ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಮೃತ್ಯುವಾಗಿ ಕಾಡುತ್ತಿದೆಯಾ ಮನೆ ಹಿಂಬದಿಯ ಬರೆ?

|
Google Oneindia Kannada News

ಮಡಿಕೇರಿ, ಜುಲೈ 24: ಕೊಡಗಿನ ಜನ ಮಳೆ ಗಾಳಿಗೆ ಹೆದರುತ್ತಿಲ್ಲ, ಆದರೆ ಮನೆಯ ಹಿಂಬದಿಯಲ್ಲೇ ಇರುವ ಬರೆ, ಗುಡ್ಡಗಳಿಗೆ ಹೆದರುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

 ಮೊಣ್ಣಂಗೇರಿಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಮೊಣ್ಣಂಗೇರಿಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್

ಕಳೆದ ವರ್ಷದವರೆಗೂ ಇಂತಹದೊಂದು ಭಯ ಕಾಡಿರಲಿಲ್ಲ. ಮಳೆಗಾಲದಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಗುಡ್ಡ ಹಾಗೂ ಮನೆಯ ಹಿಂಭಾಗದ ಬರೆ ಸಣ್ಣ ಪ್ರಮಾಣದಲ್ಲಿ ಕುಸಿಯುವುದು ಸಹಜವಾಗಿತ್ತು. ಆದರೆ ಜನರ ಜೀವ ಬಲಿ ಪಡೆಯುವ ಮಟ್ಟಿಗಿನ ಗಂಭೀರ ಸ್ವರೂಪ ತಾಳುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಮಳೆ ಬಂದ ತಕ್ಷಣ ಎಲ್ಲಿ ಗುಡ್ಡ ಕುಸಿಯುತ್ತದೆಯೋ? ಮನೆ ಹಿಂಭಾಗದಲ್ಲಿರುವ ಬರೆ ಜಾರಿ ಬಂದು ಅಪ್ಪಳಿಸಿ ಬಿಡುತ್ತದೆಯೋ ಎಂದು ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಕಾಯುವಂತಾಗಿದೆ.

 ಮಳೆಗಾಲದಲ್ಲಿ ಹೆಚ್ಚಿದೆ ಬರೆ ಬೀಳುವ ಭೀತಿ

ಮಳೆಗಾಲದಲ್ಲಿ ಹೆಚ್ಚಿದೆ ಬರೆ ಬೀಳುವ ಭೀತಿ

ಮಲೆನಾಡು ಹೊರತುಪಡಿಸಿದಂತೆ ಹೊರಗಿನ ಪ್ರದೇಶದವರಿಗೆ ಬರೆ ಪದ ತಕ್ಷಣಕ್ಕೆ ಅರ್ಥವಾಗುವುದಿಲ್ಲ. ಇದೇನಪ್ಪಾ ಬರೆ ಎಂದು ತಲೆ ಕೆಡಿಸಿಕೊಳ್ಳಬಹುದು. ಮಲೆನಾಡು ಪ್ರದೇಶ ಗುಡ್ಡಗಾಡುಗಳಿಂದ ಕೂಡಿರುವುದರಿಂದ ಮತ್ತು ಸಮತಟ್ಟು ಪ್ರದೇಶವೇ ಅಪರೂಪವಾಗಿರುವ ಕಾರಣ ಮನೆ, ಕಟ್ಟಡ ಮತ್ತು ರಸ್ತೆ ಹೀಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬೇಕಾದರೂ ಇರುವ ಜಾಗವನ್ನು ಸಮತಟ್ಟು ಮಾಡಲೇ ಬೇಕಾಗುತ್ತದೆ. ಈ ವೇಳೆ ಮಣ್ಣನ್ನು ಅಗೆದು ತೆಗೆಯುವಾಗ ಒಂದೋ, ಎರಡೋ ಅಥವಾ ಮೂರು ಬದಿಯಲ್ಲಿ ಎತ್ತರದ ಪ್ರದೇಶ ನಿರ್ಮಾಣವಾಗಿ ಬಿಡುತ್ತದೆ. ಇದನ್ನು ಬರೆ ಎಂದು ಕರೆಯಲಾಗುತ್ತದೆ. ಈ ಬರೆ ನಾವು ಮಣ್ಣು ತೆಗೆದು ಜಾಗ ವಿಸ್ತರಿಸುತ್ತಾ ಹೋದಂತೆ ಅದರ ಎತ್ತರವೂ ಹೆಚ್ಚುತ್ತಾ ಹೋಗುತ್ತದೆ.

