ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡವ ಸಮುದಾಯ ಶಸ್ತ್ರಾಸ್ತ್ರ ಹೊಂದುವುದು ಸಂವಿಧಾನಬದ್ಧ ಹಕ್ಕು: ಹೈಕೋರ್ಟ್

|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 22: ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ಸರ್ಕಾರ ನೀಡಿರುವ ಕೋವಿಯ ವಿಶೇಷ ಹಕ್ಕನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಕೊಡಗಿನಲ್ಲಿ ಜಮ್ಮಾ ಹಿಡುವಳಿದಾರರು ಕೋವಿ ಹೊಂದುವುದು ವಿಶೇಷವಾದ ಹಕ್ಕು. ಆದರೆ ಜಮ್ಮಾ ಹಿಡುವಳಿದಾರರಿಗೆ ಸರ್ಕಾರ ನೀಡಿರುವ ಈ ವಿಶೇಷ ಹಕ್ಕನ್ನು ಪ್ರಶ್ನಿಸಿ ಕೊಡಗಿನವರೇ ಆದ ಕ್ಯಾಪ್ಟನ್ ಚೇತನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕೊಡವ ಸಮುದಾಯದ ಶಸ್ತ್ರಾಸ್ತ್ರ ಹಕ್ಕಿನ ಪರವಾಗಿ ಎ.ಎಸ್. ಪೊನ್ನಣ್ಣ, ಸಜನ್ ಪೂವಯ್ಯ ವಾದ ಮಂಡಿಸಿ, ಕೋವಿ ಕೊಡಗಿನವರ ಆಯುಧ ಅಷ್ಟೇ ಅಲ್ಲ. ಅದೊಂದು ಭಾವನಾತ್ಮಕ ವಿಷಯ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಕೊಡಗಿನವರ ಬಳಿ ಕೋವಿ ಇದ್ದರೂ, ಅದನ್ನು ಇದುವರೆಗೆ ಎಂತಹದ್ದೇ ಸಂದರ್ಭದಲ್ಲೂ ದುರ್ಬಳಕೆ ಮಾಡಿಲ್ಲ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಎರಡು ಕಡೆಯ ವಾದ ಆಲಿಸಿದ ನ್ಯಾಯಾಲಯ, ಪಿಐಎಲ್ ವಜಾಗೊಳಿಸಿ ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದುವುದು ಸಂವಿಧಾನಬದ್ಧವಾಗಿದೆ ಎಂದು ಹೇಳಿ ಈ ವಿಶೇಷ ಹಕ್ಕನ್ನು ಮುಂದುವರೆಸುವಂತೆ ಮಹತ್ವದ ಆದೇಶ ಪ್ರಕಟಿಸಿತು.

 ಕೊಡವ ಸಮುದಾಯವು ಯೋಧ ಸಮುದಾಯ

ಕೊಡವ ಸಮುದಾಯವು ಯೋಧ ಸಮುದಾಯ

ಶಸ್ತ್ರಾಸ್ತ್ರಗಳನ್ನು ಒಯ್ಯಲು ಹಾಗೂ ಹೊಂದಲು ಶಸ್ತ್ರಾಸ್ತ್ರ ಕಾಯಿದೆ- 1959ರ ಅಡಿ ಕೊಡವರಿಗೆ ನೀಡಲಾಗಿರುವ ವಿನಾಯಿತಿಯ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮ ಹಾಗೂ ನ್ಯಾ. ಎಸ್‌. ಎಸ್‌. ಮಗದುಮ್ ಪೀಠವು ಈ ಕುರಿತಾದ ಆದೇಶವನ್ನು ನೀಡಿದೆ.

