ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

12 ವರ್ಷಕ್ಕೊಮ್ಮೆ ಅರಳುವ ಕುರುಂಜಿಯ ಚಮತ್ಕಾರಕ್ಕೆ ಕೊಡಗಿನ ಕೋಟೆ ಬೆಟ್ಟ ನೀಲಿಮಯ!

|
Google Oneindia Kannada News

ಮಡಿಕೇರಿ, ಆಗಸ್ಟ್ 18: ಕೊಡಗಿನ ನಿಸರ್ಗ ಸೌಂದರ್ಯವೇ ಹಾಗಿದೆ. ಅದು ತನ್ನೊಳಗೆ ಅವಿತುಕೊಂಡ ಸುಪ್ತ ಚೆಲುವನ್ನು ಆಗೊಮ್ಮೆ, ಈಗೊಮ್ಮೆ ಹೊರಗೆಡುವುತ್ತದೆ. ಇದೀಗ ಮಡಿಕೇರಿಗೆ ಸಮೀಪವಿರುವ ಕೋಟೆ ಬೆಟ್ಟದ ಸರದಿ. ಇದುವರೆಗೆ ಹಸಿರಾಗಿದ್ದ ಬೆಟ್ಟ ನೀಲಿ ಬಣ್ಣಕ್ಕೆ ತಿರುಗಿದೆ ಇದಕ್ಕೆ ಕಾರಣವಾಗಿರುವುದು ಕುರುಂಜಿ ಹೂ.

ಕೋಟೆ ಬೆಟ್ಟ ಕೊಡಗಿನಲ್ಲಿರುವ ಬೆಟ್ಟಗಳ ಪೈಕಿ ಒಂದಾಗಿದ್ದು, ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಸಾಮಾನ್ಯವಾಗಿ ವೀಕ್ಷಣಾ ತಾಣ ಮಡಿಕೇರಿ ಬಳಿಯಿರುವ ಮಂದಾಲಪಟ್ಟಿಗೆ ತೆರಳಿದವರಿಗೆ ಕೋಟೆ ಬೆಟ್ಟದ ಚೆಲುವು ಕಣ್ಣಿಗೆ ಕಟ್ಟಿರುತ್ತದೆ. ಮಂದಾಲಪಟ್ಟಿಯಿಂದ ನಿಂತು ನೋಡಿದರೆ ಬೆಟ್ಟ ಶ್ರೇಣಿಗಳು ಕಾಣಿಸುತ್ತವೆ. ಅದರಲ್ಲಿ ಎತ್ತರದ ಬೆಟ್ಟವೇ ಕೋಟೆ ಬೆಟ್ಟವಾಗಿದ್ದು, ಬೆಟ್ಟವನ್ನು ಕುರುಂಜಿ ಗಿಡಗಳು ಆವರಿಸಿದ್ದು, ಅವು ಸುಮಾರು ಹನ್ನೆರಡು ವರ್ಷಗಳ ಬಳಿಕ ಹೂ ಬಿಟ್ಟಿರುವುದರಿಂದ ಇಡೀ ಬೆಟ್ಟ ನೀಲಿಯಾಗಿ ಕಂಗೊಳಿಸುತ್ತಿದೆ.

