ಮಗಿರಿ ಕಣಿವೆಗಾಗಿ ಸಾಗುತ್ತದೆ.

 ನೆಹರುಮಂಟಪ

ನೆಹರುಮಂಟಪ

ರಾಜಾಸೀಟಿನ ಮೇಲ್ಭಾಗದ ಗುಡ್ಡದ ಮೇಲೆ ನಿಸರ್ಗದ ಸುಂದರ ದೃಶ್ಯವನ್ನು ಆಸ್ವಾದಿಸಲೆಂದು ನಿರ್ಮಿಸಿದ ಸುಂದರ ಮಂಟಪವೇ ನೆಹರು ಮಂಟಪವಾಗಿದೆ. ಈ ಮಂಟಪವನ್ನು ೧೯೫೭ರಲ್ಲಿ ಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ಮಂಟಪವೊಂದನ್ನು ನಿರ್ಮಿಸಿ ನೆಹರು ಮಂಟಪ ಎಂದು ಹೆಸರಿಟ್ಟರು ಎಂದು ಹೇಳಲಾಗುತ್ತಿದೆ.

 ನಿಶಾನೆಮೊಟ್ಟೆ

ನಿಶಾನೆಮೊಟ್ಟೆ

ಮಡಿಕೇರಿಯಿಂದ ಹತ್ತು ಕಿ.ಮೀ. ದೂರದಲ್ಲಿರುವ ನಿಶಾನೆಮೊಟ್ಟೆಯತ್ತ ತೆರಳಬೇಕಾದರೆ ಸ್ಟೀವರ್ಟ್ ಹಿಲ್ ಮಾರ್ಗವಾಗಿ ತೆರಳಬೇಕು. ಹಿಂದೆ ಕೊಡಗನ್ನು ಆಳುತ್ತಿದ್ದ ರಾಜರ ಕಾಲದಲ್ಲಿ ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರನ್ನಿರಿಸಲಾಗುತ್ತಿತ್ತಂತೆ ಈ ಸೈನಿಕರು ಇಲ್ಲಿ ಪಹರೆ ಕಾಯುತ್ತಿದ್ದರಂತೆ. ಈ ಗುಡ್ಡದಿಂದ ನಿಂತು ನೋಡಿದರೆ ದೂರದಿಂದ ಬರುವ ಶತ್ರು ಸೈನ್ಯ ಕಾಣುತ್ತಿತ್ತಂತೆ. ತಕ್ಷಣ ರಾಜನಿಗೆ ಸುದ್ದಿ ಮುಟ್ಟಿಸಿ ಸೈನ್ಯವನ್ನು ಸಜ್ಜುಗೊಳಿಸಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿದ್ದರಂತೆ. ಘಟ್ಟವನ್ನೇರಿ ಬರುವ ಶತ್ರು ಸೈನಿಕರ ಮೇಲೆ 'ನಿಶಾನೆ' ಇಡಲು ಈ ಗುಡ್ಡ ಯೋಗ್ಯವಾಗಿದ್ದರಿಂದ 'ನಿಶಾನೆ ಮೊಟ್ಟೆ' ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ.

 ಅಬ್ಬಿಜಲಪಾತ

ಅಬ್ಬಿಜಲಪಾತ

ಮಡಿಕೇರಿಯಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ... ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಇತ್ತೀಚೆಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.

ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡುಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು

 ಕೊಡಗಿನ ಮೆಕ್ಕಾ ಎಮ್ಮೆಮಾಡು

ಕೊಡಗಿನ ಮೆಕ್ಕಾ ಎಮ್ಮೆಮಾಡು

ಕೊಡಗಿನ ಮೆಕ್ಕಾ ಎಂದೇ ಜನವಲಯದಲ್ಲಿ ಹೆಸರುವಾಸಿಯಾಗಿರುವ ಪ್ರಮುಖ ಪವಿತ್ರ ತಾಣ ಎಮ್ಮೆಮಾಡು ಕೊಡಗಿನಲ್ಲಿರುವ ಪ್ರಾರ್ಥನಾ ಮಂದಿರಗಳಿಗೆ ಹೋಲಿಸಿದರೆ ತನ್ನದೇ ಆದ ಇತಿಹಾಸ, ನಿಸರ್ಗ ಸೌಂದರ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಭಾವೈಕ್ಯತೆಯ ಸಂಗಮವಾಗಿರುವ ಎಮ್ಮೆಮಾಡು ಇವತ್ತು ಸಹಸ್ರಾರು ಸಂಖ್ಯೆಯ ಭಕ್ತರನ್ನು ತನ್ನತ್ತ ಸೆಳೆದಿದ್ದರೆ ಅದಕ್ಕೆ ಸೂಫಿ ಸಂತರು ಕಾಲಿಟ್ಟು ಪಾವನಗೊಳಿಸಿದ ಪುಣ್ಯ ಭೂಮಿ ಕಾರಣವಾಗಿದೆ. ಸೂಫಿ ಸಂತರು ತಮ್ಮ ಜೀವಿತಾವಧಿಯ ಕೊನೆಯ ಕಾಲದಲ್ಲಿ ಈ ಗ್ರಾಮಕ್ಕೆ ಆಗಮಿಸಿ ಸಮಾಧಿ ಹೊಂದುವುದರ ಮೂಲಕ ಅಂತಿಮ ವಿಶ್ರಾಂತಿ ಪಡೆಯುತ್ತಿದ್ದು, ಜೀವನದಲ್ಲೊಮ್ಮೆ ಆ ಸಂತರ ದರ್ಶನ ಭಾಗ್ಯ ಪಡೆದು ಧನ್ಯರಾಗಲು ಜಾತಿ ಮತ ಮರೆತು ಭಕ್ತರು ಆಗಮಿಸುತ್ತಾರೆ. ಪುಟ್ಟ ಗ್ರಾಮವಾದ ಎಮ್ಮೆಮಾಡು ಇವತ್ತು ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿದ್ದರೆ ಅದಕ್ಕೆ ಕಾರಣ ಇಲ್ಲಿ ನಡೆಯುತ್ತಿರುವ ಪವಾಡಗಳು ಮತ್ತು ಇಂದಿಗೂ ಭಕ್ತರ ಇಷ್ಟಾರ್ಥಗಳು ನೆರವೇರುತ್ತಿರುವುದು ಕಾರಣವಾಗಿದೆ.

 ನಾಲ್ಕುನಾಡು ಅರಮನೆ

ನಾಲ್ಕುನಾಡು ಅರಮನೆ

ಕೊಡಗನ್ನು ಆಳಿದ ರಾಜರ ಅರಮನೆಗಳ ಪೈಕಿ ಮಡಿಕೇರಿಯಿಂದ ನಲವತ್ತು ಕಿ.ಮೀ.ಗಳ ದೂರದ ಕಕ್ಕಬ್ಬೆಯ ಸಮೀಪದಲ್ಲಿರುವ ನಾಲ್ಕುನಾಡು ಅರಮನೆಯು ಕೊಡಗಿನ ಸಾಂಪ್ರದಾಯಿಕ ಐನ್ ಮನೆಗಳಂತೆ ಕಾಣುತ್ತದೆ. ಅಷ್ಟೇ ಅಲ್ಲ ಕರ್ನಾಟಕದಲ್ಲಿರುವ ಇತರೆ ಅರಮನೆಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. 1791-92ರಲ್ಲಿ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಟಿಪ್ಪುಸುಲ್ತಾನನ ಸೆರೆಯಿಂದ ಕುಟುಂಬ ಸಮೇತ ತಪ್ಪಿಸಿಕೊಂಡ ದೊಡ್ಡವೀರರಾಜೇಂದ್ರನು ಕುರ್ಚಿ ಎಂಬ ಗ್ರಾಮಕ್ಕೆ ಬಂದನಾದರೂ ಆ ವೇಳೆಗೆ ಅಲ್ಲಿದ್ದ ಅರಮನೆ ನಾಶವಾಗಿದ್ದರಿಂದ ಶತ್ರುಗಳಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಲುವಾಗಿ ಸುಭದ್ರ ತಾಣವೊಂದರ ಅಗತ್ಯತೆ ಇತ್ತು. ಹೀಗಾಗಿ ದೊಡ್ಡ ವೀರರಾಜೇಂದ್ರ ತನ್ನ ಸೇನಾಪರಿವಾರದೊಂದಿಗೆ ಅರಮನೆಗೆ ಸೂಕ್ತ ಸ್ಥಳವನ್ನು ಹುಡುಕುತ್ತಾ ಬಂದಾಗ ಆತನ ಕಣ್ಣಿಗೆ ಬಿದ್ದಿದ್ದು ತಡಿಯಂಡಮೋಳ್ ಶ್ರೇಣಿಯ ಸಮತಟ್ಟು ಜಾಗ ಯುವಕಪಾಡಿ. ಈ ತಾಣ ಅರಮನೆ ನಿರ್ಮಿಸಲು ಸೂಕ್ತ ಸ್ಥಳವಾಗಿ ಕಂಡು ಬಂದಿತು. ಕೂಡಲೇ ಅರಮನೆ ನಿರ್ಮಾಣ ಮಾಡಲು ಸೇವಕರಿಗೆ ಆಜ್ಞೆ ಮಾಡಿದನು. ಅಂದು ನಿರ್ಮಾಣಗೊಂಡ ಮನೆ ತದನಂತರ ಒಂದಷ್ಟು ಅಭಿವೃದ್ಧಿಗೊಂಡು ಇಂದು "ನಾಲ್ಕುನಾಡು ಅರಮನೆ" ಯಾಗಿ ಗಮನಸೆಳೆಯುತ್ತಿದೆ.

