ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ಕೊಡಗಿನಲ್ಲಿ ಮಳೆಗಾಲದ ಪ್ರಾಕೃತಿಕ ವಿಕೋಪಕ್ಕೆ ಕಾರಣ ಗೊತ್ತಾ?

|
Google Oneindia Kannada News

ಮಡಿಕೇರಿ, ಜೂನ್ 3: ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ ಎಂದು ಅಕ್ಕಮಾದೇವಿ ಸುಮಾರು 860 ವರ್ಷಗಳ ಹಿಂದೆಯೇ ಹೇಳಿದ್ದರು. ಆದರೆ ಇವತ್ತಿನ ಮಲೆನಾಡಿನ ಬಹುತೇಕ ಜನ ಬೆಟ್ಟಗುಡ್ಡ, ಕಾಡುಗಳಲ್ಲಿ ಮನೆ ಮಾಡಿದ್ದು, ಅವರು ಮೃಗಗಳಿಗೆ ಹೆದರುತ್ತಿಲ್ಲ, ಬದಲಾಗಿ ಮಳೆಗಾಲದಲ್ಲಿ ಸಂಭವಿಸಬಹುದಾದ ಭೂಕುಸಿತಕ್ಕಾಗಿ ಹೆದರುವಂತಾಗಿದೆ.

ಹಾಗೆ ನೋಡಿದರೆ ಮಲೆನಾಡುಗಳಲ್ಲಿ ಅದರಲ್ಲೂ ಕೊಡಗಿನಲ್ಲಿ ಭೂಕುಸಿತದಂತಹ ಘಟನೆಗಳು ಹಿಂದೆ ನಡೆಯುತ್ತಿದ್ದದ್ದು ಅಪರೂಪವೇ. ಮಳೆಗಾಲವೂ ಕೂಡ ಭೀಕರತೆಯನ್ನು ಪಡೆಯುತ್ತಿರಲಿಲ್ಲ. ಜಿಟಿಜಿಟಿಯಾಗಿ ಆರಂಭವಾಗುತ್ತಿದ್ದ ಮಳೆಗಾಲ ಜುಲೈ, ಆಗಸ್ಟ್ ತಿಂಗಳಲ್ಲಿ ಬಿರುಸು ಪಡೆಯುತ್ತಿತ್ತು. ಈ ಸಂದರ್ಭ ತೊರೆ, ನದಿಗಳು ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಾದರೂ ಅದು ಜನ ಸಾಮಾನ್ಯರ ಜೀವನಕ್ಕೆ ಅಷ್ಟೊಂದು ಅಡ್ಡಿಯಾಗುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮಳೆಗಾಲಕ್ಕೆ ಮೊದಲೇ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದುದರಿಂದ ಮಳೆಗಾಲದ ಪರಿಸ್ಥಿತಿಯನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತಿರಲಿಲ್ಲ.

ವಾಣಿಜ್ಯಕರಣದ ವ್ಯಾಮೋಹ ತಂದೊಡ್ಡಿದ ದುರಂತ

ವಾಣಿಜ್ಯಕರಣದ ವ್ಯಾಮೋಹ ತಂದೊಡ್ಡಿದ ದುರಂತ

ಕೊಡಗಿನಲ್ಲಿ ಒಂದೆರಡು ದಶಕಗಳ ಹಿಂದೆಗೂ ಇವತ್ತಿಗೂ ಬಹಳಷ್ಟು ಬದಲಾವಣೆಗಳು ಆಗಿರುವುದನ್ನು ನಾವು ಕಾಣಬಹುದಾಗಿದೆ. ನಮ್ಮ ಆಧುನಿಕತೆ ಮತ್ತು ಅದರಾಚೆಗಿನ ಸ್ವಾರ್ಥ, ವಾಣಿಜ್ಯಕರಣದ ವ್ಯಾಮೋಹ ಹೀಗೆ ಎಲ್ಲವೂ ನೇರ ಪರಿಣಾಮ ಬೀರಿದ್ದು, ಪರಿಸರದ ಮೇಲೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕೆ ಅಳಿದ ಕಾಡುಗಳು, ಬೆಟ್ಟಗುಡ್ಡಗಳಲ್ಲಿ ನಿರ್ಮಾಣವಾದ ರಸ್ತೆ ಮತ್ತು ಅಲ್ಲಿ ತಲೆ ಎತ್ತಿದ ಭವ್ಯ ಬಂಗಲೆ, ರೆಸಾರ್ಟ್, ಹೋಂಸ್ಟೇಗಳು ಸಾಕ್ಷಿಯಾಗಿ ನಿಂತಿವೆ.

