ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ

By ಬಿಎಂ ಲವಕುಮಾರ್, ಮಡಿಕೇರಿ
|
Google Oneindia Kannada News

Recommended Video

ಕೊಡಗಿನಲ್ಲಿ ಜೋರಾಗಿದೆ ಮಳೆಯ ಆರ್ಭಟ..! | Oneindia Kannada

ಮಡಿಕೇರಿ, ಆಗಸ್ಟ್ 17 : ಭಾರತದ ಸ್ವಿಡ್ಜರ್‌ಲ್ಯಾಂಡ್, ಕರ್ನಾಟಕ ಕಾಶ್ಮೀರ ಹೀಗೆ ಹಲವು ಅನ್ವರ್ಥ ನಾಮಗಳಿಂದ ಕರೆಯಲ್ಪಡುತ್ತಿದ್ದ ಕೊಡಗು ಈಗ ಅಕ್ಷರಶಃ ಸಂಕಷ್ಟದಲ್ಲಿದೆ. ಒಂದು ಕಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಇನ್ನೊಂದುಕಡೆ ಎಲ್ಲೆಂದರಲ್ಲಿ ನುಗ್ಗಿ ಬರುತ್ತಿರುವ ನೀರು, ಮತ್ತೊಂದೆಡೆ ಕುಸಿಯುತ್ತಿರುವ ಗುಡ್ಡ ಮನೆಗಳು. ಇದು ಕೊಡಗಿನಲ್ಲಿ ಕಂಡು ಬರುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಈಗಾಗಲೇ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ತಂದೊಡ್ಡಿರುವ ಅನಾಹುತಗಳು ಒಂದೆರಡಲ್ಲ. ಮನೆಗಳು ಒಂದರ ಮೇಲೊಂದರಂತೆ ಕುಸಿದು ಬೀಳುತ್ತಿವೆ. ಬಿರುಗಾಳಿಗೆ ಮರಗಳು ಧರೆಗೆ ಉರುಳಿ ಬೀಳುತ್ತಿವೆ. ಯಾವ ಕಟ್ಟಡ ಯಾವಾಗ ನೆಲಕ್ಕುರುಳುತ್ತಿವೆ ಎಂಬುದೇ ಗೊತ್ತಾಗದ ಪರಿಸ್ಥಿತಿಯಾಗಿದೆ.

ಸತತ ಮಳೆಗೆ ನಲುಗಿದ ಕೊಡಗಿನಲ್ಲಿ ಭೂ ಕುಸಿತಕ್ಕೆ ಮೂವರು ಸಾವುಸತತ ಮಳೆಗೆ ನಲುಗಿದ ಕೊಡಗಿನಲ್ಲಿ ಭೂ ಕುಸಿತಕ್ಕೆ ಮೂವರು ಸಾವು

ಇನ್ನು ಮನೆ ಪಕ್ಕ ತನ್ನ ಪಾಡಿಗೆ ತಾನು ಎಂಬಂತೆ ಹರಿಯುತ್ತಾ ಗದ್ದೆ ಇನ್ನಿತರೆ ಕಾರ್ಯಗಳಿಗೆ ಸಹಾಯಕವಾಗಿದ್ದ ಚಿಕ್ಕಪುಟ್ಟ ಹೊಳೆಗಳು ರೌದ್ರಾವತಾರ ತಾಳಿ ನುಗ್ಗಿ ಬರುತ್ತಿರುವುದರಿಂದ ಮನೆಗಳೆಲ್ಲ ಜಲಾವೃತವಾಗಿವೆ. ತೇವಕ್ಕೆ ಮನೆಗಳು ಯಾವಾಗ ಕುಸಿದು ಬೀಳುತ್ತವೆಯೋ ಎಂಬಂತಾಗಿದೆ. ನದಿ ದಡದಲ್ಲಿದ್ದ ಹಲವು ಕುಟುಂಬಗಳು ಮನೆಗಳನ್ನು ಬಿಟ್ಟು ಗಂಜಿಕೇಂದ್ರ ಸೇರಿವೆ. ತಕ್ಷಣ ಎಲ್ಲದರೂ ಹೋಗೋಣ ಎಂದರೆ ಎಲ್ಲಕಡೆಯೂ ರಸ್ತೆ ಬಂದ್ ಆಗಿದೆ.

