ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೂಜಿಮಲೆ-ಸುಟ್ಟತ್‍ಮಲೆಯಲ್ಲಿ ಮತ್ತೆ ಹರಳುಕಲ್ಲು ದಂಧೆ!

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಜೂ.2: ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯವಲಯದ ಕೂಜಿಮಲೆ ಮತ್ತು ಸುಟ್ಟತ್‍ಮಲೆಯಲ್ಲಿ ಮತ್ತೆ ಹರಳುಕಲ್ಲಿನ ದಂಧೆ ಆರಂಭವಾಗಿದ್ದು, ಇನ್ನು ಇಲ್ಲಿ ಹರಳು ಕಲ್ಲಿಗಾಗಿ ಹೊಡೆದಾಡಿಯೋ? ಗುಡ್ಡಕುಸಿದೋ ಇನ್ನೆಷ್ಟು ಮಂದಿ ಬಲಿಯಾಗಲಿದ್ದಾರೋ? ಎಂಬ ಭಯ ಕಾಡತೊಡಗಿದೆ.

ಒಂದು ಕಾಲದಲ್ಲಿ ಹರಳುಕಲ್ಲು ದಂಧೆಯಿಂದಾಗಿ ಹೊಡೆದಾಟ, ಬಡಿದಾಟ ಸೇರಿದಂತೆ ಹಲವು ಮಂದಿಯ ಪ್ರಾಣಕ್ಕೆ ಕುತ್ತು ತಂದಿದ್ದ ಸುಟ್ಟತ್‍ಮಲೆ ಮತ್ತು ಕೂಜಿಮಲೆ ಹರಳು ಕಲ್ಲಿನ ದಂಧೆಗೆ ಕಡಿವಾಣ ಹಾಕಲಾಗಿತ್ತು. ಇದೀಗ ಮತ್ತೆ ಇಲ್ಲಿ ದಂಧೆಯನ್ನು ಸದ್ದಿಲ್ಲದೆ ಆರಂಭಿಸಿರುವುದು ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ದಂಧೆಗೆ ಕಡಿವಾಣ ಹಾಕದೆ ಹೋದರೆ ಇನ್ನೊಂದಷ್ಟು ಮಂದಿಯ ಹೆಣ ಬೀಳುವುದಂತು ಸತ್ಯ.

ಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದು ಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದು

ಕಳೆದ ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್‍ಮಲೆ ಎಂಬ ಬೆಟ್ಟಗಳಲ್ಲಿ ಕೆಂಪು ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಅವತ್ತು ಕೆಜಿಯೊಂದಕ್ಕೆ ಐನೂರು ರೂ.ನಿಂದ ಆರಂಭವಾಗಿ ಸಾವಿರಾರು ರೂ. ಬೆಲೆ ದೊರೆಯುತ್ತಿತ್ತು. ಹೀಗಾಗಿ ಬೆಟ್ಟದಲ್ಲಿ ಸುರಂಗ ಕೊರೆದು ಕಲ್ಲು ತೆಗೆಯುವ ದಂಧೆ ರಾತ್ರೋರಾತ್ರಿ ನಡೆಯತೊಡಗಿತ್ತು.

ಈ ದಂಧೆಗೆ ಯಾರ ಕುಮ್ಮಕ್ಕಿದೆ ಎಂಬುದೇ ಗೊತ್ತಾದಂತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ದಂಧೆ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಸದ್ಯ ಹರಳುಕಲ್ಲಿನ ಬೆಲೆ ಕೆಜಿವೊಂದಕ್ಕೆ 25ಸಾವಿರ ಸಿಗುತ್ತಿದೆ ಎನ್ನಲಾಗುತ್ತಿದೆ. ಕೂಜಿಮಲೆ ಮತ್ತು ಸುಟ್ಟತ್ ಮಲೆಯಲ್ಲಿ ದಂಧೆ ನಡೆಯುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಪೆರಾಜೆ ಎಂಬಲ್ಲಿ ಹರಳು ಕಲ್ಲು ಸಾಗಾಟ ಪ್ರಕರಣ ಪತ್ತೆಯಾಗಿತ್ತು.

ಬಳ್ಳಾರಿ ಗಣಿ ಹಗರಣದ ಬಗ್ಗೆ ಈಗ ಮಾತಾಡೋರೇ ಇಲ್ಲ! ಬಳ್ಳಾರಿ ಗಣಿ ಹಗರಣದ ಬಗ್ಗೆ ಈಗ ಮಾತಾಡೋರೇ ಇಲ್ಲ!