 ಗುಡಿಗೋಪುರವಿಲ್ಲದ ದೇಗುಲ!

ಗುಡಿಗೋಪುರವಿಲ್ಲದ ದೇಗುಲ!

ಕೊಡಗಿನ ನಾಪೋಕ್ಲು ಬಳಿಯಲ್ಲಿರುವ ನಿಸರ್ಗ ನಿರ್ಮಿತ ಮಕ್ಕಿ ಶಾಸ್ತಾವು ಮಾತ್ರ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ.ಮಕ್ಕಿ ಶಾಸ್ತಾವು ದೇವಾಲಯ ನೆಲೆ ನಿಂತ ತಾಣಕ್ಕೆ ಭೇಟಿ ನೀಡಿದವರಿಗೆ ವಿಶಿಷ್ಟ ಅನುಭವವಾಗುತ್ತದೆ. ಅಲ್ಲದೆ, ಇಲ್ಲಿ ನಿಸರ್ಗವೇ ಒಂದು ಸುಂದರ ದೇವಾಲಯದಂತೆ ಗೋಚರಿಸಿಬಿಡುತ್ತದೆ. ಈ ದೇವಾಲಯವು ದಿಬ್ಬದ ಮೇಲೆ ನೆಲೆನಿಂತಿದ್ದು, ರಸ್ತೆಯಿಂದಲೇ ಸಿಗುವ ಮೆಟ್ಟಿಲುಗಳನ್ನೇರಿ ಮೇಲ್ಭಾಗಕ್ಕೆ ಬಂದರೆ ಸಮತಟ್ಟಾದ ಜಾಗದಲ್ಲಿ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆಯೊಂದು ಎದುರಾಗುತ್ತದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಾಸ್ತಾವು ದೇವರ ಮೂರ್ತಿಯಿದೆ. ಅಲ್ಲದೆ ದೇವರಿಗೆ ಆಶ್ರಯವಾಗಿ ಒಂದು ಹಲಸಿನ ಮರವಿದ್ದು ಸುತ್ತಲೂ ಹರಕೆಯಾಗಿ ಅರ್ಪಿಸಿದ ಮಣ್ಣಿನ ನಾಯಿಗಳಿವೆ.

