ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಜಿನ ನಗರಿಯ ಬಡ ಶವಗಳ ಸಾಗಾಟದಾರ ಜೀನತ್ ಹಸನ್ ನಿಧನ

By Coovercolly Indresh
|
Google Oneindia Kannada News

ಮಡಿಕೇರಿ, ಜೂನ್ 7: ಮಂಜಿನ ನಗರಿಯಲ್ಲಿ ಸುಮಾರು 5 ದಶಕಗಳ ಹಿಂದೆ ಆಂಬ್ಯುಲೆನ್ಸ್ ಇರಲೇ ಇಲ್ಲ, ಇನ್ನು ಶವ ಸಾಗಾಟಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಇರಲೇ ಇಲ್ಲ. ಇಂದಿಗೂ ಕೂಡ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ ಎಂದರೆ ಆಗಿನ ಕಾಲದಲ್ಲಿ ಹೇಗಿದ್ದಿರಬಹುದು ಊಹಿಸಿಕೊಳ್ಳಿ.

ಆಗ ಹೆಣಗಳನ್ನು ಹೊರಗೆ ಸಾಗಿಸುವುದು ಎಂದರೆ ಬಹಳ ದುಬಾರಿ ಆಗಿರುತ್ತಿತ್ತು. ಮೊದಲಿಗೆ ಹೆಣ ಸಾಗಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಕೊನೆಗೆ ಯಾರನ್ನಾದರೂ ಒಪ್ಪಿಸಿದರೂ ಅವರು ಕೇಳಿದಷ್ಟು ಹಣ ನೀಡಬೇಕಿತ್ತು. ಶವ ಸಾಗಿಸಲಾರದೆ ಎಷ್ಟೋ ವೇಳೆ ಶವ ಇದ್ದ ಊರಿನಲ್ಲೇ ಮಣ್ಣು ಮಾಡಿದ ನಿದರ್ಶನಗಳೂ ನೂರಾರಿವೆ. ಆ ಸಂದರ್ಭದಲ್ಲಿ ಬಡವರಿಗೆ ಆಪದ್ಬಾಂಧವನಾಗಿ ಬಂದಿದ್ದೇ ಜೀನತ್ ಹಸನ್.

ಇವರು ಪ್ರವಾಸಿಗರಿಗಾಗಿ ಟ್ಯಾಕ್ಸಿ ಇಟ್ಟಿದ್ದರೂ ಹೆಚ್ಚು ಸಾಗಿಸಿದ್ದು ಹೆಣಗಳನ್ನೇ. ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣ ಆಗ ಖಾಸಗಿ ಬಸ್ ನಿಲ್ದಾಣ ಮಾತ್ರವಲ್ಲ. ಮಡಿಕೇರಿಯ ಹೃದಯ ಸ್ಥಾನ ಕೂಡ ಹೌದು. ಇಲ್ಲಿನ ಬಾಡಿಗೆ ಕಾರ್ ಸ್ಟಾಂಡ್‌ನಲ್ಲಿ ಕಪ್ಪು, ಹಳದಿ ಬಣ್ಣದ ಅಂಬಾಸಿಡರ್ ಕಾರಿನೊಂದಿಗೆ ನಿಂತಿರುತ್ತಿದ್ದ ಮುಗ್ದ ಜೀವಿಯೇ ಹಸನ್.

Jeenat Hasan Who Cremate Unknown Dead Bodies Passes Away

ಕಾರಿನ ಮೇಲ್ಬದಿಯಲ್ಲಿ ಜೀನತ್ ಎಂದು ದೊಡ್ಡದಾಗಿ ಬರೆಸಿಕೊಂಡಿದ್ದರು. ತನ್ನ ಪ್ರೀತಿಯ ತಂಗಿ ಜೀನತ್ ಹೆಸರನ್ನೇ ಹಸನ್ ಕಾರಿಗೆ ಕೂಡ ಇರಿಸಿದ್ದರು. ಹೀಗಾಗಿ ಕಾರು ಹೆಸರಿನೊಂದಿಗೆ ಜೀನತ್ ಹಸನ್ ಎಂದೇ ಇವರೂ ಗುರತಿಸಿಕೊಂಡರು. ಮಡಿಕೇರಿ ಮಾತ್ರವಲ್ಲ, ಕೊಡಗಿನಲ್ಲಿಯೇ ಹೆಣ ಸಾಗಿಸುವ ವಾಹನವನ್ನು ಬಾಡಿಗೆಗೆ ನೀಡಿದ್ದು ಇದೇ ಹಸನ್. ಹೆಣ ಸಾಗಿಸಲು ಯಾರೂ ಮುಂದೆ ಬಾರದಿದ್ದ ಕಾಲದಲ್ಲಿ, ಹೆಣ ಎಂದರೆ ಭಯಭೀತರಾಗುತ್ತಿದ್ದ ದಿನಗಳಲ್ಲಿ ತನ್ನ ಅಂಬಾಸಿಡರ್ ಕಾರನ್ನೇ ಹೆಣ ಸಾಗಿಸಲು ಬಳಸಿ, ಸಾವನ್ನಪ್ಪಿದವರ ಕುಟುಂಬಕ್ಕೆ ವರದಾನವಾಗಿದ್ದವರು ಈ ಜೀನತ್ ಹಸನ್.

ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಬೇರೆ ಊರಿನವರು, ಹೊರ ಜಿಲ್ಲೆಗಳ ಕಾರ್ಮಿಕರು, ಹೊರ ರಾಜ್ಯದವರೂ ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿದ್ದರು. ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಇಂಥವರ ಮೃತದೇಹಗಳನ್ನು ಕುಟುಂಬದವರು ಇದ್ದ ಕಡೆ ಸಾಗಿಸಲು ಜೀನತ್ ಹಸನ್ ಕಾರು ನೆರವಾಗುತ್ತಿತ್ತು. ಜೀನತ್ ಕಾರಿನ ಹಿಂಬದಿ ಸೀಟ್ ಈ ರೀತಿ ಸಾವನ್ನಪ್ಪಿದವರಿಗೆ ಕೊನೇ ಪಯಣದ ಹಾಸಿಗೆಯಂತಿರುತ್ತಿತ್ತು.

ಸುಮಾರು 40 ವರ್ಷಗಳ ಕಾಲ ಈ ರೀತಿ ಜೀನತ್ ಹಸನ್ ಸಾಗಿಸಿರಬಹುದಾದ ಮೃತದೇಹಗಳ ಸಂಖ್ಯೆ 2500 ಮೀರಿದೆ. ಯಾರೂ ನಂಬದ ರೀತಿಯಲ್ಲಿ ಜೀನತ್ ಹಸನ್ ಕೊನೆ ಉಸಿರೆಳೆದವರ ದೇಹಗಳನ್ನು ಕೊಂಡೊಯ್ದಿದ್ದಾರೆ. ಕೆಲವು ವರ್ಷಗಳಿಂದ ಆಂಬ್ಯುಲೆನ್ಸ್ ವಾಹನಗಳನ್ನು ಖರೀದಿಸಿ ಪುತ್ರನನ್ನೂ ಇದೇ ವೃತ್ತಿಯಲ್ಲಿ ಹಸನ್ ಸಕ್ರಿಯಗೊಳಿಸಿದ್ದರು.

ಹಸನ್ ಅವರ ಈ ಸೇವಾ ಕಾರ್ಯಕ್ಕೆ ಕೈ ತುಂಬಾ ಹಣವಂತೂ ಸಿಕ್ಕುತ್ತಲೇ ಇರಲಿಲ್ಲ. ಬಾಡಿಗೆ ಕಾರಿನಲ್ಲಿ ಹೆಣ ಸಾಗಿಸಿದರೆ ಮೃತನ ಸಂಬಂಧಿಕರು ಚೌಕಾಸಿ ಮಾಡಿ ದುಡ್ಡು ಕೊಡುತ್ತಿದ್ದರು. ಹೀಗಾಗಿ ಹಸನ್ ಹೆಣ ಸಾಗಿಸಿ ಕೈ ಸುಟ್ಟುಕೊಂಡ ಪ್ರಸಂಗವೇ ಜಾಸ್ತಿ. ಇದೆಲ್ಲದರ ಜತೆಗೆ ಬಾಡಿಗೆ ಕಾರು ಇಟ್ಟುಕೊಂಡಿದ್ದರೂ ಹೆಣ ಸಾಗಿಸುವ ಕಾರು ಎಂಬ ಹೆಸರು ಬಂದಿದ್ದರಿಂದಾಗಿ ಹೆಣ ಬಿಟ್ಟರೆ ಬೇರೆ ಯಾರೂ ಇವರ ಕಾರು ಹತ್ತುತ್ತಿರಲಿಲ್ಲ. ವೈದ್ಯರು ಆಸ್ಪತ್ರೆಯಿಂದ ಏರಿಸುತ್ತಿದ್ದ ಹೆಣಗಳಿಗಷ್ಟೇ ಹಸನ್ ಅವರ ಕಾರು ಮೀಸಲಾಗಿತ್ತು.

ಹೆಣ ಸಾಗಿಸಿ ಸಾಗಿಸಿ ಹಸನ್ ಹೈರಾಣಾಗಿದ್ದರು. ಸಾಕಪ್ಪಾ ಸಾಕು ಈ ವೃತ್ತಿ ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಮತ್ತೊಂದು ಹೆಣ ಸಾಗಿಸಲು ಬುಲಾವ್ ಬಂದಾಗ ಹಸನ್ ಅಲ್ಲಿ ಸೇವೆಗೆ ಸಿದ್ಧರಿರುತ್ತಿದ್ದರು. ಎಷ್ಟೋ ವೇಳೆ ಕೊಳೆತ ಹೆಣಗಳನ್ನು ಸಾಗಿಸಿದಾಗ ಅದರಿಂದ ಬರುತ್ತಿದ್ದ ವಾಸನೆಗೆ ಇವರಿಗೆ ಊಟ ಸೇರುತ್ತಿರಲಿಲ್ಲ ಎಂದು ಹೇಳುತ್ತಿದ್ದರು.