ಹರಳು ಕಲ್ಲು ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾದರೂ ಅವರು ಸದ್ಯ ಮೌನವಾಗಿದ್ದಾರೆ ಕಾರಣ ಹರಳು ಕಲ್ಲುಗಳು ಅರಣ್ಯದಲ್ಲಿ ಸಿಗುತ್ತಿದ್ದು, ಅರಣ್ಯ ಇಲಾಖೆಯ ಸುಪರ್ಧಿಯಲ್ಲಿದೆ. ಜತೆಗೆ ವನ್ಯಜೀವಿ ಸಂರಕ್ಷಿತ ಮೀಸಲು ಅರಣ್ಯದೊಳಗೆ ಹೋಗುವಂತಿಲ್ಲವಾದ್ದರಿಂದ ಅರಣ್ಯ ಇಲಾಖೆಯೇ ಕ್ರಮ ಕೈಗೊಳ್ಳಬೇಕಾಗಿದೆ.

ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ದಂಧೆ ನಡೆಯುತ್ತಿಲ್ಲ. ಎಲ್ಲವನ್ನು ತಡೆಗಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ ಹರಳು ಕಲ್ಲುಗಳು ಮಾತ್ರ ಸದ್ದಿಲ್ಲದೆ ಬಿಕರಿಯಾಗುತ್ತಿದ್ದು, ಎಲ್ಲಿಂದ ಈ ಕಲ್ಲುಗಳು ಬರುತ್ತಿವೆ ಎಂದು ಕೇಳಿದರೆ ಸುಟ್ಟತ್‍ಮಲೆ ಮತ್ತು ಕೂಜಿ ಮಲೆಯತ್ತ ಜನ ಕೈ ತೋರಿಸುತ್ತಿದ್ದಾರೆ.

ಹರಳು ಕಲ್ಲು ತೆಗೆಯಲು ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಿಂದ ತಂಡ

ಹರಳು ಕಲ್ಲು ತೆಗೆಯಲು ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಿಂದ ತಂಡ

ಹರಳು ಕಲ್ಲು ತೆಗೆಯಲೆಂದೇ ಕೊಡಗಿನಿಂದ ತಂಡಗಳು ಹೋದರೆ ಅತ್ತ ದಕ್ಷಿಣಕನ್ನಡ ಜಿಲ್ಲೆಕಡೆಯಿಂದಲೂ ಜನ ಬರತೊಡಗಿದ್ದರು. ಇವರ ನಡುವೆ ಭಿನ್ನಾಭಿಪ್ರಾಯ ಜಗಳಗಳು ಆರಂಭವಾಗಿದ್ದವಲ್ಲದೆ ಹೆಣಗಳು ಬಿದ್ದಿದ್ದವು. ಇನ್ನು ಸುರಂಗಕೊರೆದು ಹರಳುಕಲ್ಲು ತೆಗೆಯುವ ವೇಳೆ ಸುರಂಗ ಕುಸಿದು ಅಲ್ಲಿಯೇ ಸಮಾಧಿಯಾದ ಘಟನೆಗಳು ಕೂಡ ನಡೆದಿದ್ದವು. ಹರಳು ಕಲ್ಲಿಗಾಗಿ ಜಗಳಗಳು ಆರಂಭವಾಗಿ ಯಾರ ಹೆಣ ಯಾವಾಗ ಬೀಳುತ್ತೋ ಎಂಬ ಭಯ ಕಾಡತೊಡಗಿತ್ತು.

ಕಲ್ಲಿದ್ದಲು ಗಣಿಗಾರಿಕೆಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿದ ಕೇಂದ್ರ ಕಲ್ಲಿದ್ದಲು ಗಣಿಗಾರಿಕೆಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿದ ಕೇಂದ್ರ