 ಕಾವೇರಿ ನಿಸರ್ಗಧಾಮ

ಕಾವೇರಿ ನಿಸರ್ಗಧಾಮ

ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿಯೇ ನಿಸರ್ಗಧಾಮದ ಪ್ರವೇಶ ದ್ವಾರ ಕಾಣಸಿಗುತ್ತದೆ. 1989ರಲ್ಲಿ ನಿರ್ಮಿಸಲ್ಪಟ್ಟ ಕಾವೇರಿ ನಿಸರ್ಗಧಾಮ ಅಲ್ಲಿಂದ ಇಲ್ಲಿಯವರೆಗೆ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿಸರ್ಗಧಾಮದ ಪ್ರವೇಶ ದ್ವಾರದ ಮೂಲಕ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗದ ಕೌತುಕಮಯ ದೃಶ್ಯಗಳು ಕಣ್ಮುಂದೆ ಬಂದು ನಿಲ್ಲುತ್ತದೆ. ತಳುಕಿ ಬಳುಕಿ ಜುಳು ಜುಳು ಎನ್ನುತ್ತಾ ಹರಿಯುವ ಕಾವೇರಿ ನದಿ... ಬೀಸುವ ತಂಗಾಳಿ... ಪ್ರಕೃತಿಯ ಸೋಜಿಗ ಮೈಪುಳಕಗೊಳಿಸುತ್ತದೆ. ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ. ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ. ಸುಮಾರು ೫ ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ. ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ನಿಸರ್ಗದ ಚೆಲುವನ್ನು ಸವಿಯುತ್ತಾ ಅಲ್ಲಿಯೇ ತಂಗುವುದಾದರೆ ಅದಕ್ಕೂ ವ್ಯವಸ್ಥೆಯಿದೆ.

 ದುಬಾರೆ ಆನೆ ಶಿಬಿರ

ದುಬಾರೆ ಆನೆ ಶಿಬಿರ

ಪ್ರವಾಸಿ ತಾಣ ದುಬಾರೆ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಕುಶಾಲನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. ಸಿದ್ದಾಪುರ ರಸ್ತೆಯಲ್ಲಿ ಸಾಗಿದಾಗ ಸಿಗುವ ನಂಜರಾಯಪಟ್ಟಣದಿಂದ ಎಡಕ್ಕೆ ತಿರುಗಿದರೆ ಅಲ್ಲಿಂದ ಸುಮಾರು 1 ಕಿ.ಮೀ. ದೂರದಲ್ಲಿ ದುಬಾರೆ ಸಿಗುತ್ತದೆ. ಪ್ರತಿದಿನವೂ ಪ್ರವಾಸಿಗರಿಂದ ತುಂಬಿ ತುಳುಕುವ ದುಬಾರೆ ಇವತ್ತು ದುಬಾರೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆದಿದೆ. ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂದಿರುಗುವ ಪ್ರವಾಸಿಗರಿಗೆ ದುಬಾರೆ ಒಂದು ಅದ್ಭುತ ತಾಣ.

 ಚಿಕ್ಲಿಹೊಳೆ ಜಲಾಶಯ

ಚಿಕ್ಲಿಹೊಳೆ ಜಲಾಶಯ

ದುಬಾರೆಯಿಂದ ಸುಂಟಿಕೊಪ್ಪದ ಕಡೆಗಿನ ರಸ್ತೆಯಲ್ಲಿ ಸಾಗಿದರೆ ಚಿಕ್ಲಿಹೊಳೆ ಜಲಾಶಯವನ್ನು ತಲುಪಬಹುದು. ಈ ಜಲಾಶಯವನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳು 862 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒಗದಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982 ರಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಸ್ವಾತಂತ್ರ್ಯ ನಂತರ 1978 ರಲ್ಲಿಶಂಕುಸ್ಥಾಪನೆ ನೆರವೇರಿಸಿ 1982 ರಲ್ಲಿ ಜಲಾಶಯ ನಿರ್ಮಾಣವಾಯಿತು. ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಚಿತ್ರಗಳು : ಕೊಡಗಿನ ಚಿಕ್ಲಿಹೊಳೆಯಲ್ಲೀಗ ಜಲವೈಭವ! ಚಿತ್ರಗಳು : ಕೊಡಗಿನ ಚಿಕ್ಲಿಹೊಳೆಯಲ್ಲೀಗ ಜಲವೈಭವ!

