ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ಕಡಿಮೆ ಆಗಿದ್ದಕ್ಕೆ ತಲಕಾವೇರಿಗಾದ ಅಪಚಾರ ಕಾರಣವೇ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 8: ತಲಕಾವೇರಿ ಬಹ್ಮಕುಂಡಿಕೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿರುವುದಕ್ಕೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇಷ್ಟು ವರ್ಷ ಹಾಕದೆ ಮಳೆಗಾಲದಲ್ಲಿಯೂ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು. ಮಳೆ ಬಿದ್ದು ಇಲ್ಲಿ ನಡೆಯುವ ಪೂಜಾ ಕಾರ್ಯಕ್ರಮಕ್ಕೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಇದು ಅಪಚಾರ ಎಂಬ ಆರೋಪವೂ ಕೇಳಿ ಬಂದಿದೆ.

ಈ ಪ್ಲಾಸ್ಟಿಕ್ ಹೊದಿಕೆಯನ್ನು ತೆರವು ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದ್ದು, ಪವಿತ್ರ ಕುಂಡಿಕೆಯ ಮೇಲ್ಭಾಗ ಅಳವಡಿಸಿದ ಪ್ಲಾಸ್ಟಿಕ್ ಹೊದಿಕೆಯನ್ನು ತಕ್ಷಣ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಕಾವೇರಿ ನದಿ ಸ್ವಚ್ಚತಾ ಆಂದೋಲನದ ಪ್ರಮುಖರು ದೇವಾಲಯ ಆಡಳಿತಾಧಿಕಾರಿಯನ್ನು ಆಗ್ರಹಿಸಿದ್ದಾರೆ.

No rain in Madikeri because of curse by Talakaveri

ಕೆಲವು ವರ್ಷಗಳಿಂದ ಕುಂಡಿಕೆ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಅಳವಡಿಸಿದ್ದು, ಈ ಮೂಲಕ ಭಕ್ತಾದಿಗಳಿಗೆ ಅಸಮಾಧಾನ ಉಂಟಾಗಿದೆ. ಹಲವು ಬಾರಿ ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿ ಪ್ರಮುಖರು ಸೇರಿದಂತೆ ಜಿಲ್ಲೆಯ ಸಂಘಟನೆಗಳು ಇದನ್ನು ತೆರವುಗೊಳಿಸಲು ಆಗ್ರಹಿಸಿದ್ದರೂ ಯಾವದೇ ಕ್ರಮ ಕೈಗೊಳ್ಳದ ಬಗ್ಗೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ತೀರ್ಥೋದ್ಭವಕ್ಕೂ ಮೊದಲೇ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಈ ನಿಟ್ಟಿನಲ್ಲಿ ಸಮಿತಿ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ದೇವಾಲಯ ಆಡಳಿತಾಧಿಕಾರಿ ಸತೀಶ್ ಕುಮಾರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಅಲ್ಲದೆ ಕ್ಷೇತ್ರದ ತಕ್ಕ ಮುಖ್ಯಸ್ಥರು, ಕ್ಷೇತ್ರದ ಅರ್ಚಕರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು, ತಪ್ಪಿದಲ್ಲಿ ಭಕ್ತಾದಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಪ್ಲಾಸ್ಟಿಕ್ ಹೊದಿಕೆ ತೆರವುಗೊಳಿಸಲು ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕ್ಷೇತ್ರದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಹೇಳಿದ್ದಾರೆ. ಬಹಳಷ್ಟು ಸಂಘಟನೆ ಪ್ರಮುಖರು ಪ್ಲಾಸ್ಟಿಕ್ ಹೊದಿಕೆ ತೆರವಿಗೆ ಆಗ್ರಹಿಸಿದ್ದಾರೆ.

ತಲಕಾವೇರಿಯಲ್ಲಿ ಅಪಚಾರ: ಕೊಡಗಿನಲ್ಲಿ ವಾಡಿಕೆ ಮಳೆಯಾಗದೆ ಬರ ಪರಿಸ್ಥಿತಿ ನಿರ್ಮಾಣವಾಗಲು ಕಾರಣಗಳನ್ನು ಕೇರಳದ ಜ್ಯೋತಿಷಿ ವಾರಿಯರ್ 2002ರಲ್ಲೇ ಹೇಳಿದ್ದರು. ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರವಾಗಬೇಕು. ಅದು ಆದರೆ ಉತ್ತಮ ಮಳೆಯಾಗಿ ನೀರಿನ ವಿವಾದ ಇತಿಶ್ರೀಯಾಗುವುದರೊಂದಿಗೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ ಎಂದಿದ್ದರು. ಆ ಪ್ರಕಾರವೇ ತಲಕಾವೇರಿ ಜೀರ್ಣೋದ್ಧಾರ ನಡೆದದ್ದು ಎಲ್ಲರಿಗೂ ತಿಳಿದ ವಿಚಾರವೇ.

ಮತ್ತೆ ಕೆಲವು ವರ್ಷ ಕಾಲ ಮಳೆ ಉತ್ತಮವಾಗಿತ್ತು. ಯಾವುದೇ ವಿವಾದ ಎದ್ದಿರಲಿಲ್ಲ. ಆ ಸಂದರ್ಭದ ಅಷ್ಟಮಂಗಲ ಪ್ರಶ್ನೆ ವೇಳೆ ಜ್ಯೋತಿಷಿ ವಾರಿಯರ್, ಮೂಲ ಕ್ಷೇತ್ರವಾದ ತಲಕಾವೇರಿಯಲ್ಲ್ಲಿ ಮತ್ತೆ ಅಪಚಾರವಾದರೂ ತೊಂದರೆ ತಪ್ಪಿದಲ್ಲ ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಇದೀಗ ಮತ್ತೆ ಕಾವೇರಿ ಮುನಿದ್ದಾಳೆ. ಅದಕ್ಕೆ ಕಾರಣಗಳನ್ನು ಕೂಡ ನೀಡಲಾಗುತ್ತಿದೆ.

ಅದೇನೆಂದರೆ ಕಾವೇರಿ ಉಗಮ ಸ್ಥಾನವಾದ ಬ್ರಹ್ಮಕುಂಡಿಕೆಯನ್ನು ಟಾರ್ಪಾಲಿನ್ ನಿಂದ ಮುಚ್ಚಲಾಗಿದೆ. ಮಳೆ ಬಿದ್ದು ಅರ್ಚನೆ ಸಂದರ್ಭ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಆದರೆ ಇದರಿಂದ ಕಾವೇರಿಯನ್ನು ಕತ್ತಲೆಯಲ್ಲಿಡಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕಾವೇರಿ ಕುಂಡಿಕೆಯನ್ನು ಟಾರ್ಪಾಲಿನ್ ನಿಂದ ಹೊದಿಸಲಾಗಿದೆ. ಇದರಿಂದ ಕಾವೇರಿಗೆ ಸೂರ್ಯನ ದರ್ಶನವಾಗುತ್ತಿಲ್ಲ. ಕಾವೇರಿಯನ್ನು ಕತ್ತಲ ಕೂಪದಲ್ಲಿರಿಸುವ ಮೂಲಕ ಅಪಪ್ರಚಾರ ಮಾಡಲಾಗಿದ್ದು, ಇದರಿಂದ ತೊಂದರೆಗಳು ಸಂಭವಿಸುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

English summary
Brahmakundike closed with tarpaulin in Talakaveri, Kodagu district. Coorg people believing that, due to that cauvery water dispute arised in the state. People demand to clear tarpaulin from there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X