ಟಾರ್ಚ್ ಬೆಳಕಿನಲ್ಲೇ ಗುಡ್ಡ ಅಗೆದ ದಂಧೆಕೋರರು

ಟಾರ್ಚ್ ಬೆಳಕಿನಲ್ಲೇ ಗುಡ್ಡ ಅಗೆದ ದಂಧೆಕೋರರು

ಒಂದು ತಂಡ ಮಾಡಿಕೊಂಡು ರಾತ್ರಿ ವೇಳೆ ಹೋಗುತ್ತಿದ್ದ ಜನ ಟಾರ್ಚ್ ಬೆಳಕಿನಲ್ಲಿಯೇ ಗುಡ್ಡ ಅಗೆದು ಕಲ್ಲನ್ನು ಈಚೆಗೆ ತೆಗೆದು ಅದನ್ನು ಹೊತ್ತು ತಂದು ನದಿ ತೀರದಲ್ಲಿ ತೊಳೆದು ಕಲ್ಲನ್ನು ಆಯ್ದು ಶೇಖರಿಸಿಟ್ಟುಕೊಂಡು ಬಳಿಕ ಅದನ್ನು ಮಾರಾಟ ಮಾಡುತ್ತಿದ್ದರು. ಈ ಕಲ್ಲನ್ನು ಖರೀದಿಸಲೆಂದೇ ರಾಜಸ್ತಾನ್, ಕೇರಳ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ವ್ಯಾಪಾರಿಗಳು ಬರತೊಡಗಿದ್ದರು.

ಹರಳು ಕಲ್ಲಿಗೆ ಹಣ ಸಿಗುತ್ತಿದ್ದರಿಂದ ಜನ ಇದರತ್ತ ಆಸಕ್ತಿ ವಹಿಸತೊಡಗಿದ್ದರು. ಎಲ್ಲರ ಜೇಬಲ್ಲೂ ಹಣ ಓಡಾಡತೊಡಗಿತ್ತು. ಆ ಕಾಲದಲ್ಲಿ ಸುಳ್ಯ ತಾಲೂಕಿನಿಂದ ಸುಮಾರು 70 ಜೀಪುಗಳು ಬುಕ್ ಆಗಿದ್ದವು. ಒಂದೇ ಕಡೆ ಇಷ್ಟೊಂದು ಜೀಪುಗಳಿಗೆ ಬುಕ್ ಆಗಿದ್ದರಿಂದ ಅಚ್ಚರಿಗೊಂಡ ಮಹೀಂದ್ರ ಕಂಪನಿಯ ಅಧಿಕಾರಿಗಳು ಇಷ್ಟೊಂದು ಜೀಪ್‍ಗಳಿಗೆ ಬೇಡಿಕೆ ಬಂದಿವೆ ಎಂದರೆ ಬಹುಶಃ ಸುಳ್ಯ ದೊಡ್ಡ ನಗರವಿರಬೇಕು. ಅಲ್ಲೊಂದು ಶೋ ರೂಂ ತೆರೆಯುವ ಆಲೋಚನೆ ಮಾಡಿದ್ದರಲ್ಲದೆ, ಸುಳ್ಯವನ್ನು ಬಂದು ನೋಡಿದ ಅವರು ಬೆಚ್ಚಿ ಬಿದ್ದಿದ್ದರು.
ಮೊದಲು ಹರಳು ಕಾಣಿಸಿಕೊಂಡಿದ್ದು ಕೂಜಿಮಲೆಯಲ್ಲಿ

ಮೊದಲು ಹರಳು ಕಾಣಿಸಿಕೊಂಡಿದ್ದು ಕೂಜಿಮಲೆಯಲ್ಲಿ

ಮೊಟ್ಟ ಮೊದಲ ಬಾರಿಗೆ 1990ರಲ್ಲಿ ಕೂಜಿಮಲೆಯಲ್ಲಿ ಈ ಹರಳು ಕಾಣಿಸಿಕೊಂಡಿತ್ತು. ಆದರೆ ಇಲ್ಲಿನ ಜನಕ್ಕೆ ಇದು ಸಾವಿರಾರು ರೂ. ಬೆಲೆಬಾಳುವ ವಸ್ತು ಎಂಬುದು ಮಾತ್ರ ಗೊತ್ತೇ ಆಗಿರಲಿಲ್ಲ. ಸುಬ್ರಹ್ಮಣ್ಯ ಮತ್ತು ಕೊಡಗು ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಕಡಮಕಲ್ ರಬ್ಬರ್ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೊಬ್ಬನಿಗೆ ಹರಳು ಕಲ್ಲಿನ ಮರ್ಮ ಗೊತ್ತಾಗಿತ್ತು. ಆತ ಅದನ್ನು ತಂದು ಹೊರಗಡೆ ಮಾರತೊಡಗಿದ್ದನು. ಇದರಿಂದ ಆತ ದಿನ ಕಳೆದಂತೆ ಶ್ರೀಮಂತನಾಗತೊಡಗಿದ್ದನು.

