ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಪರಿಸರ ದಿನದ ವಿಶೇಷ: ಕೊಡಗಿನವರಿಗೆ ವೃಕ್ಷ ಸಂಕುಲವೇ ದೇವರು!

|
Google Oneindia Kannada News

ಮಡಿಕೇರಿ, ಜೂನ್ 5: ತಲತಲಾಂತರದಿಂದಲೂ ಕೊಡಗಿನ ಜನ ಪ್ರಕೃತಿಯ ಆರಾಧಕರಾಗಿ, ಮರಕಾಡುಗಳ ಒಡನಾಟದಲ್ಲಿ ಬೆಳೆದು ಬಂದಿದ್ದಾರೆ. ಹೀಗಾಗಿಯೇ ಇಲ್ಲಿನವರಿಗೆ ಪರಿಸರದ ಪಾಠ ಹುಟ್ಟಿನಿಂದಲೇ ರಕ್ತಗತವಾಗಿ ಬಂದಿದೆ.

ಕೊಡಗಿನವರು ಪರಸರ ಪ್ರೇಮಿಗಳು ಎಂಬುದಕ್ಕೆ ಜಿಲ್ಲೆಯ ಪ್ರತಿ ಊರಿನಲ್ಲಿರುವ ಕಾಣಸಿಗುವ ದೇವರಕಾಡುಗಳೇ ಸಾಕ್ಷಿಯಾಗಿವೆ. ಇಲ್ಲಿನ ಸುಮಾರು 2,550 ಹೆಕ್ಟೇರ್ ಪ್ರದೇಶಗಳಲ್ಲಿ ದೇವರ ಕಾಡುಗಳು ಭದ್ರಕಾಳೇಶ್ವರಿ, ಭದ್ರಕಾಳಿ, ವನಭದ್ರಕಾಳಿ, ಬೇಟೆ ಅಯ್ಯಪ್ಪ, ಕುಟ್ಟಿಚಾತ ಹೀಗೆ ಸುಮಾರು 165 ಬೇರೆ, ಬೇರೆ ದೇವರ ಹೆಸರಿನಲ್ಲಿ ದೇವರ ಕಾಡುಗಳು ನೆಲೆ ನಿಂತಿದ್ದು, ಇಲ್ಲಿ ಮುಖ್ಯವಾಗಿ ಜಮ್ಮಾ ಮಾಪಿಳ್ಳೆಗಳು ಕೂಡ ಪಳ್ಳಿಕಾಡು ಹೆಸರಿನಲ್ಲಿ ಕಾಡನ್ನು ಆರಾಧಿಸುತ್ತಿರುವುದು ವಿಶೇಷವಾಗಿದೆ.

ಇಂದು ನಿನ್ನೆಯದಲ್ಲ ದೇವರಕಾಡಿನ ಸೃಷ್ಠಿ

ಇಂದು ನಿನ್ನೆಯದಲ್ಲ ದೇವರಕಾಡಿನ ಸೃಷ್ಠಿ

ವೃಕ್ಷ ಸಂಕುಲವೇ ದೇವರೆಂದು ನಂಬಿ ಜಿಲ್ಲೆಯ 18ಕ್ಕೂ ಅಧಿಕ ಮೂಲ ನಿವಾಸಿ ಜನಾಂಗವು ದೇವರ ಕಾಡುಗಳನ್ನು ರಕ್ಷಿಸುತ್ತಾ ಬಂದಿದ್ದು, ಇಂತಹ ದೇವರಕಾಡುಗಳು ಜಗತ್ತಿನ ಯಾವುದೇ ಭಾಗದಲ್ಲಿ ಕಾಣಸಿಗುವುದಿಲ್ಲ ಎಂಬುದು ಹೆಮ್ಮೆ ಪಡುವ ವಿಚಾರವಾಗಿದೆ. ಕೊಡಗಿನಲ್ಲಿ ದೇವರಕಾಡುಗಳ ಕಲ್ಪನೆ ಹುಟ್ಟಿಕೊಂಡಿದ್ದು ಹೇಗೆ ಮತ್ತು ಅದು ಮುಂದುವರೆದುಕೊಂಡು ಬಂದಿ ಹಾದಿಯನ್ನು ನೋಡುವುದಾದರೆ, ದೇವರಕಾಡಿನ ಸೃಷ್ಠಿ ಇಂದು ನಿನ್ನೆಯದಲ್ಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಮರಗಳಿಂದಲೇ ಕೃಷಿ ಸಲಕರಣೆ ತಯಾರು

