ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ 'ಕೈ' ಸಾಮ್ರಾಜ್ಯ ಮರುಸ್ಥಾಪನೆ ಸಾಧ್ಯನಾ?

|
Google Oneindia Kannada News

ಮಡಿಕೇರಿ, ಮಾರ್ಚ್‌ 5: ಒಂದು ಕಾಲದಲ್ಲಿ ಪ್ರಾಬಲ್ಯ ಮೆರೆದಿದ್ದ ಕಾಂಗ್ರೆಸ್ ಅನ್ನು ಬದಿಗೆ ತಳ್ಳಿ ಪಾರುಪತ್ಯ ಸಾಧಿಸಿದ ಬಿಜೆಪಿ, ಸದ್ಯ ಕೊಡಗನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದೆ. ಈ ಭದ್ರಕೋಟೆಗೆ ಮತ್ತೆ ಲಗ್ಗೆಯಿಡುವತ್ತ ಕಾಂಗ್ರೆಸ್ ಹರಸಾಹಸ ಪಡುತ್ತಿರುವುದು ಈಗಿನ ಬೆಳವಣಿಗೆಯಾಗಿದೆ.

ಈಗಾಗಲೇ ಜಿಲ್ಲೆಯಾದ್ಯಂತ ಹೆಚ್ಚಿನ ಪ್ರದೇಶಗಳಲ್ಲಿ ಬಿಜೆಪಿ ತಳಮಟ್ಟದಿಂದಲೇ ಸಂಘಟನೆಗೊಂಡಿದೆ. ಜತೆಗೆ ಹಲವು ಗ್ರಾಮ ಪಂಚಾಯಿತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಿರುವಾಗ ಕಾಂಗ್ರೆಸ್ ಜಿಲ್ಲೆಯಲ್ಲಿ ಚೇತರಿಸಿಕೊಳ್ಳುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಮತ್ತೆ ತಳಮಟ್ಟದಿಂದ ಸಂಘಟನೆಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕೊಡಗಿನ ಬೆಳೆಗಾರರೇ ಅಪರಿಚಿತ ಕಾರ್ಮಿಕರತ್ತ ಎಚ್ಚರವಿರಲಿ!ಕೊಡಗಿನ ಬೆಳೆಗಾರರೇ ಅಪರಿಚಿತ ಕಾರ್ಮಿಕರತ್ತ ಎಚ್ಚರವಿರಲಿ!

 ಕಾಂಗ್ರೆಸ್‌ಗೆ ತನ್ನದೇ ಆದ ಮತಬ್ಯಾಂಕ್

ಕಾಂಗ್ರೆಸ್‌ಗೆ ತನ್ನದೇ ಆದ ಮತಬ್ಯಾಂಕ್

ಈ ಹಿಂದೆ ಕೊಡಗಿನ ಕಾಂಗ್ರೆಸ್‌ನಲ್ಲಿ ಹಲವು ಹಿರಿಯ ನಾಯಕರಿದ್ದರು. ಜತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜಿಲ್ಲೆಗೆ ಮೂವರು ಸಚಿವರನ್ನು ನೀಡಿದ ದಾಖಲೆಯೂ ಇದೆ. ಅವತ್ತಿನ ಮಟ್ಟಿಗೆ ಕಾಂಗ್ರೆಸ್ ಜಿಲ್ಲೆಯಲ್ಲಿ ಬಲಯುತವಾಗಿತ್ತು. ಹಿರಿಯ ನಾಯಕರು ಮತ್ತು ಹಿರಿಯ ಮತದಾರರಿಗೆ ಪಕ್ಷದ ಮೇಲೆ ಒಲವಿತ್ತು. ಜತೆಗೆ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಮತಬ್ಯಾಂಕ್‌ಗಳಿದ್ದವು. ಹೀಗಾಗಿ ತಳಮಟ್ಟದಿಂದ ಸಂಘಟನೆ ಮಾಡುವ ಅಗತ್ಯತೆ ಎದುರಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಯಾವ ನಾಯಕರು ತಳಮಟ್ಟದಿಂದ ಇಳಿದು ಸಂಘಟನೆ ಮಾಡುವ ಕೆಲಸಕ್ಕೂ ಹೋಗಲಿಲ್ಲ.