"ಕೊಡವ ಸಮುದಾಯವು ಯೋಧ ಸಮುದಾಯವಾಗಿದ್ದು, ವಿನಾಯಿತಿಯ ಸವಲತ್ತನ್ನು ಸ್ವಾತಂತ್ರ್ಯ ಪೂರ್ವಕಾಲದಿಂದಲೂ ಅನುಭವಿಸುತ್ತಿದೆ. ಅದೇ ರೀತಿ ಜಮ್ಮಾ ಹಿಡವಳಿದಾರರು ಸಹ ಸ್ವಾತಂತ್ರ್ಯ ಪೂರ್ವದಿಂದಲೂ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ. ಹತ್ತು ವರ್ಷಗಳ ಅವಧಿಗೆ ಈ ವಿನಾಯಿತಿಯನ್ನು ಸೂಕ್ತ ರೀತಿಯಲ್ಲಿ ನೀಡಲಾಗಿದೆ. ಅನಿಯಮಿತ ಕಾಲದವರೆಗೇನೂ ವಿನಾಯಿತಿಯನ್ನು ನೀಡಲಾಗಿಲ್ಲ. ನೀಡಲಾಗಿರುವ ವಿನಾಯಿತಿಯು ಸಹ ಕೆಲವೊಂದು ನಿಬಂಧನೆ, ಷರತ್ತುಗೊಳಪಟ್ಟಿದೆ. ಹೀಗಾಗಿ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಲಾಗಿದೆ," ಎಂದು ಪೀಠವು ಆದೇಶಿಸಿತು.
 1890ಕ್ಕೂ ಮುಂಚಿನಿಂದ ಗುರುತಿಸಿದೆ

1890ಕ್ಕೂ ಮುಂಚಿನಿಂದ ಗುರುತಿಸಿದೆ

"ಸಂವಿಧಾನದ 14ನೇ ವಿಧಿ ಅನ್ವಯ ಈ ವಿನಾಯಿತಿಯು ಅನುಮತಿಸುವಂತದ್ದಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಅಧಿಕೃತ ದಾಖಲೆಗಳು ಕೊಡವ ಜನಾಂಗವನ್ನು ಯೋಧ ಜನಾಂಗವೆಂದು, 1890ಕ್ಕೂ ಮುಂಚಿನಿಂದ ಗುರುತಿಸಿರುವುದು ಕಂಡುಬರುತ್ತದೆ. ಅಂದಿನಿಂದಲೂ ಅವರು ಈ ವಿನಾಯಿತಿಯನ್ನು ಅನುಭವಿಸುತ್ತಿದ್ದಾರೆ," ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಅಂತಿಮ ತೀರ್ಪನ್ನು ನ್ಯಾಯಾಲಯವು ಜುಲೈನಲ್ಲಿ ನಡೆದ ಹಿಂದಿನ ವಿಚಾರಣೆ ವೇಳೆ ಕಾಯ್ದಿರಿಸಿತ್ತು. ಕೊಡಗು ಜಿಲ್ಲೆಯ ಕೊಡವರಿಗೆ ಹಾಗೂ ಜಮ್ಮಾ ಹಿಡುವಳಿದಾರರಿಗೆ ಶಸ್ತ್ರಾಸ್ತ್ರ ಕಾಯಿದೆ- 1959ರ ಅನ್ವಯ ಶಸ್ತ್ರಾಸ್ತ್ರ ಹೊಂದಲು ಕೇಂದ್ರ ಸರ್ಕಾರವು ನೀಡಿರುವ ವಿನಾಯಿತಿಯನ್ನು ಪ್ರಶ್ನಿಸಿ ಸೇನೆಯ ನಿವೃತ್ತ ಕ್ಯಾಪ್ಟನ್‌ ಚೇತನ್‌ ವೈ. ಕೆ. ಎನ್ನುವವರು ಅರ್ಜಿ ಸಲ್ಲಿಸಿದ್ದರು.ಪಿಸ್ತೂಲ್, ರಿವಾಲ್ವರ್, ಡಬಲ್ ಬ್ಯಾರಲ್ ಶಾಟ್‌ಗನ್‌ಗಳನ್ನು ಹೊಂದಲು ಕೊಡವರಿಗೆ ಹಾಗೂ ಜಮ್ಮಾ ಹಿಡುವಳಿದಾರರಿಗೆ ಪರವಾನಗಿ ರಹಿತ ವಿನಾಯಿತಿ ನೀಡಿರುವ ಕ್ರಮವು ಬ್ರಿಟಿಷ್ ಕಾಲದ ಕಾನೂನಿನ ಮುಂದುವರಿಕೆಯಾಗಿದೆ ಎಂದು ಅವರು ಆಕ್ಷೇಪಿಸಿದ್ದರು. ಕೇಂದ್ರವು ಈ ವಿನಾಯಿತಿಯನ್ನು 2029ರವರೆಗೆ ನೀಡಿತ್ತು.
 ಅಸಾಂವಿಧಾನಿಕವಾಗಿದೆ ಎಂದು ಅರ್ಜಿದಾರರ ವಾದ