ಶಕ್ತಿ ಪತ್ರಿಕೆ ಕಾರ್ಯಾಲಯ ಜಲಾವೃತ

ಶಕ್ತಿ ಪತ್ರಿಕೆ ಕಾರ್ಯಾಲಯ ಜಲಾವೃತ

ಮಡಿಕೇರಿಯ ಪ್ರತಿಷ್ಠಿತ ಪತ್ರಿಕೆ ಶಕ್ತಿ ಕಾರ್ಯಾಲಯಕ್ಕೆ ನೀರು ನುಗ್ಗಿದ್ದು ಮುದ್ರಣ ಪೇಪರ್ ಇನ್ನಿತರ ಯಂತ್ರಗಳಿಗೆ ಹಾನಿಯಾಗಿದೆ. ಸದ್ಯಕ್ಕೆ ಮುದ್ರಣ ಮಾಡುವ ಸ್ಥಿತಿಯಲ್ಲಿ ಆಡಳಿತ ಮಂಡಳಿ ಇಲ್ಲದರಿಂದ ಪತ್ರಿಕೆ ಪ್ರಕಟಣೆ ನಿಲ್ಲಿಸಿದೆ. ಎಂತಹ ಸಂಕಷ್ಟದ ಸಂದರ್ಭದಲ್ಲಿಯೂ ಪತ್ರಿಕೆ ನಡೆಯುತ್ತಾ ಬಂದಿತ್ತು. ಆದರೆ ಈ ಬಾರಿಯ ಮಳೆಗೆ ನಗರದಲ್ಲಿ ಹರಿಯುತ್ತಿರುವ ಮೋರಿಗಳೆಲ್ಲವೂ ತುಂಬಿ ಹರಿದ ಪರಿಣಾಮ, ಸಿಕ್ಕ ಸಿಕ್ಕ ಜಾಗಕ್ಕೆ ನೀರು ಹರಿದಿದ್ದರಿಂದ ಭಾರೀ ಅನಾಹುತಗಳಾಗುತ್ತಿವೆ. ಪತ್ರಿಕೆ ಅನಿವಾರ್ಯವಾಗಿ ಪ್ರಕಟಣೆ ನಿಲ್ಲಿಸಿದೆ.

ಸಂಕಷ್ಟಕ್ಕೆ ಸಿಲುಕಿದ ಜನರ ಸಂಪರ್ಕ ಸಾಧ್ಯವಾಗುತ್ತಿಲ್ಲ

ಸಂಕಷ್ಟಕ್ಕೆ ಸಿಲುಕಿದ ಜನರ ಸಂಪರ್ಕ ಸಾಧ್ಯವಾಗುತ್ತಿಲ್ಲ

ಈಗಾಗಲೇ ಮಳೆಯ ಅವಾಂತರಕ್ಕೆ ಹಲವಾರು ಸಾವು ನೋವುಗಳಾಗಿವೆ. ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೆಲವರನ್ನು ರಕ್ಷಿಸಲಾಗಿದೆ. ತಂತಿಪಾಲ, ಹೆಮ್ಮೆತ್ತಾಳು ವಿಭಾಗದ ಭಾರೀ ಬೆಟ್ಟ ಪ್ರದೇಶಗಳು ಕುಸಿದು ಬಿದ್ದು, ಹಲವಾರು ಮನೆಗಳು ಕುಸಿದು ಸಾಕಷ್ಟು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ನೂರಾರು ಮಂದಿ ನೆರವಿಗಾಗಿ ಕಾಯುತ್ತಿದ್ದಾರಾದರು ಅವರ ಸಂಪರ್ಕ ಸಾಧ್ಯವಾಗುತ್ತಿಲ್ಲ.

ಮಕ್ಕಂದೂರಿನಿಂದ ತಂತಿಪಾಲ, ಹೆಮ್ಮೆತ್ತಾಳು, ಮುಕ್ಕೋಡ್ಲು ವಿಭಾಗಗಳ ಅಲ್ಲಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿದ್ದು, ತಂತಿಪಾಲದ ಮನೆಯೊಂದು ಬರೆಯ ಮಣ್ಣು ಮತ್ತು ಕೆಸರಿನಿಂದ ಆವೃತ್ತವಾಗಿದ್ದು, ಮನೆಯಲ್ಲಿರುವ ನಿವಾಸಿಗಳು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರಾದರು ಅವರ ರಕ್ಷಣೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಟ್ಟ ಪ್ರದೇಶಗಳಲ್ಲಿ ರಕ್ಷಣೆ ಪಡೆದ ಹಲ ಮಂದಿ ತಮ್ಮ ಪರಿಚಯದವರ ಮೊಬೈಲ್‌ಗಳಿಗೆ ಕರೆ ಮಾಡಿ ರಕ್ಷಣೆಗೆ ಯಾಚಿಸಿದ್ದಾರಾದರೆ, ಪ್ರಸ್ತುತ ಅವರೊಂದಿಗೆ ಮರಳಿ ಸಂಪರ್ಕವೂ ಸಾಧ್ಯವಾಗದೆ, ಅವರು ಸಿಲುಕಿಕೊಂಡಿರುವ ಪ್ರದೇಶವನ್ನು ಗುರುತಿಸುವುದು ದುಸ್ತರವಾಗಿದೆ.