ತದನಂತರ ಕಾಂಗ್ರೆಸ್‌ಗೆ ಪೈಪೋಟಿ ನೀಡುವಂತೆ ಜನತಾ ದಳ ಬೆಳೆಯಲಾರಂಭಿಸಿತು. ಜನತಾ ದಳದಲ್ಲಿಯೂ ಹಲವಾರು ನಾಯಕರಿದ್ದರು. ಆದರೆ ಯಾವಾಗ ಜನತಾ ದಳ ಇಬ್ಭಾಗವಾಯಿತೋ ಕೊಡಗಿನಲ್ಲಿದ್ದ ಹೆಚ್ಚಿನ ನಾಯಕರು ತಟಸ್ಥರಾಗಿ ಬಿಟ್ಟರು. ಮತ್ತೆ ಕೆಲವರು ಕಾಂಗ್ರೆಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳತ್ತ ಮುಖ ಮಾಡಿದರು. ಆದರೆ ಅಷ್ಟರಲ್ಲಾಗಲೇ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ನಿಧಾನವಾಗಿ ಸಂಘಟನೆಗೊಳ್ಳಲು ಆರಂಭಿಸಿತು.

Breaking: ವಿಧಾನ ಪರಿಷತ್ ಫಲಿತಾಂಶ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವುBreaking: ವಿಧಾನ ಪರಿಷತ್ ಫಲಿತಾಂಶ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು

 ಕೊಡಗಿನಲ್ಲಿ ಜಿಗಿತುಕೊಂಡ ಬಿಜೆಪಿ

ಕೊಡಗಿನಲ್ಲಿ ಜಿಗಿತುಕೊಂಡ ಬಿಜೆಪಿ

1990ರ ಅವಧಿಯಲ್ಲಿ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲು ದೇಶಾದ್ಯಂತ ನಡೆಸಿದ ರಥಯಾತ್ರೆ ಕೊಡಗಿನಲ್ಲಿ ಭಾರೀ ಪರಿಣಾಮವನ್ನುಂಟು ಮಾಡಿತು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯತ್ತ ಆಸಕ್ತಿ ತೋರಿದರು. ಇದರ ಪರಿಣಾಮ 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾದರು.

ತದನಂತರ ಬಿಜೆಪಿಯಲ್ಲಿನ ಒಂದಷ್ಟು ಭಿನ್ನಾಭಿಪ್ರಾಯಗಳಿಂದಾಗಿ ಆಗ ಮಡಿಕೇರಿ ಶಾಸಕರಾಗಿದ್ದ ದಿ. ಡಿ.ಎಸ್. ಮಾದಪ್ಪ ಅವರು ಪಕ್ಷವನ್ನು ತ್ಯಜಿಸಿದರು. ಹೀಗಾಗಿ ಕಾಂಗ್ರೆಸ್ ಮತ್ತೆ ಚೇತರಿಕೆ ಕಂಡುಕೊಂಡಿತು. ಅದಾದ ನಂತರ ಬಿಜೆಪಿ ಮತ್ತೆ ಸಂಘಟನೆಗಿಳಿಯಿತು. ನಿಧಾನವಾಗಿ ಮತದಾರರನ್ನು ಸೆಳೆಯುವ ಮೂಲಕ ಗಟ್ಟಿಯಾಗತೊಡಗಿತು. ಅದರಲ್ಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ವೇಳೆ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದು ಕೊಡಗಿನಲ್ಲಿ ಸೃಷ್ಟಿಯಾದ ಗಲಭೆ ಪಕ್ಷದ ಮೇಲೆ ಭಾರೀ ಪರಿಣಾಮ ಬೀರಿದೆ.

 ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ

ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ

ಕಾಂಗ್ರೆಸ್‌ನಲ್ಲಿದ್ದ ಪ್ರಮುಖ ನಾಯಕರು ತೆರೆಮರೆಗೆ ಸರಿಯುತ್ತಿದ್ದಂತೆಯೇ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಪಕ್ಷಕ್ಕೆ ಭಾರೀ ಹೊಡೆತ ನೀಡಿದ್ದಂತು ನಿಜ. ಕಳೆದ ಎರಡು ದಶಕಗಳಿಂದ ಬಿಜೆಪಿ ಮುಂದೆ ಮಂಕಾದ ಕಾಂಗ್ರೆಸ್ ನಾಯಕರು ಪಕ್ಷದ ಸಂಘಟನೆ ಮಾಡುವಲ್ಲಿ ಸೋತಿದ್ದಾರೆ. ಚುನಾವಣೆ ಕಾಲದಲ್ಲಿ ಎಚ್ಚೆತ್ತುಕೊಂಡು ಬಳಿಕ ಮೌನಕ್ಕೆ ಶರಣಾಗುವುದು, ಅಲ್ಲದೆ ಎಲ್ಲರನ್ನು ಒಟ್ಟಾಗಿ ಕರೆದೊಯ್ಯುವ ಪ್ರಬಲ ನಾಯಕ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವನ್ನು ವಹಿಸದಿರುವುದು ಹೀಗೆ ಹಲವು ದೌರ್ಬಲ್ಯಗಳು ಕಾಂಗ್ರೆಸ್ ಜಿಲ್ಲೆಯಲ್ಲಿ ನೆಲ ಕಚ್ಚಲು ಕಾರಣವಾಗಿದೆ ಎಂದರೆ ಅಚ್ಚರಿಪಡಬೇಕಾಗಿಲ್ಲ.

