ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು: ಪಾಕ್‍ನಲ್ಲಿ ಬಂಧಿಯಾದ ಮಗನಿಗಾಗಿ ಹಂಬಲಿಸುತ್ತಿರುವ ಹೆತ್ತವರು!

ದಕ್ಷಿಣಕೊಡಗಿನ ಗೋಣಿಕೊಪ್ಪಲು ಬಳಿಯ ಕೈಕೇರಿ ನಿವಾಸಿ ಪಡಿಕಲ್ ಕುಶಾಲಪ್ಪ ಮತ್ತು ಮೀನಾಕ್ಷಿ ದಂಪತಿಯ ಪುತ್ರ ಪಿ.ಕೆ. ಯಶವಂತ್ ಎಂಬಾತನೇ ಲಾಹೋರ್ ಜೈಲ್‍ನಲ್ಲಿ ಬಂಧಿಯಾಗಿರುವ ಯುವಕ.

By ಬಿ.ಎಂ.ಲವಕುಮಾರ್, ಕೊಡಗು
|
Google Oneindia Kannada News

ಮಡಿಕೇರಿ, ಮಾರ್ಚ್ 27: ಪಾಕಿಸ್ತಾನದ ಲಾಹೋರ್ ಜೈಲ್‍ನಲ್ಲಿರುವ ಯುವಕ ತನ್ನ ಮಗನನ್ನೇ ಹೋಲುತ್ತಿದ್ದು, ಆತನನ್ನು ಬಿಡಿಸಿ ತಂದುಕೊಡಿ ಎಂದು ಕಳೆದ ಹಲವು ವರ್ಷಗಳಿಂದ ಕೊಡಗಿನ ದಂಪತಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗದ ಕಾರಣದಿಂದಾಗಿ ಮಗನ ನೆನಪಲ್ಲಿ ಕಣ್ಣೀರಿಡುತ್ತಾ ಕಾಲ ಕಳೆಯುವಂತಾಗಿದೆ.

ದಕ್ಷಿಣಕೊಡಗಿನ ಗೋಣಿಕೊಪ್ಪಲು ಬಳಿಯ ಕೈಕೇರಿ ನಿವಾಸಿ ಪಡಿಕಲ್ ಕುಶಾಲಪ್ಪ ಮತ್ತು ಮೀನಾಕ್ಷಿ ದಂಪತಿಯ ಪುತ್ರ ಪಿ.ಕೆ. ಯಶವಂತ್ ಎಂಬಾತನೇ ಲಾಹೋರ್ ಜೈಲ್‍ನಲ್ಲಿ ಬಂಧಿಯಾಗಿರುವ ಯುವಕ ಎನ್ನುತ್ತಿದ್ದಾರೆ ಈ ಪೋಷಕರು. ಈತ ಕಳೆದ ಹನ್ನೊಂದು ವರ್ಷದ ಹಿಂದೆ ಅಪ್ಪ ಅಮ್ಮನ ಸಂಪರ್ಕ ಕಡಿದು ಕೊಂಡಿದ್ದು, ಆತ ಪಾಕಿಸ್ತಾನದ ಲಾಹೋರ್ ಜೈಲ್‍ನಲ್ಲಿ ಹೇಗೆ ಬಂಧಿಯಾದ ಎಂಬುದು ಮಾತ್ರ ನಿಗೂಢವಾಗಿದೆ.

ಇತ್ತ, ಮಗನನ್ನು ಕಳೆದುಕೊಂಡಿರುವ ಆತನ ತಂದೆ ತಾಯಿಗಳು ಮಗನಿಗಾಗಿ ಹಾತೊರೆಯುತ್ತಿದ್ದಾರೆ.