ಪರಿಸರದ ಪಾಠ ಹೇಳಿಕೊಡಬೇಕಾದ ಅಗತ್ಯವಿಲ್ಲ

ಪರಿಸರದ ಪಾಠ ಹೇಳಿಕೊಡಬೇಕಾದ ಅಗತ್ಯವಿಲ್ಲ

ಕೃಷಿಯನ್ನೇ ನಂಬಿ ಅದರಲ್ಲೇ ಬದುಕು ಕಟ್ಟಿಕೊಂಡಿರುವ ಸಣ್ಣ ಹಿಡುವಳಿದಾರ ರೈತರು ಇವತ್ತಿಗೂ ಹಾಗೆಯೇ ಉಳಿದಿದ್ದಾರೆ. ತಮ್ಮ ತೋಟ, ಗದ್ದೆಯನ್ನು ಜತನದಿಂದ ಕಾಪಾಡಿಕೊಂಡು ಅದರಲ್ಲಿಯೇ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಗಿಡನೆಟ್ಟು ಮತ್ತು ನೆಟ್ಟಗಿಡವನ್ನು ಕಾಪಾಡಿ ಗೊತ್ತಿರುವುದರಿಂದ ಅವರಿಗೆ ಯಾವುದೇ ಪರಿಸರದ ಪಾಠ ಬೇಕಾಗಿಲ್ಲ. (ದುರಂತ ಎಂದರೆ ಪರಿಸರ ನಾಶ ಮಾಡಿ ರೆಸಾರ್ಟ್ ನಿರ್ಮಿಸಿದವರು ಗಿಡನೆಡುವ ನಾಟಕವಾಡಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.)

ಕೊಡಗಿನ ಮೇಲೆ ಬಂಡವಾಳ ಶಾಹಿಗಳ ವಕ್ರದೃಷ್ಠಿ

ಕೊಡಗಿನ ಮೇಲೆ ಬಂಡವಾಳ ಶಾಹಿಗಳ ವಕ್ರದೃಷ್ಠಿ

ಬಂಡವಾಳ ಶಾಹಿಗಳು, ಶ್ರೀಮಂತ ರಾಜಕಾರಣಿಗಳು ಸೇರಿದಂತೆ ಉದ್ಯಮಿಗಳು ಕೊಡಗಿನ ಮೇಲೆ ಯಾವಾಗ ವಕ್ರದೃಷ್ಠಿ ಬೀರಿದರೋ ಅವತ್ತೇ ಇಲ್ಲಿನ ಸ್ಥಿತಿ ಬದಲಾಗಿ ಹೋಯಿತು. ಎರಡು ದಶಕಗಳ ಹಿಂದೆ ವರ್ಷದ ಆರು ತಿಂಗಳು ಮಳೆ ಸುರಿಯುತ್ತಿತ್ತು. ಜತೆಗೆ ಪ್ರವಾಸೋದ್ಯಮ ಅಷ್ಟೊಂದು ಬೆಳೆದಿರಲಿಲ್ಲ. ಜನರಲ್ಲಿ ಹೋಂಸ್ಟೇ, ರೆಸಾರ್ಟ್ ಕಲ್ಪನೆಗಳು ಇರಲಿಲ್ಲ. ಇಲ್ಲಿನ ಬೆಳೆಗಾರರು ಮೈಬಗ್ಗಿಸಿ ದುಡಿಯುವುದರಲ್ಲೇ ಸಮಯ ಕಳೆದು ಹೋಗುತ್ತಿತ್ತು. ಅವತ್ತಿನ ಮಳೆಗೆ ಕೊಡಗಿನಲ್ಲಿ ಹೆಚ್ಚು ದಿನ ವಾಸ್ತವ್ಯ ಹೂಡುವುದಕ್ಕೂ ಜನ ಹೆದರುತ್ತಿದ್ದರು.

