ಕುಶಾಲನಗರದ ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ; ಇಬ್ಬರ ಬಂಧನ
ಮಡಿಕೇರಿ, ನವೆಂಬರ್ 4: ಪರ ಊರಿನಿಂದ ಮಹಿಳೆಯರನ್ನು ಕರೆಸಿ ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ರಾಜೇಶ್ ಮತ್ತು ಮದಲಾಪುರದ ರಜನೀಕಾಂತ್ ಬಂಧಿತ ಆರೋಪಿಗಳು. ಇವರು ಕುಶಾಲನಗರದ ಹೋಂ ಸ್ಟೇವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಈ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಶಾಲನಗರದ ಸಿಪಿಐ ಮಹೇಶ್ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಜಿಲ್ಲೆಯ ಗಂಧದ ಕೋಠಿಯಲ್ಲಿರುವ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ.
ವೇಶ್ಯಾವಾಟಿಕೆ: ಐತಿಹಾಸಿಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್
ಇದೇ ಸಂದರ್ಭ ದಂಧೆಗೆ ಬಳಸಿಕೊಂಡಿದ್ದ ಮೈಸೂರು ಹಾಗೂ ಮಂಡ್ಯ ಜಿಲ್ಲೆ ಮೂಲದ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಹೊರ ಜಿಲ್ಲೆಗಳಿಂದ ಮಹಿಳೆಯರನ್ನು ಕುಶಾಲನಗರಕ್ಕೆ ಕರೆಸಿಕೊಳ್ಳುತ್ತಿದ್ದ ಆರೋಪಿಗಳು ನಂತರ ಅವರನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ಬಳಸಿಕೊಳ್ಳುತ್ತಿದ್ದರು. ಹಲವು ದಿನಗಳಿಂದ ಈ ಕೃತ್ಯದಲ್ಲಿ ಆರೋಪಿಗಳು ತೊಡಗಿಕೊಂಡಿರುವುದಾಗಿ ತಿಳಿದುಬಂದಿದೆ. ಇಬ್ಬರು ಆರೋಪಿಗಳ ಮೇಲೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.