ಆತ ದಿಢೀರ್ ಶ್ರೀಮಂತನಾದ ಬಗ್ಗೆ ಕುತೂಹಲ ಇಲ್ಲಿನ ಗ್ರಾಮಸ್ಥರನ್ನು ಕಾಡಿತ್ತಲ್ಲದೆ, ಆತನ ಬೆನ್ನತ್ತಿ ಹೋದವರಿಗೆ ಹರಳು ಕಲ್ಲಿನ ದಂಧೆಯ ಕರಾಳ ಮುಖ ಗೋಚರಿಸಿತ್ತು.
ಒಂದಷ್ಟು ವರ್ಷಗಳ ಕಾಲ ಸುಟ್ಟತ್‍ಮಲೆ ಮತ್ತು ಕೂಜಿಮಲೆಯಲ್ಲಿ ಹರಳು ಕಲ್ಲು ದಂಧೆ ಎಗ್ಗಿಲ್ಲದೆ ಸಾಗಿತ್ತು. ಹಲವು ಕಾರಣಗಳಿಗೆ ಇಲ್ಲಿ ಹಲವರ ಹೆಣವೂ ಬಿದ್ದಿತ್ತು. ಕೊನೆಗೂ ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ದಂಧೆಗೆ ಪೂರ್ಣ ವಿರಾಮ ಹಾಡಿತ್ತು. ಆದರೆ ಇದೀಗ ಮತ್ತೆ ಇಲ್ಲಿ ದಂಧೆ ಆರಂಭವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಕಲ್ಲುಗಳು ಸಾವಿರಾರು ರೂಪಾಯಿ ಬೆಲೆ ಬಾಳುತ್ತದೆ

ಕಲ್ಲುಗಳು ಸಾವಿರಾರು ರೂಪಾಯಿ ಬೆಲೆ ಬಾಳುತ್ತದೆ

ಗುಡ್ಡದಲ್ಲಿರುವ ಹರಳು ಕಲ್ಲು ಸಾವಿರಾರು ರೂ. ಬೆಲೆ ಬಾಳುತ್ತದೆ ಎಂಬುದು ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಬೆಟ್ಟಕ್ಕೆ ಲಗ್ಗೆಯಿಡತೊಡಗಿದರು. ಬೆಟ್ಟವನ್ನು ಕೊರೆದು ಹರಳು ಕಲ್ಲನ್ನು ಹುಡುಕತೊಡಗಿದರು. ಅತ್ತ ದಕ್ಷಿಣಕನ್ನಡದವರು, ಇತ್ತ ಕೊಡಗಿನವರು ಬೆಟ್ಟದತ್ತ ತಂಡ ಕಟ್ಟಿಕೊಂಡು ತೆರಳತೊಡಗಿದರು. ಅರಣ್ಯ ಇಲಾಖೆಗೆ ತಿಳಿಯುವ ಹೊತ್ತಿಗೆ ಗುಡ್ಡಗಳು ಕರಗಿ ಅರಣ್ಯ ನಾಶವಾಗಿತ್ತು. ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿಯನ್ನಿಟ್ಟುಕೊಂಡು ದಂಧೆಕೋರರನ್ನು ತಡೆಯುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿರಲಿಲ್ಲ. ಜತೆಗೆ ಹರಳು ಕಲ್ಲು ತೆಗೆಯಲು ಹೋಗುತ್ತಿದ್ದವರು ಕೋವಿ ಕತ್ತಿ, ಗುದ್ದಲಿ ಸೇರಿದಂತೆ ಮಾರಕಾಯುಧದೊಂದಿಗೆ ಹೋಗುತ್ತಿದ್ದರಿಂದ ಸಿಬ್ಬಂದಿಗಳು ಬೆಟ್ಟದ ತುದಿಯೇರಿ ಬಂದು ದಾಳಿ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಅತ್ತ ಕಡೆ ಸುಳಿಯುವ ಧೈರ್ಯವೂ ಇರಲಿಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ಹೊತ್ತು ಕಾವಲಿದ್ದರೆ ಪ್ರಯೋಜನವಿಲ್ಲ

ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ಹೊತ್ತು ಕಾವಲಿದ್ದರೆ ಪ್ರಯೋಜನವಿಲ್ಲ