ಮರಗಳಿಂದಲೇ ಕೃಷಿ ಸಲಕರಣೆ ತಯಾರು

ಕೃಷಿಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಬೆಟ್ಟಗುಡ್ಡ, ನೀರಿನಾಶ್ರಯವಿರುವ ಸ್ಥಳದಲ್ಲಿ ನೆಲೆಯೂರುತ್ತಿದ್ದ ಜನ ತಮಗೆ ಸಾಮರ್ಥ್ಯವಿರುವಷ್ಟು ಪ್ರದೇಶದಲ್ಲಿ ಗದ್ದೆಯನ್ನು ನಿರ್ಮಿಸಿ ಭತ್ತ, ತರಕಾರಿ, ಗೆಡ್ಡೆಗೆಣಸು, ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗೆ ಪೂರಕವಾದ ಸಲಕರಣೆಗಳನ್ನು ಕಾಡುಗಳಲ್ಲಿ ಸಿಗುವ ಗಟ್ಟಿಮುಟ್ಟಾದ ಕಾಡು ಮರಗಳಿಂದ ತಯಾರು ಮಾಡುತ್ತಿದ್ದರು. ತಾನು ಕೃಷಿ ಮಾಡುತ್ತಿದ್ದ ಪ್ರದೇಶಗಳಲ್ಲಿ ತನ್ನ ಕೃಷಿ ಕಾರ್ಯಕ್ಕೆ ಹೆಗಲಾಗಿ ದುಡಿಯುವ ಜಾನುವಾರುಗಳಿಗೆ ಕ್ರೂರ ಪ್ರಾಣಿಗಳಿಂದ ತೊಂದರೆಯಾಗದಿರಲಿ, ಕೃಷಿಯನ್ನು ವನ್ಯಪ್ರಾಣಿಗಳು ನಾಶ ಮಾಡದಿರಲಿ ಎಂದು ಹೆಮ್ಮರದ ಬುಡದಲ್ಲಿ ಕಲ್ಲನ್ನಿಟ್ಟು, ಅದನ್ನು ವಿವಿಧ ದೇವರ ರೂಪದಲ್ಲಿ ಪೂಜಿಸುತ್ತಿದ್ದರು. ಜತೆಗೆ ಪ್ರತಿ ವರ್ಷ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದರು..