 ಕುರುಂಜಿ ಹೂ ಬಿಟ್ಟರೆ ಸಮೃದ್ಧ ಜೇನು

ಕುರುಂಜಿ ಹೂ ಬಿಟ್ಟರೆ ಸಮೃದ್ಧ ಜೇನು

ಹಾಗೆ ನೋಡಿದರೆ ಕುರುಂಜಿ ಗಿಡಗಳು ಕೊಡಗಿನಾದ್ಯಂತ ಬೆಳೆಯುತ್ತವೆ. ಇದರಲ್ಲಿ ಪ್ರತ್ಯೇಕ ತಳಿಗಳಿದ್ದು, ಬೆಟ್ಟಗಳಲ್ಲಿ ಬೆಳೆಯುವ ಗಿಡಗಳು ದಷ್ಟಪುಷ್ಟವಾಗಿರುತ್ತವೆ. ಇನ್ನು ತೋಟಗಳಲ್ಲಿಯೂ ಅದರಲ್ಲೂ ಮಳೆ ಹೆಚ್ಚು ಪ್ರದೇಶಗಳಲ್ಲಿನ ಕಾಫಿ ಏಲಕ್ಕಿ ತೋಟಗಳಲ್ಲಿಯೂ ಇವು ಹುಲುಸಾಗಿ ಬೆಳೆಯುತ್ತವೆ. ಏಲಕ್ಕಿ ತೋಟಕ್ಕೆ ಇವು ಸಹಕಾರಿಯಾಗಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿಯೂ ಪಾತ್ರ ವಹಿಸುತ್ತವೆ. ಹಿರಿಯರು ಹೇಳುವ ಪ್ರಕಾರ ಕುರುಂಜಿ ಹೂ ಬಿಟ್ಟ ವರ್ಷ ಜೇನು ಸಮೃದ್ಧವಾಗಿರುತ್ತದೆಯಂತೆ. ಅಷ್ಟೇ ಅಲ್ಲ ಹೂ ಬಿಟ್ಟ ಬಳಿಕ ಗಿಡಗಳು ಸಾವನ್ನಪ್ಪುತ್ತವೆ. ಆ ನಂತರ ಮತ್ತೆ ಬೀಜಗಳು ಹುಟ್ಟಿ ಗಿಡಗಳಾಗಬೇಕಾದರೆ ಮತ್ತಷ್ಟು ವರ್ಷ ಕಾಯಬೇಕಾಗುತ್ತದೆ.

 ಕಂಗೊಳಿಸುವ ಕುರುಂಜಿಯ ಚೆಲುವು

ಕಂಗೊಳಿಸುವ ಕುರುಂಜಿಯ ಚೆಲುವು

ಕೊಡಗಿನ ತಡಿಯಂಡಮೋಳ್ ಬೆಟ್ಟ ಶ್ರೇಣಿಯಲ್ಲಿ ಒಂದು ಬೆಟ್ಟವನ್ನು ನೀಲಕುಂದು (ನೀಲಿಬೆಟ್ಟ) ಎಂದು ಕರೆಯುತ್ತಾರೆ. ಇಲ್ಲಿಯೂ ಕುರುಂಜಿ ಗಿಡಗಳು ಹೂ ಬಿಟ್ಟು ಬೆಟ್ಟವನ್ನು ನೀಲಿಯಾಗಿಸುವ ಕಾರಣ ನೀಲಕುಂದು ಆಗಿದೆ. ಹೀಗೆ ಕುರುಂಜಿ ಸುತ್ತ ಹತ್ತು ಹಲವು ವಿಶೇಷತೆಗಳು ಕೊಡಗಿನಾದ್ಯಂತ ಕಾಣಸಿಗುತ್ತವೆ. ಸದ್ಯ ಕೋಟೆಬೆಟ್ಟದಲ್ಲಿ ಹೂ ಬಿಟ್ಟು ಕಂಗೊಳಿಸುವ ಕುರುಂಜಿಯ ಚೆಲುವನ್ನು ನೋಡಲು ನಿಸರ್ಗ ಪ್ರೇಮಿಗಳು ದೌಡಾಯಿಸುತ್ತಿದ್ದಾರೆ. ಹೂವಿನೊಂದಿಗೆ ಫೋಟೋ ತೆಗೆದು ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿಸುತ್ತಿದ್ದಾರೆ.

 ಚೆಲುವು ಹುದುಗಿಸಿಕೊಂಡು ಕಾಯುವ ಕುರುಂಜಿ

ಚೆಲುವು ಹುದುಗಿಸಿಕೊಂಡು ಕಾಯುವ ಕುರುಂಜಿ

ಇಷ್ಟೆಲ್ಲ ಆದ ಮೇಲೆ ನಾವು ಕುರುಂಜಿ ಬಗ್ಗೆ ಒಂದಿಷ್ಟು ತಿಳಿಯದೆ ಹೋದರೆ ಹೇಗೆ? ಈ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ವಿಚಾರಗಳು ದೊರೆತಿದ್ದು ಅದು ಹೀಗಿದೆ. ಈ ಕುರುಂಜಿ ಗಿಡಗಳೇ ಹಾಗೆ. ಇವು ಹನ್ನೆರಡು ವರ್ಷಗಳ ಕಾಲ ತಮ್ಮಲ್ಲಿಯೂ ಅಗಾಧ ಚೆಲುವಿದೆ ಎಂಬ ಸತ್ಯವನ್ನು ಹೊರಗೆಡವದೆ ತಮ್ಮ ಪಾಡಿಗೆ ತಾವು ಎಂಬಂತೆ ಇತರೆ ಸಸ್ಯ ಸಂಕುಲಗಳಲ್ಲೊಂದಾಗಿ ಬೆಳೆಯುವ ಗಿಡಗಳು ಇದ್ದಕ್ಕಿದ್ದ ಹಾಗೆ ಹೂ ಬಿಟ್ಟು ಇಡೀ ಬೆಟ್ಟ ಗುಡ್ಡಗಳನ್ನೇ ನೀಲಮಯವಾಗಿಸಿ ಅಚ್ಚರಿ ಮೂಡಿಸುತ್ತವೆ. ಆದರೆ ಈ ಸುಂದರ ಅಪರೂಪದ ದೃಶ್ಯವನ್ನು ವೀಕ್ಷಿಸಬೇಕಾದರೆ ಹನ್ನೆರಡು ವರ್ಷ ಕಾಯಬೇಕು. ಆ ತಾಳ್ಮೆ ನಮ್ಮಲ್ಲಿರಬೇಕಷ್ಟೆ.

