ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು: ಅಕ್ರಮ ಹೋಂಸ್ಟೇ ತಡೆಗೆ ಕಠಿಣ ಕ್ರಮ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್. 08 : ಕೊಡಗಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಹೋಂಸ್ಟೇಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದಷ್ಟು ಬಿಗಿ ಕಾನೂನುಗಳನ್ನು ಅಳವಡಿಸುವಲ್ಲಿ ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಹೋಂಸ್ಟೇಗಳ ಪೈಕಿ ಬಹುತೇಕ ಹೋಂಸ್ಟೇಗಳು ಅನಧಿಕೃತವಾಗಿವೆ. ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಆರೋಪವೂ ಇದೆ. ಇದೀಗ ಇವುಗಳಿಗೆ ಒಂದಷ್ಟು ಕಡಿವಾಣ ಹಾಕಿ ಕಾನೂನು, ಕಾಯಿದೆಯಡಿ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ.

Madikeri district administration took Tough Action to Prevent Illegal Homestay in Kodagu

ಇನ್ನು ಮುಂದೆ ಹೋಂಸ್ಟೇ ನಡೆಸುವವರು ಸ್ಥಳೀಯ ಆಡಳಿತಕ್ಕೆ ಸಮರ್ಪಕ ದಾಖಲಾತಿಯೊಂದಿಗೆ ಅರ್ಜಿಸಲ್ಲಿಸಿ ನಿರಪೇಕ್ಷಣಾ ಪತ್ರ ಪಡೆಯಬೇಕು. ಜತೆಗೆ ಶುಲ್ಕವನ್ನು ಕಟ್ಟಬೇಕು.

ಸ್ಥಳೀಯ ಆಡಳಿತದಿಂದ ಪಡೆದ ನಿರಪೇಕ್ಷಣಾ ಪ್ರತಿಯೊಂದಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಗೆ ನಿರಪೇಕ್ಷಣಾ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ.

ಅದು ಡಿವೈಎಸ್ ಪಿ, ಸರ್ಕಲ್ ಇನ್ಸ್ ಪೆಕ್ಟರ್ ಮುಖಾಂತರ ಸಂಬಂಧಿತ ಸಬ್ ಇನ್ಸ್ ಪೆಕ್ಟರ್ ಕಚೇರಿ ತಲಪುತ್ತದೆ. ಸಬ್ ಇನ್ಸ್ ಪೆಕ್ಟರ್ ಅವರು ಸಿಬ್ಬಂದಿ ಸಹಿತ ಅರ್ಜಿದಾರರ ಮನೆ ಪರಿಶೀಲನೆ ನಡೆಸುತ್ತಾರೆ.

ಮೊದಲೆಲ್ಲ ಪೊಲೀಸ್ ಠಾಣೆಯಲ್ಲಿ ಕುಳಿತು ದೃಢೀಕರಣ ಪತ್ರ ನೀಡಲಾಗುತಿತ್ತು. ಈಗ ಹಾಗಿಲ್ಲ ಎಸ್‍ಐ ಅವರೊಂದಿಗೆ ಮನೆಯ ಮಾಲೀಕ ಮನೆ ಎದುರು ನಿಂತಿರುವ ಫೋಟೋವನ್ನು ಪೊಲೀಸ್ ಸಿಬ್ಬಂದಿಯೇ ತೆಗೆಯಬೇಕು.

ಬಳಿಕ ಹೋಂಸ್ಟೇಯಲ್ಲಿನ ವಾಸ್ತವ್ಯದ ಕೊಠಡಿ, ಪ್ರವಾಸಿಗರಿಗೆ ಸೂಕ್ತವಾದ ಶೌಚಾಲಯ ವ್ಯವಸ್ಥೆ, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತದೆ.

ಹಿಂದೆ ಮನೆಯೊಳಗೆ ಮಾತ್ರ ಸಿಸಿ ಟಿವಿ ಅಳವಡಿಸಿದರೆ ಸಾಕಾಗುತ್ತಿತ್ತು. ಈಗ ಹಾಗಿಲ್ಲ ಹೋಂಸ್ಟೇ ಗೇಟ್‍ನಿಂದ ಆವರಣದವರೆಗೂ ಬೇರೆ ಬೇರೆ ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿರಬೇಕು. ಆ ಬಗ್ಗೆ ಖಚಿತಪಡಿಸಿಕೊಂಡು ಪೊಲೀಸರು ದಾಖಲಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಮನೆಯ ಸಂಪೂರ್ಣ ಮಹಜರನ್ನು ಪೊಲೀಸರು ಮಾಡುತ್ತಾರೆ.

ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಮಹಜರು ವರದಿ ಬರೆದು ಅಲ್ಲಿಗೆ ಮಾಲೀಕರೊಂದಿಗೆ ಇಬ್ಬರು ಸಾಕ್ಷಿಗಳನ್ನು ಕರೆಯಿಸಿ ಸಹಿ ಹಾಕಿಸಿಕೊಳ್ಳಲಾಗುತ್ತದೆ. ಎಸ್‍ಐ ಅವರ ಶಿಫಾರಸಿನ ಪತ್ರವು ಸಿಐ, ಡಿವೈಎಸ್ ಪಿ ಅವರ ಮೂಲಕ ಎಸ್ಪಿ ಕಚೇರಿಗೆ ತಲುಪಿ ಅಂತಿಮ ಪರಿಶೀಲನೆ ನಡೆಸಿ ನಿರಪೇಕ್ಷಣಾ ಪತ್ರ ನೀಡಲಾಗುತ್ತದೆ.

ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯ ಎನ್‍ಓಸಿ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲದ ಮೂಲಕ www.karnatakatourism.org ಪ್ರವೇಶಿಸಿದರೆ, ಹೋಂಸ್ಟೇ ನೋಂದಣಿಯ ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ ಮಾಲೀಕನ ಫೋಟೋ, ಮನೆ, ಆಧಾರ್ ಕಾರ್ಡ್, ಶೌಚಾಲಯ ಫೋಟೋ ಹೀಗೆ ಹತ್ತು ಹಲವು ದಾಖಲಾತಿಗಳನ್ನು ಕಳುಹಿಸಿದ ಬಳಿಕ ಮನೆ ನೋಂದಾವಣೆಗೆ ಸಿದ್ಧ ಎಂಬ ಮಾಹಿತಿ ಬಂದು ರೂ. 500 ಶುಲ್ಕ ಪಾವತಿಸಲು ಮಾಹಿತಿ ಬರುತ್ತದೆ. ಅದಾದ ನಂತರ ಪ್ರವಾಸೋದ್ಯಮ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಪತ್ರ ನೀಡುತ್ತದೆ.

ಇಷ್ಟು ಸರ್ಕಸ್ ಮಾಡಲೇ ಬೇಕಾಗಿದೆ. ಹೀಗೆ ಮಾಡುವುದರಿಂದ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂಬುದು ಜಿಲ್ಲಾಡಳಿತ ಆಶಯವಾಗಿದೆ.

English summary
Madikeri district administration took Tough Action to Prevent Illegal homestay in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X