ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರ ಸಹಿತ: ಕೊಡಗಿನಲ್ಲಿ ನಾಟಿ ಅಂದ್ರೆ ಅದೊಂದು ಹಬ್ಬದಂತೆ!

|
Google Oneindia Kannada News

ಮಡಿಕೇರಿ, ಜುಲೈ 21: ಕಳೆದ ಕೆಲವು ದಶಕಗಳ ಹಿಂದೆ ಕೊಡಗಿನಲ್ಲಿ ಭತ್ತದ ಕೃಷಿ ಕಾರ್ಯವೆಂದರೆ ಅದೊಂದು ಹಬ್ಬದಂತೆ ಭಾಸವಾಗುತ್ತಿತ್ತು. ಬಹುಶಃ ಭತ್ತದ ಕೃಷಿಯನ್ನೇ ಮೂಲವನ್ನಾಗಿಟ್ಟುಕೊಂಡು ಕೃಷಿಯ ಪ್ರತಿ ಹಂತದಲ್ಲೂ ಒಂದೊಂದು ರೀತಿಯ ಹಬ್ಬವನ್ನು ಆಚರಿಸುವುದು ಮಾತ್ರವಲ್ಲದೆ, ನಾಟಿ ಕಾರ್ಯವನ್ನೇ ಸಂತಸದಿಂದಲೇ ಮಾಡಿ ಮುಗಿಸುವುದು ತಲೆಮಾರುಗಳಿಂದ ಬಂದಿದೆ.

ಇವತ್ತು ಆಧುನಿಕತೆಯ ನಾಗಾಲೋಟದಲ್ಲಿದ್ದು, ಉಳುಮೆಗೆ ಎತ್ತುಗಳ ಬದಲಾಗಿ ಯಂತ್ರಗಳು ಬಂದಿವೆ. ಹಾಗೆಯೇ ನಾಟಿ ಕೂಡ ಕೆಲವೆಡೆ ಯಂತ್ರಗಳಿಂದ ಮಾಡಲಾಗುತ್ತಿದೆ. ಮಧ್ಯಮ ವರ್ಗದ ಒಂದಷ್ಟು ಮಂದಿ ಈಗಲೂ ಹಿಂದಿನ ಕಾಲದಂತೆಯೇ ನಾಟಿ ಕಾರ್ಯವನ್ನು ಮಾಡುತ್ತಿದ್ದರೆ, ಉಳಿದವರು ಯಂತ್ರಗಳ ಮೊರೆ ಹೋಗಿದ್ದಾರೆ. ಒಟ್ಟಾರೆ ನೋಡಿದರೆ ಹಿರಿಯರು ಆಚರಿಸಿಕೊಂಡು ಬಂದಿದ್ದ ಸಂಪ್ರದಾಯದಲ್ಲಿ ಒಂದಷ್ಟು ಬದಲಾವಣೆಗಳು ಆಗಿರುವುದು ನಿಜವಾದರೂ, ಅದರ ಮೂಲ ಮಾತ್ರ ಹಾಗೆಯೇ ಉಳಿದು ಬರುತ್ತಿದೆ ಎಂಬುದು ನೆಮ್ಮದಿ ತರುತ್ತಿದೆ.

ಎತ್ತುಗಳ ಬದಲಿಗೆ ಯಂತ್ರಗಳು

ಎತ್ತುಗಳ ಬದಲಿಗೆ ಯಂತ್ರಗಳು

ವಾತಾವರಣದಲ್ಲಿ ಈಗ ಬದಲಾವಣೆ ಆಗಿದೆ. ಆದರೆ ನಾಲ್ಕೈದು ದಶಕಗಳ ಹಿಂದೆ ಈ ರೀತಿ ಇರಲಿಲ್ಲ. ವಾಣಿಜ್ಯ ಕೃಷಿ ಚಟುವಟಿಕೆ ಇತರೆ ವ್ಯಾಪಾರ ವ್ಯವಹಾರಗಳು ಕೊಡಗಿನಲ್ಲಿ ಇರಲಿಲ್ಲ. ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಹೆಚ್ಚು ಭತ್ತದ ಗದ್ದೆಯನ್ನು ಹೊಂದಿದವರನ್ನು ಶ್ರೀಮಂತರೆಂದೇ ಭಾವಿಸಲಾಗುತ್ತಿತ್ತು. ಜತೆಗೆ ಭತ್ತದ ಕೃಷಿ ಕಾರ್ಯ ಕೂಡ ತಿಂಗಳಾನುಗಟ್ಟಲೆ ನಡೆಯುತ್ತಿತ್ತು.