 ಈ ಹೂವಿಗೆ ಕುರುಂಜಿ ಹೆಸರು ಬಂದಿದ್ದೇಗೆ?

ಈ ಹೂವಿಗೆ ಕುರುಂಜಿ ಹೆಸರು ಬಂದಿದ್ದೇಗೆ?

ಇನ್ನು ಕುರುಂಜಿ ಗಿಡಗಳು ಸುಮಾರು ಎರಡರಿಂದ ಏಳು ಅಡಿಗಿಂತಲೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. ಇದರಲ್ಲಿ ಸುಮಾರು 59ಕ್ಕೂ ಹೆಚ್ಚಿನ ತಳಿಗಳಿವೆ ಎಂದು ಹೇಳಲಾಗಿದೆ. ಒತ್ತೊತ್ತಾಗಿ ಪೊದೆಯಾಗಿ ಬೆಳೆಯುವ ಇವು ನೀರಿನಾಶ್ರಯವಿಲ್ಲದ ಗಿರಿಶ್ರೇಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದೆಲ್ಲದರ ನಡುವೆ ಈ ಗಿಡಗಳಿಗೆ ಕುರುಂಜಿ ಎಂಬ ಹೆಸರು ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಕೆಲವರು ಗುಡ್ಡಗಾಡುಗಳಲ್ಲಿ ವಾಸಿಸುವ ಗಿರಿಜನರು ಹೆಸರು ಇಟ್ಟರು ಎಂದು ಹೇಳಲಾಗುತ್ತದೆ. ತೆಳು ನೀಲಿ ಮಿಶ್ರಿತ ನೇರಳೆ ಬಣ್ಣದ ಹೂ ಗಿಡದ ಮೇಲಿನಿಂದ ಕೆಳಗಿನವರೆಗೂ ಹೂ ಬಿಡುತ್ತದೆ. Acanthaceae ಸಸ್ಯ ಜಾತಿಗೆ ಸೇರಿದ ಇದರ ವೈಜ್ಞಾನಿಕ ಹೆಸರು Strobilanthes kunthiana ಆಗಿದೆ.

