ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಇಂದು ಸಾಂಪ್ರದಾಯಿಕ ಕಕ್ಕಡ ಪದಿನೆಟ್ಟ್...

|
Google Oneindia Kannada News

ಮಡಿಕೇರಿ, ಆಗಸ್ಟ್ 3: ಹಿಂದಿನ ಕಾಲದಲ್ಲಿ ಕೊಡಗಿನ ಮಳೆ ಹೀಗಿರಲಿಲ್ಲ. ಮಳೆ ಎಂದರೆ ಅದು ಅಂತಿಂಥ ಮಳೆಯಲ್ಲ ಕುಂಭದ್ರೋಣ ಮಳೆ. ಆ ಮಳೆಯಲ್ಲಿಯೇ ಜನ ಕೃಷಿ ಕೆಲಸ ಮಾಡುತ್ತಿದ್ದರು. ಹೊರಗೆ ಒಂದೇ ಸಮನೆ ಸುರಿಯುವ ಮಳೆ... ಆ ಚಳಿ-ಮಳೆಯಲ್ಲಿಯೇ ಗದ್ದೆ ಕೆಲಸ ಮಾಡಿ ಬೆಂಡಾದ ದೇಹ ಬಿಸಿಯನ್ನು ಬಯಸುತ್ತಿರುತ್ತದೆ. ಅಷ್ಟೇ ಅಲ್ಲದೆ ಶೀತಾಂಶದಿಂದ ಕೂಡಿದ ದೇಹದಲ್ಲಿ ಉಷ್ಣಾಂಶವನ್ನು ಜಾಸ್ತಿ ಮಾಡುವುದು ಕೂಡ ಅನಿವಾರ್ಯವಾಗಿತ್ತು.

ಹೀಗಾಗಿಯೇ ಹಿರಿಯರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿದ್ದ ಗಿಡಮೂಲಿಕೆಗಳನ್ನು ಆಯ್ದು ಅದರಲ್ಲಿದ್ದ ಔಷಧೀಯ ಗುಣಗಳನ್ನು ಅರಿತುಕೊಂಡು ಅದನ್ನು ಬಳಸಲಾರಂಭಿಸಿದರಲ್ಲದೆ, ಬಳಕೆಗೂ ದಿನವನ್ನು ನಿಗದಿ ಪಡಿಸಿ ಸಂಪ್ರದಾಯವನ್ನಾಗಿ ಮಾಡಿದರು. ಇಂತಹ ಸಂಪ್ರದಾಯದಲ್ಲಿ ಕಕ್ಕಡ 18 ಆಚರಣೆಯೂ ಒಂದಾಗಿದೆ.

Kakkada Padinett Celebrated In Madikeri

ಕೊಡಗಿನಲ್ಲಿ ಜುಲೈ 17ರಿಂದ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಕಕ್ಕಡ ಅಥವಾ ಆಟಿ ತಿಂಗಳೆಂದು ಕರೆಯಲಾಗುತ್ತದೆ. ಇದು ಕೊಡಗಿನಲ್ಲಿ ಅತಿಹೆಚ್ಚು ಮಳೆ ಸುರಿಯುವ ಸಮಯ ಮಾತ್ರವಲ್ಲ ಬಿಡುವಿಲ್ಲದ ಕೃಷಿ ಕೆಲಸದ ಅವಧಿಯೂ ಹೌದು. ಹಿಂದೆ ಈಗಿನಂತೆ ತೋಟಗಾರಿಕೆ ಬೆಳೆಯಿರುತ್ತಿರಲಿಲ್ಲ. ಹೆಚ್ಚಿನವರು ಭತ್ತದ ಕೃಷಿಯನ್ನೇ ಮಾಡುತ್ತಿದ್ದರು.

 ಆಗಸ್ಟ್ 3ರಂದು ಕೊಡಗಿನಲ್ಲಿ ಆಟಿ ಪದ್ನಟ್ ಸಂಭ್ರಮ ಆಗಸ್ಟ್ 3ರಂದು ಕೊಡಗಿನಲ್ಲಿ ಆಟಿ ಪದ್ನಟ್ ಸಂಭ್ರಮ

ಮಳೆಯ ನೀರನ್ನೇ ನಂಬಿ ಭತ್ತದ ಕೃಷಿಯನ್ನು ಮಾಡುತ್ತಿದ್ದರಿಂದ ಮಳೆಗಾಲದ ಸಮಯದಲ್ಲಿಯೇ ಉಳುಮೆ, ನಾಟಿ ಎಲ್ಲವೂ ನಡೆಯಬೇಕಿತ್ತು. ಹೀಗಾಗಿ ಮಳೆಯಲ್ಲಿಯೇ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಮ್ಮ ಸುತ್ತಮುತ್ತಲಿನ ಗಿಡಮೂಲಿಕೆಗಳನ್ನೇ ಆಶ್ರಯಿಸಿದ್ದರು. ಇಂತಹ ಗಿಡಮೂಲಿಕೆಗಳ ಪೈಕಿ ಆಟಿ ಸೊಪ್ಪು ಕೂಡ ಒಂದಾಗಿದೆ. ವೈಜ್ಞಾನಿಕವಾಗಿ ಇದನ್ನು ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯಲಾಗುತ್ತಿದೆ. ಹಿಂದೆ ಏಲಕ್ಕಿ ತೋಟ, ಕಾಡು, ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಯಥೇಚ್ಚವಾಗಿ ಬೆಳೆಯುತ್ತಿತ್ತು.

