ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಲೇಖನ: ಕಾವೇರಿ ನದಿ ದಡ ‘ಗುಹ್ಯ’ದ ಗುಟ್ಟು

By ಬಿ.ಎಂ.ಲವಕುಮಾರ್
|
Google Oneindia Kannada News

ಕಾವೇರಿ ತಲಕಾವೇರಿಯ ಬ್ರಹ್ಮಕುಂಡಿಕೆಯಿಂದ ಗುಪ್ತಗಾಮಿನಿಯಾಗಿ ಹರಿದು, ಭಾಗಮಂಡಲದಲ್ಲಿ ತನ್ನ ಸ್ವರೂಪ ಪ್ರದರ್ಶಿಸಿ ಬಳಿಕ ಹರಿದು ಸಾಗುವ ಸ್ಥಳದಲ್ಲೆಲ್ಲ ಪವಿತ್ರ ಕ್ಷೇತ್ರ ಸೃಷ್ಟಿ ಮಾಡಿರುವುದನ್ನು ನಾವು ಕಾಣಬಹುದು. ಅಂಥ ಕ್ಷೇತ್ರಗಳ ಪೈಕಿ ಕೊಡಗಿನ ಸಿದ್ದಾಪುರದಿಂದ 5 ಕಿ.ಮೀ ದೂರದಲ್ಲಿರುವ ಗುಹ್ಯ ಅಗಸ್ತ್ಯ ದೇಗುಲವೂ ಒಂದಾಗಿದೆ.[ಪ್ರಾಣಕ್ಕೆ ಕುತ್ತು ತರುವ ಕೊಡಗಿನ ಮೂರು ಜಲಪಾತಗಳು]

ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗವಾಗಿ 2 ಕಿ.ಮೀ ಕ್ರಮಿಸಿ, ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ 3 ಕಿ.ಮೀ ಸಾಗಿದರೆ ಗುಹ್ಯ ಗ್ರಾಮವನ್ನು ತಲುಪಬಹುದು. ಕಾವೇರಿ ನದಿ ತಟದಲ್ಲಿದ್ದು, ಅಗಸ್ತ್ಯೇಶ್ವರ ದೇಗುಲವನ್ನು ಹೊಂದಿರುವುದರಿಂದ ಗುಹ್ಯ ಇವತ್ತು ಪವಿತ್ರ ತಾಣವಾಗಿ ಗಮನ ಸೆಳೆಯುತ್ತದೆ. [ಮಡಿಕೇರಿಯ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್]

'Guhya' Agastyeshwara temple visit

ಹೆಸರು ಬಂದಿದ್ದು ಹೇಗೆ?: ಹಾಗೆ ನೋಡಿದರೆ ಈ ಸ್ಥಳಕ್ಕೆ ಗುಹ್ಯ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಇಲ್ಲಿನವರು ಹಲವಾರು ಕಾರಣಗಳನ್ನು ನೀಡುತ್ತಾರೆ. ಗುಹ್ಯ ಎಂಬ ಪದಕ್ಕೆ ಗುಟ್ಟು ಎಂಬ ಅರ್ಥ ಇರುವುದರಿಂದ ವಿಷ್ಣು ಗುಟ್ಟಾಗಿ ಅಡಗಿದ ಜಾಗ ಗುಹ್ಯವಾಯಿತೆಂದೂ ಕೆಲವರು ಅಭಿಪ್ರಾಯ ಪಟ್ಟರೆ, ಇನ್ನೂ ಕೆಲವರು ಹಿಂದಿನ ಕಾಲದಲ್ಲಿ ಇಲ್ಲಿನ ಗುಹೆಗಳಲ್ಲಿ ಋಷಿಗಳು ತಪಸ್ಸು ಮಾಡಿದ ಕಾರಣ ಈ ಹೆಸರು ಬಂದಿತೆನ್ನುತ್ತಾರೆ. [ಮಳೆಗಾಲದ ದಿನ ಚೇಲಾವರದ ಜಲಧಾರೆ ಅರಸಿ...]

ಮತ್ತೆ ಕೆಲವರ ಅಭಿಪ್ರಾಯದ ಪ್ರಕಾರ ಕಾವೇರಿ ನದಿಯ ಆಳದಲ್ಲಿ ಹಿಂದಿನ ಕಾಲದ ದೇವಾಲಯವೊಂದು ಮುಳುಗಿ ಹೋಗಿದ್ದು, ಆ ಗುಟ್ಟು ಇನ್ನೂ ಯಾರಿಗೂ ತಿಳಿದಿಲ್ಲವೆಂದು, ಹಾಗಾಗಿ 'ಗುಹ್ಯ' ಹೆಸರು ಬಂದಿತೆನ್ನುತ್ತಾರೆ. ಅದೇನೆ ಇರಲಿ ಇಲ್ಲಿನ ಅಗಸ್ತ್ಯೇಶ್ವರ ದೇಗುಲ ಮಾತ್ರ ಸುಂದರವಾಗಿದ್ದು, ಹಲವು ವೈಶಿಷ್ಟ್ಯಗಳನ್ನು ಒಳಗೊಂಡು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

