ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರದಿಂದ ದುಬಾರೆಗೆ ಬಂದ 'ಕುಶ' ಆನೆ, ಏನಿದು ರಹಸ್ಯ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜೂನ್ 15: ಎರಡು ವರ್ಷಗಳ ಹಿಂದೆ ಸುದ್ದಿ ಮಾಡಿದ್ದ ದುಬಾರೆಯ 'ಕುಶ' ಆನೆ ಈಗ ಮತ್ತೊಮ್ಮೆ ಸುದ್ದಿ ಮಾಡಿದೆ. ಅವತ್ತು ತಾನು ಓಡಾಡಿ ಬೆಳೆದ ಸ್ಥಳವನ್ನು ಬಿಟ್ಟು ಹೋಗಲು ಮನಸ್ಸಿಲ್ಲದೆ ಕಣ್ಣೀರು ಸುರಿಸುತ್ತಾ ಬಂಡೀಪುರದತ್ತ ಪಯಣ ಬೆಳೆಸಿದವನು ಮತ್ತೆ ತನ್ನ ಸ್ವಸ್ಥಾನ ದುಬಾರೆಯನ್ನು ಹುಡುಕಿಕೊಂಡು ಬಂದಿದ್ದಾನೆ ಅಂದರೆ ಅಚ್ಚರಿಯಾಗುತ್ತದೆ.

ಹಾಗಾದರೆ ಈ 'ಕುಶ' ಯಾರು?, ಆತನನ್ನೇಕೆ ಬಂಡೀಪುರಕ್ಕೆ ಕಳುಹಿಸಲಾಯಿತು?. ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಇದಕ್ಕೆಲ್ಲ ಉತ್ತರ ಸಿಗಬೇಕಾದರೆ ಸುಮಾರು ಆರು ವರ್ಷಗಳ ಹಿಂದಿನ ದಿನಗಳಿಗೆ ಹೋಗಬೇಕು. 2016ರಲ್ಲಿ ಕೊಡಗಿನ ಸಿದ್ದಾಪುರ ವ್ಯಾಪ್ತಿಯ ಚೆಟ್ಟಳ್ಳಿ ಸೇರಿದಂತೆ ವಿವಿಧೆಡೆ ಕಾಫಿ ತೋಟಗಳಲ್ಲಿ ಎರಡು ಕಾಡಾನೆಗಳು ಬೀಡು ಬಿಡುವುದರೊಂದಿಗೆ ಉಪಟಳ ನೀಡುತ್ತಿವೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

ಒಂದು ವರ್ಷದ ಬಳಿಕ ದುಬಾರೆ ಸಾಕಾನೆ ಶಿಬಿರಕ್ಕೆ ಬಂದ ಕುಶ! ಒಂದು ವರ್ಷದ ಬಳಿಕ ದುಬಾರೆ ಸಾಕಾನೆ ಶಿಬಿರಕ್ಕೆ ಬಂದ ಕುಶ!

ಹೀಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಆ ಎರಡು ಆನೆಗಳನ್ನು ಸೆರೆಹಿಡಿದು ತಂದು ಪಳಗಿಸಿ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರಕ್ಕೆ ಬಿಡಲಾಗಿತ್ತು.

ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ! ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!

ಸರಪಳಿ ತುಂಡರಿಸಿ ಎಸ್ಕೇಪ್ ಆಗಿದ್ದ 'ಕುಶ'

ಸರಪಳಿ ತುಂಡರಿಸಿ ಎಸ್ಕೇಪ್ ಆಗಿದ್ದ 'ಕುಶ'

ದುಬಾರೆ ಆನೆ ಶಿಬಿರದಲ್ಲಿ ಪಳಗಿಸಿ ಗರ್ವವನ್ನು ಇಳಿಸಿದ್ದರಲ್ಲದೆ ಲವ-ಕುಶ ಎಂದು ನಾಮಕರಣ ಮಾಡಿದ್ದರು. 'ಲವ' ಮಾಮೂಲಿ ಆನೆಗಳಂತೆ ಇದ್ದರೆ 'ಕುಶ' ಮಾತ್ರ ಹಾಗಿರಲಿಲ್ಲ. ಆಗಾಗ್ಗೆ ಪುಂಡಾಟ ಆಡುತ್ತಿದ್ದನು. ಹೀಗಾಗಿ ಈತನನ್ನು ನಿಭಾಯಿಸುವುದು ಶಿಬಿರದ ಮಾವುತ ಮತ್ತು ಕಾವಡಿಗರಿಗೆ ಸುಲಭದ ಕೆಲಸವಾಗಿ ಉಳಿದಿರಲಿಲ್ಲ. ಈ ನಡುವೆ 2017ರಲ್ಲಿ ಇನ್ನೇನು ಈತ ಸರಿ ಹೋದ ಎನ್ನುವಾಗಲೇ ಮದವೇರಿಸಿಕೊಂಡು ಕಾಡಿನತ್ತ ಓಟಕಿತ್ತಿದ್ದನು. ಹಾಗೆ ಹೋದವನು ಅರಣ್ಯ ಸಿಬ್ಬಂದಿಗೆ ಸಿಗದೆ ನಾಪತ್ತೆಯಾಗಿದ್ದನು.

