ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಮಳೆ ತಗ್ಗಿದರೂ, ಆತಂಕ ಮಾತ್ರ ದೂರವಾಗಿಲ್ಲ...

|
Google Oneindia Kannada News

ಮಡಿಕೇರಿ, ಆಗಸ್ಟ್ 20: ಕೊಡಗಿನಲ್ಲಿ ಪ್ರವಾಹ ತಗ್ಗಿದ್ದು ಜನ ಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಜನ ಕೂಡಾ ಕಷ್ಟಗಳ ನಡುವೆಯೂ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಕೊಚ್ಚಿ ಹೋದ ರಸ್ತೆ, ಸೇತುವೆ, ಕುಸಿದು ಬಿದ್ದ ಗುಡ್ಡ, ಮನೆಗಳು ಎಲ್ಲವನ್ನೂ ಸರಿಪಡಿಸುವತ್ತ ಚಿತ್ತ ಹರಿಸುತ್ತಿದ್ದಾರೆ.

Recommended Video

ಮತ್ತೆ ಸ್ವಚ್ಛ ನಗರ ಗೌರವ ಮುಡಿಗೆರಿಸಿಕೊಂಡ ಮೈಸೂರು! | Oneindia Kannada

ಕಳೆದ ಮೂರು ವರ್ಷಗಳಿಂದ ಮಳೆಗಾಲ ಇಲ್ಲಿನ ಜನರ ಸಂಭ್ರಮವನ್ನೇ ಕಸಿದುಕೊಂಡಿದೆ. ಸುರಿಯುವ ಮಳೆಯಲ್ಲಿಯೇ ಕೆಸರು ಗದ್ದೆಯನ್ನೇ ಕ್ರೀಡಾಂಗಣವನ್ನಾಗಿ ಮಾಡಿಕೊಂಡು ಅಲ್ಲಿ ಕೆಸರುಗದ್ದೆ ಕ್ರೀಡಾಕೂಟ ಏರ್ಪಡಿಸಿ ಸಂಭ್ರಮಿಸುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಬೇಸಿಗೆ ಮತ್ತು ಮಳೆಗಾಲ ಎಲ್ಲವೂ ಸ್ತಬ್ಧವಾಗಿದೆ.

ಕೊಡಗು ಜಿಲ್ಲೆ ಮಳೆ ವಿವರ, ಹಾರಂಗಿ ಅಣೆಕಟ್ಟು ನೀರಿನ ಮಟ್ಟ ಕೊಡಗು ಜಿಲ್ಲೆ ಮಳೆ ವಿವರ, ಹಾರಂಗಿ ಅಣೆಕಟ್ಟು ನೀರಿನ ಮಟ್ಟ

ಮಳೆಗಾಲದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಜನ ಸಂಕಷ್ಟಕ್ಕೀಡಾಗಿರುವುದರಿಂದ ಎಲ್ಲ ಮನೋರಂಜನಾ ಕಾರ್ಯಕ್ರಮಕ್ಕೆ ಇಲ್ಲಿನವರು ಬ್ರೇಕ್ ಹಾಕಿದ್ದಾರೆ. ಅದರಲ್ಲೂ ಮಳೆಗಾಲದಲ್ಲಿ ನಡೆಯುತ್ತಿದ್ದ ನಾಟಿ ಓಟ, ಕೆಸರುಗದ್ದೆ ಕ್ರೀಡಾಕೂಟಕ್ಕೆ ಬಹಳಷ್ಟು ವರ್ಷಗಳ ಇತಿಹಾಸವೇ ಇದೆ. ಇಂತಹ ಕ್ರೀಡಾಕೂಟಗಳನ್ನು ಪ್ರತಿವರ್ಷವೂ ನಡೆಸಲಾಗುತ್ತಿತ್ತು. ಆ ಮೂಲಕ

