ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಗಾರು ಮಳೆಗೆ ಮನಸೋಲದವರಿಲ್ಲ!

|
Google Oneindia Kannada News

ಮಡಿಕೇರಿ, ಜೂನ್ 16: ಮುಂಗಾರು ಮಳೆ ಆರಂಭ ಎಂದರೆ ನಿಸರ್ಗಕ್ಕೊಂದು ಪುಳಕ, ಬೇಸಿಗೆಯ ಬಿರು ಬಿಸಿಲಿಗೆ ಬೆಂದು ಹೋದ ಗಿಡಮರಗಳಿಗೆ ಸುರಿಯುವ ಮಳೆಯಲ್ಲಿ ಮಿಂದೇಳುವ ಸಡಗರ, ಸಂಭ್ರಮ.

ಈ ಬಾರಿ ವರುಣ ಇಳೆಗೆ ಮೋಸ ಮಾಡಿಲ್ಲ. ಬೇಸಿಗೆಯ ಸುಡು ಬಿಸಿಲ ನಡುವೆಯೂ ಆಗೊಮ್ಮೆ, ಈಗೊಮ್ಮೆ ಮಳೆ ಸುರಿಸಿ ಕಾದ ಮಣ್ಣನ್ನು ತಂಪಾಗಿಸಿದ್ದಾನೆ. ಎಲೆ ಒಣಗಿ ಸತ್ತೇ ಹೋದೆವೇನೋ ಎಂಬಂತ್ತಿದ್ದ ಗಿಡಮರಗಳಿಗೆ ನೀರುಣಿಸಿ ಬದುಕಿಸಿದ್ದಾನೆ. ಹೀಗಾಗಿಯೇ ಇವತ್ತು ನಾವು ಎತ್ತ ನೋಡಿದರತ್ತ ಹಚ್ಚಹಸಿರಿನ ಸೊಬಗು ಕಣ್ಣಿಗೆ ತಂಪನ್ನೀಯುತ್ತಿದೆ.

ಕಾಡ್ಗಿಚ್ಚಿನಿಂದ ಪಾರಾದ ಅರಣ್ಯಗಳು

ಕಾಡ್ಗಿಚ್ಚಿನಿಂದ ಪಾರಾದ ಅರಣ್ಯಗಳು

ಒಂದೆಡೆ ಕೊರೊನಾದಿಂದಾಗಿ ಲಾಕ್‌ಡೌನ್ ಮಾಡಿದ್ದರಿಂದ ಜನ, ವಾಹನ ಸಂಚಾರದಿಂದ ದೂರವಾದ ಅರಣ್ಯಗಳು ಕಾಡ್ಗಿಚ್ಚಿನಿಂದ ಪಾರಾಗಿ ನೆಮ್ಮದಿಯುಸಿರು ಬಿಟ್ಟಿವೆ. ಸಾಮಾನ್ಯವಾಗಿ ಬೇಸಿಗೆಯ ದಿನಗಳಲ್ಲಿ ಅಲ್ಲಲ್ಲಿ ಕಾಡ್ಗಿಚ್ಚು ಸಂಭವಿಸಿ ಸಾವಿರಾರು ಎಕರೆ ಪ್ರದೇಶಗಳಲ್ಲಿದ್ದ ಗಿಡ- ಮರಗಳು, ಪ್ರಾಣಿ- ಪಕ್ಷಿಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಆದರೆ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಪ್ರವಾಸಿಗರು, ಜನಸಾಮಾನ್ಯರು ಅರಣ್ಯದತ್ತ ತೆರಳದ ಕಾರಣದಿಂದಾಗಿ ವನ್ಯಪ್ರಾಣಿಗಳು ನಿರ್ಭಯವಾಗಿ ಓಡಾಡುತ್ತಿವೆ. ಜತೆಗೆ ಸಕಾಲದಲ್ಲಿ ಮಳೆ ಸುರಿದಿದ್ದರಿಂದ ಗಿಡಮರಗಳಿಗೆ ಮತ್ತೆ ಜೀವ ಬಂದಂತಾಗಿದೆ.

ವಿಶೇಷ ವರದಿ: ಕೊಡಗಿನಲ್ಲಿ ಮಳೆಗಾಲದ ಪ್ರಾಕೃತಿಕ ವಿಕೋಪಕ್ಕೆ ಕಾರಣ ಗೊತ್ತಾ?ವಿಶೇಷ ವರದಿ: ಕೊಡಗಿನಲ್ಲಿ ಮಳೆಗಾಲದ ಪ್ರಾಕೃತಿಕ ವಿಕೋಪಕ್ಕೆ ಕಾರಣ ಗೊತ್ತಾ?