ಕೊಡಗಿನ ಹೆಚ್ಚಿನ ಮನೆಗಳ ಹಾಗೂ ಕಟ್ಟಡಗಳ ಹಿಂದೆ ಇಂತಹ ಬರೆಗಳು ಸೃಷ್ಟಿಯಾಗಿವೆ. ಇವು ಕೆಲವು ಕಡೆಗಳಲ್ಲಿ ಮನೆಗಿಂತಲೂ ಎತ್ತರದಲ್ಲಿವೆ. ಇಂತಹ ಬರೆಗಳಿಂದ ಗುದ್ದಲಿ, ಪಿಕಾಸಿ ಇನ್ನಿತರೆ ಹತ್ಯಾರುಗಳನ್ನು ಬಳಸಿ ಅಥವಾ ಜೆಸಿಬಿ ಮೂಲಕ ಮಣ್ಣು ತೆಗೆಯುವುದರಿಂದ ಕೆಲವೊಮ್ಮೆ ಮಣ್ಣು ಸಡಿಲಗೊಂಡು ಮಳೆ ಬೀಳುತ್ತಿದ್ದಂತೆಯೇ ತೇವಾಂಶ ಹೆಚ್ಚಾಗಿ ಕುಸಿಯುತ್ತದೆ. ಇದೆಷ್ಟು ಅಪಾಯಕಾರಿ ಎಂದರೆ ಕೆಲವೊಮ್ಮೆ ಕುಸಿತವಾದರೆ ಇಡೀ ಮನೆ ಮಣ್ಣಿನಡಿ ಸಿಲುಕುವ ಅಪಾಯವಿದೆ.

 ಹೆಮ್ಮರಗಳನ್ನು ಉರುಳಿಸಿದ ಪರಿಣಾಮ

ಹೆಮ್ಮರಗಳನ್ನು ಉರುಳಿಸಿದ ಪರಿಣಾಮ

ಹಿಂದಿನ ಕಾಲದಲ್ಲಿ ಮನೆ ಹಿಂದೆ ಬರೆ ನಿರ್ಮಾಣವಾದರೂ ಅವುಗಳನ್ನು ತಮ್ಮದೇ ತಂತ್ರಗಳನ್ನು ಬಳಸಿ ಗುದ್ದಲಿ, ಪಿಕಾಸಿ, ಹಾರೆಗಳನ್ನು ಬಳಸಿ ಹಂತ ಹಂತವಾಗಿ ಮಣ್ಣು ತೆಗೆಯುವ ಮೂಲಕ ಮಳೆ ಬಿದ್ದು ಮಣ್ಣು ತೇವಗೊಂಡರೂ ಅದು ಕುಸಿಯದಂತೆ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಹಾಗಿಲ್ಲ. ಜೆಸಿಬಿಯಿಂದ ಮಣ್ಣು ತೆಗೆಯುವುದರಿಂದ ಇಡೀ ಪ್ರದೇಶ ಅಲುಗಾಡುತ್ತದೆ. ಇದರಿಂದ ಮಣ್ಣು ಸಡಿಲಗೊಳ್ಳುತ್ತದೆ. ಅದು ಮಳೆ ಬೀಳುತ್ತಿದ್ದಂತೆಯೇ ತೇವಗೊಂಡು ಕುಸಿದು ಬೀಳುತ್ತದೆ. ಜತೆಗೆ ಹೆಮ್ಮರಗಳನ್ನು ಕಡಿದು ಉರುಳಿಸಿದ ಪರಿಣಾಮ ಅದ ಬೇರುಗಳು ಹರಡಿದ್ದ ಪ್ರದೇಶವೆಲ್ಲ ಸಡಿಲಗೊಂಡು ಕುಸಿಯುತ್ತಿದೆ.