ಮಳೆಗಾಲದ ಸಂಭ್ರಮಕ್ಕೆ ಬ್ರೇಕ್ ಬಿತ್ತು

ಮಳೆಗಾಲದ ಸಂಭ್ರಮಕ್ಕೆ ಬ್ರೇಕ್ ಬಿತ್ತು

ಮಳೆಗಾಲದಲ್ಲಿ ಅನುಭವಿಸುವ ಎಲ್ಲ ಕಷ್ಟಗಳನ್ನು ಮರೆತು ಸಂಭ್ರಮಿಸುತ್ತಿದ್ದರು. ಆದರೆ ಇಂತಹ ಸಂಭ್ರಮಗಳೆಲ್ಲವೂ ಈ ಬಾರಿ ಮರೆಯಾಗಿದೆ. 2018 ರಲ್ಲಿ ಮೊದಲ ಬಾರಿಗೆ ಭಾರೀ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭ ನೂರಾರು ಕುಟುಂಬಗಳು ಆಸ್ತಿ ಪಾಸ್ತಿ ಕಳೆದುಕೊಂಡು ನಿರ್ಗತಿಕರಾದರು. ಇಲ್ಲಿ ನಡೆದ ಭೂಕುಸಿತದ ಘಟನೆ ದೊಡ್ಡ ಸುದ್ದಿಯಾಯಿತು, ಪರಿಣಾಮ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಜಿಲ್ಲೆಯ ಪ್ರವಾಸಿ ತಾಣಗಳು ಖಾಲಿಯಾದವು. ಹೊರಗಿನಿಂದ ಪ್ರವಾಸಿಗರು ಬರುವುದನ್ನೇ ನಿಲ್ಲಿಸಿಬಿಟ್ಟರು. ಹೀಗಾಗಿ ಇಲ್ಲಿನ ಹೋಂಸ್ಟೇ, ರೆಸಾರ್ಟ್, ಹೋಟೆಲ್‌ಗಳು ಖಾಲಿಯಾದವು. ವ್ಯಾಪಾರ ಕುಸಿಯಿತು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳಲಿಲ್ಲ

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳಲಿಲ್ಲ

ಮತ್ತೆ ಕೊಡಗಿನತ್ತ ಪ್ರವಾಸಿಗರನ್ನು ಸೆಳೆಯಲು ಹಲವು ರೀತಿಯ ಪ್ರಯತ್ನಗಳು ನಡೆದರೂ ಕಳೆದ ವರ್ಷದ ಮಹಾಮಳೆಯೂ ಅದಕ್ಕೆ ತುಪ್ಪ ಸುರಿಯಿತು. ಬೇಸಿಗೆ ವೇಳೆಗೆ ಎಲ್ಲವೂ ಸರಿಹೋಗುತ್ತದೆ ಎಂದುಕೊಳ್ಳುವಾಗಲೇ ಮಹಾಮಾರಿ ಕೊರೊನಾ ಸೋಂಕು ವಕ್ಕರಿಸಿದರಿಂದ ಜನರ ಬದುಕು ಇನ್ನಷ್ಟು ಮೂರಾಬಟ್ಟೆಯಾಯಿತು. ಈಗ ಮತ್ತೆ ಮಹಾ ಮಳೆ ಸುರಿದಿದೆ. ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟವಾಗಿದೆ. ಅಲ್ಲದೆ, ಭೂಕುಸಿತದಿಂದ ಐವರು ಪ್ರಾಣ ಕಳೆದುಕೊಂಡಿದ್ದಾರೆ.

ಮೊದಲೆಲ್ಲ ಮಳೆಗಾಲದಲ್ಲಿ ಕೊಡಗಿನಲ್ಲಿ ಮಾನ್ಸೂನ್ ಟೂರಿಸಂ ಗರಿಗೆದರುತ್ತಿತ್ತು. ದೂರದಿಂದ ತಂಡ ತಂಡವಾಗಿ ಬರುತ್ತಿದ್ದ ಪ್ರವಾಸಿಗರು ಇಲ್ಲಿನ ಜಿಟಿಜಿಟಿ ಮಳೆಯಲ್ಲಿ ಮಿಂದೆದ್ದು ಖುಷಿಪಡುತ್ತಿದ್ದರು. ತುಂಬಿ ಹರಿಯುತ್ತಿದ್ದ ಜಲಪಾತಗಳನ್ನು ನೋಡಿ ಸಂಭ್ರಮಿಸುತ್ತಿದ್ದರು. ಇದು ಕೊಡಗಿನವರಿಗೆ ಲಾಭ ತಂದುಕೊಡುತ್ತಿತ್ತು. ಆದರೆ ಇದೆಲ್ಲವೂ ಈಗ ಬರೀ ನೆನಪಷ್ಟೆ.

