• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಳೆಗಾಲದ ದಿನ ಚೇಲಾವರದ ಜಲಧಾರೆ ಅರಸಿ...

By ಬಿ.ಎಂ. ಲವಕುಮಾರ್
|
Google Oneindia Kannada News

ಅದು ಮಳೆಗಾಲದ ದಿನ.. ಒಂದಷ್ಟು ಬಿಡುವು ಮಾಡಿಕೊಂಡು ಕೊಡಗಿನಲ್ಲಿರುವ ಯಾವುದಾದರೊಂದು ಜಲಪಾತಗಳನ್ನು ನೋಡಿಕೊಂಡು ಬರೋಣವೆಂದು ಹೊರಟಿದ್ದೆವು. ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೆಂದೆರೆ ಅದರ ಮಜಾವೇ ಬೇರೆ.

ಕೊಡಗಿನ ನಾಪೋಕ್ಲು ಬಳಿಯಿರುವ ಚೇಲಾವರ ಜಲಪಾತ ನಮ್ಮ ಕಣ್ಣ ಮುಂದಿತ್ತು. ಹೀಗಾಗಿಯೇ ಅದರತ್ತ ತೆರಳುವ ಮನಸ್ಸು ಮಾಡಿದ್ದೆವು. ಮಡಿಕೇರಿಯಿಂದ 32 ಕಿಲೋಮೀಟರ್ ದೂರ ಅಂದರೆ ಚೆಯ್ಯಂಡಾಣೆಯಲ್ಲಿ ಇಳಿದು, ಅಲ್ಲಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಚೇಲಾವರದತ್ತ ಹೆಜ್ಜೆ ಹಾಕತೊಡಗಿದೆವು. ಅಂಕುಡೊಂಕಾದ ರಸ್ತೆಯಲ್ಲಿ ನಡೆಯುತ್ತಾ ಸುತ್ತಲೂ ಕಾಣಸಿಗುವ ರಮಣೀಯ ದೃಶ್ಯಗಳನ್ನು ನೋಡುತ್ತಾ ಸಾಗಿದೆವು. [ಡೆಂಗ್ಯೂ ಸೊಳ್ಳೆಯನ್ನು ನಿರ್ನಾಮ ಮಾಡುವ ಗಪ್ಪಿ ಮೀನು!]

ಸುತ್ತಲೂ ಪರ್ವತ ಶ್ರೇಣಿಗನ್ನೊಳಗೊಂಡ ದಟ್ಟಕಾನನದ ತೂಂಗ್‌ಕೊಲ್ಲಿ ತಲುಪಿದಾಗ ತುಸು ಸಮಾಧಾನವಾಗಿತ್ತು. ಇಲ್ಲಿಂದ ಎಡ ಬದಿಯ ಕಣಿವೆಯಲ್ಲಿ ಹೆಜ್ಜೆಹಾಕಿದಾಗ ಜಲಪಾತದ ಭೋರ್ಗರೆತ ಕಿವಿಗೆ ಬಡಿಯತೊಡಗಿತ್ತು. ಮುಂದೆ ಕಪ್ಪಗಿನ ಹೆಬ್ಬಂಡೆಯೊಂದರ ಮೇಲಿನಿಂದ ಧುಮುಕುವ ಜಲಧಾರೆ ಕಂಡಾಗ ಎಲ್ಲಿಲ್ಲದ ಸಂತೋಷ ಜಲಪಾತದಂತೆಯೇ ಪುಟಿಯತೊಡಗಿತು. ಇಲ್ಲಿನ ಕಾಫಿ ತೋಟದ ರಸ್ತೆಯಲ್ಲಿ ಸಾಗಿದ ನಾವು ಜಲಧಾರೆಯ ಸನಿಹಕ್ಕೆ ತಲುಪಿದ್ದೆವು.[ಭೂಸೇನಾ ಮುಖ್ಯಸ್ಥನ ನೋಡಿ ತೃಪ್ತರಾದ ಮಾಜಿ ಯೋಧರು]