ಮೊದಲೆಲ್ಲ ಜನ ಮುಖ ಮಾಡುತ್ತಿರಲಿಲ್ಲ

ಮೊದಲೆಲ್ಲ ಜನ ಮುಖ ಮಾಡುತ್ತಿರಲಿಲ್ಲ

ಹೊರ ಜಿಲ್ಲೆಗಳಿಂದ ವರ್ಗಾವಣೆಯಾಗಿ ಬರುತ್ತಿದ್ದ ಸರ್ಕಾರಿ ನೌಕರರು ವಾಪಾಸ್ ತಮ್ಮ ಊರಿಗೆ ಹೋದರೆ ಸಾಕಪ್ಪಾ ಎಂದು ಅವಲತ್ತುಗೊಳ್ಳುತ್ತಿದ್ದರು. ಮಳೆಗಾಲದಲ್ಲಿ ಸದಾ ಮಳೆ, ಚಳಿಗಾಲದಲ್ಲಿ ಮೈಕೊರೆಯುವ ಚಳಿ, ಹೀಗೆ ಎಲ್ಲರಿಗೂ ಇಲ್ಲಿಯ ವಾತಾವರಣ ಹೊಂದಾಣಿಕೆ ಆಗುತ್ತಿರಲಿಲ್ಲ. ಆದ್ದರಿಂದ ಹೆಚ್ಚಿನವರು ಕೊಡಗಿನತ್ತ ಮುಖ ಮಾಡುತ್ತಿರಲಿಲ್ಲ.

ಎರಡು ದಶಕಗಳಲ್ಲಿ ನಡೆದಿದ್ದೇ ಪರಿಸರ ನಾಶ

ಎರಡು ದಶಕಗಳಲ್ಲಿ ನಡೆದಿದ್ದೇ ಪರಿಸರ ನಾಶ

ಈಗ ಎರಡು ದಶಕಗಳ ಅವಧಿಯಲ್ಲಿ ಕೊಡಗಿನಲ್ಲಿ ಪರಿಸರ ಎಗ್ಗಿಲ್ಲದೆ ನಾಶವಾಯಿತು. ಮಳೆಯ ಪ್ರಮಾಣ ಕಡಿಮೆಯಾಯಿತು. ಪ್ರವಾಸೋದ್ಯಮ ಬೆಳೆಯಲಾರಂಭಿಸಿತು. ಜನ ಬರತೊಡಗಿದರು. ಬಂಡವಾಳ ಶಾಹಿಗಳು ರೆಸಾರ್ಟ್, ಹೋಂಸ್ಟೇ, ಹೋಟೆಲ್ ನಿರ್ಮಿಸಿದರು. ಕೆಲವು ರಾಜಕಾರಣಿಗಳು ಭ್ರಷ್ಟಾಚಾರದ ಹಣವನ್ನು ತಂದು ಕಾಫಿತೋಟಗಳನ್ನು ಖರೀದಿಸಿ ಬಂಗಲೆ ನಿರ್ಮಿಸಿ ತಮ್ಮ ಕಾರ್ಯ ಚಟುವಟಿಕೆ ನಡೆಸಲು ಆರಂಭಿಸಿದರು. ಬೆಟ್ಟ-ಗುಡ್ಡಗಳನ್ನು ಕೊರೆದು ರಸ್ತೆ ಮಾಡಿದರು, ಮತ್ತೆ ಕೆಲವರು ಗುಡ್ಡವನ್ನು ಜೆಸಿಬಿ ಬಳಸಿ ಸಮತಟ್ಟು ಮಾಡಿ ಬಂಗಲೆ ನಿರ್ಮಿಸಿದರು. ಇದೆಲ್ಲವೂ ಒಂದು ರೀತಿಯಲ್ಲಿ ಕೊಡಗಿನ ಪರಿಸರದ ಮೇಲೆ ನಡೆದ ಅತ್ಯಾಚಾರ ಎಂದರೂ ತಪ್ಪಾಗಲಾರದು.