 ಹಾರಂಗಿ ಜಲಾಶಯ

ಹಾರಂಗಿ ಜಲಾಶಯ

ಹಾರಂಗಿ ಜಲಾಶಯವು ಕುಶಾಲನಗರದಿಂದ ಸುಮಾರು 8ಕಿ.ಮೀ. ದೂರದಲ್ಲಿದೆ. ಸುಮಾರು 47 ಮೀಟರ್ ಎತ್ತರವಿರುವ ಅಣೆಕಟ್ಟು ಸುಮಾರು 846 ಮೀ. ಉದ್ದವನ್ನು ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿದಾಗ ಕ್ರಸ್ಟ್ ಗೇಟ್‌ಗಳ ಮೂಲಕ ಭೋರ್ಗರೆಯುವ ಸುಂದರ ದೃಶ್ಯ ಮನಮೋಹಕವಾಗಿರುತ್ತದೆ.

 ಗೋಲ್ಡನ್ ಟೆಂಪಲ್

ಗೋಲ್ಡನ್ ಟೆಂಪಲ್

ಕುಶಾಲನಗರಕ್ಕೆ ಸಮೀಪದಲ್ಲಿದ್ದು, ಮೈಸೂರು ಜಿಲ್ಲೆಗೆ ಸೇರಿರುವ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಪ್ರಸಿದ್ಧ ತಾಣವಾಗಿದೆ. ಇಲ್ಲಿ ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ. ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿರುವುದು ಸ್ವರ್ಣ ದೇಗುಲದ ವಿಶೇಷತೆಯಾಗಿದೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದರ ನಿರ್ಮಾಣವನ್ನು 1995 ರಲ್ಲಿ ಪ್ರಾರಂಭಿಸಿ 1999 ರಲ್ಲಿ ಪೂರ್ಣಗೊಳಿಸಿದರು. ದೇವಾಲಯ ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ. ವಿಶಾಲ ಹಜಾರವನ್ನು ಹೊಂದಿರುವ ದೇವಾಲಯದ ಪೀಠದಿಂದಲೇ ಅರವತ್ತು ಅಡಿ ಎತ್ತರದ ಭಗವಾನ್ ಬುದ್ದನ ಮೂರ್ತಿ, ಐವತ್ತೆಂಟು ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್ ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಲಾಗಿದೆ.

 ವೀರಾಜಪೇಟೆಯ ಗಡಿಯಾರ ಕಂಬ

ವೀರಾಜಪೇಟೆಯ ಗಡಿಯಾರ ಕಂಬ

ಕೊಡಗಿನ ವೀರಾಜಪೇಟೆ ಪಟ್ಟಣದಲ್ಲಿ ಟಿಕ್... ಟಿಕ್... ಸದ್ದು ಮಾಡುತ್ತಾ ಜನರಿಗೆ ಸಮಯದ ಅರಿವು ಮೂಡಿಸುತ್ತಾ ಬಂದಿರುವ ಐತಿಹಾಸಿಕ ಸ್ಮಾರಕ ಗಡಿಯಾರ ಕಂಬವನ್ನು ದೇವಣಗೇರಿಯ ಸುಬೇದಾರ್ ರಾವ್ ಬಹುದ್ದೂರ್ ಮುಕ್ಕಾಟಿರ ಅಯ್ಯಪ್ಪರವರು ಕೊಲೋನೇಷನ್ ದರ್ಬಾರ್‌ನಲ್ಲಿ ನಡೆದ ಜಾರ್ಜ್ ದೊರೆಯ ಅಧಿಕಾರ ಸ್ವೀಕಾರ ಸಮಾರಂಭದ ಸವಿನೆನಪಿಗಾಗಿ 1911ರಲ್ಲಿ ನಿರ್ಮಿಸಿದರೆಂದು ಇತಿಹಾಸ ಹೇಳುತ್ತದೆ. ಎರಡು ಅಂತಸ್ತಿನ ಗೋಪುರದಲ್ಲಿ ಗಡಿಯಾರವನ್ನು ಅಳವಡಿಸಲಾಗಿದೆ. ಇದು ಬೇರೆಡೆಗಳಲ್ಲಿರುವ ಗಡಿಯಾರ ಕಂಬಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಭಿನ್ನವಾಗಿ ಗೋಚರಿಸುತ್ತದೆ.