ವರ್ಷದ ಆರು ತಿಂಗಳ ಕಾಲ ಮಳೆ ಎಡೆ ಬಿಡದೆ ಸುರಿಯುತ್ತಿತ್ತು. ಹೆಚ್ಚಿನ ಮನೆಗಳಿಗೆ ಹುಲ್ಲಿನ ಹೊದಿಕೆಯೇ ಛಾವಣಿಯಾಗಿತ್ತು. ಹೀಗಾಗಿ ಅವತ್ತು ಬಿಳಿಯ, ಬಿಕೆಬಿ, ಬಿಎಂತ್ರಿ ಎಂಬಂತಹ ನಾಟಿ ತಳಿಯ ಭತ್ತವನ್ನು ಬೆಳೆಯುತ್ತಿದ್ದರು. ಈ ಬೆಳೆಗಳು ನಾಲ್ಕೈದು ತಿಂಗಳಲ್ಲಿ ಫಸಲು ಬರುವ ಬೆಳೆಯಾಗಿದ್ದು, ಸುಮಾರು ಮೂರ್ನಾಲ್ಕು ಅಡಿಯಷ್ಟು ಎತ್ತರ ಬೆಳೆಯುತ್ತಿದ್ದವು. ಇದರ ಹುಲ್ಲನ್ನು ಮನೆ, ಕೊಟ್ಟಿಗೆಯ ಛಾವಣಿಗೆ ಹಾಕಲಾಗುತ್ತಿತ್ತು.

ಮಳೆಯ ನೀರಲ್ಲೇ ಭತ್ತದ ಕೃಷಿ

ಮಳೆಯ ನೀರಲ್ಲೇ ಭತ್ತದ ಕೃಷಿ

ಮಳೆಯ ನೀರನ್ನೇ ನಂಬಿ ಭತ್ತ ಬೆಳೆಯುತ್ತಿದ್ದರು. ಜೂನ್ ತಿಂಗಳಲ್ಲಿ ಸುರಿವ ಮಳೆಗೆ ಅಂತರ್ಜಲ ಹೆಚ್ಚಾಗಿ ತೊರೆ, ನದಿಗಳು ಹರಿಯುತ್ತಿದ್ದವು. ಅವುಗಳ ನೀರನ್ನು ಬಳಸಿ ಕೃಷಿ ಮಾಡಲಾಗುತ್ತಿತ್ತು. ಕೃಷಿಗೆಂದೇ ಎತ್ತುಗಳನ್ನು ಸಾಕಲಾಗುತ್ತಿತ್ತು. ಅವುಗಳಿಗೆ ಮೇಯಲೆಂದೇ ತಮ್ಮ ಗದ್ದೆಯ ಪಕ್ಕದಲ್ಲಿ ಒಂದಷ್ಟು ಜಾಗ(ಬಾಣೆ)ವನ್ನು ಬಿಡುತ್ತಿದ್ದರು.

ಜೂನ್ ತಿಂಗಳಿನಲ್ಲಿಯೇ ಭತ್ತದ ಕೃಷಿ ಚಟುವಟಿಕೆ ಆರಂಭಿಸಲಾಗುತ್ತಿತ್ತು. ಇಡೀ ಗದ್ದೆಯ ಬಯಲಿನಲ್ಲಿರುವ ಒಂದೊಂದು ಗದ್ದೆಗೂ ತಮ್ಮ ವಿವೇಚನೆಯಂತೆ ಹೆಸರಿಡುತ್ತಿದ್ದರು. ಸಸಿ ಮಡಿ ತಯಾರಿಸುವ ಗದ್ದೆಯನ್ನು ಎಕಲೆಂದು, ಉಳಿದಂತೆ ದೊಡ್ಡಗದ್ದೆ, ಓಟಗದ್ದೆ, ಗುಂಡಿಗದ್ದೆ, ಅಡಿಗದ್ದೆ ಹೀಗೆ ಹಲವು ರೀತಿಯಲ್ಲಿ ಕರೆಯಲಾಗುತ್ತಿತ್ತು.