ಅಂಕೋಲಾ ಬಳಿ ಹಳಿ ಮೇಲೆ ಬಿದ್ದ ಗುಡ್ಡದ ಮಣ್ಣು: ರೈಲು ಸಂಚಾರದಲ್ಲಿ ವ್ಯತ್ಯಯಅಂಕೋಲಾ ಬಳಿ ಹಳಿ ಮೇಲೆ ಬಿದ್ದ ಗುಡ್ಡದ ಮಣ್ಣು: ರೈಲು ಸಂಚಾರದಲ್ಲಿ ವ್ಯತ್ಯಯ

 ಬರೆಯೇ ಮೃತ್ಯುವಾಗುವ ಆತಂಕ

ಬರೆಯೇ ಮೃತ್ಯುವಾಗುವ ಆತಂಕ

ಕಳೆದ ವರ್ಷದವರೆಗೂ ಭೂಕುಸಿತದ ರೌದ್ರ ಮುಖವನ್ನು ಕೊಡಗಿನವರು ನೋಡಿಯೇ ಇರಲಿಲ್ಲ. ಚಿಕ್ಕಪುಟ್ಟ ಕುಸಿತಗಳು ಸಂಭವಿಸುತ್ತಿತ್ತಾದರೂ ಅದೆಲ್ಲವೂ ಮಳೆಗಾಲದಲ್ಲಿ ನಡೆಯುವ ಮಾಮೂಲಿ ಕ್ರಿಯೆಗಳಾಗಿದ್ದವು. ಆದರೆ ಊರಿಗೆ ಊರು, ಇಡೀ ಗುಡ್ಡವೇ ಕುಸಿದು ಕಿ.ಮೀ.ಗಟ್ಟಲೆ ಜಾರಿ ಹೋಗಿದ್ದನ್ನು ನೋಡಿದ ಮೇಲೆ ತಮ್ಮ ಮನೆಯ ಹಿಂದಿನ ಬರೆ ಯಾವಾಗ ನಮ್ಮ ಪಾಲಿಗೆ ಮೃತ್ಯುವಾಗಿ ಬಿಡುತ್ತದೆಯೋ ಎಂಬ ಆತಂಕ ಬಹಳಷ್ಟು ಮಂದಿಯನ್ನು ಕಾಡಲು ಆರಂಭಿಸಿದೆ.

ಕೊಡಗಿನ ಹೆಚ್ಚಿನ ಪ್ರದೇಶ ಸಮತಟ್ಟಾಗಿಲ್ಲ. ಗುಡ್ಡಪ್ರದೇಶಗಳಿವೆ. ಆದರೆ ಅನಿವಾರ್ಯತೆಯಿಂದಾಗಿ ಇಂತಹ ಪ್ರದೇಶಗಳಲ್ಲಿ ಜನ ಗುಡ್ಡವನ್ನೇ ಸಮತಟ್ಟು ಮಾಡಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಇದೀಗ ಸಣ್ಣಗಿನ ಆತಂಕವಂತೂ ಇದ್ದೇ ಇದೆ. ಜೋರಾಗಿ ಮಳೆ ಬಂದಾಗಲೆಲ್ಲ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತದೆ. ಇರುವ ಸೂರನ್ನು ಬಿಟ್ಟು ಎಲ್ಲಿಗೆ ಹೋಗುವುದು ಎಂಬ ಚಿಂತೆಯೂ ಕಾಡುತ್ತದೆ. ಹೀಗಾಗಿಯೇ ಕಷ್ಟವೋ ಸುಖವೋ ಅನಾಹುತ ಆಗುವ ಸಂಭವವಿದ್ದರೂ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿದ್ದಾರೆ.