ಹಗಲು ಹೊತ್ತಿನಲ್ಲೇ ಅರಣ್ಯ ಅಧಿಕಾರಿಗಳು ದಾಳಿ ಮಾಡುವ ರೂಪಿಸಿದ್ದರೂ ಹರಳು ಕಲ್ಲು ತೆಗೆಯುವ ತಂಡದ ಸದಸ್ಯರು ಆಯಕಟ್ಟಿನಲ್ಲಿ ಕುಳಿತು ಅರಣ್ಯ ಸಿಬ್ಬಂದಿ ಬರುತ್ತಿದ್ದಾರಾ ಎಂದು ಕಾವಲು ಕಾಯುತ್ತಿದ್ದರು. ಅರಣ್ಯ ಇಲಾಖೆ ಅಥವಾ ಪೊಲೀಸರು ಬರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಪಟಾಕಿ ಸಿಡಿಸುತ್ತಿದ್ದರು.

ಪಟಾಕಿ ಶಬ್ದವು ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟದತ್ತ ಬರುತ್ತಿದ್ದಾರೆ ಎಂಬುದರ ಸಂಕೇತವಾಗಿತ್ತು. ಈ ವೇಳೆ ಹರಳು ಕಲ್ಲು ತೆಗೆಯುತ್ತಿದ್ದವರು ಅಲ್ಲಿಂದ ಪರಾರಿಯಾಗಿ ಬಿಡುತ್ತಿದ್ದರು. ಹೀಗಾಗಿ ಹರಳು ಕಲ್ಲು ತೆಗೆಯುವವರನ್ನು ಹಿಡಿದು ಬಂಧಿಸುವುದು ಅರಣ್ಯ ಇಲಾಖೆಗೆ ಕಷ್ಟ ಸಾಧ್ಯವಾಗಿತ್ತು.

ಅರಣ್ಯ ಇಲಾಖೆ ಮಾತ್ರವಲ್ಲದೆ, ಎರಡು ಜಿಲ್ಲೆಗಳ ಜಿಲ್ಲಾಡಳಿತ ಇತ್ತ ಗಮನಹರಿಸಿ ಕೂಜಿಮಲೆ ಮತ್ತು ಸುಟ್ಟತ್‍ಮಲೆಯತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿ ದಂಧೆ ನಡೆಸುವವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕಾಗಿದೆ. ಇಲ್ಲದೆ ಹೋದರೆ ಪಶ್ಚಿಮ ಘಟ್ಟದ ಅರಣ್ಯ ದಂಧೆಕೋರರ ಕೈಗೆ ಸಿಕ್ಕಿ ನಾಶವಾಗುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಹರಳು ಕಲ್ಲು ಹೊರತೆಗೆಯಲು ಸುರಂಗ ಕೊರೆಯುತ್ತಿದ್ದು, ಇದರಿಂದ ಗುಡ್ಡ ಕುಸಿದು ಅರಣ್ಯ ನಾಶವಾಗುತ್ತಿದೆ.

ಜತೆಗೆ ಸುರಂಗದಲ್ಲಿ ಸಿಕ್ಕಿ ಜನರೂ ಹೆಣವಾಗುತ್ತಿದ್ದಾರೆ. ಇಷ್ಟಕ್ಕೂ ಕೂಜಿಮಲೆ ಮತ್ತು ಸುಟ್ಟತ್‍ಮಲೆಯಲ್ಲಿ ಸಿಗುವ ಹರಳು ಕೊರೆಂಡಂ ಎಂಬ ಹೆಸರಿನದ್ದಾಗಿದ್ದು ಇದಕ್ಕೆ ಹೆಚ್ಚಿನ ಬೆಲೆ ಇಲ್ಲದಾದರೂ ಬೇಡಿಕೆಯಂತು ಇದ್ದೇ ಇದೆ. ಹೀಗಾಗಿ ಜನ ಕೈತುಂಬಾ ಹಣ ಸಿಗುತ್ತದೆ ಎಂಬ ಕಾರಣಕ್ಕೆ ರಿಸ್ಕ್ ತೆಗೆದುಕೊಂಡು ಗುಡ್ಡದಲ್ಲಿ ಸುರಂಗ ತೆಗೆದು ಹರಳು ಹುಡುಕುತ್ತಿದ್ದಾರೆ. ಇದಕ್ಕೆ ಈಗಿನಿಂದಲೇ ಕಡಿವಾಣ ಬೀಳಲೇ ಬೇಕಿದೆ.

English summary
Illegal stone mining in Koojimalai and Suttathmalai area of Pushpagiri forest range has worried land sliding in surrounding villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X