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

ಮಡಿಕೇರಿಯಲ್ಲಿ ಕುಸಿದ ಮನೆಯ ವಿಡಿಯೋ ವೈರಲ್

ಮಡಿಕೇರಿಯಲ್ಲಿ ಕುಸಿದ ಮನೆಯ ವಿಡಿಯೋ ವೈರಲ್

ಮಕ್ಕಂದೂರಿನಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಲ್ಲಿ ಸಿಲುಕಿಕೊಂಡವರ ರಕ್ಷಣೆಗಾಗಿ ಮಡಿಕೇರಿ ಮತ್ತು ಸೋಮವಾರಪೇಟೆ ವಿಭಾಗದ 100ಕ್ಕೂ ಹೆಚ್ಚಿನ ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ (ಆರೆಸ್ಸೆಸ್) ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ತಮ್ಮಿಂದ ಸಾಧ್ಯವಾದ ನೆರವನ್ನು ಒದಗಿಸಿ, ಗ್ರಾಮಸ್ಥರನ್ನು ಮಡಿಕೇರಿಗೆ ಸ್ಥಳಾಂತರಿಸಲು ನೆರವನ್ನು ನೀಡಿದ್ದಾರೆ.

ಮಡಿಕೇರಿ ನಗರದ ಮುತ್ತಪ್ಪ ದೇವಾಲಯದ ಬಳಿ ರಫೀಕ್ ಎಂಬವರಿಗೆ ಸೇರಿದ ಒಂದು ಅಂತಸ್ತಿನ ಮನೆ ಗುರುವಾರ ಬೆಳಗ್ಗೆ ಅಡಿಪಾಯ ಸಹಿತ ನೂರು ಅಡಿ ಆಳದ ಕಂದಕಕ್ಕೆ ಜಾರಿಹೋಗಿದ್ದು, ಅದರ ಪಕ್ಕದಲ್ಲೆ ಇದ್ದ ಹನೀಫ್ ಎಂಬವರ ಮನೆಯು ಬೀಳುವ ಸ್ಥಿತಿಯಲ್ಲಿದೆ. ರಫೀಕ್ ಅವರ ಮನೆಯಲ್ಲಿ ಇದ್ದವರು, ಅಪಾಯದ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯೇ ಮನೆ ಖಾಲಿ ಮಾಡಿದ್ದರಿಂದ ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.

ಕಾಲೂರಲ್ಲಿ ಮನೆ ಮಾತ್ರವಲ್ಲ ತೋಟಗಳೇ ಕುಸಿಯುತ್ತಿವೆ

ಕಾಲೂರಲ್ಲಿ ಮನೆ ಮಾತ್ರವಲ್ಲ ತೋಟಗಳೇ ಕುಸಿಯುತ್ತಿವೆ

ಮಡಿಕೇರಿ ಸಮೀಪದ ಕಾಲೂರಿನಲ್ಲಿ ಗುಡ್ಡ ಕಾಫಿ ತೋಟಗಳು ಎಲ್ಲೆಂದರಲ್ಲಿ ಕುಸಿಯುತ್ತಿವೆ. ವಾಸಕ್ಕೆಂದು ಕಟ್ಟಿದ ಮನೆಗಳು ಮಣ್ಣು ಪಾಲಾಗುತ್ತಿವೆ. ಎಲ್ಲೆಂದರಲ್ಲಿ ಕಾಲಿಟ್ಟಲೆಲ್ಲ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ಸದ್ಯ ಜೀವ ಉಳಿಸಿಕೊಂಡರೆ ಸಾಕೆಂಬ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ. ಗ್ರಾಮಗಳ ಸುತ್ತಲೂ ಹೊಳೆಗಳು ಹರಿಯುತ್ತಿದ್ದು ಇದು ದ್ವೀಪದಂತಾಗಿದ್ದು, ಹೊರ ಪ್ರಪಂಚದಿಂದ ದೂರವಾಗಿದೆ.

