• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರೆಜಿಲ್‌ನಲ್ಲಿ ಹಿಮಪಾತ; ಕಾಫಿಯ ದರ ಸಾರ್ವಕಾಲಿಕ ಏರಿಕೆ

By Coovercolly Indresh
|
Google Oneindia Kannada News

ಮಡಿಕೇರಿ, ಜುಲೈ 30: ದೇಶದ ಪ್ರಮುಖ ವಾಣಿಜ್ಯ ಬೆಳೆ ಕಾಫಿಯ ದರವು ಜುಲೈ 29ರ ಗುರುವಾರ ಕುಶಾಲನಗರ ಮತ್ತು ಚಿಕ್ಕಮಗಳೂರಿನಲ್ಲಿ ಸರ್ವಕಾಲಿಕ ಏರಿಕೆ ದಾಖಲಿಸಿದೆ. ಈ ಸಾರ್ವಕಾಲಿಕ ದಾಖಲೆಯಲ್ಲಿ ಅರೇಬಿಕಾ ಪಾರ್ಚ್‌ಮೆಂಟ್‌ ಮಾದರಿಯ ಕಾಫಿಯ ದರ 50 ಕೆಜಿಗಳ ಚೀಲವೊಂದಕ್ಕೆ 14,400 ರೂಪಾಯಿಗಳನ್ನು ತಲುಪಿತು. ಆದರೆ ಇಷ್ಟೊಂದು ದುಬಾರಿ ದರ ಇತರ ಮಾದರಿಯ ಕಾಫಿಗೆ ಲಭ್ಯವಾಗಲಿಲ್ಲ.

ರೊಬಸ್ಟಾ ಚೆರಿ ಕಾಫಿ ದರ 3600 ರಿಂದ 800 ರೂ.ಗೆ ಸೀಮಿತವಾಗಿದ್ದು, ಅರೇಬಿಕಾ ಚೆರಿಯ ದರ 5800-6200 ರೂ. ಮತ್ತು ರೊಬಸ್ಟಾ ಪಾರ್ಚ್‌ಮೆಂಟ್‌ ಕಾಫಿಯ ದರ 6500-6700 ರೂಪಾಯಿಗಳಿಗೆ ತಲುಪಿತ್ತು. ಆದರೆ ಈ ದರ ಕೇವಲ ಒಂದು ದಿನ ಮಾತ್ರ ಇದ್ದು, ಶುಕ್ರವಾರ ಪುನಃ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿಯ ದರ 13,800ಕ್ಕೆ ಕುಸಿದಿದೆ.

ದಶಕಗಳ ಹಿಂದೆ ಕಾಫಿಯನ್ನು ರಾಜ್ಯ ಸರ್ಕಾರವೇ ಕಾಫಿ ಮಂಡಳಿಯ ಮೂಲಕ ಖರೀದಿಸಿ ರಫ್ತು ಮತ್ತು ಮಾರಾಟ ಮಾಡುತ್ತಿತ್ತು. ಕಾಫಿ ಬೆಳೆಗಾರರ ತೀವ್ರ ಪ್ರತಿಭಟನೆಯ ನಂತರ 1992 ರಿಂದ ಕಾಫಿ ಬೆಳೆಗಾರರೇ ಮುಕ್ತ ಮಾರುಕಟ್ಟೆಯಲ್ಲಿ ಕಾಫಿಯನ್ನು ಮಾರಾಟ ಮಾಡಲು ಅನುವು ಮಾಡಿಕೊಡಲಾಯಿತು. ಇದೀಗ ನಿನ್ನೆ ಏರಿಕೆಯಾಗಿರುವ ದರ 28 ವರ್ಷಗಳ ಗರಿಷ್ಠವಾಗಿದೆ.

ಕಾಫಿಯ ದರ ಸಾರ್ವಕಾಲಿಕ ಏರಿಕೆ ದಾಖಲಿಸಿದ್ದರೂ ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸವೇನೂ ಮೂಡುತ್ತಿಲ್ಲ. ಏಕೆಂದರೆ ಈಗ ದರ ಏರಿಕೆ ಆಗಿರುವುದು ಅರೇಬಿಕಾ ಚೆರಿ ಕಾಫಿಗೆ ಮಾತ್ರ. ಅದೂ ಅಲ್ಲದೆ ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಕಾಫಿ ಕೊಯ್ಲಿನ ಸಮಯವಾಗಿದ್ದು, ಶೇಕಡಾ 90 ರಷ್ಟು ಬೆಳೆಗಾರರು ಕಾಫಿಯನ್ನು ಮಳೆಗಿಂತಲೂ ಮೊದಲೇ ಮಾರಾಟ ಮಾಡುತ್ತಾರೆ. ದರ ಏರಿಳಿತದ ಸಂಭವ ಮತ್ತು ದಾಸ್ತಾನು ಗೋದಾಮುಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ.