ಸದ್ಯ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮರುಸ್ಥಾಪನೆಗೆ ಪಣ ತೊಟ್ಟಿದ್ದಾರೆ. ಆದರೆ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕಾರ್ಯಕ್ರಮಗಳಿಗೆ ನಿರೀಕ್ಷಿಸಿದಂತೆ ಮುಖಂಡರು, ಕಾರ್ಯಕರ್ತರು ಆಗಮಿಸುತ್ತಿಲ್ಲ. ಕೆಪಿಸಿಸಿ ಆರಂಭಿಸಿರುವ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯವನ್ನು ಜಿಲ್ಲೆಯಲ್ಲಿ ಸಮಗ್ರವಾಗಿ ನಡೆಸಿ ಒಂದು ಲಕ್ಷ ಸದಸ್ಯತ್ವದ ಗುರಿಯನ್ನು ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ ಹೊಂದಿದ್ದು, ಇದಕ್ಕೆ ಇತರರು ಸಾಥ್ ನೀಡುತ್ತಾರಾ ಎಂಬುದು ಕೂಡ ಪ್ರಶ್ನೆಯಾಗಿ ಉಳಿದಿದೆ. ಜಿಲ್ಲಾ ನಾಯಕರು ಜಿಲ್ಲೆಯಾದ್ಯಂತ ಬ್ಲಾಕ್ ಮಟ್ಟದ ಸಭೆಗಳನ್ನು ನಡೆಸಿ ಸದಸ್ಯತ್ವ ನೋಂದಣಿಯ ಕುರಿತಂತೆ ಅರಿವು ಮೂಡಿಸುತ್ತಿದ್ದರೂ ಈ ಸಭೆಗಳಿಗೆ ಹೇಳಿಕೊಳ್ಳುವಂತಹ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾದಂತೆ ಕಾಣುತ್ತಿಲ್ಲ.

 2023ರ ಚುನಾವಣೆಗೆ ತಯಾರಿ ಹೇಗೆ?

2023ರ ಚುನಾವಣೆಗೆ ತಯಾರಿ ಹೇಗೆ?

ಹೀಗಾಗಿಯೇ ಖಡಕ್ ಎಚ್ಚರಿಕೆಯ ಸಂದೇಶವನ್ನು ಜಿಲ್ಲೆಯ ಕೈ ಮುಖಂಡರು ಮತ್ತು ಕಾರ್ಯಕರ್ತರಿಗೆ ರವಾನಿಸಿರುವ ಧರ್ಮಜ ಉತ್ತಪ್ಪ ಅವರು, ಸದಸ್ಯತ್ವ ನೋಂದಣಿಯನ್ನು ಹೆಚ್ಚಿಸುವುದರೊಂದಿಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಬಹುತೇಕ ಕಾಂಗ್ರೆಸ್‌ನ ಮುಖಂಡರು ಗೈರು ಹಾಜರಾಗಿದ್ದು ಕಂಡು ಬಂದಿದೆ. ಇದೆಲ್ಲವನ್ನು ಗಮನಿಸಿದರೆ ಕೊಡಗಿನ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ ಇದೆಲ್ಲವನ್ನು ಸರಿದೂಗಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಯಾವ ರೀತಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ತಯಾರಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Recommended Video

ನಮ್ಮ ಹೋರಾಟ ನಿಲ್ಲೋದೆ ಇಲ್ಲಾ | Oneindia Kannada

English summary
In most areas throughout the Kodagu district, the BJP is organized at the grassroots level and the Congress party has to be organized at the grassroots level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X