ಸುಮಾರು ಎರಡು ವರ್ಷಗಳ ಕಾಲ ಅರಣ್ಯದಲ್ಲಿ ಅಡ್ಡಾಡುತ್ತಾ ಹೆಣ್ಣಾನೆಗಳೊಂದಿಗೆ ಇದ್ದ 'ಕುಶ'ನನ್ನು ಕೊನೆಗೂ ಹುಡುಕಿ ಕಾರ್ಯಾಚರಣೆ ನಡೆಸಿ ಮತ್ತೆ ದುಬಾರೆ ಶಿಬಿರಕ್ಕೆ ತಂದು ಸರಪಳಿಯಿಂದ ಕಟ್ಟಿ ಹಾಕಲಾಗಿತ್ತು. ಹಾಗೆಯೇ ಕೆಲವು ಸಮಯ ಕಳೆದ ಆತ ಮತ್ತೆ 2020ರಲ್ಲಿ ಮದವೇರಿಸಿಕೊಂಡು ಕಟ್ಟಿ ಹಾಕಿದ್ದ ಸರಪಳಿಯನ್ನು ತುಂಡು ಮಾಡಿಕೊಂಡು ನೇರವಾಗಿ ಕಾಡು ಸೇರಿದ್ದನಲ್ಲದೆ, ಸುಮಾರು ಹದಿನೇಳು ಆನೆಗಳಿದ್ದ ಹಿಂಡನ್ನು ಸೇರಿ ಹೆಣ್ಣಾನೆಗಳೊಂದಿಗೆ ಎಲ್ಲೆಂದರಲ್ಲಿ ಸುತ್ತಾಡುತ್ತಾ ಆರಾಮಾಗಿದ್ದನು.

ಕಾಡಿನಿಂದ ಕರೆತಂದರೆ ಉಪಟಳ ಶುರು

ಕಾಡಿನಿಂದ ಕರೆತಂದರೆ ಉಪಟಳ ಶುರು

ಆದರೆ ಇತ್ತ ದುಬಾರೆ ಆನೆ ಶಿಬಿರದಿಂದ 'ಕುಶ' ಎಂಬ ಸಾಕಾನೆ ನಾಪತ್ತೆಯಾಗಿರುವ ವಿಚಾರ ಎಲ್ಲೆಡೆ ಹರಿದಾಡಿತ್ತು. ಹೀಗಾಗಿ ಅರಣ್ಯ ಇಲಾಖೆ ಮತ್ತೆ ಹುಡುಕಾಟಕ್ಕೆ ಇಳಿದಿದ್ದರಲ್ಲದೆ, ಸುಮಾರು ಒಂದು ವರ್ಷಗಳ ಕಾಲ ಹುಡುಕಾಡಿ ಕೊನೆಗೂ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಂಗಾತಿಯಿಂದ ಬೇರ್ಪಡಿಸಿ, ಸೆರೆ ಹಿಡಿದು ತಂದು ದುಬಾರೆ ಆನೆ ಶಿಬಿರಕ್ಕೆ ಬಿಟ್ಟರು.

'ಕುಶ;ನನ್ನು ನೋಡಿಕೊಳ್ಳುವ ಹೊತ್ತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಸಾಕು ಸಾಕಾಗಿತ್ತು. ಇನ್ನು ಮುಂದೆಯಾದರೂ ಈತ ಸರಿಹೋಗಬಹುದೆಂಬ ಆಶಾ ಭಾವನೆ ಅಧಿಕಾರಿಗಳಲ್ಲಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ 'ಕುಶ' ವರ್ತಿಸುತ್ತಿದ್ದನು. ಕಾಡಾನೆಗಳ ಜತೆಯಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದವನಿಗೆ ಆನೆ ಶಿಬಿರದಲ್ಲಿರುವುದು ಕಷ್ಟವಾಗುತ್ತಿತ್ತು. ಹೀಗಾಗಿ ಮತ್ತೆ ಉಪಟಳ ಮಾಡಲು ಆರಂಭಿಸಿದ್ದನು.