ಕೂಡು ಆಳುಗಳಾಗಿ ನಾಟಿ ಕಾರ್ಯ

ಕೂಡು ಆಳುಗಳಾಗಿ ನಾಟಿ ಕಾರ್ಯ

ಪೈರನ್ನು ಮಹಿಳೆಯರು ತೆಗೆದರೆ ನಾಟಿ ಕಾರ್ಯವನ್ನು ಗಂಡಸರು ಮಾಡುವುದು ಇಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇನ್ನು ನಾಟಿ ಕಾರ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಕೂಡು ಆಳುಗಳಾಗಿ ಕೆಲಸ ಮಾಡುತ್ತಿದ್ದರು. ಒಂದಷ್ಟು ಕುಟುಂಬಗಳು ಒಟ್ಟಾಗಿ ಒಬ್ಬರದು ಮುಗಿದ ಮೇಲೆ ಮತ್ತೊಬ್ಬರದು ಎಂಬಂತೆ ನಾಟಿ ಕಾರ್ಯವನ್ನು ಮಾಡಿ ಮುಗಿಸುತ್ತಿದ್ದರು. ಪೈರು ಕೀಳುವ ಮಹಿಳೆಯರು ಕೂಡ ಹೀಗೆಯೇ ಬರುತ್ತಿದ್ದರು. ಹೀಗೆ ಮಾಡುತ್ತಿದ್ದರಿಂದ ಕೂಲಿ ಆಳುಗಳ ಸಮಸ್ಯೆ ಎದುರಾಗುತ್ತಿರಲಿಲ್ಲ.

ಕೊಡಿನಾಟಿ ಗದ್ದೆಗೊಂದು ಶೋಭೆ

ಕೊಡಿನಾಟಿ ಗದ್ದೆಗೊಂದು ಶೋಭೆ

ಇನ್ನು ನಾಟಿ ಮಾಡುವುದರಲ್ಲಿ ಪ್ರತಿಭಾವಂತರು ಇರುತ್ತಿದ್ದರು. ಚುರುಕಾಗಿ ನಾಟಿ ಮಾಡುವವರು ಒಂದು ಕಡೆಯಾದರೆ, ಕೊಡಿನಾಟಿಕಾರರು ಇರುತ್ತಿದ್ದರು. ಕೊಡಿ ನಾಟಿ ಎಂದರೆ ದೊಡ್ಡದಾದ ಗದ್ದೆಯನ್ನು ವಿಭಾಗಿಸುವಂತೆ ನೇರವಾಗಿ ನಾಟಿ ನೆಡುವುದು. ಇದೊಂದು ರೀತಿಯ ಕಲೆ ಎಂದರೂ ತಪ್ಪಾಗಲಾರದು. ವಿಶಾಲವಾದ ಗದ್ದೆಗಳಲ್ಲಿ ಎದ್ದು ಕಾಣುವ ಕೊಡಿ ನಾಟಿ ಗದ್ದೆಗೊಂದು ಶೋಭೆಯಾಗಿತ್ತು.

ಒಯ್ಯ ಹಾಕುವುದರಲ್ಲೊಂದು ಮಜಾ

ಒಯ್ಯ ಹಾಕುವುದರಲ್ಲೊಂದು ಮಜಾ

ಇನ್ನು ಸುರಿಯುವ ಮಳೆಯಲ್ಲಿ ನಾಟಿ ನೆಡುವುದು ಅಷ್ಟೊಂದು ಸುಲಭದ ಕಾರ್ಯವಾಗಿರಲಿಲ್ಲ. ದೊಡ್ಡದಾದ ಗದ್ದೆಯಲ್ಲಿ ಹತ್ತಾರು ಮಂದಿ ತಮಾಷೆ ಮಾಡುತ್ತಾ, ಲೋಕಾರೂಢಿ ಮಾತನಾಡುತ್ತಾ ನಾಟಿ ಮಾಡುವುದೇ ಒಂದು ರೀತಿಯಲ್ಲಿ ಸಡಗರವಾಗಿತ್ತು. ಗದ್ದೆಯಲ್ಲಿ ನಾಟಿ ಮುಗಿಯುತ್ತಾ ಬರುತ್ತಿದ್ದಂತೆಯೇ ಎಲ್ಲರೂ ಸೇರಿ ಒಯ್ಯ ಹಾಕುತ್ತಿದ್ದರು. ಈ ಒಯ್ಯವನ್ನು ಕೊಡವ, ತುಳು, ಕನ್ನಡ ಹೀಗೆ ಅವರಿಗೆ ಅನುಕೂಲವಾಗುವ ಭಾಷೆಯಲ್ಲಿ ಹಾಕುತ್ತಿದ್ದರು. ಒಬ್ಬ ನಾಟಿಕಾರ ಯಾವುದಾರೊಂದು ವಿಷಯದಲ್ಲಿ ಹಾಡುತ್ತಾ ಹೋಗುತ್ತಿದ್ದಂತೆಯೇ ಅದಕ್ಕೆ ಇತರ ನಾಟಿಕಾರರು ಓವಯ್ಯ ಎನ್ನುತ್ತಾ ದನಿಗೂಡಿಸುತ್ತಿದ್ದರು.