2006ರಲ್ಲಿ ನಾಪತ್ತೆ

2006ರಲ್ಲಿ ನಾಪತ್ತೆ

ಕೊಡಗಿನಲ್ಲಿ ಓದಲು ಕಾಲೇಜುಗಳ ಕೊರತೆಯಿದ್ದ ಕಾರಣ ಮೈಸೂರಿನಲ್ಲಿ ವ್ಯಾಸಾಂಗಕ್ಕೆಂದು ಕುಶಾಲಪ್ಪ ಮತ್ತು ಮೀನಾಕ್ಷಿ ದಂಪತಿ ಮಗ ಯಶವಂತನನ್ನು ಬಿಟ್ಟಿದ್ದರು. ಆದರೆ 2006ರಲ್ಲಿ ಈತ ನಾಪತ್ತೆಯಾಗಿದ್ದನು. ಈ ಸಂದರ್ಭ ಪೊಲೀಸ್ ಠಾಣೆಗೆ ದೂರು ನೀಡಿ ಹುಡುಕಾಟ ನಡೆಸಲಾಗಿತ್ತಾದರೂ ಮಗನ ಸುಳಿವೇ ಸಿಗಲಿಲ್ಲ. ಮಗ ಎಲ್ಲಿ ಇದ್ದಾನೋ? ಹೇಗಿದ್ದನೋ? ಏನಾದನೋ? ಎಂಬ ನೂರೆಂಟು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಹೆತ್ತವರು ಕಾಲ ಕಳೆಯುವಂತಾಗಿತ್ತು.

ಎಲ್ಲವೂ ನಿಗೂಢ

ಎಲ್ಲವೂ ನಿಗೂಢ

ಇದಾದ ಕೆಲವು ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಬಂಧಿಯಾಗಿರುವ ವ್ಯಕ್ತಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ ಸಂದರ್ಭ ಯಶವಂತನ ಹೋಲುವ ವ್ಯಕ್ತಿಯ ಚಿತ್ರವಿದ್ದುದರಿಂದ ಮತ್ತು ಆತ ಕರ್ನಾಟಕದವನು ಎಂದು ಘೋಷಿಸಲಾಗಿದ್ದರಿಂದ ಕುಶಾಲಪ್ಪ ಅವರು ಆತ ತನ್ನ ಮಗನೆಂದು ಗುರುತಿಸಿದ್ದರು. ಆದರೆ ಆತ ಮೈಸೂರಿನಿಂದ ನಾಪತ್ತೆಯಾಗಿ ಪಾಕಿಸ್ತಾನಕ್ಕೆ ಏಕೆ ಹೋದ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದು ಹೋಗಿತ್ತು. ಅವರು ತನ್ನ ಮಗನನ್ನು ಬಿಡುಗಡೆ ಮಾಡಿ ತರಲು ಇನ್ನಿಲ್ಲದ ಪ್ರಯತ್ನಕ್ಕೆ ಮುಂದಾಗಿದ್ದರು.

ರಾಜ್ಯ ಸರ್ಕಾರಕ್ಕೂ ಕೋರಿಕೆ

ರಾಜ್ಯ ಸರ್ಕಾರಕ್ಕೂ ಕೋರಿಕೆ

ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತಮ್ಮ ವಕೀಲರ ಮೂಲಕ ಮೊಕದ್ದಮೆ ದಾಖಲಿಸಿ, ಲಾಹೋರ್ ನ ಸೆರೆಮನೆಯಲ್ಲಿರುವ ತಮ್ಮ ಮಗನನ್ನು ಭಾರತಕ್ಕೆ ಕರೆತರಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಾಮಾಣಿಕ ನೆಲೆಯಲ್ಲಿ ಕಾರ್ಯೋನ್ಮುಖವಾಗುವಂತೆ ನಿರ್ದೇಶಿಸಲು ಕೋರಿದ್ದರು.

ಹೋಲಿಕೆಯಿಲ್ಲ

ಹೋಲಿಕೆಯಿಲ್ಲ

ಕಾನೂನು ಪ್ರಕ್ರಿಯೆಗಳು ನಡೆದು, ಪಾಕಿಸ್ತಾನದಲ್ಲಿರುವ ಭಾರತದ ಹೈಕಮೀಷನರ್ ಕಚೇರಿಯಿಂದ ಕೆಲವು ಮಹತ್ವದ ವಿಚಾರಗಳು ಲಭ್ಯವಾಗಿದ್ದು. ಆ ಪ್ರಕಾರ ಯಶವಂತ್ ಭಾರತದಿಂದ ಕಾಣೆಯಾದಾಗ ಇದ್ದಂತಹ ರೀತಿ, ಅನಂತರ ಬಂಧಿಯಾದ ಸಂದರ್ಭದ ಚಿತ್ರ ಹಾಗೂ ಪ್ರಸಕ್ತ ಆತನಿರುವ ನೈಜ ಚಿತ್ರವನ್ನು ಹೆತ್ತವರಿಗೆ ರವಾನಿಸಲಾಗಿತ್ತು. ಆದರೆ ಈ ಚಿತ್ರಗಳು ಹೆತ್ತವರನ್ನು ಇನ್ನಷ್ಟು ಆತಂಕಕ್ಕೀಡು ಮಾಡಿವೆ.