 ಇರ್ಪು ರಾಮೇಶ್ವರ ದೇಗುಲ

ಇರ್ಪು ರಾಮೇಶ್ವರ ದೇಗುಲ

ಹಾಗೆ ನೋಡಿದರೆ ಕೊಡಗಿನಲ್ಲಿರುವ ಇತರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಇರ್ಪು ವಿಶಿಷ್ಟವಾಗಿ ಗಮನಸೆಳೆಯುತ್ತದೆ. ಮಡಿಕೇರಿಯಿಂದ ೮೫ ಕಿ.ಮೀ. ದೂರದಲ್ಲಿರುವ ಈ ತಾಣ ವೀರಾಜಪೇಟೆ ತಾಲೂಕಿಗೆ ಸೇರಿದೆ. ಮಡಿಕೇರಿ ಕಡೆಯಿಂದ ಬರುವವರು ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಬರಬಹುದು. ಒತ್ತೊತ್ತಾಗಿರುವ ಅರಣ್ಯಗಳನ್ನೊಳಗೊಂಡ ಗಿರಿಶಿಖರಗಳು, ಜುಳುಜುಳು ಹರಿಯುವ ಲಕ್ಷ್ಮಣ ತೀರ್ಥ ನದಿ, ವಿಶಾಲ ಗದ್ದೆ ಬಯಲುಗಳ ನಡುವೆ ನೆಲೆ ನಿಂತ ರಾಮೇಶ್ವರ ದೇಗುಲ, ಅದರಾಚೆ ದಟ್ಟಕಾನನದ ನಡುವೆ ಭೋರ್ಗರೆದು ಧುಮುಕುವ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಅಷ್ಟೇ ಅಲ್ಲ ದಿನನಿತ್ಯದ ಜಂಜಾಟವನ್ನೆಲ್ಲಾ ಮರೆಸಿ ಅಲ್ಲಿಯೇ ಠಿಕಾಣಿ ಹೂಡುವಂತೆ ಮಾಡಿಬಿಡುತ್ತದೆ. ಇರ್ಪುವಿನಲ್ಲಿರುವ ರಾಮೆಶ್ವರ ದೇವಾಲಯ ಕೇರಳೀಯರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿ ಬಲು ಸೊಗಸಾಗಿ ನಿರ್ಮಿಸಲ್ಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿರುವ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ. ಇಲ್ಲಿರುವ ಜಲಪಾತ ಗಮನಸೆಳೆಯುತ್ತದೆ.

 ಸಂತ ಅನ್ನಮ್ಮ ಚರ್ಚ್

ಸಂತ ಅನ್ನಮ್ಮ ಚರ್ಚ್

1791-92ರ ಮೂರನೇ ಆಂಗ್ಲೋ-ಮೈಸೂರು ಯುದ್ದದ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಕೊಡಗಿಗೆ ದಿಕ್ಕುಪಾಲಾಗಿ ತಪ್ಪಿಸಿಕೊಂಡು ಬಂದಂತಹ ಸುಮಾರು 700 ಕ್ರೈಸ್ತರಿಗೆ ದೊಡ್ಡವೀರರಾಜೇಂದ್ರನು ಆಶ್ರಯ ನೀಡಿ, ಹೊಸದಾಗಿ ಸ್ಥಾಪಿಸಲ್ಪಟ್ಟಂತಹ ವೀರರಾಜೇಂದ್ರಪೇಟೆ(ವಿರಾಜಪೇಟೆ)ಯ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಲೆಸುವಂತೆ ವ್ಯವಸ್ಥೆ ಮಾಡಿದನು. ಅಲ್ಲದೆ ಅವರ ಮತ ಧರ್ಮವನ್ನು ಪಾಲಿಸಲು ಅನುಕೂಲವಾಗುವಂತೆ ಗೋವಾದಿಂದ ಜುವಾಂವ್ ಡಿ'ಕೋಸ್ಟ ಎಂಬ ಧರ್ಮಗುರುವನ್ನು ಕರೆಸಿ 1792 ರ ನವೆಂಬರ್ 10 ರಂದು ಕ್ರೈಸ್ತರಿಗಾಗಿಯೇ ಒಂದು ಇಗರ್ಜಿ ಕಟ್ಟಿಸಿದನು. ದೊಡ್ಡವೀರರಾಜೇಂದ್ರನ ಕಾಲದಲ್ಲಿ ನಿರ್ಮಿತವಾದ ಈ ಇಗರ್ಜಿಯು ಕೊಡಗಿನ ಏಕೈಕ ಐತಿಹಾಸಿಕ ಕ್ರೈಸ್ತ ಚರ್ಚ್ ಎಂಬ ಹೆಗ್ಗಳಿಕೆ ಪಡೆದಿದೆ.