 ಅತಿ ಆಸೆಯಿಂದ ಅವಘಡಗಳಿಗೆ ಬರೆದ ಮುನ್ನುಡಿ

ಅತಿ ಆಸೆಯಿಂದ ಅವಘಡಗಳಿಗೆ ಬರೆದ ಮುನ್ನುಡಿ

ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭೂಕುಸಿತ ಕೊಡಗು ಕಂಡೂ ಕೇಳರಿಯದ ಬೃಹತ್ ದುರಂತ. ಈ ದುರಂತದಲ್ಲಿ ಮನೆತೋಟ ಕಳೆದುಕೊಂಡವರ ಬದುಕು ಇನ್ನೂ ಹಸನಾಗಿಲ್ಲ. ಇದಾದ ಬಳಿಕ ಇಡೀ ಕೊಡಗಿನಲ್ಲಿ ಸಣ್ಣದೊಂದು ಭಯ ಆವರಿಸಿರುವುದಂತು ಸತ್ಯ. ಯಾವಾಗ ಏನಾಗಿ ಬಿಡುತ್ತದೆಯೋ ಎಂಬ ಚಿಂತೆ.

ತೋಟಗಳನ್ನಷ್ಟೆ ನಂಬಿ ಬದುಕುತ್ತಿದ್ದ ಜಿಲ್ಲೆಯಲ್ಲಿ ರೆಸಾರ್ಟ್, ಹೋಂಸ್ಟೇ ಸಂಸ್ಕೃತಿ ಯಾವಾಗ ಆರಂಭವಾಯಿತೋ? ಬಂಡವಾಳ ಹಾಕಿ ಲಾಭ ಪಡೆಯಲು ಹಲವು ಸಂಸ್ಥೆಗಳು, ಪ್ರಭಾವಿ ನಾಯಕರು, ಸ್ಥಳೀಯ ಬೆಳೆಗಾರರು ಹೀಗೆ ಎಲ್ಲರೂ ಮುಗಿಬಿದ್ದರು. ಬೆಟ್ಟ ಗುಡ್ಡಗಳನ್ನು ಕೊರೆದು ದಾರಿ ಮಾಡಿದರು, ಜೆಸಿಬಿಯಿಂದ ಬೆಟ್ಟವನ್ನೇ ಸಮತಟ್ಟು ಮಾಡಿ ಕಟ್ಟಡ ಕಟ್ಟಿದರು. ಕಟ್ಟಡ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಕೊಂಡೊಯ್ಯಲು ಬೃಹತ್ ವಾಹನಗಳು ಎಡೆಬಿಡದೆ ಸಂಚರಿಸಿದವು. ಮರಗಳು ನಾಶವಾದವು. ಅವುಗಳ ಬೇರು ಹಿಡಿದಿಟ್ಟಿದ್ದ ಮಣ್ಣು ಸಡಿಲವಾಯಿತು. ಪರಿಣಾಮ, ದೊಡ್ಡ ದುರಂತವನ್ನು ಮೈಮೇಲೆ ಎಳೆದುಕೊಳ್ಳುವುದರೊಂದಿಗೆ ಮುಂದೆ ಸಂಭವಿಸಬಹುದಾದ ದುರಂತಗಳಿಗೆ ಮುನ್ನುಡಿ ಬರೆದಾಗಿದೆ.

ಇದೀಗ ಜಿಲ್ಲೆಯ ಪ್ರತಿಯೊಬ್ಬರಿಗೂ ಮಳೆ ಸುರಿದಾಗಲೆಲ್ಲ ಮನೆಯ ಹಿಂಭಾಗದ ಬರೆ ಹಾಗೂ ಸಮೀಪದಲ್ಲಿರುವ ಗುಡ್ಡಗಳು ಮೃತ್ಯುವಾಗಿ ಗೋಚರಿಸತೊಡಗಿವೆ. ಹೀಗಾಗಿ ಭಯದಲ್ಲಿ ಬದುಕೋದು ಅನಿವಾರ್ಯವಾಗಿದೆ.

ಮಡಿಕೇರಿಯಲ್ಲಿ ಆಶಾಭಾವ ಮೂಡಿಸಿದೆ ಮುಂಗಾರು ಮಳೆಮಡಿಕೇರಿಯಲ್ಲಿ ಆಶಾಭಾವ ಮೂಡಿಸಿದೆ ಮುಂಗಾರು ಮಳೆ

English summary
People in madikeri are not afraid of rain and wind, but they are worried about the mud hills behind the home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X