 ದೇವಪುಷ್ಪವೆಂದು ಪೂಜಿಸುತ್ತಾರೆ

ದೇವಪುಷ್ಪವೆಂದು ಪೂಜಿಸುತ್ತಾರೆ

ಬೆಟ್ಟ- ಗುಡ್ಡದಲ್ಲಿ ಹೂ ಬಿಟ್ಟು ಕಂಗೊಳಿಸುವ ಈ ಹೂವಿನ ಬಗ್ಗೆ ತಿಳಿಯುತ್ತಾ ಹೋದರೆ ಕೆಲವರಿಗೆ ಇದು ಪವಿತ್ರ ಪುಷ್ಪವೂ ಹೌದು. ಇದು ಹೇಗೆ ಎಂಬುದನ್ನು ನೋಡಿದ್ದೇ ಆದರೆ ಕೇರಳ ಹಾಗೂ ತಮಿಳುನಾಡಿನ ನಡುವಿನ ಪಶ್ಚಿಮ ಘಟ್ಟದ ಗುಡ್ಡಗಳಲ್ಲಿ ವಾಸಿಸುವ ತೋಡಾ ಹಾಗೂ ಮುದ್ದಾ ಜನಾಂಗವು ಈ ಹೂವನ್ನು ದೇವಪುಷ್ಪವೆಂದು ಪೂಜಿಸುತ್ತಾರಂತೆ. ತಮಿಳುನಾಡಿನಲ್ಲಿಯೂ ಕುರುಂಜಿ ಹೂ ಆರಾಧ್ಯ ಪುಷ್ಪವಂತೆ. ಅದು ಹೇಗೆಂದರೆ ಕುರುಂಜಿ ಆಂಡವನ್ ಎಂದರೆ ಆರಾಧ್ಯ ದೈವ ಮುರುಗನ ಹೆಸರಂತೆ. ಹೂವಿನ ಬಗ್ಗೆಯೂ ಅಲ್ಲಿನ ಸಾಹಿತ್ಯಗಳಲ್ಲಿ ಪ್ರಸ್ತಾಪವಿದೆಯಂತೆ. ಮುರುಗನ್ ತನ್ನ ಮದುವೆ ಸಂದರ್ಭ ಪತ್ನಿ ವಲ್ಲಿಯನ್ನು ಕುರುಂಜಿ ಹೂವಿನ ಮಾಲೆ ಹಾಕಿ ವಿವಾಹವಾದನೆಂಬ ಐತಿಹ್ಯವಿದೆ. ಹೀಗಾಗಿ ಆರಾಧ್ಯ ದೈವ ಮುರುಗನ್ ಮೆಚ್ಚಿದ ಈ ಹೂವು ತಮಿಳರಿಗೆ ಪ್ರಿಯವಾದ ಪುಷ್ಪವಾಗಿದೆ.

 ಅವಕಾಶ ತಪ್ಪಿದರೆ ಹನ್ನೆರಡು ವರ್ಷ ಕಾಯಬೇಕು!

ಅವಕಾಶ ತಪ್ಪಿದರೆ ಹನ್ನೆರಡು ವರ್ಷ ಕಾಯಬೇಕು!

ತನ್ನದೇ ಆದ ಬಣ್ಣ ಮತ್ತು ಸೌಂದರ್ಯದಿಂದ ಕಾನನದ ಪುಷ್ಪವಾಗಿ ಎಲ್ಲರ ಗಮನ ಸೆಳೆಯುವ ಕುರುಂಜಿಗೆ ಕಳೆದ ಒಂದೂವರೆ ದಶಕಗಳ ಹಿಂದೆಯೇ ಅಂಚೆ ಇಲಾಖೆ ಹದಿನೈದು ರೂಪಾಯಿಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸ್ಥಾನ ನೀಡಿತ್ತು. ಆ ಮೂಲಕ ಕುರುಂಜಿ ತನ್ನ ಸ್ಥಾನಮಾನವನ್ನು ಹೆಚ್ಚಿಸಿಕೊಂಡು ಗಮನ ಸೆಳೆದಿತ್ತು. ಇಷ್ಟೆಲ್ಲ ಮಹತ್ವ ಹೊಂದಿರುವ ಕುರುಂಜಿ ಬಗ್ಗೆ ಓದಿದ ಮೇಲೆ ಅದನ್ನು ನೋಡಬೇಕು ಎನಿಸಿದರೆ ಕೊಡಗಿನ ಕೋಟೆ ಬೆಟ್ಟದತ್ತ ಮುಖ ಮಾಡಬಹುದು. ಈ ಹೂ ಇನ್ನಷ್ಟು ದಿನಗಳ ಕಾಲ ಅಂದರೆ ಸುಮಾರು ಎರಡು ತಿಂಗಳ ತನ್ನ ಚೆಲುವನ್ನು ಪ್ರದರ್ಶಿಸುವುದರಿಂದ ವೀಕ್ಷಣೆಗೆ ಅವಕಾಶವಿದೆ. ಬಹುಶಃ ಈ ಬಾರಿ ದೊರೆತಿರುವ ಅವಕಾಶವನ್ನು ನಾವು ತಪ್ಪಿಸಿಕೊಂಡರೆ ಮತ್ತೆ ಬರೋಬ್ಬರಿ ಹನ್ನೆರಡು ವರ್ಷಗಳ ಕಾಲ ಕಾಯುವುದು ಅನಿವಾರ್ಯವಾಗಿದೆ.

Recommended Video

ಕಾಬೂಲ್ ನಲ್ಲಿ ಹಿಂದು ಅರ್ಚಕರ ದೇವಾಲಯ ಪ್ರೇಮ! | Oneindia Kannada

English summary
Hillocks in Kodagu looks purple after rare Kurinji flower blossoms after 12 years. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X