ಅನಾಚಾರಗಳಿಗೆ ಬೆಲೆ ಕಟ್ಟುವ ಸಮಯ

ಅನಾಚಾರಗಳಿಗೆ ಬೆಲೆ ಕಟ್ಟುವ ಸಮಯ

ಪ್ರಕೃತಿ ಮೇಲೆ ನಡೆಸಿದ ಅನಾಚಾರಗಳಿಗೆ ಈಗ ಬೆಲೆ ಕಟ್ಟುವ ಸಮಯ ಬಂದಿದೆ. ಅದು ತನ್ನ ಪರಿಮಿತಿಯನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ನಡೆಯುತ್ತಿರುವ ಪಾಕೃತಿಕ ವಿಕೋಪಗಳು ನಿದರ್ಶನವಾಗಿವೆ. ನದಿ ತಟವನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮನೆ, ಬಂಗಲೆ ನಿರ್ಮಿಸಿದವರಿಗೆ ಅದು ನನಗೆ ಸೇರಿದ್ದು ಎಂಬುದಾಗಿ ಪ್ರವಾಹದ ಮೂಲಕ ತೋರಿಸುತ್ತಿದೆ. ಇನ್ನು ಬೆಟ್ಟಗುಡ್ಡಗಳನ್ನು ಕೊರೆದು, ಮರ-ಗಿಡಗಳನ್ನು ಕಡಿದು ಬೋಳು ಮಾಡಿದ್ದಕ್ಕೆ ಭೂಕುಸಿತದ ಮೂಲಕ ಮನೆ, ತೋಟ, ಗದ್ದೆ ಎಲ್ಲವನ್ನೂ ನಾಶ ಮಾಡಿ ಇದು ನನ್ನದು ಎಂಬುದನ್ನು ಸಾರಿ ಹೇಳುತ್ತಿದೆ. ಕಳೆದು ಮೂರು ವರ್ಷಗಳಿಂದ ನಡೆಯುತ್ತಿರುವ ಪ್ರಾಕೃತಿಕ ವಿಕೋಪಗಳು ನಾವು ಎಸಗಿದ ದೌರ್ಜನ್ಯಕ್ಕೆ ತಕ್ಕ ಶಾಸ್ತಿ ಎಂದರೆ ತಪ್ಪಾಗಲಾರದು.

Recommended Video

ಹವಾಮಾನ ಇಲಾಖೆಯಿಂದ ಭಾರಿ ಮಳೆ ಸೂಚನೆ! Yellow Alert ಘೋಷಣೆ | Oneindia Kannada
ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು

ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು

ಕೊಡಗಿನ ಮೂಲ ನಿವಾಸಿಗಳು ಪ್ರಕೃತಿಯೊಂದಿಗೆ ಬದುಕಿದವರು ಮತ್ತು ಆರಾಧಕರು. ಇವತ್ತಿಗೂ ಮರ-ಕಾಡು, ಬೆಟ್ಟಗುಡ್ಡಗಳನ್ನು ಪ್ರೀತಿಸುತ್ತಾ, ಪೂಜಿಸುತ್ತಾ ಬಂದವರು. ಪ್ರತಿ ಊರಿನಲ್ಲಿ ನಿರ್ದಿಷ್ಟ ಕಾಡನ್ನು ಮೀಸಲಿಟ್ಟು ಅದನ್ನು ದೇವರಕಾಡೆಂದು ಪೂಜಿಸಿಕೊಂಡು ಬರುತ್ತಿದ್ದಾರೆ. ಪ್ರತಿ ಮರ-ಗಿಡ, ಕಲ್ಲುಗಳಲ್ಲಿ ದೇವರನ್ನು ಕಾಣುತ್ತಿದ್ದಾರೆ. ಇದು ಇಲ್ಲಿನವರ ಪರಿಸರ ಪ್ರೀತಿಗೆ ಸಾಕ್ಷಿ. ಇಂತಹ ಕೊಡಗಿನ ಪರಿಸರದ ಮೇಲೆ ಯಾರಿಂದಲೋ ಆದ ಪ್ರಮಾದಕ್ಕೆ ಇಲ್ಲಿನ ಜನರೇ ಕಷ್ಟ, ನಷ್ಟ ಅನುಭವಿಸುತ್ತಿದ್ದಾರೆ. ಇನ್ನಾದರೂ ಜನ ಎಚ್ಚೆತ್ತುಕೊಂಡು ತಮ್ಮತನವನ್ನು ಉಳಿಸಿಕೊಳ್ಳದೆ ಹೋದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗಬಹುದು ಎಂಬುದಕ್ಕೆ ಪ್ರತಿ ವರ್ಷ ನಡೆಯುವ ಅನಾಹುತಗಳೇ ಸಾಕ್ಷಿಯಾಗಿವೆ.

English summary
The recent deforestation and commercialization in forests in Kodagu district has increased the natural disasters during the monsoons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X