ಅಗಸ್ತ್ಯ ಮಹರ್ಷಿ ಪ್ರತಿಷ್ಠಾಪನೆ: ಅಗಸ್ತ್ಯೇಶ್ವರ ದೇವಾಲಯವು ವೀಕ್ಷಿಸಲು ಆಕರ್ಷಕವಾಗಿದ್ದು, ದೇವಾಲಯದ ಗರ್ಭ ಗುಡಿಯು ವೃತ್ತಾಕಾರದಲ್ಲಿದೆ. ಇಲ್ಲಿರುವ ಈಶ್ವರ ಲಿಂಗವು ಅಗಸ್ತ್ಯ ಮಹರ್ಷಿಯು ಪ್ರತಿಷ್ಠಾಪಿಸಿದ್ದು ಎನ್ನಲಾಗಿದ್ದು, ಇದು ಬಹಳ ಆಳದಲ್ಲಿದೆ. ಗರ್ಭ ಗುಡಿಯು ಎರಡು ಅಂಕಣದಲ್ಲಿ ರಚಿತವಾಗಿದೆ.

ಅಗಸ್ತ್ಯೇಶ್ವರ ದೇವಾಲಯವು ಹೇಗೆ ನಿರ್ಮಾಣವಾಯಿತು ಎಂಬುದಕ್ಕೊಂದು ಪುರಾಣ ಕಥೆಯಿದೆ. ಕಾವೇರಿಯನ್ನು ಕಮಂಡಲದಲ್ಲಿ ಬಂಧಿಸಿಟ್ಟ ಅಗಸ್ತ್ಯ ಮಹರ್ಷಿಯಿಂದ ಉರುಳಿ ನೀರಾಗಿ ಹರಿಯುವ ಕಾವೇರಿ, ಚೇರಂಬಾಣೆ, ಹರಿಶ್ಚಂದ್ರ, ಬಲಮುರಿ, ಬೇತ್ರಿಯ ಮೂಲಕ ರಭಸದಿಂದ ಹರಿಯುತ್ತಾಳೆ. ಈ ಸಂದರ್ಭ ಆಕೆಯ ಹಿಂದೆಯೇ ಪತಿ ಅಗಸ್ತ್ಯ ಮಹರ್ಷಿಯೂ ಧಾವಿಸುತ್ತಾನೆ. ಅಲ್ಲದೆ ಆಕೆಯನ್ನು ನಿಲ್ಲುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಾನೆ. ಅಲ್ಲದೆ ಮರಳಿನ ಲಿಂಗ ಮಾಡಿಯೂ ಪೂಜಿಸುತ್ತಾನೆ. ಆದರೆ ಇದ್ಯಾವುದಕ್ಕೂ ಮಣಿಯದ ಕಾವೇರಿ ಮುಂದಕ್ಕೆ ಹರಿಯ ತೊಡಗುತ್ತಾಳೆ.

'Guhya' Agastyeshwara temple visit

ಗುಹ್ಯಕ್ಕೆ ಬರುತ್ತಿದ್ದಂತೆಯೇ ಅಗಸ್ತ್ಯ ಮಹರ್ಷಿಯು ಕಡೆಯ ಪ್ರಯತ್ನ ಎಂಬಂತೆ ಸಪ್ತ ಮಹರ್ಷಿಗಳ ಮೊರೆ ಹೋಗುತ್ತಾನೆ. ಪ್ರತ್ಯಕ್ಷರಾದ ಮಹರ್ಷಿಗಳು ಕಾವೇರಿಯನ್ನು ನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಮಹರ್ಷಿಗಳ ಕೋರಿಕೆಗೆ ಮನ್ನಣೆ ನೀಡಿ ಕಾವೇರಿಯು ಗುಹ್ಯದಲ್ಲಿ ನಿಲ್ಲುತ್ತಾಳೆ. ಇಲ್ಲಿರುವ ಅಶ್ವತ್ಥ ಮರದ ಕೆಳಗೆ ಸಂಧಾನ ಮಾತುಕತೆಯೂ ನಡೆಯುತ್ತದೆ. ಆದರೆ ಕಾವೇರಿಯು ತಾನು ಲೋಕ ಕಲ್ಯಾಣಕ್ಕೆ ಹೊರಟಿದ್ದು, ತಡೆಯಬಾರದಾಗಿ ವಿನಂತಿಸಿಕೊಳ್ಳುತ್ತಾಳೆ. ಅಲ್ಲದೆ ಮುಂದಕ್ಕೆ ಹರಿಯುತ್ತಾಳೆ.

ಇತ್ತ ನೊಂದ ಅಗಸ್ತ್ಯ ಮಹರ್ಷಿಯು ಸಂಧಾನ ನಡೆದ ಊರಿನಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾನೆ. ಇದೇ ಗುಹ್ಯದ ಅಗಸ್ತ್ಯೇಶ್ವರವಾಗಿದೆ. ಸಂಧಾನ ನಡೆಸಿದ ಅಶ್ವತ್ಥ ಮರವು ಈಗಲೂ ದೇವಾಲಯದ ಬಳಿ ಇರುವ ಮರವೇ ಆಗಿದೆ ಎಂದು ಇಲ್ಲಿನವರು ನಂಬುತ್ತಾರೆ.

