ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಲವೇ ಕ್ಷಣಗಳಲ್ಲಿ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ

By ಬಿಎಂ ಲವಕುಮಾರ್
|
Google Oneindia Kannada News

ಮಡಿಕೇರಿ, ಅಕ್ಟೋಬರ್ 16: ಕರ್ನಾಟಕದ ಸ್ವರ್ಣ ನದಿ ಎಂದೇ ಕರೆಯಲ್ಪಡುವ ಕಾವೇರಿಯ ಉದ್ಭವ ಕ್ಷೇತ್ರವಾದ ತಲಕಾವೇರಿಯಲ್ಲಿ ಅ.17ರ ಮಂಗಳವಾರ ಮಧ್ಯಾಹ್ನ 12.33ಕ್ಕೆ ಧನುರ್ ಲಗ್ನದಲ್ಲಿ ತೀರ್ಥೋದ್ಭವವಾಗಲಿದೆ.

ಪವಿತ್ರ ಕುಂಡಿಕೆಯಿಂದ ತೀರ್ಥರೂಪಿಣಿಯಾಗಿ ಹರಿದು ಬರಲಿರುವ ಕಾವೇರಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿರುವ ಕಾರಣ ಜಿಲ್ಲಾಡಳಿತ ಅಗತ್ಯ ಸಿದ್ಧತೆಯನ್ನು ಕೈಗೊಂಡಿದೆ. ಮತ್ತೊಂದೆಡೆ ಧಾರ್ಮಿಕ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗಿವೆ.

ರಾಮಕೃಷ್ಣಾಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ

ರಾಮಕೃಷ್ಣಾಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ

ಶ್ರೀ ಕಾವೇರಿ ಮಾತೆಗೆ ಪೂಜಾದಿ ಕೈಂಕರ್ಯವನ್ನು ಕ್ಷೇತ್ರದ ಅರ್ಚಕ ಕುಟುಂಬದ ರಾಮಕೃಷ್ಣಾಚಾರ್ ನೇತೃತ್ವದಲ್ಲಿ ನಡೆಯಲಿದ್ದು ದೇವಾಲಯ ಆಡಳಿತ ಪೂಜಾ ಕೈಂಕರ್ಯಗಳ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಸೆ. 26ರಿಂದಲೇ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದರೊಂದಿಗೆ ಕಾವೇರಿ ಜಾತ್ರೆಯ ಸಂಬಂಧ ಧಾರ್ಮಿಕ ಕಾರ್ಯಗಳು ಆರಂಭವಾಗಿವೆ. ಅ.14ರಂದು ಆಜ್ಞಾ ಮುಹೂರ್ತದೊಂದಿಗೆ, ಬೆಳಿಗ್ಗೆ 11.55ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವ ಮೂಲಕ ನಂದಾದೀಪ ಬೆಳಗಲಾಗಿದೆ. ಸಂಜೆ 4.25ಕ್ಕೆ ಕುಂಭ ಲಗ್ನದಲ್ಲಿ ಭಂಡಾರ (ಕಾಣಿಕೆ ಡಬ್ಬ) ಇರಿಸಲಾಯಿತು.

ಕಾವೇರಿ ಮಾತೆಗೆ ಚಿನ್ನಾಭರಣಗಳ ಅಲಂಕಾರ

ಕಾವೇರಿ ಮಾತೆಗೆ ಚಿನ್ನಾಭರಣಗಳ ಅಲಂಕಾರ

ಈ ನಡುವೆ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣವನ್ನು ಶ್ರೀ ಭಗಂಡೇಶ್ವರ ದೇವಾಲಯದಿಂದ ತಲಕಾವೇರಿ ಕ್ಷೇತ್ರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿದೆ.

ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಅವರಿಂದ ಚಿನ್ನಾಭರಣಗಳನ್ನು ದೇವಾಲಯ ತಕ್ಕರಾದ ಕೋಡಿ ಮೋಟಯ್ಯ ಅವರಿಗೆ ಹಸ್ತಾಂತರ ಮಾಡಲಾಯಿತು. ನಂತರ ಶ್ರೀ ಭಾಗಮಂಡಲ ದೇವಾಲಯದಲ್ಲಿ ಆಭರಣಗಳಿಗೆ ವಿಶೇಷ ಪೂಜೆ ನೆರವೇರಿಸಿ ಬಳಿಕ ಚಂಡೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಭಾಗಮಂಡಲ ಮಾರುಕಟ್ಟೆ ಬಳಿಗೆ ತೆರಳಿ, ಕೈಲಾಸ ಆಶ್ರಮದ ಬಳಿಯಿಂದ ತಲಕಾವೇರಿಗೆ ತೆರಳಿ, ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ತುಲಾಮಾಸದಲ್ಲಿ ಒಂದು ತಿಂಗಳ ಕಾಲ ಈ ಆಭರಣವನ್ನು ಕಾವೇರಿ ಮಾತೆಗೆ ತೊಡಿಸಲಾಗುತ್ತದೆ. 1 ತಿಂಗಳು ಕಳೆದ ತರುವಾಯ ಅಂದರೆ ನವೆಂಬರ್ 17ರಂದು ಮರಳಿ ಚಿನ್ನಾಭರಣಗಳನ್ನು ಆಡಳಿತಾಧಿಕಾರಿಗೆ ಹಿಂತಿರುಗಿಸಲಾಗುತ್ತದೆ.

ಜಿಲ್ಲಾಡಳಿತದಿಂದ ಸಿದ್ಧತೆ

ಜಿಲ್ಲಾಡಳಿತದಿಂದ ಸಿದ್ಧತೆ

ಇನ್ನು ಜಾತ್ರೆಗೆ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಿರುವುದರಿಂದ ಜಿಲ್ಲಾಡಳಿತ ಸರ್ವ ರೀತಿಯಲ್ಲೂ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ಮಡಿಕೇರಿಯಿಂದ ಭಾಗಮಂಡಲ, ತಲಕಾವೇರಿ ತನಕ ಲೋಕೋಪಯೋಗಿ, ಅರಣ್ಯ ಹಾಗೂ ಚೆಸ್ಕಾಂ ಇಲಾಖೆಗಳಿಂದ ರಸ್ತೆಯುದ್ದಕ್ಕೂ ಗುಂಡಿ ಮುಚ್ಚುವುದು, ಅಲ್ಲಲ್ಲಿ ಸುಣ್ಣ ಬಳಿಯುವುದು, ಅಪಾಯಕಾರಿ ಮರಗಳ ತೆರವುಗೊಳಿಸುವುದು, ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗ್ರೀನ್ಸಿಟಿ ಫೋರಂ ಹಾಗೂ ಕೊಡಗು ವಿದ್ಯಾಲಯದ ಮಕ್ಕಳು ತಲಕಾವೇರಿಯಿಂದ ಭಾಗಮಂಡಲ ತನಕ ಸಾಮೂಹಿಕವಾಗಿ ಸ್ವಚ್ಛತೆ ಮಾಡಿದ್ದಾರೆ.

ಸಿದ್ಧವಾದ ತಲಕಾವೇರಿ

ಸಿದ್ಧವಾದ ತಲಕಾವೇರಿ

ತಲಕಾವೇರಿಯಲ್ಲಿ ಸುಸಜ್ಜಿತ ಶಾಮಿಯಾನದ ನಿರ್ಮಾಣ, ಭಕ್ತರ ನೂಕುನುಗ್ಗಲು ತಪ್ಪಿಸಲು ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್‍ಗಳ ಅಳವಡಿಕೆ, ಕೊಡಗು ಏಕೀಕರಣದಿಂದ ಅನ್ನದಾನಕ್ಕೆ ಸಿದ್ಧತೆ, ಅನ್ನಛತ್ರ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಕ್ಷೇತ್ರಗಳಲ್ಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ, ಅಲಂಕಾರ, ವಾಹನ ನಿಲುಗಡೆ, ಕೇಶ ಮುಂಡನ, ಪಿಂಡ ಪ್ರದಾನದೊಂದಿಗೆ ಪಿತೃಕಾರ್ಯಕ್ಕೂ ಅನುಕೂಲತೆ ಕಲ್ಪಿಸಲಾಗಿದೆ.