ಕೊಡಗು: ಆನಂದತೀರ್ಥ ಪರಿಹಾರ ಚೆಕ್ ಯಾರಿಗೆ ಕೊಡಬೇಕು ಗೊಂದಲ, ನಾರಾಯಣಾಚಾರ್ ಪುತ್ರಿಯರಿಂದ ಆಕ್ಷೇಪಕೊಡಗು: ಆನಂದತೀರ್ಥ ಪರಿಹಾರ ಚೆಕ್ ಯಾರಿಗೆ ಕೊಡಬೇಕು ಗೊಂದಲ, ನಾರಾಯಣಾಚಾರ್ ಪುತ್ರಿಯರಿಂದ ಆಕ್ಷೇಪ

ಕಳೆದ ವರ್ಷಕ್ಕಿಂತ ಮಳೆ ಪ್ರಮಾಣ ಕಡಿಮೆ

ಕಳೆದ ವರ್ಷಕ್ಕಿಂತ ಮಳೆ ಪ್ರಮಾಣ ಕಡಿಮೆ

ಸದ್ಯ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುರಿದ ಮಳೆಯ ಪ್ರಮಾಣ ಕಡಿಮೆಯೇ ಎನ್ನಬೇಕು. ಜನವರಿಯಿಂದ ಇಲ್ಲಿವರೆಗೆ 1819 ಮಿ.ಮೀ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಗೆ 1895 ಮಿ.ಮೀ ಆಗಿತ್ತು. ಕೊಡಗಿನಲ್ಲಿ ಉತ್ತಮ ಮಳೆಯಾಗಿ ಕೆ.ಆರ್.ಎಸ್ ಜಲಾಶಯ ಮೂರು ವರ್ಷಗಳಿಂದ ಭರ್ತಿಯಾಗುತ್ತಿರುವುದರಿಂದ ನೀರಿನ ಸಮಸ್ಯೆ ಉದ್ಭವಿಸುತ್ತಿಲ್ಲ. ಕಾವೇರಿ ನದಿಯನ್ನು ನಂಬಿರುವ ಎಲ್ಲರೂ ನೆಮ್ಮದಿಯಾಗಿದ್ದಾರೆ. ಕೊಡಗಿನಲ್ಲಿ ಕಾವೇರಿ ನದಿಯ ಬಳಕೆ ಕಡಿಮೆಯೇ ಎನ್ನಬೇಕು. ಇಲ್ಲಿ ಮಳೆ ಹೆಚ್ಚಾದಷ್ಟು ಕಾವೇರಿ ಜಲಾನಯನ ಪ್ರದೇಶದವರಿಗೆ ಅನುಕೂಲವಾಗುತ್ತದೆಯಾದರೂ ಕೊಡಗಿನ ಬೆಳೆಗಾರರಿಗೆ ನಷ್ಟವೇ, ಏಕೆಂದರೆ ಮಳೆ ಹೆಚ್ಚಾದಷ್ಟು ಕಾಫಿ ಫಸಲು ಉದುರಿ ನಷ್ಟ ಅನುಭವಿಸಬೇಕಾಗುತ್ತದೆ. ಅದರಲ್ಲೂ ಈ ಬಾರಿ ಮಳೆಗೆ ಕಾಫಿ ಉದುರಿಬಿದ್ದಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಹಾನಿ

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಹಾನಿ

ಇನ್ನು ಪ್ರವಾಹ ಪರಿಸ್ಥಿತಿ ತಲೆದೋರಿದ್ದ ಭಾಗಮಂಡಲ ಹೋಬಳಿಯ ತಣ್ಣಿಮಾನಿ ಹಾಗೂ ಚೇರಂಗಾಲ ಮೊದಲಾದ ಗ್ರಾಮಗಳಲ್ಲಿನ ಜನರ ಆತಂಕ ಇನ್ನೂ ಕಡಿಮೆಯಾಗಿಲ್ಲ. ಎಲ್ಲರೂ ಭಯ ಮತ್ತು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ. ಈ ಪ್ರದೇಶಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿ ಧೈರ್ಯ ತುಂಬಿದ್ದಾರೆ. ಸದ್ಯ ಮಳೆಯಿಂದ ಚೇರಂಗಾಲ ಗ್ರಾಮದ ಕೂಡಕಂಡಿ ಮನೆಗಳಿಗೆ ತೆರಳುವ ರಸ್ತೆಯಲ್ಲಿನ ಕಾಲು ಸೇತುವೆ ಮುರಿದು ಹೋಗಿದೆ. ಪರಿವಾರ ಹಾಗೂ ಮತ್ತಾರಿ ಮನೆಗಳಿಗೆ ತೆರಳುವ ರಸ್ತೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿರುವ ಮುಳುಗು ಸೇತುವೆ ಹಾನಿಗೀಡಾಗಿರುವ ಕಾರಣ ತಾತ್ಕಾಲಿಕವಾಗಿ ನಿರ್ಮಿಸಿರುವ ಕಾಲು ಸೇತುವೆ ಇದಾಗಿತ್ತು.