ದೀಪಾವಳಿ ವಿಶೇಷ: ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ವಾರ್ಷಿಕ ಹಬ್ಬವು ದೀಪಾವಳಿ ಸಮಯದಲ್ಲಿ ಐದು ದಿನಗಳ ಕಾಲ ನಡೆಯುತ್ತದೆ. ಇಲ್ಲಿನ ತೀರ್ಥ ಸ್ನಾನವು ಬಹಳ ಖ್ಯಾತಿ ಪಡೆದಿದ್ದು, ದೀಪಾವಳಿ ಅಮಾವಾಸ್ಯೆಯಂದು ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ನೆರಪು ಇದ್ದು, ಅಮಾವಾಸ್ಯೆಯಂದು ನಡೆಯುವ ಜಳಕದೊಂದಿಗೆ ಉತ್ಸವವು ಪೂರ್ಣಗೊಳ್ಳುತ್ತದೆ. ಗುಹ್ಯ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ವಿವಿಧ ಕಡೆಯಿಂದಲೂ ಭಕ್ತರು ಆಗಮಿಸುವುದನ್ನು ನಾವು ನೋಡಬಹುದು.

ವಿಷ್ಣು ದೇವಾಲಯ: ಗುಹ್ಯದಲ್ಲಿ ಅಗಸ್ತ್ಯೇಶ್ವರ ದೇವಾಲಯದ ಜತೆಗೆ ವಿಷ್ಣುಮೂರ್ತಿ ದೇವಾಲಯವೂ ಇದ್ದು, ಇದು ಅಗಸ್ತ್ಯೇಶ್ವರ ದೇವಾಲಯಕ್ಕಿಂತಲೂ ಹಿಂದಿನದು ಎಂದು ಹೇಳಲಾಗಿದೆ. ಈ ದೇವಾಲಯ ನಿರ್ಮಾಣವಾದ ಬಗ್ಗೆಯೂ ಮತ್ತೊಂದು ರೋಚಕ ಕಥೆಯಿರುವುದನ್ನು ಕಾಣಬಹುದು.

ಲೋಕ ಪಾಲಕ ವಿಷ್ಣು ತನ್ನ ಮದುವೆಗಾಗಿ ಕುಬೇರನಲ್ಲಿ ಸಾಲ ಮಾಡಿದ್ದನಂತೆ, ಸಾಲ ಮಾಡಿದ ಹಣದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದನಂತೆ, ಆ ಬಳಿಕ ಸಾಲ ತೀರಿಸಬೇಕಲ್ಲವೇ? ಕೊಟ್ಟ ಸಾಲವನ್ನು ಮರಳಿ ಕೊಡುವಂತೆ ಕುಬೇರನೂ ಕೇಳತೊಡಗಿದನಂತೆ. ಕುಬೇರನ ಕಾಟವನ್ನು ತಡೆಯಲಾರದ ವಿಷ್ಣು ದೇವ ಲೋಕದಿಂದ ಭೂ ಲೋಕದತ್ತ ಓಡಿ ಬಂದು ಗುಹ್ಯದಲ್ಲಿ ಅಡಗಿ ಕುಳಿತನಂತೆ.

ಆದರೆ, ಪ್ರತಿ ವರ್ಷವೂ ಕುಬೇರನು ವಿಷ್ಣುವನ್ನು ಹುಡುಕಿಕೊಂಡು ಬರುತ್ತಿದ್ದನಂತೆ. ಈಗಲೂ ಮೀನು ರೂಪದಲ್ಲಿ ಬರುತ್ತಾನಂತೆ ಎಂದು ಜನರು ನಂಬುತ್ತಾರೆ. ಇದಕ್ಕೆ ಪೂರಕವಾಗಿ ವರ್ಷಕ್ಕೊಮ್ಮೆ ಕಾವೇರಿ ನದಿಯಲ್ಲಿ ನೀಲಿ ಮೀನೊಂದು ಕಾಣಸಿಗುತ್ತದೆ ಎನ್ನಲಾಗಿದೆ. ಅದು ಏನೇ ಇರಲಿ ಒಟ್ಟಾರೆಯಾಗಿ ಗುಹ್ಯವು ಆಸ್ತಿಕ, ನಾಸ್ತಿಕರೆನ್ನದೆ ಎಲ್ಲರನ್ನೂ ಕೈಬೀಸಿ ಕರೆಯುವ ಪ್ರಶಾಂತ ತಾಣವಾಗಿದೆ.

English summary
'Guhya' Agastyeshwara temple is 5 k.m. from siddapur, Kodagu. It is holy place. Vishnu temple is also here. Which is older than Agastyeshwara temple. Agasteshwara temple annual fest conducted in Deepavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X