ಕಾಲೂರುವಿನಲ್ಲಿನ ಸೀತಾರಾಮ ಪಾಟಿ ಎಂಬ ಉಪಗ್ರಾಮ ನಲುಗಿ ಹೋಗಿದೆ. ಒಮ್ಮಿಂದೊಮ್ಮೆಲೆ ಭೂಮಿ ಕುಸಿದು ಮನೆಗಳು ಮಣ್ಣು ಪಾಲಾಗಿವೆ. ರಸ್ತೆಗಳು ಇಲ್ಲವಾಗಿವೆ. ಎಕರೆಗಟ್ಟಲೆ ಭೂಮಿ ಜರಿಯುತ್ತಲೇ ಇದ್ದು ಭೂಮಿ ಅಡಿಯಿಂದ ನೀರು ಉಕ್ಕಿ ಹರಿಯುತ್ತಿದೆ. ಸುಮಾರು 50 ಅಡಿಗೂ ಅಧಿಕ ಎತ್ತರದಿಂದ ಭೂಮಿ ಜರಿದು ಬಂದು ಮನೆಯನ್ನು ಎಳೆದುಕೊಂಡು ಹೋಗಿದೆ. ಹೀಗಾಗಿ ಇಲ್ಲಿನ ಮನೆಯೊಳಗಿದ್ದ ಸಾಮಗ್ರಿಗಳು, ದಾಖಲೆ ಪತ್ರಗಳು ಮಣ್ಣು ಪಾಲಾಗಿವೆ. ಅದೃಷ್ಟವಶಾತ್ ಮಣ್ಣಿನ ರಾಶಿ ಮನೆಗೆ ಅಪ್ಪಳಿಸಿ ಬಲಕ್ಕೆ ತಿರುಗಿದ್ದರಿಂದ ಉಮ್ಮಕ್ಕ ಅವರ ಹಾಗೂ ಕೆಳಭಾಗದಲ್ಲಿರುವ ಭೀಮಯ್ಯ ಎಂಬವರು ವಾಸವಿರುವ ಮನೆಗಳು ಬಚಾವಾಗಿವೆ. ಗೋಣಿಕೊಪ್ಪದಲ್ಲಿ ಕೀರೆ ಹೊಳೆ ಉಕ್ಕಿ ಹರಿಯುತ್ತಿದ್ದು, ನದಿ ದಡದ ಕಟ್ಟಗಳು ಕುಸಿಯುವ ಹಂತಕ್ಕೆ ತಲುಪಿವೆ.

ಕೊಡಗಿನಲ್ಲಿ ಮಳೆ ರೌದ್ರಾವತಾರ, ಸಂರಕ್ಷಣೆ ಕಾರ್ಯ ವಿಳಂಬಕೊಡಗಿನಲ್ಲಿ ಮಳೆ ರೌದ್ರಾವತಾರ, ಸಂರಕ್ಷಣೆ ಕಾರ್ಯ ವಿಳಂಬ

ಲೋಕೋಪಯೋಗಿ ಸಚಿವರಿಂದ ಪರಿಶೀಲನೆ

ಲೋಕೋಪಯೋಗಿ ಸಚಿವರಿಂದ ಪರಿಶೀಲನೆ

ಈಗಾಗಲೇ ತೀವ್ರ ಮಳೆ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಲೋಕೋಪಯೋಗಿ ಸಚಿವರಾದ ಎಚ್.ಡಿ. ರೇವಣ್ಣರವರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ಸೋಮವಾರಪೇಟೆ ತಾಲ್ಲೂಕಿನ ಹಟ್ಟಿಹೊಳೆ ಬಳಿಯ ಗ್ರಾಮದ ಜನರನ್ನು ಸ್ಥಳಾಂತರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲೆಯಲ್ಲಿ ಈಗಾಗಲೇ ಮೂರು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಜನರ ರಕ್ಷಣೆಗಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಬರೆ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ಕಡೆಗಳಲ್ಲಿ ಲಘು ವಾಹನ ಸಂಚಾರಕ್ಕೆ ಅನುವಾಗುವಂತೆ ಈಗಾಗಲೇ ತುರ್ತು ಕ್ರಮ ಕೈಗೊಂಡಿದ್ದು, ಮಳೆ ನಿಂತ ನಂತರ ಪೂರ್ಣ ಕಾಮಗಾರಿ ಕೈಗೆತ್ತಿ ಕೊಳ್ಳಲಾಗುವುದು ಎಂದು ಹೇಳಿದರು.