ದೊಡ್ಡನಾಟಿಗೆ ಮಾಂಸದೂಟದ ಸಂಭ್ರಮ

ದೊಡ್ಡನಾಟಿಗೆ ಮಾಂಸದೂಟದ ಸಂಭ್ರಮ

ಕೊನೆಯ ನಾಟಿ ದಿನದಂದು ನಾಟಿ ಮಾಡಿದವರಿಗೆ ಮಾಂಸದೂಟ ಮಾಡಲಾಗುತ್ತಿತ್ತು. ಕೆಲವೆಡೆ ದೊಡ್ಡ ನಾಟಿಯಂದು ಗದ್ದೆಯಲ್ಲಿ ತಾವು ಮಾಡಿದ ಅಡುಗೆಯನ್ನು ತಂದಿಟ್ಟು ಕಾಗೆಯನ್ನು ಕರೆಯುವ ಪದ್ಧತಿಯೂ ಇದೆ. ಇದೆಲ್ಲದರ ನಡುವೆ ತಿಂಗಳಾನುಗಟ್ಟಲೆ ನಾಟಿ ಕೆಲಸದಲ್ಲಿ ನಿರತರಾದವರು ಮನರಂಜನೆ ಪಡೆಯಲು ನಾಟಿ ಆದ ಬಳಿಕ ಸಂಜೆ ಓಟದ ಸ್ಪರ್ಧೆ ಏರ್ಪಡಿಸುತ್ತಿದ್ದರು. ಓಟದಲ್ಲಿ ಗೆದ್ದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುತ್ತಿತ್ತು. ಮೊದಲ ಬಹುಮಾನ ಹಣವಾದರೆ ದ್ವಿತೀಯ ಬಾಳೆಗೊನೆ, ತೃತೀಯವಾಗಿ ತೆಂಗಿನ ಕಾಯಿಗಳನ್ನು ನೀಡಲಾಗುತ್ತಿತ್ತು.

ನಾಟಿ ಮುಗಿಸಿದ ಖುಷಿಗೆ ಕೈಲ್ ಮುಹೂರ್ತ

ನಾಟಿ ಮುಗಿಸಿದ ಖುಷಿಗೆ ಕೈಲ್ ಮುಹೂರ್ತ

ನಾಟಿ ಕೆಲಸವೆಲ್ಲ ಮುಗಿದ ನಂತರ ಸೆಪ್ಟಂಬರ್ ತಿಂಗಳ ಮೂರರಂದು ಕೈಲ್ ಮುಹೂರ್ತ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಿ ಸಂಭ್ರಮಿಸುತ್ತಿದ್ದರು. ಹೀಗೆ ಕೊಡಗಿನಲ್ಲಿ ಭತ್ತದ ನಾಟಿ ಸಂಭ್ರದಲ್ಲಿಯೇ ಸಾಗುತ್ತಿತ್ತು. ಇವತ್ತು ವರ್ಷದಿಂದ ವರ್ಷಕ್ಕೆ ಭತ್ತದ ಗದ್ದೆಗಳೇ ಮಾಯವಾಗುತ್ತಿರುವುದರಿಂದ ಮತ್ತು ಇರುವ ಗದ್ದೆಗಳನ್ನು ಯಂತ್ರಗಳು ಆವರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಭತ್ತದ ನಾಟಿಯ ಸಂಭ್ರಮ ಮರೆಯಾದರೂ ಅಚ್ಚರಿಪಡಬೇಕಾಗಿಲ್ಲ.

English summary
Paddy farming in Kodagu a few decades ago was like a festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X