ಎರಡು ದಶಕಗಳ ಹಿಂದೆ ಅದೊಂದು ದಿನ ಮಡಿಕೇರಿಯ ವಕೀಲರೋರ್ವರು ಹತ್ಯೆಯಾದರು. ಅವರ ಶವ ಸಾಗಿಸಲು ಜೀನತ್ ಕಾರಿನೊಂದಿಗೆ ಶವಾಗಾರದ ಬಳಿ ಹಸನ್ ಬಂದರು. ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ಮಾಜಿ ಕಾನೂನು ಸಚಿವ ಎಂ.ಸಿ ನಾಣಯ್ಯ ಕೂಡ ಅಲ್ಲಿಗೆ ಬಂದಿದ್ದರು. ಆಗ ಹಸನ್ ಜೀವನದ ಕಥೆ ಅವರಿಗೆ ಹೇಳಿ ಇವರಿಗೆ ಏನಾದರೂ ಸಹಾಯ ಮಾಡಿ ಅಣ್ಣಾ ಎಂದಿದ್ದೆ. ಸ್ಪಂದಿಸಿದ ನಾಣಯ್ಯ ಹಸನ್ ಆಂಬ್ಯುಲೆನ್ಸ್ ಖರೀದಿಸಲು ನೆರವಾದರು ಎಂದು ಮಡಿಕೇರಿಯ ಹಿರಿಯ ವೈದ್ಯ ಡಾ.ಕೆ.ಬಿ ಸೂರ್ಯಕುಮಾರ್ ಸ್ಮರಿಸಿಕೊಂಡರು.

ನಾವು ಜಿಲ್ಲಾಸ್ಪತ್ರೆಯಲ್ಲಿದ್ದಾಗ ಹಸನ್ ನಮಗೆ ಆಪತ್ಬಾಂಧವನಾಗಿದ್ದರು. ಶವಾಗಾರದಲ್ಲಿದ್ದ ಶವಗಳನ್ನು ಹಸನ್ ಆಗ ಸಾಗಿಸದೇ ಇದ್ದಲ್ಲಿ ಸಮಸ್ಯೆಯಾಗುತ್ತಿತ್ತು. ಎಂದೂ ಸಮಸ್ಯೆ ಹೇಳಿಕೊಳ್ಳದೇ ನಕಾರಾತ್ಮಕ ಕಾರಣ ಹೇಳದೆ ಹಸನ್ ಶವಾಗಾರಕ್ಕೆ ಬಂದು ಮೃತ ಶರೀರವನ್ನು ಕಾರಿನಲ್ಲಿ ಕೊಂಡೊಯ್ಯುವ ಮೂಲಕ ಮಾನವೀಯ ಕಾರ್ಯ ಕೈಗೊಂಡಿದ್ದರು ಎಂದೂ ಸೂರ್ಯಕುಮಾರ್, ಜೀನತ್ ಹಸನ್ ಸೇವೆಯ ಬಗ್ಗೆ ಹೇಳಿದರು.

Recommended Video

Gold Loan ಬಗ್ಗೆ ಜನರು ಈಗ ತೆಗೆದುಕೊಳ್ಳುತ್ತಿರುವ ನಿರ್ಧಾರವೇನು | Oneindia Kannada

ಇಷ್ಟು ವರ್ಷಗಳ ಕಾಲ ತನ್ನ ಕಾಯಕದ ಬಗ್ಗೆ ಮರುಗದೇ, ಈ ಸೇವೆಯನ್ನು ದೇವರು ಮೆಚ್ಚುವ ಸೇವೆ ಎಂದು ಭಾವಿಸಿ ಎಂದಿಗೂ ಅಸಹ್ಯ ಪಡದೇ ಹಸನ್ ಹೆಣಗಳನ್ನು ಸಾಗಿಸುತ್ತಾ ಬಂದರು. ಎರಡು ವರ್ಷಗಳಿಂದ ಹಸನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹಸನ್ ಕಾಯಕಕ್ಕೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಸನ್ಮಾನದ ಗೌರವ ನೀಡಿದೆ. ಹಸನ್ ಅವರ ನಿಸ್ವಾರ್ಥ ಜನಸೇವೆಯು ಕೊಡಗು ಜಿಲ್ಲೆಯ ಇತಿಹಾಸದ ಪುಟಗಳಲ್ಲಿರುತ್ತದೆ. ಇಂತಹ ಅಪರೂಪದ ಸೇವಾ ಜೀವಿ ಕೊರೊನಾದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಆಸ್ಪತ್ರೆಯಲ್ಲಿ ತನ್ನ 72ನೇ ವಯಸ್ಸಿನಲ್ಲಿ ಮೇ 30 ರಂದು ಕೊನೆ ಉಸಿರೆಳೆದರು. ಅವರ ಮೃತಶರೀರವನ್ನು ಆಂಬ್ಯುಲೆನ್ಸ್‌ನಲ್ಲಿ ಮಡಿಕೇರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

English summary
Social Servant Zeenat Hasan died to Covid-19 Infection at Sullya Hospital in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X