ಅಸಾಂವಿಧಾನಿಕವಾಗಿದೆ ಎಂದು ಅರ್ಜಿದಾರರ ವಾದ

"ಆದರೆ, ಇಂತಹ ವಿನಾಯಿತಿಯು ಜಾತಿ, ಜನಾಂಗಗಳು ಹಾಗೂ ಪೂರ್ವಜನರ ಭೂ ಹಿಡುವಳಿಯ ಆಧಾರದಲ್ಲಿ ಭೇದವನ್ನು ಸೃಷ್ಟಿಸುವುದರಿಂದ ಅಸಾಂವಿಧಾನಿಕವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಅದರೆ, ಅರ್ಜಿದಾರರ ವಾದವನ್ನು ತೀವ್ರವಾಗಿ ವಿರೋಧಿಸಿದ್ದ ಕೇಂದ್ರದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಎಂ. ಬಿ. ನರಗುಂದ್, ಅರ್ಜಿಯು ನಿರ್ವಹಣೆಗೆ ಯೋಗ್ಯವಲ್ಲ ಎಂದಿದ್ದರು.

ಮುಂದುವರೆದು ಎಂ. ಬಿ. ನರಗುಂದ್, ಕೊಡವರು ವಿಶಿಷ್ಟ ಸಮುದಾಯವಾಗಿದ್ದು, ಅವರಿಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ನೀಡಲಾಗಿರುವ ವಿನಾಯಿತಿಯ ಹಿಂದಿನ ಕಾರಣಗಳನ್ನು ವಾದದ ವೇಳೆ ವಿವರಿಸಿದ್ದರು. "ಕೊಡವರಲ್ಲಿ ವರ್ಗಗಳಿಲ್ಲ, ಈ ಒಂದು ಬುಡಕಟ್ಟಿನಲ್ಲಿ ಜಾತಿ ಪದ್ಧತಿಯೂ ಇಲ್ಲ. ಕೊಡವರು ಕಾವೇರಿ ಮಾತೆಯನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಆರಾಧಿಸುತ್ತಾರೆ. ಅವರು ಒಂದು ಪೂಜಾ ಆಚಾರಣೆಯನ್ನು ಮಾಡುತ್ತಾರೆ. ಅವರೊಳಗೆ ಪುರೋಹಿತ ವರ್ಗವೂ ಕೂಡ ಇಲ್ಲ," ಎಂದು ತಿಳಿಸಿದ್ದರು.
 ಶಸ್ತ್ರಗಳನ್ನು ಸ್ವಯಂ ರಕ್ಷಣೆಗಾಗಿ ಹೊಂದಲು ಅವಕಾಶ