 ಹೊನ್ನಮ್ಮನ ಕೆರೆ

ಹೊನ್ನಮ್ಮನ ಕೆರೆ

ಸೋಮವಾರಪೇಟೆ ಬಳಿಯಿರುವ ಹೊನ್ನಮ್ಮನ ಕೆರೆ ಪ್ರಾಚೀನ ಇತಿಹಾಸದೊಂದಿಗೆ ಹೆಣ್ಣುಮಗಳೊಬ್ಬಳ ಭಕ್ತಿಭಾವ, ತ್ಯಾಗ ಬಲಿದಾನದ ಕಥೆಯನ್ನು ಜಗತ್ತಿಗೆ ಸಾರಿ ಹೇಳುವ ಪವಿತ್ರ ಕ್ಷೇತ್ರವಾಗಿ ಗಮನಸೆಳೆಯುತ್ತಿದೆ. ಸೋಮವಾರಪೇಟೆಯಿಂದ ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸುಮಾರು ೬ಕಿ.ಮೀ. ಸಾಗಿದರೆ ದೊಡ್ಡಮಳ್ತೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ತೆರಳಿದರೆ ಹೊನ್ನಮ್ಮನ ಕೆರೆಯನ್ನು ತಲುಪಬಹುದು. ಹೊನ್ನಮ್ಮನ ಕೆರೆ ನಿರ್ಮಾಣದ ಹಿಂದೆ ಹೆಣ್ಣುಮಗಳೊಬ್ಬಳ ಬಲಿದಾನದ ಕಥೆಯಿರುವುದನ್ನು ನಾವು ಕಾಣಬಹುದು. ಹೊನ್ನಮ್ಮನ ಕೆರೆಯ ಇಕ್ಕೆಲಗಳಲ್ಲಿ ಬೆಟ್ಟಗಳಿದ್ದು ಇವು ಚಾರಣಿಗರಿಗೆ ಹುಮ್ಮಸ್ಸು ನೀಡುತ್ತವೆ. ಇಲ್ಲಿರುವ ಬೆಟ್ಟಗಳ ಪೈಕಿ ದೇವಾಲಯದ ಬಲಭಾಗದಲ್ಲಿರುವ ಒಂಬೈನೂರು ಅಡಿ ಎತ್ತರದಲ್ಲಿರುವ ಗವಿಬೆಟ್ಟ ಹಾಗೂ ಪಾಂಡವರಬೆಟ್ಟ ಹಲವು ವೈಶಿಷ್ಟ್ಯತೆಗಳಿಂದ ಗಮನಸೆಳೆಯುತ್ತದೆ. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ಬಂದು ನೆಲೆಸಿದ್ದರಿಂದ ಪಾಂಡವರ ಬೆಟ್ಟ ಎಂಬ ಹೆಸರು ಬಂದಿದ್ದು, ಇಲ್ಲಿ 17 ಕುಟೀರಗಳು ಇರುವುದನ್ನು ಕಾಣಬಹುದು. ಗವಿಬೆಟ್ಟದ ಮಧ್ಯದಲ್ಲಿ 20 ಮೀಟರ್ ಉದ್ದದ ಗುಹೆಯಿದ್ದು ಅಲ್ಲಿ ಚಿಕ್ಕಕೊಳವೊಂದಿದೆ. ಅದರಲ್ಲಿ ಉದ್ಭವಿಸುವ ಜಲವನ್ನು ತೀರ್ಥವೆಂದು ಉಪಯೋಗಿಸಲಾಗುತ್ತದೆ. ಬೆಟ್ಟದ ಮೇಲೆ ತೆರಳಲು ದಾರಿಗಳಿದ್ದು ಇದರಲ್ಲಿ ಮುನ್ನಡೆದರೆ ಬೆಟ್ಟದ ತುದಿಗೆ ಹೋಗಬಹುದು. ಅಲ್ಲಿ ಬೃಹತ್ ಹೆಬ್ಬಂಡೆಗಳಿದ್ದು, ಅದರ ಮೇಲೆ ನಿಂತು ನೋಡಿದ್ದೇ ಆದರೆ ಪ್ರಕೃತಿಯ ವಿಹಂಗಮನೋಟ ಮೂಕಸ್ಮಿತರನ್ನಾಗಿ ಮಾಡುತ್ತದೆ. ದೂರದ ಬೆಟ್ಟಗಳಾಚೆ ಕಾಣಸಿಗುವ ಸೂರ್ಯಾಸ್ತಮಾನದ ದೃಶ್ಯ ಮರೆಯಲಾರದ ಅನುಭವ ನೀಡುತ್ತದೆ.

