ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.ತಿಮ್ಮಯ್ಯರ ಸಾಹಸಗಾಥೆಗೆ ಸಾಕ್ಷಿಯಾಗಲಿರುವ ಮ್ಯೂಸಿಯಂ

|
Google Oneindia Kannada News

ಮಡಿಕೇರಿ, ಫೆಬ್ರವರಿ 5: ಕೊಡಗಿನ ವೀರ ಯೋಧರಲ್ಲಿ ಒಬ್ಬರಾದ ಜನರಲ್ ತಿಮ್ಮಯ್ಯ ಅವರ ಹೆಸರಿನಲ್ಲಿ ಮಡಿಕೇರಿ ನಗರದಲ್ಲಿ ನಿರ್ಮಾಣಗೊಂಡಿರುವ ವಸ್ತು ಸಂಗ್ರಹಾಲಯ ಫೆ.6ರಂದು ಲೋಕಾರ್ಪಣೆಯಾಗುತ್ತಿದ್ದು, ಆ ಮೂಲಕ ಕೊಡಗಿನ ಜನರ ಹಲವು ವರ್ಷಗಳ ಕನಸು ನನಸಾದಂತಾಗುತ್ತದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಡಿಕೇರಿಗೆ ಆಗಮಿಸಿ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸುತ್ತಿರುವುದು ವಿಶೇಷವಾಗಿದೆ. ರಾಷ್ಟ್ರಪತಿಗಳು ಫೆ.6 ರಂದು ಬೆಳಗ್ಗೆ ಭಾಗಮಂಡಲದ ಕಾವೇರಿ ಕಾಲೇಜು ಹೆಲಿಪ್ಯಾಡ್‍ಗೆ ಆಗಮಿಸಿ ನಂತರ ತಲಕಾವೇರಿಗೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಮಡಿಕೇರಿಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ.

ರಾಷ್ಟ್ರಪತಿಗಳ ಕೊಡಗು ಭೇಟಿ; ಬಿಗಿ ಬಂದೋಬಸ್ತ್ ರಾಷ್ಟ್ರಪತಿಗಳ ಕೊಡಗು ಭೇಟಿ; ಬಿಗಿ ಬಂದೋಬಸ್ತ್

ಅಲ್ಲಿಂದ ಸರ್ಕಾರದ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಅಲ್ಲಿರುವ ಯುದ್ಧಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ "ತೂಕ್‍ಬೊಳಕ್" (ತೂಗುದೀಪ) ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಹಾಗೂ ಇನ್ನಿತರೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಸನ್ನಿಸೈಡ್ ಇನ್ಮುಂದೆ ಮ್ಯೂಸಿಯಂ

ಸನ್ನಿಸೈಡ್ ಇನ್ಮುಂದೆ ಮ್ಯೂಸಿಯಂ

ರಾಷ್ಟ್ರಪತಿಗಳಿಂದ ಲೋಕಾರ್ಪಣೆಯಾಗುತ್ತಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯವು ಜನರಲ್ ತಿಮ್ಮಯ್ಯ ಅವರ ನಿವಾಸ ಸನ್ನಿಸೈಡ್ ಆಗಿದ್ದು, ಹಿಂದೆ ಆರ್.ಟಿ.ಒ ಕಚೇರಿಯಾಗಿತ್ತು. ಹಲವರ ಶ್ರಮದ ಫಲವಾಗಿ ಇವತ್ತು ವಸ್ತು ಸಂಗ್ರಹಾಲಯವಾಗಿ ನಿರ್ಮಾಣಗೊಳ್ಳುವುದರೊಂದಿಗೆ ಕೊಡಗಿನ ವೀರರ ಕಥೆ ಹೇಳಲು ಇದು ಸಾಕ್ಷಿಯಾಗಿ ನಿಲ್ಲಲಿದೆ.

ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಜ.ತಿಮ್ಮಯ್ಯ ಯೋಧರಿಗೆ ಸ್ಪೂರ್ತಿ

ಜ.ತಿಮ್ಮಯ್ಯ ಯೋಧರಿಗೆ ಸ್ಪೂರ್ತಿ

ಹಾಗೆ ನೋಡಿದರೆ ಕೊಡಗು ಪುಟ್ಟ ಜಿಲ್ಲೆಯಾದರೂ ಭಾರತಾಂಬೆಯ ಸೇವೆಗೆ ಸಹಸ್ರಾರು ಯೋಧರನ್ನು ನೀಡಿದೆ. ದೇಶಸೇವೆಗಾಗಿ ಹುತಾತ್ಮರಾದ ಯೋಧರು ಜಿಲ್ಲೆಯಾದ್ಯಂತ ಸಿಗುತ್ತಾರೆ. ಜತೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಹೀಗೆ ಪ್ರತಿ ಊರಲ್ಲೂ ಸಿಗುತ್ತಾರೆ ಎಂಬುದೇ ಇಲ್ಲಿನ ವಿಶೇಷವಾಗಿದೆ. ಇಂತಹ ಸಹಸ್ರಾರು ಯೋಧರಿಗೆ ಸ್ಪೂರ್ತಿಯಾದವರು ಜನರಲ್ ತಿಮ್ಮಯ್ಯ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಎಂದರೆ ಅತಿಶಯೋಕ್ತಿಯಾಗಲಾರದು. ಮುಂದಿನ ದಿನಗಳಲ್ಲಿ ಕೊಡಗಿನ ಬಹುಮುಖ್ಯ ಆಕರ್ಷಣೆಯಾಗಲಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯದ ಉದ್ಘಾಟನೆಯ ಈ ವೇಳೆ ನಾವು ಇದರ ಹಿಂದಿನ ಶಕ್ತಿಯಾಗಿರುವ ಜನರಲ್ ತಿಮ್ಮಯ್ಯ ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕಾಗುತ್ತದೆ.

ಬರೀ ಯೋಧರಲ್ಲ ಸಮಾಜ ಸೇವಕ

ಬರೀ ಯೋಧರಲ್ಲ ಸಮಾಜ ಸೇವಕ

ಜನರಲ್ ಸುಬ್ಬಯ್ಯ ತಿಮ್ಮಯ್ಯ ಅವರು 1906ರ ಮಾರ್ಚ್ 31 ರಂದು ಮಡಿಕೇರಿಯ ಸನ್ನಿಸೈಡ್ ನಿವಾಸದಲ್ಲಿ ಕೊಡಂದೇರ ಸೀತವ್ವ ಮತ್ತು ತಿಮ್ಮಯ್ಯ ದಂಪತಿಯ ಪುತ್ರರಾಗಿ ಜನಿಸಿದರು. ಇವರನ್ನು ಟಿಮ್ಸ್ ಎಂದೇ ಕರೆಯಲಾಗುತ್ತಿತ್ತು. ಇವರು ಬಾಲ್ಯದ ವಿದ್ಯಾಭ್ಯಾಸವನ್ನು ಕೂನೂರಿನ ಸೆಂಟ್ ಜೋಸೆಫ್ ಶಾಲೆ ಮತ್ತು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರೈಸಿ, 1922 ರಲ್ಲಿ ಡೆಹರಾಡೂನ್‍ನ ಮಿಲಿಟರಿ ಶಾಲೆಗೆ ಸೇರಿದರು. 1926 ರಲ್ಲಿ ರಾಯಲ್ ಇಂಡಿಯನ್ ಆರ್ಮಿಯ ಸೆಕೆಂಡ್ ಲೆಫ್ಟಿನೆಂಟ್ ಆಗಿ ಪದವಿ ಪಡೆದರು. ತದನಂತರ ಸ್ಕಾಟಿಷ್ ಯೂನಿಟ್‍ನ ಐಲ್ಯಾಂಡ್ ಇನ್‍ಫೆಂಟ್ರಿರಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು. ಈ ಸಂದರ್ಭ ನೀನಾ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ಪೀಕರಿಸಿದ ತಿಮ್ಮಯ್ಯ ಅವರು ಕ್ವೇಟಾದಲ್ಲಿ 1935 ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭ ಪತ್ನಿಯೊಡಗೂಡಿ ಸಲ್ಲಿಸಿದ ಸೇವೆಗಾಗಿ "ಕೈಸರ್-ಇ-ಹಿಂದ್" ಪ್ರಶಸ್ತಿಗೆ ಭಾಜನರಾದರು.