ಇದೀಗ ಜಿಲ್ಲೆಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಆರ್.ವಿ. ದೇಶಪಾಂಡೆ ಅವರು ಭೇಟಿ ನೀಡಿದ್ದು, ತೀವ್ರ ಮಳೆಹಾನಿಗೆ ಒಳಗಾಗಿರುವ ಪ್ರದೇಶಗಳ ಸ್ಥಳ ವೀಕ್ಷಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಇನ್ನು ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರು ಮಳೆಹಾನಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಮೈಸೂರಿನಲ್ಲಿ ಸಾಮಗ್ರಿ ಸ್ವೀಕಾರ ಕೇಂದ್ರ ಸ್ಥಾಪನೆ

ಮೈಸೂರಿನಲ್ಲಿ ಸಾಮಗ್ರಿ ಸ್ವೀಕಾರ ಕೇಂದ್ರ ಸ್ಥಾಪನೆ

ಕೊಡಗು ಸೇರಿದಂತೆ ವಿವಿಧ ಭಾಗಗಳಲ್ಲಿ ಉಂಟಾಗಿರುವ ನೆರೆಹಾವಳಿಗೆ ಸಿಲುಕಿರುವ ಸಂತ್ರಸ್ತರಿಗೆ ಸಾರ್ವಜನಿಕರು ತುರ್ತು ಅವಶ್ಯಕ ಸಾಮಗ್ರಿಗಳನ್ನು ನೀಡಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ, ಮೈಸೂರಿನ ಪುರಭವನದಲ್ಲಿ ಅವಶ್ಯಕ ಸಾಮಗ್ರಿಗಳ ಸ್ವೀಕಾರ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಲು ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಹಾಗೂ ಪರಿಸರ ಅಧಿಕಾರಿಗಳನ್ನು ನಿಯೋಜಿಸಿ ಪಾಲಿಕೆ ಆಯುಕ್ತರಾದ ಕೆ. ಎಚ್. ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.

ದಾನಿಗಳು ಹಾಗೂ ಸಂಘ ಸಂಸ್ಥೆಗಳು ನೀಡುವ ತುರ್ತು ಅವಶ್ಯಕ ಸಾಮಗ್ರಿಗಳನ್ನು ಈ ಕೇಂದ್ರದಲ್ಲಿ ಅಧಿಕೃತವಾಗಿ ಸ್ವೀಕರಿಸಲಾಗುವುದು. ದಾನಿಗಳು ನೀಡಿದ ಸಾಮಗ್ರಿಗಳನ್ನು ನಿಗದಿತ ವಹಿಯಲ್ಲಿ ದಾಖಲಿಸಿ, ಅಧಿಕೃತವಾಗಿ ಜಿಲ್ಲಾಡಳಿತದ ಮೂಲಕ ಕೊಡಗು ಹಾಗೂ ಇತರೆ ನೆರೆಹಾವಳಿ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ತಿಳಿಸಿದ್ದಾರೆ.

ಸಾಮಗ್ರಿಗಳ ಸ್ವೀಕಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಪಾಲಿಕೆಯ ಆರೋಗ್ಯ ಅಧಿಕಾರಿ ನಾಗರಾಜು, ಪರಿಸರ ಇಂಜಿನಿಯರ್ ಮೈತ್ರಿ, ಆರೋಗ್ಯ ಪರಿವೀಕ್ಷಕರಾದ ಯೋಗೇಶ್, ದರ್ಶನ್, ಅಶ್ವತ್ಥ್, ಮಂಜುನಾಥ್ ಹಾಗೂ ಜಯಂತಿ ಅವರನ್ನು ನಿಯೋಜಿಸಲಾಗಿದೆ.

ದಾನಿಗಳು ಸಂಘಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ನಗರ ಪಾಲಿಕೆ ಕಂಟ್ರೋಲ್ ರೂಂ ಸಂಖ್ಯೆ : 9449841195/96, 0821-2418800 ಅನ್ನು ಸಂಪರ್ಕಿಸಲು ಕೋರಲಾಗಿದೆ.

English summary
Incessant rain has wrecked havoc in Kodagu district. Many hills, homes, coffee plantations collapsing. Many people are moved to a rehabilitation camp, they need immediate help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X