 ತಲಕಾವೇರಿ- ಭಾಗಮಂಡಲ

ತಲಕಾವೇರಿ- ಭಾಗಮಂಡಲ

ತಲಕಾವೇರಿಗೆ ಹೋಗುವವರು ಭಾಗಮಂಡಲಕ್ಕೆ ತೆರಳಿ ಭಗಂಡೇಶ್ವರನಿಗೆ ಪೂಜೆ ಮಾಡಿ ಬಳಿಕ ತಲಕಾವೇರಿಗೆ ತೆರಳುತ್ತಾರೆ. ಭಾಗಮಂಡಲವು ತ್ರಿವೇಣಿ ಸಂಗಮವಾಗಿದ್ದು, ಇಲ್ಲಿ ಭಗಂಡೇಶ್ವರ, ಶಿವ, ಸುಬ್ರಹ್ಮಣ್ಯ, ವಿಷ್ಣು, ಗಣಪತಿ ದೇವಾಲಯಗಳಿವೆ. ಭಗಂಡ ಮಹರ್ಷಿ ತಪಸ್ಸು ಮಾಡಿದ ಸ್ಥಳವಾದುದರಿಂದ ಭಾಗಮಂಡಲ ಎಂಬ ಹೆಸರು ಬಂತು ಎನ್ನಲಾಗಿದೆ. ಭಾಗಮಂಡಲವನ್ನು ದಕ್ಷಿಣದ ಕಾಶಿ ಎಂಬುವುದಾಗಿಯೂ ಕರೆಯುತ್ತಾರೆ. ತಲಕಾವೇರಿ ಭಾಗಮಂಡಲದಿಂದ 8 ಕಿ.ಮೀ ದೂರವಿದೆ. ತಲಕಾವೇರಿ ನಿಸರ್ಗ ಸುಂದರ ತಾಣವಾಗಿದ್ದು, ಕಾವೇರಿ ತೀರ್ಥರೂಪಿಣಿಯಾಗಿ ಹರಿದ ಪವಿತ್ರ ಕುಂಡಿಕೆಯಿದೆ. ಇಲ್ಲಿಗೆ ಸಮೀಪವೇ ಬ್ರಹ್ಮಗಿರಿಬೆಟ್ಟವಿದೆ. ಪ್ರಶಾಂತವಾಗಿರುವ ಈ ತಾಣ ನಮ್ಮ ಜಂಜಾಟಗಳನ್ನು ದೂರ ಮಾಡಿ ನೆಮ್ಮದಿಯನ್ನು ನೀಡುತ್ತದೆ.

English summary
There are 000 Tourist places in Kodagu District.Travelers can easily to that place. Here's information about those places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X