ಶಸ್ತ್ರಗಳನ್ನು ಸ್ವಯಂ ರಕ್ಷಣೆಗಾಗಿ ಹೊಂದಲು ಅವಕಾಶ

ವಾದ- ವಿವಾದ ಪರಿಶೀಲಿಸಿದ ನಂತರ, "ಶಸ್ತ್ರಾಸ್ತ್ರ ಕಾಯಿದೆಯ ಉದ್ದೇಶ ಮತ್ತು ಕಾರಣಗಳನ್ನು ನಾವು ಪರಿಗಣಿಸಿದ್ದು, ಅವರ ಪೂರ್ವಾಪರಗಳು, ಅವರು ಶಸ್ತ್ರ ಹೊಂದುವುದಕ್ಕೆ ಅಡ್ಡಿಯಾಗದ ಪಕ್ಷದಲ್ಲಿ ಶಸ್ತ್ರಗಳನ್ನು ಸ್ವಯಂ ರಕ್ಷಣೆಗಾಗಿ ಹೊಂದಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಬೀಳುವುದಿಲ್ಲ,'' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ತೀರ್ಪು ನೀಡುತ್ತಿದ್ದಂತೆ ಕೊಡಗಿನ ಹಲವೆಡೆ ಜಮ್ಮಾ ಹಿಡುವಳಿದಾರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. "ಕ್ಯಾಪ್ಟನ್ ಚೇತನ್ ಕೂಡ ಲೈಸೆನ್ಸ್ ಪಡೆದು ಕೋವಿ ಹೊಂದಬಹುದು. ಆದರೆ ತನಗೆ ಕೋವಿ ಹಕ್ಕಿನ ವಿನಾಯಿತಿ ಇಲ್ಲವೆಂದು ಕೋರ್ಟ್ ಮೆಟ್ಟಿಲೇರಿರುವುದು ಸರಿಯಲ್ಲ," ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 ದೇಶದ ಸಂವಿಧಾನದಲ್ಲೇ ವಿನಾಯಿತಿ

ದೇಶದ ಸಂವಿಧಾನದಲ್ಲೇ ವಿನಾಯಿತಿ

1959ರ ಸಶಸ್ತ್ರ ಕಾಯ್ದೆ ಸೆಕ್ಷನ್ 3 ಮತ್ತು 4ರ ಅನ್ವಯ ಕೂರ್ಗ್ ಬೈರೇಸ್ ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದುವುದಕ್ಕೆ ದೇಶದ ಸಂವಿಧಾನದಲ್ಲೇ ವಿನಾಯಿತಿ ನೀಡಲಾಗಿದೆ. ಈ ಹಕ್ಕನ್ನು ಯಥಾವತ್ತಾಗಿ ಮುಂದುವರೆಸಬಹುದು ಎಂದು 1963ರಲ್ಲಿ ಕೇಂದ್ರ ಸರ್ಕಾರ ಹೇಳಿತ್ತು.

ಕೊಡಗಿನಲ್ಲಿ ಕೋವಿ ಅಂದರೆ ಅದೊಂದು ಬರೀ ಆಯುಧವಲ್ಲ. ಬದಲಾಗಿ ಅದಕ್ಕೆ ಮಹತ್ವದ ಮತ್ತು ಪೂಜನೀಯ ಸ್ಥಾನವಿದೆ. ಇಲ್ಲಿ ಗಂಡು ಮಗುವೊಂದು ಹುಟ್ಟಿದರೆ, ಯಾರಾದರೂ ಸತ್ತರೂ ಗಾಳಿಯಲ್ಲಿ ಗುಂಡು ಹಾರಿಸಲಾಗುತ್ತದೆ. ಅಷ್ಟೇ ಯಾಕೆ ಕೊಡಗಿನ ಸುಗ್ಗಿ ಹಬ್ಬವಾಗಿರುವ ಹುತ್ತರಿಯಲ್ಲೂ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವಾಗಲೂ ಗುಂಡು ಹಾರಿಸಿ, ಧಾನ್ಯ ಲಕ್ಷ್ಮಿಗೆ ಗೌರವ ಸಲ್ಲಿಸಿ, ಬಳಿಕ ಮೆರವಣಿಗೆ ಮೂಲಕ ತಂದು ಮನೆ ತುಂಬಿಸಿಕೊಳ್ಳಲಾಗುತ್ತದೆ.

(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

Recommended Video

ಪಾಕಿಸ್ತಾನದ ಮಾತಿದೆ ಮಣೆ ಹಾಕದ ಭಾರತ!! | Oneindia Kannada

English summary
The Karnataka High Court on Wednesday dismissed a public interest petition challenging the government's exclusive right of arms for the Kodava Community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X