• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಷ್ಟ್ರಪತಿ ಸಂಚರಿಸುವ ಮಾರ್ಗದ ಅಂಗಡಿ ಮುಚ್ಚುವುದಕ್ಕೆ ವ್ಯಾಪಕ ವಿರೋಧ

By Coovercolly Indresh
|

ಮಡಿಕೇರಿ, ಫೆಬ್ರವರಿ 4: ಜನರಲ್ ತಿಮ್ಮಯ್ಯ ಮ್ಯೂಸಿಯಂನ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಫೆ.6ನೇ ತಾರೀಖಿನಂದು ಮಡಿಕೇರಿಗೆ ಆಗಮಿಸುತ್ತಿದ್ದಾರೆ.

ರಾಷ್ಟ್ರಪತಿಗಳು ತಲಕಾವೇರಿ ಪುಣ್ಯ ಕ್ಷೇತ್ರಕ್ಕೂ ಭೇಟಿ ನೀಡಲಿದ್ದು, ಫೆ.6 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಗಣ್ಯಾತಿಗಣ್ಯರ ಆಗಮನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಕೊಡಗು ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ.

ರಾಷ್ಟ್ರಪತಿ ಅವರು ಫೆ.6ರಂದು ಬೆಳಗ್ಗೆ 10.55 ಗಂಟೆಗೆ ಭಾಗಮಂಡಲದ ಕಾವೇರಿ ಕಾಲೇಜಿನ ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ಆದ್ದರಿಂದ ಭಾಗಮಂಡಲದ ಕಾವೇರಿ ಕಾಲೇಜಿನಿಂದ ತಲಕಾವೇರಿ ಮಾರ್ಗದಲ್ಲಿನ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚಬೇಕಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.

ಹಾಗೆಯೇ ರಾಷ್ಟ್ರಪತಿ ಅವರು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದ ಹೆಲಿಪ್ಯಾಡ್‍ಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಲಿರುವ ಹಿನ್ನೆಲೆ ಕ್ಲಬ್ ಮಹೀಂದ್ರದಿಂದ ಕಾರ್ಯಪ್ಪ ಕಾಲೇಜು, ಸಾಯಿ ರಸ್ತೆ, ರಾಜಾಸೀಟು ರಸ್ತೆ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ಸ್ಮಾರಕ ಭವನ ತಲುಪಲಿರುವ ಹಿನ್ನೆಲೆ, ಈ ಮಾರ್ಗದ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮುಚ್ಚಬೇಕಿದೆ.

ಜೊತೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದವರೆಗೆ ಫೆ.06ರಂದು ಮಧ್ಯಾಹ್ನ 2.30 ಗಂಟೆಯಿಂದ 4.30 ಗಂಟೆಯವರೆಗೆ ರಸ್ತೆ ಸಂಚಾರ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.

ರಾಷ್ಟ್ರದ ಪ್ರಥಮ ಪ್ರಜೆಯ ಆಗಮನ ಕೊಡಗು ಜಿಲ್ಲೆಗೆ ಸಂಭ್ರಮ ಆಗಬೇಕಿದ್ದರೂ, ಜಿಲ್ಲಾಡಳಿತವು ಭದ್ರತೆಯ ದೃಷ್ಟಿಯಿಂದ ಅವರು ತೆರಳುವ ಮಾರ್ಗದಲ್ಲೆಲ್ಲ ಅಂಗಡಿಗಳನ್ನು ಮುಚ್ಚಲು ಆದೇಶಿಸಿರುವುದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ತಾಣಗಳಾದ ಫೇಸ್‌ ಬುಕ್‌, ವಾಟ್ಸಪ್ ನಲ್ಲಿ ಈ ಆದೇಶವನ್ನು ವಿರೋಧಿಸಿ ನೂರಾರು ಕಮೆಂಟ್ ಗಳು ಬರುತ್ತಿವೆ.

ಬರುತ್ತಿರುವುದು ರಾಷ್ಟ್ರಪತಿಯೋ ಅಥವಾ ಹಿಟ್ಲರೋ ಎಂದು ಒಬ್ಬರು ಕಮೆಂಟಿಸಿದ್ದು, ಮತ್ತೊಬ್ಬರು ಈ ಹಿಂದೆ ರಾಜ ಮಹಾರಾಜರು ಬರುತ್ತಿದ್ದಾಗ ಜನರೆಲ್ಲ ಮನೆ ಮುಂದೆ ರಂಗೋಲಿ ಇಟ್ಟು ಅವರು ಹಾದು ಹೋಗುವಾಗ ಹೂವು ಚೆಲ್ಲಿ ನಮಸ್ಕರಿಸುತ್ತಿದ್ದರು. ಇದಾವ ರೀತಿಯ ದಿಗ್ಬಂಧನ ಎಂದು ಕಮೆಂಟಿಸಿದ್ದಾರೆ.

ಅಲ್ಲದೆ ಈ ಮಾರ್ಗದಲ್ಲಿ ಜನರ ಓಡಾಟ, ವಾಹನಗಳ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಇದಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕೊರೊನಾ ಕಾರಣದಿಂದ ಲಾಕ್‌ ಡೌನ್‌ ಆಗಿದ್ದು, ಈಗ ವಹಿವಾಟು ಒಂದಷ್ಟು ಚೇತರಿಸಿಕೊಳ್ಳುತ್ತಿದೆ. ಅದರಲ್ಲೂ ಜಿಲ್ಲೆಗೆ ವೀಕೆಂಡ್ ಗಳಲ್ಲಿ ಮಾತ್ರ ಪ್ರವಾಸಿಗರು ಆಗಮಿಸುತಿದ್ದು, ಶನಿವಾರ ಬಂದ್‌ ಮಾಡಿದರೆ ವಾರಾಂತ್ಯದ ವ್ಯಾಪಾರ ಇಲ್ಲದಂತಾಗುತ್ತದೆ ಎಂದು ಫ್ಯಾನ್ಸಿ ಸ್ಟೋರ್‌ ಅಂಗಡಿ ಮಾಲೀಕರೊಬ್ಬರು ಹೇಳಿದರು.

ಅಂಗಡಿಗಳನ್ನೆಲ್ಲ ಮುಚ್ಚಿದರೆ ರಾಷ್ಟ್ರಪತಿಗಳಿಗೆ ನಗರ ಹೇಗಿದೆ ಎಂಬ ಪರಿಚಯವೇ ಆಗುವುದಿಲ್ಲ. ಈ ಹಿಂದೆ ಎಪಿಜೆ ಅಬ್ದುಲ್ ಕಲಾಂ ಅವರೂ ಜಿಲ್ಲೆಗೆ ಆಗಮಿಸಿದ್ದರು. ಆಗ ಈ ರೀತಿಯ ನಿರ್ಬಂಧ ವಿಧಿಸಿರಲಿಲ್ಲ ಎಂದು ಮತ್ತೊಬ್ಬ ವ್ಯಾಪಾರಿ ಹೇಳಿದರು.

   AERO India ಬಗ್ಗೆ ರಕ್ಷಣಾ ಸಚಿವರ ಮಾತು | Oneindia Kannada
   English summary
   President Ramanath Kovind, who is also the Chief of Defense Forces for the inaugural event of the General Timmaiah Museum, arrives in Madikeri on February 6th.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X