ಕೊಡಗಿನಲ್ಲೊಂದು ಪ್ರಸಂಗ; ರಸ್ತೆ ಬದಿ ಕಸ ಎಸೆದ ಪ್ರವಾಸಿಗರಿಗೆ ತಕ್ಕ ಪಾಠ
ಮಡಿಕೇರಿ, ಅಕ್ಟೋಬರ್ 30: ಕೊಡಗಿನ ಸುಂದರ ಪರಿಸರದಲ್ಲಿ ಕಸ ಹಾಕಿ ಹೋಗಿದ್ದ ಪ್ರವಾಸಿಗರ ಜಾಡು ಹಿಡಿದು ಅವರಿಂದಲೇ ಕಸವನ್ನು ಹೆಕ್ಕಿಸಿ ಕಳುಹಿಸಿದ ಸ್ವಾರಸ್ಯಕರ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ತೆರಳುವ ಮಾರ್ಗ ಮಧ್ಯೆ ಬರುವ ಕೊಡಗು ವಿದ್ಯಾಲಯದ ಬಳಿ ಪ್ರವಾಸಿಗರು ತಾವು ಖರೀದಿಸಿ ತಂದಿದ್ದ ಪಿಜ್ಜಾವನ್ನು ತಮ್ಮ ವಾಹನದಲ್ಲೇ ಕುಳಿತು ತಿಂದು ನಂತರ ಅದರ ಬಾಕ್ಸ್ ಮತ್ತು ಕಸವನ್ನು ರಸ್ತೆಯಲ್ಲಿ ಸುರಿದು, ಗಲೀಜು ಮಾಡಿ ಅಲ್ಲಿಂದ ಮೈಸೂರು ಮಾರ್ಗವಾಗಿ ತೆರಳಿದ್ದಾರೆ.
ಕೇರಳಕ್ಕೆ ನಮ್ಮ ರಾಜ್ಯದ ಗುಂಡ್ಲುಪೇಟೆಯೇ ಕಸದ ತೊಟ್ಟಿ
ಈ ಮಾರ್ಗವಾಗಿ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತ ಮಾದೇಟ್ಟಿರ ತಿಮ್ಮಯ್ಯ ಅವರು ಇದನ್ನು ಗಮನಿಸಿ ತಕ್ಷಣವೇ ಆ ಬಾಕ್ಸ್ ಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಪಿಜ್ಜಾ ಖರೀದಿದಾರನ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಪತ್ತೆಯಾಗಿದೆ. ಕೂಡಲೇ ತಿಮ್ಮಯ್ಯ, ಆ ನಂಬರ್‌ಗಳಿಗೆ ಕರೆ ಮಾಡಿ ಕಸ ತೆಗೆದು ಹೋಗುವಂತೆ ತಾಕೀತು ಮಾಡಿದ್ದಾರೆ.
ಈ ಸಂದರ್ಭ ಪಿರಿಯಾಪಟ್ಟಣ ತಲುಪಿದ್ದ ಪ್ರವಾಸಿಗರು ತಿಮ್ಮಯ್ಯನವರ ಕರೆಗೆ ಸ್ಪಂದಿಸಿ ಮರಳಿ ತಾವು ಕಸ ಎಸೆದಿದ್ದ ಚೆಟ್ಟಳ್ಳಿ ರಸ್ತೆಗೆ ವಾಪಸ್ ಬಂದಿದ್ದಾರೆ. ನಂತರ ತಾವು ಕಸ ಹಾಕಿದ್ದ ಪ್ರದೇಶದಲ್ಲಿದ್ದ ಕಸವನ್ನೆಲ್ಲ ತೆಗೆದು ಶುಚಿಗೊಳಿಸಿದ್ದಾರೆ. ತಿಮ್ಮಯ್ಯನವರು ಇಷ್ಟಕ್ಕೆ ಸುಮ್ಮನಾಗದೇ ಅವರು ಎಸೆದಿದ್ದ ಪಿಜ್ಜಾ ಬಾಕ್ಸ್ ಗಳ ಮೇಲೆ ಅವರೆಲ್ಲರ ಫೋನ್ ನಂಬರ್ ಬರೆಸಿದ್ದಾರೆ. ಇವರು ಬೇರೆಲ್ಲೂ ಕಸ ಹಾಕದೇ ತಮ್ಮೊಂದಿಗೆ ತಾವು ತಂದಿದ್ದ ಕಸ ತೆಗೆದುಕೊಂಡು ಹೋಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಪ್ರವಾಸಿಗರು ಇದಕ್ಕೆ ಒಪ್ಪಿ ಕಸವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.
ಬೆಂಗಳೂರು; ಕಸ ಹಾಕುವುದು ತಡೆಯಲು ರಸ್ತೆಗಿಳಿದ ಗಸ್ತು ಪಡೆ
ಇದರಲ್ಲಿ ಪೊಲೀಸ್ ಅಧಿಕಾರಿ ಅನೂಪ್ ಮಾದಪ್ಪ ಅವರ ಸಹಕಾರವೂ ಇದ್ದು, ಅನೂಪ್ ಮಾದಪ್ಪನವರಿಗೆ ತಿಮ್ಮಯ್ಯನವರು ವಿಷಯ ತಿಳಿಸಿದಾಗ ಕೂಡಲೇ ಅವರು ಪ್ರವಾಸಿಗರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಪ್ರವಾಸಿಗರು ಕಸವನ್ನು ಹಾಕಿ ಸುಂದರ ಕೊಡಗನ್ನು ಗಲೀಜು ಮಾಡದಂತೆ ತಡೆಯಲು ಇದೊಂದು ಒಳ್ಳೆಯ ಪಾಠವಾಗಿದೆ.