'ಕುಶ'ನ ಬಿಡುಗಡೆಗೆ ಪರಿಸರವಾದಿಗಳಿಂದ ಒತ್ತಾಯ

'ಕುಶ'ನ ಬಿಡುಗಡೆಗೆ ಪರಿಸರವಾದಿಗಳಿಂದ ಒತ್ತಾಯ

ಹೀಗಾಗಿ ಆತನನ್ನು ಮತ್ತೆ ಪಳಗಿಸಿ ಅಂಕೆಯಲ್ಲಿಟ್ಟುಕೊಳ್ಳಲು ಮಾವುತರು ಶತಪ್ರಯತ್ನ ಮಾಡಿದ್ದರು. ಆತನ ಕಾಲನ್ನು ಸರಪಳಿಯಿಂದ ಕಟ್ಟಿ ಓಡಿ ಹೋಗದಂತೆ ನೋಡಿಕೊಂಡಿದ್ದರು. ಇದು ದುಬಾರೆಗೆ ಬಂದಿದ್ದ ಪ್ರವಾಸಿಗರ ಗಮನಸೆಳೆದಿತ್ತು. 'ಕುಶ' ಆನೆಯ ಪೂರ್ವಾಪರ ತಿಳಿಯದವರು ಆನೆಗೆ ಹಿಂಸೆ ಕೊಡಲಾಗುತ್ತಿದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳನ್ನು ಹಾಕಿದ್ದರು. ಇದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಯಿತಲ್ಲದೆ, ಅದು ಕೇಂದ್ರ ಸಂಸದೆ ಪರಿಸರವಾದಿ ಮನೇಕಾ ಗಾಂಧಿಯನ್ನು ಮುಟ್ಟಿತು. ನಂತರ ಇದೊಂದು ದೊಡ್ಡ ಸುದ್ದಿಯಾಯಿತು. ಬಂಧನದಲ್ಲಿರುವ 'ಕುಶ'ನಿಗೆ ಸ್ವತಂತ್ರ ನೀಡುವಂತೆ ಒತ್ತಾಯ ಹೆಚ್ಚಾದವು.

400 ಕಿಮೀ ದೂರ ಕ್ರಮಿಸಿ ವಾಪಾಸಾದ

400 ಕಿಮೀ ದೂರ ಕ್ರಮಿಸಿ ವಾಪಾಸಾದ

'ಕುಶ'ನ ಬಿಡುಗಡೆಗೆ ಒತ್ತಾಯ ಬಂದಿದ್ದರಿಂದ ಆಗಿನ ಅರಣ್ಯ ಸಚಿವ ಅರವಿಂದ್ ಲಿಂಬಾವಳಿ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ 'ಕುಶ' ಆನೆಗೆ ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ 2021ರ ಜೂನ್ ಮೊದಲವಾರದಲ್ಲಿ 'ಕುಶ' ಆನೆಯನ್ನು ಬಂಡಿಪುರ ಅರಣ್ಯದ ಮೂಲೆ ಹೊಳೆಗೆ ಬಿಟ್ಟು ಬರಲಾಗಿತ್ತು. ಆದರೆ ಹೊಸ ಪ್ರದೇಶಕ್ಕೆ ಒಗ್ಗಿಕೊಳ್ಳದ 'ಕುಶ' ಅಲ್ಲಿಂದ ತಾನಿದ್ದ ದುಬಾರೆ ಕಡೆಗೆ ಸಂಗಾತಿಯನ್ನು ಅರಸಿ ಬರುವ ಮನಸ್ಸು ಮಾಡಿದ್ದಾನೆ. ಇದಕ್ಕಾಗಿ ಆತ ಸುಮಾರು ನಾನೂರು ಕಿ.ಮೀ. ದೂರವನ್ನು ಕ್ರಮಿಸಿದ್ದಾನೆ. ಬಂಡೀಪುರ ನಾಗರಹೊಳೆ ಅರಣ್ಯದ ಮೂಲಕ ಕೊಡಗಿನ ತಿತಿಮತಿ ಸೇರಿದ್ದು, ದುಬಾರೆ ಸಾಕಾನೆ ಶಿಬಿರದ ಸಮೀಪದ ಮಾಲ್ದಾರೆ ಹಾಗೂ ದುಬಾರೆ ಮೀಸಲು ಅರಣ್ಯಪ್ರದೇಶದಲ್ಲಿ ಸುತ್ತಾಟ ನಡೆಸುತ್ತಿದ್ದಾನೆ. ತನ್ನ ಸ್ವಸ್ಥಾನಕ್ಕೆ ಮರಳಿದ 'ಕುಶ'ನನ್ನು ಮುಂದೆ ಅರಣ್ಯ ಇಲಾಖೆಯವರು ಏನು ಮಾಡುತ್ತಾರೆ? ಸೆರೆ ಹಿಡಿದು ಆನೆ ಶಿಬಿರದಲ್ಲಿ ಇಟ್ಟುಕೊಳ್ಳುತ್ತಾರಾ? ಅಥವಾ ಮತ್ತೆ ಕಾಡಿಗೆ ಅಟ್ಟುತ್ತಾರಾ? ಎನ್ನುವುದು ಕುತೂಹಲ ಮೂಡಿಸಿದೆ.

Recommended Video

Karnataka Politics News June 15: ಕರ್ನಾಟಕ ರಾಜಕೀಯದ ಇವತ್ತಿನ Top 3 ಸುದ್ದಿ | *NewsWrap | OneIndia Kannada

English summary
Kusha elephant whis is last year, june shifted from Dubare elephand camp to Bandipura tiger reserve, has returned to Dubare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X