ತಡಿಯಂಡಮೋಳ್ ಪರ್ವತ ಶ್ರೇಣಿಯ ಚೋಮನ ಕುಂದುವಿನಿಂದ ಹರಿದು ಬರುವ ಸೋಮನ ನದಿಯಿಂದ ನಿರ್ಮಿತವಾಗಿರುವ ಜಲಧಾರೆಯನ್ನು ಏಮೆಪಾರೆ ಜಲಪಾತ ಎಂದು ಸ್ಥಳೀಯರು ಕರೆಯುತ್ತಾರೆ. ಬಹುಶಃ ಇಲ್ಲಿನ ಹೆಬ್ಬಂಡೆ ಮೇಲ್ನೋಟಕ್ಕೆ ಆಮೆಯಂತೆ ಕಂಡು ಬರುವುದರಿಂದ ಒಟ್ಟಾಗಿ ಕೊಡವಭಾಷೆಯಲ್ಲಿ ಏಮೆಪಾರೆ ಎಂದು ಕರೆದಿರಬಹುದೇನೋ? ಹೆಬ್ಬಂಡೆಯ ಮೇಲೆ ಸುಮಾರು ನೂರು ಅಡಿಯಷ್ಟು ಎತ್ತರದಿಂದ ಹಾಲುಸುರಿದಂತೆ ಕಾಣುವ ಈ ಜಲಧಾರೆಯನ್ನು ವೀಕ್ಷಿಸುವುದೇ ಮಜಾ.

ವೀಕ್ಷಿಸುತ್ತಾ ನಿಂತವರಿಗೆ ಇಲ್ಲಿ ಮತ್ತೊಂದು ಜಲಪಾತವಿದೆ ಎಂದು ತಿಳಿದಾಗ ಅಚ್ಚರಿಯಾಗಿತ್ತು. ಅದನ್ನು ನೋಡುವ ತವಕದಿಂದ ಎಡಬದಿಯ ರಸ್ತೆಯಲ್ಲಿ ನಡೆಯತೊಡಗಿದೆವು. ಅಲ್ಲಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರೊಂದಿಗೆ ಅಪ್ಪಣೆ ಪಡೆದುಕೊಂಡು ತೋಟದೊಳಗೆ ಸಾಗಿದ್ದೆವು. ತೋಟದಲ್ಲಿದ್ದ ಜಿಗಣೆಗಳು ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದರೆ ಅವುಗಳನ್ನು ತಪ್ಪಿಸಿಕೊಂಡು ನಡೆಯುವುದು ತ್ರಾಸ ಎನಿಸುತ್ತಿತ್ತು. ಅಂತೂ ಸುಲಭವಾಗಿಯೇ ಜಲಪಾತದತ್ತ ತಲುಪಿದ್ದೆವು.[ಮಡಿಕೇರಿಯ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್]

ಇಗ್ಗುತಪ್ಪ ಬೆಟ್ಟದಿಂದ ಹರಿದು ಬರುವ ಬಲಿಯಟ್ರ ನದಿಯಿಂದ ನಿರ್ಮಿತವಾಗಿರುವ ಈ ಮಿನಿಜಲಪಾತ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಹದ್ದು. ಸುಮಾರು ಐವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಮೂರು ಹಂತಗಳಲ್ಲಿ ತನ್ನ ಬೆಡಗನ್ನು ಪ್ರದರ್ಶಿಸುತ್ತಾ ನೋಡುಗರ ಮನಸೆಳೆಯುತ್ತದೆ.[ಕೊಡಗಿನಲ್ಲಿ ಕೈಕೊಟ್ಟ ಮುಂಗಾರು, ಆತಂಕದಲ್ಲಿ ಕೃಷಿಕರು]

ಜಲಧಾರೆಯ ಸೊಬಗನ್ನು ಆಸ್ವಾದಿಸುತ್ತಾ ಕುಳಿತವರಿಗೆ ಸಮಯ ಸರಿದಿದ್ದೇ ತಿಳಿಯಲಿಲ್ಲ. ಜಲಧಾರೆಯ ಚಿತ್ರಗಳನ್ನು ಸೆರೆಹಿಡಿಕೊಂಡು, ಅಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ಮನೆ ಕಡೆಗೆ ಹೊರಟೆವು.

English summary
Chelavara is one of the most beautiful waterfalls in Kodagu district. It is 32 kms from Madikeri. It is wonderful experience to trek and visit this mesmerizing waterfalls during monsoon. Travelogue by BM Lavakumar, Coorg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X