ಪಾಕ್ ಅನ್ನು ಬಗ್ಗುಬಡಿದ ಮಹಾಯೋಧ

ಪಾಕ್ ಅನ್ನು ಬಗ್ಗುಬಡಿದ ಮಹಾಯೋಧ

1944ರ ಮಾರ್ಚ್ ನಲ್ಲಿ ಹೈದಾರಬಾದ್ ರೆಜಿಮೆಂಟಿನ ಕಮಾಡಿಂಗ್ ಆಫೀಸರ್ ಆಗಿ 1946 ರಲ್ಲಿ ಜಪಾನಿನಲ್ಲಿ ಭಾರತೀಯ ಇನ್‍ಫೆಂಟ್ರಿ ಬ್ರಿಗೆಡ್‍ನ್ನು ಮುನ್ನಡೆಸಿದರು. ಭೂ ಸೇನೆಯ ಪುನರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ತಿಮ್ಮಯ್ಯ ಅವರು, 1948 ರಲ್ಲಿ 19ನೇ ಭಾರತೀಯ ಡಿವಿಜನ್ ಕಮಾಂಡ್‍ನ ನೇತೃತ್ವ ವಹಿಸಿಕೊಂಡ ಸಂದರ್ಭ ಜಮ್ಮು -ಕಾಶ್ಮೀರದಲ್ಲಿ ತೋರಿದ ಪರಾಕ್ರಮ ಭಾರತೀಯ ಸೇನಾ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯಿತು. ಸುಮಾರು 12 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಶಿಖರದ ಮೇಲೆ ಸೈನಿಕರ ಜೊತೆಯಲ್ಲಿ ಸಮರ ಟ್ಯಾಂಕ್ ಗಳನ್ನು ಸಾಗಿಸಿ ಪಾಕಿಸ್ತಾನದ ಹಿಡಿತದಲ್ಲಿದ್ದ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿದ್ದರು. ಮುಂದುವರಿದು ಪಾಕಿಸ್ತಾನದ ಅಧೀನದಲ್ಲಿದ್ದ ಭೂಮಿಯನ್ನು ಭಾರತದ ಸುಪರ್ದಿಗೆ ತೆಗೆದುಕೊಳ್ಳುವ ಹಂತದಲ್ಲಿದ್ದಾಗ ಯುದ್ಧ ವಿರಾಮ ಘೋಷಿಸಿದ್ದರಿಂದಾಗಿ ಆ ಪ್ರಯತ್ನ ಕೈಗೂಡಲಿಲ್ಲ. ಜನರಲ್ ತಿಮ್ಮಯ್ಯ ಅವರ ಪ್ರಯತ್ನಕ್ಕೆ ತಣ್ಣೀರರೆಚದೆ ಪ್ರೋತ್ಸಾಹಿಸಿದ್ದಲ್ಲಿ ಇಂದು ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ, ರಾಜಕೀಯ ಇಚ್ಛಾಸಕ್ತಿ, ದೂರದೃಷ್ಟಿಯ ಕೊರತೆ ಈ ಸಮಸ್ಯೆಯನ್ನು ಜೀವಂತವಾಗಿ ಉಳಿಯುವಂತೆ ಮಾಡಿತು.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada
ಭಾರತೀಯ ಸೇನೆಗೆ ಸ್ಮರಣೀಯ ಕೊಡುಗೆ

ಭಾರತೀಯ ಸೇನೆಗೆ ಸ್ಮರಣೀಯ ಕೊಡುಗೆ

ಬಳಿಕ 1950 ರಲ್ಲಿ ದೇಶದ ಖ್ಯಾತ ಮಿಲಿಟರಿ ಅಕಾಡೆಮಿ ಮತ್ತು ಮಿಲಿಟರಿ ಕಾಲೇಜಿನ ಜವಾಬ್ದಾರಿ ಹೊತ್ತುಕೊಂಡ ಜನರಲ್ ತಿಮ್ಮಯ್ಯ ಅವರು ಹಲವಾರು ದೇಶಭಕ್ತ ಸೈನಿಕರಿಗೆ ಮಾರ್ಗದರ್ಶನ ಮಾಡಿದರು. 1953 ರಲ್ಲಿ ವೆಸ್ಟರ್ನ್ ಕಮಾಂಡಿನ ಅಧಿಕಾರ ವಹಿಸಿಕೊಂಡರು, 1957 ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. 1964 ರಲ್ಲಿ ವಿಶ್ವಸಂಸ್ಥೆಯ ಶಾಂತಿಪಡೆಯ ಕಮಾಂಡರ್ ಆಗಿ ಸೈಪ್ರಸ್ ನಲ್ಲಿ ನಿಯೋಜಿತಗೊಂಡು ಅಲ್ಲಿನ ಜನರ ವಿಶ್ವಾಸ ಗಳಿಸಿದರು. 1965ರ ಡಿಸೆಂಬರ್ 18 ರಂದು ಹೃದಯಾಘಾತದಿಂದ ನಿಧನರಾದರು. ಆದರೆ ಅವರ ಸಾಹಸ, ಸೇನಾಪಡೆಗೆ ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿ ಉಳಿದಿದೆ. ಇದೀಗ ನಿರ್ಮಾಣಗೊಂಡಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಇವರ ಖ್ಯಾತಿಗೆ ಕೀರ್ತಿ ಕಳಸವಾಗಲಿದೆ.

English summary
Sunny Side’, the Residence of General K S. Thimayya Converted into General Thimayya Memorial Museum, Will Be Dedicated to the Nation by President Ram Nath Kovind on Feb. 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X