ವೈಭವ ಹೆಚ್ಚಿಸುತ್ತಿರುವ ಮುಂಗಾರು

ವೈಭವ ಹೆಚ್ಚಿಸುತ್ತಿರುವ ಮುಂಗಾರು

ಈ ಬಾರಿ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಅರಣ್ಯಗಳ ನಡುವಿನ ಕೆರೆಗಳಲ್ಲಿ ನೀರು ಬತ್ತದೆ ವನ್ಯಪ್ರಾಣಿಗಳು ನೆಮ್ಮದಿಯಾಗಿವೆ. ಇದೀಗ ಮತ್ತೆ ಮುಂಗಾರು ಮಳೆ ನಿಧಾನವಾಗಿ ತನ್ನ ವೈಭವವನ್ನು ಹೆಚ್ಚಿಸುತ್ತಾ ಹೋಗುತ್ತಿರುವುದರಿಂದ ನಿಸರ್ಗದಲ್ಲಿ ಸಡಗರ, ಸಂಭ್ರಮ ಮನೆಮಾಡಿದೆ.

ಸಾಮಾನ್ಯವಾಗಿ ಮುಂಗಾರು ಮಳೆಯ ಲೀಲೆಗೆ ಖುಷಿ ಪಡದವರು ವಿರಳವೇ. ಅದರಲ್ಲೂ ರೈತಾಪಿ ವರ್ಗಕ್ಕಂತೂ ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತದೆ. ಜತೆಗೆ ಉಳುಮೆ, ಬಿತ್ತನೆ ಹೀಗೆ ಬಿಡುವಿಲ್ಲದೆ ಕೃಷಿ ಚಟುವಟಿಕೆಯೂ ಆರಂಭವಾಗುತ್ತದೆ.

ಬದಲಾದ ಪರಿಸರದಿಂದ ಏರುಪೇರಾದ ಮಳೆ

ಬದಲಾದ ಪರಿಸರದಿಂದ ಏರುಪೇರಾದ ಮಳೆ

ಇತ್ತೀಚೆಗಿನ ವರ್ಷಗಳಲ್ಲಿ ಪರಿಸರ ಮತ್ತು ವಾತಾವರಣದಲ್ಲಿ ಆಗುತ್ತಿರುವ ಏರುಪೇರುಗಳಿಂದಾಗಿ ಮುಂಗಾರು ಮಳೆ ಸುರಿಯುವುದರಲ್ಲೂ ವ್ಯತ್ಯಾಸವಾಗುತ್ತಿದೆ. ಮೊದಲೆಲ್ಲ ಜಿಟಿಜಿಟಿಯಾಗಿ ಆರಂಭವಾಗುತ್ತಿದ್ದ ಮಳೆ ನಿಧಾನವಾಗಿ ರಭಸವನ್ನು ಪಡೆದುಕೊಳ್ಳುತ್ತಿತ್ತು. ಜುಲೈ ಮತ್ತು ಆಗಸ್ಟ್ ತಿಂಗಳು ನಡು ಮಳೆಗಾಲದ ದಿನಗಳಾಗಿರುತ್ತಿದ್ದವು. ಈ ವೇಳೆ ಮಲೆನಾಡಿನಲ್ಲಿ ನದಿ ತೊರೆಗಳು ತುಂಬಿ ಹರಿಯುತ್ತಿದ್ದವು. ಪ್ರವಾಹವೂ ಏರ್ಪಡುತ್ತಿತ್ತು. ಆದರೆ ಜನರಿಗೆ ಇದರ ಅರಿವು ಇದ್ದುದರಿಂದ ಅದನ್ನು ನಿಭಾಯಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು.

ಮೊದಲೆಲ್ಲ ಭೂಕುಸಿತದ ಭಯವಿರಲಿಲ್ಲ

ಮೊದಲೆಲ್ಲ ಭೂಕುಸಿತದ ಭಯವಿರಲಿಲ್ಲ

ಯಥೇಚ್ಛವಾಗಿ ಮರಕಾಡುಗಳು ಇದ್ದುದರಿಂದ ಪ್ರವಾಹ ಏರ್ಪಟ್ಟರೂ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ. ನದಿದಡದಲ್ಲಿ, ಬೆಟ್ಟಪ್ರದೇಶಗಳಲ್ಲಿ ಮನೆಗಳಿರಲಿಲ್ಲ. ಹೀಗಾಗಿ ಭೂಕುಸಿತ, ಮನೆಕುಸಿತ, ಸಾವು, ನೋವುಗಳ ಭಯವಿರಲಿಲ್ಲ. ಈಗ ಮಳೆ ಬಂತೆಂದರೆ ಭಯ ಶುರುವಾಗುತ್ತದೆ. ಗಾಳಿ ಮಳೆಗೆ ಮುರಿದು ಬೀಳುವ ಮರಗಳು, ಕುಸಿದು ಬೀಳುವ, ಜಲಾವೃತವಾಗುವ ಮನೆಗಳು ಹೀಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿ ಬಿಡುತ್ತದೆ. ಮೊದಲೆಲ್ಲ ಮುಂಗಾರನ್ನು ಸಂಭ್ರಮಿಸುತ್ತಿದ್ದವರು ಹಲವು ಕಾರಣಗಳಿಗೆ ಈಗ ಭಯಬೀಳುತ್ತಿದ್ದಾರೆ.