ದೇಶದ ಕಾಫಿ ಉತ್ಪಾದನೆಯಲ್ಲಿ ಅರೇಬಿಕಾ ಕಾಫಿಯ ಪಾಲು ಶೇಕಡಾ 30ಕ್ಕಿಂತ ಕಡಿಮೆ ಇದ್ದರೆ ರೋಬಸ್ಟಾ ಕಾಫಿಯ ಪಾಲು ಶೇಕಡಾ 70ರಷ್ಟಿದೆ. ಭಾರತ ದೇಶದ ಒಟ್ಟು ಕಾಫಿಯ ಉತ್ಪಾದನೆ ಸರಾಸರಿ 3.6 ಲಕ್ಷ ಟನ್‌ಗಳಾಗಿವೆ. ಹೀಗಾಗಿ ಶೇಕಡಾ 30ರಷ್ಟು ಕಾಫಿ ಬೆಳೆಗಾರರಿಗೆ ಈಗಿನ ಏರಿಕೆ ಅನುಕೂಲ ಆಗುವುದಾದರೂ ಬಹುತೇಕರು ಕಾಫಿಯನ್ನು ಈಗಾಗಲೇ ಮಾರಾಟ ಮಾಡಿರುವುದರಿಂದ ಬೆಲೆ ಏರಿಕೆಯ ಲಾಭ ರೈತರಿಗೆ ಸಿಗುತ್ತಿಲ್ಲ.

ಈ ಕುರಿತು ಒನ್‌ಇಂಡಿಯಾ ಪ್ರತಿನಿಧಿ ಕುಶಾಲನಗರದ ಕಾಫಿ ಉದ್ಯಮಿ ಎಸ್‌ಎಲ್‌ಎನ್‌ ಕಾಫಿ ಕ್ಯೂರಿಂಗ್ ವರ್ಕ್ಸ್‌ನ ವ್ಯವಸ್ಥಾಪಕ ಪಾಲುದಾರ ಸಾತಪ್ಪನ್‌ರೊಂದಿಗೆ ಮಾತನಾಡಿದಾಗ, "ಅಂತರಾಷ್ಟ್ರೀಯ ಕಾಫಿ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ದರದ ಏರಿಳಿತ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಏರಿಳಿತ ಹೆಚ್ಚಲಿದೆ,'' ಎಂದರು.

Madikeri: Heavy Snowfall In Brazil; Coffee Rate All-time Hike In Karnataka

"ವಿಶ್ವದ ಪ್ರಮುಖ ಕಾಫಿ ಉತ್ಪಾದನಾ ದೇಶ ಬ್ರೆಜಿಲ್‌ನಲ್ಲಿ ಹಿಮಪಾತದಿಂದಾಗಿ ದರ ಏರಿಕೆ ಆಗಿದೆ ಎಂದ ಅವರು ಬ್ರೆಜಿಲ್‌ನಲ್ಲಿ ಸಂಪೂರ್ಣ ಕಾಫಿ ಬೆಳೆ ನಾಶವಾಗಿಲ್ಲ,'' ಎಂದರು.

ಈ ಕುರಿತು ಮಾತನಾಡಿದ ಸೋಮವಾರಪೇಟೆಯ ಚೌಡ್ಲು ಗ್ರಾಮದ ಕಾಫಿ ಬೆಳೆಗಾರ ರಾಜೀವ್‌ ಕುಶಾಲಪ್ಪ ಮಾತನಾಡಿ, "ಇತ್ತೀಚಿನ ವರ್ಷಗಳಲ್ಲಿ ಕಾಫಿಯ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆ ದಾಖಲಿಸಿದ್ದು, ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ದಶಕದಿಂದ ಗೊಬ್ಬರ, ಕ್ರಿಮಿನಾಶಕ ಮತ್ತು ಕಾರ್ಮಿಕರ ಕೂಲಿ ದರ ದುಪ್ಪಟ್ಟಾಗಿದೆ. ಆದರೆ ಕಾಫಿ ದರ ಮಾತ್ರ ಇದ್ದಷ್ಟೇ ಇದೆ.''

   BJP ಪಕ್ಷ ಯಾರಿಗು ಉಪಯೋಗ ಆಗ್ಲಿಲ್ಲಾ!! | Oneindia Kannada

   "ಇನ್ನು ಹವಾಮಾನ ವೈಪರೀತ್ಯದಿಂದಲೂ ಬೆಳೆಗಾರ ಪ್ರತಿ ವರ್ಷವೂ ನಷ್ಟ ಅನುಭವಿಸುತಿದ್ದಾನೆ. ಕಾಫಿಯಿಂದ ವಾರ್ಷಿಕ ಕೋಟ್ಯಂತರ ರೂಪಾಯಿ ವಿದೇಶೀ ವಿನಿಮಯ ಗಳಿಸುವ ಸರ್ಕಾರವು ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸುವ ಮೂಲಕ ನೆರವಾಗಬೇಕು,'' ಎಂದು ಒತ್ತಾಯಿಸಿದರು.

   English summary
   The country's main commercial crop coffee rate recorded an all-time high in Kushalanagar and Chikkamagaluru on Thursday, July 29.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X