ಶಾಸಕರು ಪರಿಹಾರ ನೀಡುವ ಭರವಸೆ ನೀಡಿದ್ದಾರೆ

ಶಾಸಕರು ಪರಿಹಾರ ನೀಡುವ ಭರವಸೆ ನೀಡಿದ್ದಾರೆ

ಇನ್ನು ಚೇರಂಗಾಲ ಹಾಗೂ ತಣ್ಣಿಮಾನಿ ಭಾಗಗಳಲ್ಲಿ ಪ್ರವಾಹದಿಂದಾಗಿ ಹಾಗೂ ಗುಡ್ಡ ಕುಸಿತದಿಂದಾಗಿ ನಾಟಿ ಮಾಡಿದ ಗದ್ದೆಗಳು ಕೆಸರು ಮಣ್ಣು ಮತ್ತು ಮರಳಿನಿಂದ ತುಂಬಿ ಕೃಷಿಕರಿಗೆ ನಷ್ಟವುಂಟಾಗಿದೆ. ಚೇರಂಗಾಲ ವ್ಯಾಪ್ತಿಯಲ್ಲಿ ಸಾಕಷ್ಟು ಭತ್ತದ ಗದ್ದೆಗಳು ಹಾಗೂ ತೋಟಗಳು ಹಾನಿಗೊಳಗಾಗಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಯಾವುದೇ ನಿಬಂಧನೆ ಇಲ್ಲದೆ ಕೂಡಲೇ ಪರಿಹಾರ ವಿತರಿಸುವಂತೆ ಜನರು ಮನವಿ ಮಾಡಿಕೊಂಡಿದ್ದಾರೆ.

ತಣ್ಣಿಮಾನಿ ಗ್ರಾಮದ ಕುದುಪಜೆ ಐನ್ ಮನೆಗೆ ತೆರಳುವ ರಸ್ತೆಯಲ್ಲಿನ ಸೇತುವೆ ಹಾನಿಗೊಳಗಾಗಿದ್ದರೆ, ಚೇರಂಗಾಲದ ಬೆನ್ನೂರು ಕಾಡಿನಲ್ಲಿ ಸುಮಾರು ೫೦ ಎಕರೆಯಷ್ಟು ಪ್ರದೇಶ ಗುಡ್ಡ ಕುಸಿದು ಹಾನಿಗೊಳಗಾಗಿದೆ. ಇಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕಾಲೋನಿ, ಕೋಳಿಕಾಡು ಸ್ಥಳಗಳಿಗೆ ಸಾಕಷ್ಟು ಹಾನಿಯಾಗಿದೆ. ಚೇರಂಗಾಲ ವಾಪ್ತಿಯಲ್ಲಿನ ನಾಲ್ಕೈದು ಮನೆಗಳು ಮಳೆಗಾಳಿಯಿಂದಾಗಿ ಕುಸಿದು ಬಿದ್ದು ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಈ ಎಲ್ಲ ಪ್ರದೇಶಗಳನ್ನು ವೀಕ್ಷಿಸಿ ಮಾಹಿತಿ ಪಡೆದಿರುವ ಶಾಸಕರು ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಮಳೆ ಆರ್ಭಟ ಕಡಿಮೆಯಾದರೆ ಮಾತ್ರ ಜನ ಸ್ವಲ್ಪ ನೆಮ್ಮದಿಯಾಗಿರಲು ಸಾಧ್ಯವಾಗಲಿದೆ.

English summary
The floods in Kodagu District have reduced and people's lives are returning to normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X