ಕೆಲವೆಡೆ ಮಾನ್ಸೂನ್ ಡೇ ಆಚರಣೆ

ಕೆಲವೆಡೆ ಮಾನ್ಸೂನ್ ಡೇ ಆಚರಣೆ

ವೈಜ್ಞಾನಿಕವಾಗಿ ಎಷ್ಟೇ ಅಭಿವೃದ್ಧಿಯಾದರೂ ಪ್ರಕೃತಿ ಮುಂದೆ ಮನುಷ್ಯ ಕುಬ್ಜನೇ. ಇದನ್ನರಿತು ಪ್ರಕೃತಿಗೆ ವಿರುದ್ಧವಾಗಿ ಹೋಗುವುದರ ಬದಲಿಗೆ ನಿಸರ್ಗ ಪೂರಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮುಂದಿನ ದಿನಗಳಲ್ಲಾದರೂ ಮುಂಗಾರು ಸೃಷ್ಟಿಸುವ ಒಂದಷ್ಟು ದುರಂತಗಳನ್ನು ತಡೆಯಬಹುದೇನೋ? ಇತ್ತೀಚೆಗಿನ ತಲೆಮಾರಿನ ಮಕ್ಕಳಿಗೆ ಮುಂಗಾರನ್ನು ಸಂಭ್ರಮಿಸುವ ಅವಕಾಶವೂ ಇಲ್ಲದಂತಾಗಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ಕೊರೊನಾ ಕಾಡುತ್ತಿರುವ ಕಾರಣ ಮಳೆಗೆ ಶೀತ, ನೆಗಡಿ ಕಾಡಿ ಬಿಡುತ್ತದೆಯೋ ಎಂಬ ಭಯವೂ ಇಲ್ಲದಿಲ್ಲ. ಕೆಲವು ಕಡೆಗಳಲ್ಲಿ ಇತ್ತೀಚೆಗೆ ಮಾನ್ಸೂನ್ ಡೇ ಆಚರಣೆಯೂ ಜಾರಿಗೆ ಬಂದಿದೆ. ಸದಾ ಮನೆಯೊಳಗೆ ಇರುವವರು ಮನೆಯಿಂದ ಹೊರಗೆ ಬಂದು ಮುಂಗಾರು ಮಳೆಯಲ್ಲಿ ಒಂದಷ್ಟು ಹೊತ್ತು ಸಂಭ್ರಮಿಸುವುದು ಮಾನ್ಸೂನ್ ಡೇ ವಿಶೇಷತೆಯಾಗಿದೆ.

Recommended Video

ಮಲೆನಾಡಿನಲ್ಲಿ ಧಾರಾಕಾರ ಮಳೆ ಮುಳುಗಡೆ ಭೀತಿಯಲ್ಲಿದೆ ಹೆಬ್ಬಾಳೆ ಸೇತುವೆ | Oneindia Kannada
ಮಳೆ ಕುರಿತಂತೆ ಮಕ್ಕಳಿಗೆ ಅರಿವು

ಮಳೆ ಕುರಿತಂತೆ ಮಕ್ಕಳಿಗೆ ಅರಿವು

ಇನ್ನು ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮುಂಗಾರು ಮಳೆಯ ಅನುಭವ, ಮಳೆಯಿಂದಾಗುವ ಅನುಕೂಲ, ಯಾವ ಕಾಲದಲ್ಲಿ ಮುಂಗಾರು ಮಳೆ ಬರಲಿದೆ, ಮಳೆಯಿಂದಾಗುವ ಅನುಕೂಲಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ. ಈ ವೇಳೆ, ಸುರಿಯುವ ಮಳೆಯಲ್ಲಿ ಮಕ್ಕಳು ಕೊಡೆಗಳನ್ನು ಹಿಡಿದು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸುತ್ತಾರೆ. ಅದು ಏನೇ ಇರಲಿ ಮುಂಗಾರು ಮಳೆಯ ಲೀಲೆಗೆ ಮನಸೋಲದವರು ಇಲ್ಲವೇ ಇಲ್ಲ ಎನ್ನುವುದಂತು ಸತ್ಯ.

English summary
Madikeri In Monsoon: Explore The Beauty Of This Town; During monsoon rain, the land become cools and rivers overflow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X