Kakkada Padinett Celebrated In Madikeri

ಇನ್ನು ಜಿಲ್ಲೆಯಲ್ಲಿ ಆಗಸ್ಟ್ 3ನ್ನು ಕಕ್ಕಡ ಪದಿನೆಟ್ಟ್ ಎಂದು ಆಚರಿಸಲಾಗುತ್ತಿದೆ. ಈ ದಿನ ಕಾಡಿನಲ್ಲಿರುವ ಮದ್ದು (ಆಟಿ) ಸೊಪ್ಪನ್ನು ತಂದು ಅದರ ರಸದಲ್ಲಿ ಪಾಯಸ ಸೇರಿದಂತೆ ಇನ್ನಿತರ ಖಾದ್ಯ ತಯಾರಿಸಿ ತಿನ್ನುವುದು ಇಲ್ಲಿನ ಸಂಪ್ರದಾಯ. ಈ ಆಟಿ ಸೊಪ್ಪಿನಲ್ಲಿ ಕಕ್ಕಡ ಆರಂಭವಾಗುತ್ತಿದ್ದಂತೆಯೇ ದಿನಕ್ಕೊಂದರಂತೆ ಮದ್ದಿನ ಗುಣಗಳು ಶೇಖರಣೆಯಾಗುತ್ತಾ 18ನೇ ದಿನಕ್ಕೆ 18 ಬಗೆಯ ಔಷಧೀಯ ಗುಣಗಳು ತುಂಬುತ್ತವೆ. ಬಳಿಕ ಒಂದೊಂದೇ ಕಡಿಮೆಯಾಗುತ್ತಾ ಹೋಗುತ್ತವೆ ಎನ್ನುವುದು ಇಲ್ಲಿನ ನಂಬಿಕೆ.

ಆಗಸ್ಟ್ 3ರಂದು ಕೊಡಗಿನಲ್ಲಿ ಈ ಸೊಪ್ಪಿಗೆ ಎಲ್ಲಿಲ್ಲದ ಬೇಡಿಕೆ. ಅಷ್ಟೇ ಅಲ್ಲ ಕೊಡಗಿನಿಂದ ಹೊರಗೆ ಇರುವವರು ಕೂಡ ತಮ್ಮಲ್ಲಿಗೆ ತರಿಸಿಕೊಂಡು ಸೊಪ್ಪಿನಿಂದ ವಿವಿಧ ಖಾದ್ಯ ತಯಾರಿಸಿ ಜೇನು ಬೆರೆಸಿಕೊಂಡು ಸೇವಿಸುತ್ತಾರೆ. ಈ ಸೊಪ್ಪಿನ ರಸದಲ್ಲಿ ಉಷ್ಣಾಂಶದ ಗುಣದೊಂದಿಗೆ ಸುವಾಸನೆಯೂ ಹೇರಳವಾಗಿದೆ. ಇದರಲ್ಲಿ ಖಾದ್ಯ ತಯಾರಿಸುತ್ತಿದ್ದರೆ ಅದರ ಸುವಾಸನೆ ಸುತ್ತಮುತ್ತ ಬೀರುತ್ತದೆ.

 ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ

ಇದರೊಂದಿಗೆ ನಾಟಿಕೋಳಿ ಸಾರು, ಮರದ ಕೆಸುವಿನ ಎಲೆಯ ಪತ್ರೊಡೆ, ಬಿದಿರಿನ ಕಣಿಲೆಯ ವಿವಿಧ ಪದಾರ್ಥಗಳನ್ನು ಮಾಡಲಾಗುತ್ತದೆ. ತಿಂಗಳಾನುಗಟ್ಟಲೆ ಮಳೆ ಸುರಿದು ಹೊರ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಳ್ಳುತ್ತಿದ್ದ ಆ ಕಾಲದಲ್ಲಿ ಇವೆಲ್ಲವೂ ಜನರಿಗೆ ಅವಶ್ಯಕತೆಯಾಗಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಕೊಡಗು ನಿರೀಕ್ಷೆ ಮೀರಿ ಬದಲಾವಣೆಯಾಗುತ್ತಿದ್ದು, ಆಧುನಿಕತೆಯ ಅಬ್ಬರದಲ್ಲಿ ಭತ್ತದ ಗದ್ದೆಗಳು ಸದ್ದಿಲ್ಲದೆ ಮಾಯವಾಗಿ, ನಿವೇಶನ, ಕಾಫಿ ತೋಟಗಳಾಗಿ ಮಾರ್ಪಾಡುಗೊಂಡಿವೆ. ಹೀಗಾಗಿ ಆಟಿ ಸೊಪ್ಪುಗಳು ಕೂಡ ಈಗ ನಾಶವಾಗುತ್ತಾ ಹೋಗುತ್ತಿವೆ. ಜತೆಗೆ ಸಂಪ್ರದಾಯ ಕೂಡ ಆಚರಣೆಗಷ್ಟೆ ಸೀಮಿತವಾಗುತ್ತಿವೆ.

ಅದು ಏನೇ ಇರಲಿ. ಹಿಂದಿನ ಕಾಲದವರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಕೊಡಗಿನವರು ಚಾಚೂ ತಪ್ಪದೆ ಪಾಲಿಸುತ್ತಿರುವುದು ಹೆಮ್ಮೆಯಾಗಿದೆ.

English summary
The elders chose the herbs in their surroundings and began to use the medicinal properties and set a custom for the day to use that medicine. The Kakkad 18 ritual is one of such traditions. Kakkad padinett a tradition in Madikeri district is celebrating on 3rd August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X