ಎಂಎಲ್ ಸಿ ಕಡೆಯಿಂದ ಮನವಿ

ಎಂಎಲ್ ಸಿ ಕಡೆಯಿಂದ ಮನವಿ

ಮಗನ ನೆನಪಿನಲ್ಲೇ ಕಾಲ ಕಳೆಯುತ್ತಿರುವ ಹೆತ್ತವರು ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ಮಗನನ್ನು ಹುಟ್ಟೂರಿಗೆ ಕರೆದು ತರಲೇ ಬೇಕೆಂಬ ಹಠಕ್ಕೆ ಬಿದ್ದಿದ್ದು, ಹೀಗಾಗಿ ಪ್ರಯತ್ನದ ಮೇಲೆ ಪ್ರಯತ್ನ ಮಾಡುತ್ತಲೇ ಬರುತ್ತಿದ್ದು ಇದೀಗ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ.

ಇವನು ಅವನೇನಾ?

ಇವನು ಅವನೇನಾ?

ಇದೆಲ್ಲದರ ನಡುವೆ ಮತ್ತೊಂದಷ್ಟು ಗೊಂದಲವೂ ಉಂಟಾಗಿದೆ. ಲಾಹೋರಲ್ಲಿ ಬಂಧನದಲ್ಲಿರುವ ಯಶವಂತ ಮಾನಸಿಕವಾಗಿ ಅಸ್ವಸ್ಥತೆಯಿಂದ ಬಳಲುತ್ತಿರುವುದಲ್ಲದೆ, ಅಲ್ಲಿಂದ ರವಾನೆಯಾಗಿರುವ ಭಾವಚಿತ್ರ ಮಗನ ಚಹರೆಯನ್ನೇ ಹೋಲುತ್ತಿದ್ದರೂ ಹೆಸರು ರಮೇಶ್ ಎಂದಾಗಿದೆಯಂತೆ. ಇದು ಹೆತ್ತವರ ಅನುಮಾನಕ್ಕೆ ಕಾರಣವಾಗಿದೆ.

ಆಸೆ ಈಡೇರುತ್ತದೆಯೇ?

ಆಸೆ ಈಡೇರುತ್ತದೆಯೇ?

ಮನವಿಗೆ ಓಗೊಟ್ಟು ಸುನೀಲ್ ಸುಬ್ರಹ್ಮಣಿ ಅವರು ಇತ್ತೀಚೆಗೆ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರಿಂದ ಯಶವಂತನ ಕುರಿತು ಮಾಹಿತಿ ಪಡೆದಿದ್ದಲ್ಲದೆ, ಮನೆಗೆ ತೆರಳಿ ಹೆತ್ತವರಿಗೆ ಧೈರ್ಯ ತುಂಬಿ ಭರವಸೆ ನೀಡಿದ್ದಾರೆ. ಈಗಾಗಲೇ ಒಂದಷ್ಟು ದಾಖಲೆಗಳನ್ನು ಪಡೆದಿರುವ ಅವರು ತಾವೇ ಖುದ್ದಾಗಿ ದೆಹಲಿಯ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಯಶವಂತನ ಬಿಡುಗಡೆಗೆ ಶ್ರಮಿಸುವ ಭರವಸೆ ನೀಡಿದ್ದಾರೆ. ಇದರಿಂದ ಹನ್ನೊಂದು ವರ್ಷಗಳಿಂದ ಕಮರಿದ್ದ ಮಗನ ನೋಡುವ ಆಸೆ ಮತ್ತೆ ಹೆತ್ತವರಲ್ಲಿ ಚಿಗುರುವಂತಾಗಿದೆ.

English summary
Parents of a Coorg Boy are in Worry and depression as they assume that their son has been imprisoned in Pakistan's Lahore jail over a period of 11 years. These parents have been approached the judiciary of India, Indian Government and State Government but still they have not got their son back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X