ಒಂದು ತಿಂಗಳು ಅನ್ನಸಂತರ್ಪಣೆ

ಒಂದು ತಿಂಗಳು ಅನ್ನಸಂತರ್ಪಣೆ

ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ಕೊಡಗು ಏಕೀಕರಣ ರಂಗದ ಆಶ್ರಯದಲ್ಲಿ ಅ. 16ರ ಮಧ್ಯಾಹ್ನದಿಂದ ಆರಂಭಗೊಂಡು ಕಿರು ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.

ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ದಾಸೋಹ ನಡೆಯಲಿದೆ. ಒಂದು ತಿಂಗಳ ಕಾಲ ನಡೆಯುವ ಅನ್ನದಾನದಲ್ಲಿ ಮೂರು ಹೊತ್ತು ಕೂಡ ಬಗೆ ಬಗೆಯ ಆಹಾರ ಪದಾರ್ಥಗಳನ್ನು ಭಕ್ತಾದಿಗಳಿಗೆ ಬಡಿಸಲಾಗುತ್ತದೆ.

ಸುಮಾರು 20 ಮಂದಿ ಅಡುಗೆ ಭಟ್ಟರ ತಂಡ ಆಹಾರ ಪದಾರ್ಥ ತಯಾರಿಯಲ್ಲಿ ತೊಡಗಿಸಿಕೊಳ್ಳಲಿದ್ದು, ಏಕೀಕರಣ ರಂಗದ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಅನ್ನಸಂತರ್ಪಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

ಸುಮಾರು 18 ಲಕ್ಷ ವೆಚ್ಚದಲ್ಲಿ ಅನ್ನದಾನ ನಡೆಯಲಿದೆ.

ಮಂಡ್ಯ ಬಳಗದಿಂದ ಅನ್ನದಾನ

ಮಂಡ್ಯ ಬಳಗದಿಂದ ಅನ್ನದಾನ

ಕೈಲಾಸ ಆಶ್ರಮದಲ್ಲಿ ವರ್ಷಂಪ್ರತಿಯಂತೆ ತಮಿಳುನಾಡು ಮೂಲದ ಅಳಗಪ್ಪ ಚೆಟ್ಟಿಯಾರ್ ಕುಟುಂಬದ ಅಣ್ಣಾಮಲೈ ಹಾಗೂ ಮುತ್ತಯ್ಯ ಚೆಟ್ಟಿಯಾರ್ ಅವರಿಂದ ಸುಮಾರು 8 ಸಾವಿರ ಭಕ್ತರಿಗೆ ಅನ್ನದಾನ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.

ಇದಲ್ಲದೆ, ದೇವಾಲಯದಿಂದ ಭಾಗಮಂಡಲದಲ್ಲಿ ಅನ್ನದಾನದೊಂದಿಗೆ, ಈ ಹಿಂದಿನಂತೆ ಬೇರೆ ಬೇರೆ ಸಂಘ ಸಂಸ್ಥೆಗಳು, ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣಾ ಸಂಸ್ಥೆಯ ಭಕ್ತ ವತ್ಸಲ ಎಂಬವರ ನೇತೃತ್ವದಲ್ಲಿ ಮಂಡ್ಯ ಬಳಗ ಅನ್ನದಾನ ನಡೆಸಲಿದೆ.

ಒಟ್ಟಾರೆ ಕಾವೇರಿ ತೀರ್ಥೋದ್ಭವಕ್ಕೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದ್ದು, ಕಾವೇರಿ ಮಾತೆಯ ಪವಿತ್ರ ದರ್ಶನಕ್ಕಾಗಿ ಜನ ಕಾತರದಿಂದ ಕಾಯುತ್ತಿದ್ದಾರೆ.

English summary
The annual theerthodbhava of river Cauvery will occur at the holy pond at its birth place Talakavery at 12.15am on October 17. The District Administration is gearing up for Cauvery Theerthodbhava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X