ವಿನಯ್ ಕುಲಕರ್ಣಿ ಬಂಧನ: "ನಾನೇನೂ ಹೇಳುವುದಕ್ಕೆ ಬರಲ್ಲ"
ಮಡಿಕೇರಿ, ನವೆಂಬರ್ 5: ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಗುರುವಾರ ಬಂಧಿಸಿದೆ. ಪ್ರಕರಣದಲ್ಲಿ ಸಿಬಿಐ ತನ್ನ ಕೆಲಸ ತಾನು ಮಾಡುತ್ತಿದೆ. ಅದರಲ್ಲಿ ನಾನೇನೂ ಹೇಳುವುದಕ್ಕೆ ಬರುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಮಡಿಕೇರಿ ಸಮೀಪದ ತಾಜ್ ರೆಸಾರ್ಟ್ ಮತ್ತು ಸ್ಪಾದಲ್ಲಿ ಮೂರು ದಿನಗಳ ಕಾಲ ಖಾಸಗಿ ವಾಸ್ತವ್ಯ ಹೂಡಲು ಬಂದಿರುವ ಸಂದರ್ಭದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಕೇರಳ ಗಡಿಯಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ಬಗ್ಗೆ ಸಚಿವ ಈಶ್ವರಪ್ಪ ಸ್ಪಷ್ಟನೆ
ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿರುವುದಕ್ಕೆ ಬಿಜೆಪಿ ವಿನಾಕಾರಣ ಸಿಬಿಐಯನ್ನು ಅಸ್ತ್ರವಾಗಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿತ್ತು.
ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸದ ಕುರಿತು ಮಾತನಾಡಿದ ಸಚಿವರು, ಅದು ಅಪೇಕ್ಷಿತರಿಗೆ ಮಾತ್ರವೇ ನಡೆಯುತ್ತಿರುವ ಸಭೆ. ಅವರಿಗೆ ಮಾತ್ರವೇ ಆಹ್ವಾನವಿತ್ತು. ಕೊಡಗಿಗೆ ಈ ಹಿಂದೆಯೇ ಭೇಟಿ ನೀಡಬೇಕಾಗಿತ್ತು. ಆದರೆ ಹಲವು ಕಾರಣಗಳಿಗಾಗಿ ಸಾಧ್ಯವಾಗಿರಲಿಲ್ಲ. ನಾಳೆ ಪೊಲೀಸ್ ಇಲಾಖೆಯೊಂದಿಗೆ ಪರಿಶೀಲನಾ ಸಭೆ ನಡೆಯಲಿದೆ ಎಂದರು.
ಉಳಿದಂತೆ ಇಂದಿನಿಂದ ಮೂರು ದಿನಗಳ ತಾಜ್ ರೆಸಾರ್ಟ್ ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಸಂಜೆವರೆಗೂ ಜಿಲ್ಲೆಯಲ್ಲಿ ತಂಗಲಿರುವ ಗೃಹ ಸಚಿವರು ಶನಿವಾರ ರೆಸಾರ್ಟ್ ನಿಂದ ಚೆಕ್ ಔಟ್ ಆಗಲಿದ್ದಾರೆ.