ಸಾಕು ಪ್ರಾಣಿಗಳ ವೃದ್ಧಿಗೆ ದೇವರ ಮೊರೆ

ಸಾಕು ಪ್ರಾಣಿಗಳ ವೃದ್ಧಿಗೆ ದೇವರ ಮೊರೆ

ಇನ್ನು ಮನೆಗಳಲ್ಲಿ ಸಾಕು ಪ್ರಾಣಿಗಳು ವೃದ್ಧಿಯಾಗದಿದ್ದಾಗ ಹರಕೆ ಹೊತ್ತು ಬಳಿಕ ವರ್ಷದ ಹಬ್ಬದ ಸಂದರ್ಭದಲ್ಲಿ ಒಪ್ಪಿಸಲಾಗುತ್ತಿತ್ತು. ಹೀಗೆ ಹುಟ್ಟಿಬಂದ ವನದೇವರು ಇವತ್ತಿಗೂ ಜಿಲ್ಲೆಯ ಹಲವೆಡೆ ವಿವಿಧ ಅವತಾರಗಳಲ್ಲಿ ಜನರನ್ನು ಕಾಪಾಡುತ್ತಿವೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ನಾಗರಿಕತೆ ಬೆಳೆದಂತೆಲ್ಲ ಗದ್ದೆಯೊಂದಿಗೆ ಕಾಫಿ, ಏಲಕ್ಕಿ ತೋಟಗಳು ಹೆಚ್ಚಾಗತೊಡಗಿದವು. ಈ ವೇಳೆ ಕಾಡುಗಳೆಲ್ಲವೂ ಮಾಯವಾಗ ತೊಡಗಿತ್ತು. ಈ ಸಂದರ್ಭ ಹಿರಿಯರು ಕಾಡನ್ನು ಉಳಿಸುವ ಸಲುವಾಗಿ ತಾವು ಪೂಜಿಸಿಕೊಂಡು ಬಂದಿದ್ದ ವನದೇವತೆಗಾಗಿ ಕಾಡನ್ನು ಆಯಾಯ ಊರಿನ ಸಾಮರ್ಥ್ಯಕ್ಕೆ ತಕ್ಕಂತೆ ಮೀಸಲಿಟ್ಟರು. ಅದು ಇವತ್ತಿಗೂ ದೇವರಕಾಡಾಗಿಯೇ ಉಳಿದು ಬಂದಿದೆ.

ಒಂದೊಂದು ಊರಿಗೆ ಒಬ್ಬೊಬ್ಬ ಆಧಿದೈವ

ಒಂದೊಂದು ಊರಿಗೆ ಒಬ್ಬೊಬ್ಬ ಆಧಿದೈವ

ಒಂದೊಂದು ಊರುಗಳಲ್ಲಿರುವ ದೇವರಕಾಡುಗಳಲ್ಲಿ ಒಂದೊಂದು ರೀತಿಯ ದೇವರನ್ನು ಪೂಜಿಸುವುದನ್ನು ಕೊಡಗಿನಾದ್ಯಂತ ಕಾಣಬಹುದು. ಕೆಲವು ಕಡೆ ದೇವರಕಾಡಿನ ಆದಿದೈವದ ಪೂಜೆ ವರ್ಷಕ್ಕೊಮ್ಮೆ ನಡೆದರೆ ಮತ್ತೆ ಕೆಲವೆಡೆ ಎರಡು ವರ್ಷಕ್ಕೊಮ್ಮೆ ಹಬ್ಬವನ್ನು ಊರಿನವರು ನಡೆಸುತ್ತಾರೆ. ಬಹಳಷ್ಟು ದೇವರಕಾಡುಗಳು ಊರಿನ ಒಳಭಾಗದಲ್ಲಿದ್ದು, ಅದರ ವ್ಯಾಪ್ತಿಯ ಕುಟುಂಬಸ್ಥರು ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುತ್ತಾರೆ. ಹುತ್ತರಿ ಹಬ್ಬದ ದಿನ ಭತ್ತದ ಕದಿರು ಕೊಯ್ದು ದೇವರಿಗೆ ಅರ್ಪಿಸುತ್ತಾರೆ. ಇಲ್ಲಿರುವ ದೇವರ ಕಾಡುಗಳಲ್ಲಿ ಕೆಲವು ದೇವರಿಗೆ ಮಾತ್ರ ಗುಡಿಗೋಪುರವಿದೆ. ಕೆಲವು ದೇವರಿಗೆ ಗುಡಿಕಟ್ಟುವುದು ನಿಷಿದ್ಧವಾಗಿದ್ದು, ಮರದ ಬುಡವೇ ಆ ದೇವರುಗಳ ನೆಲೆಯಾಗಿದೆ.

Recommended Video

ಲೆಕ್ಕ ಕೊಟ್ಟು DC Rohini Sindhuri ತಿರುಗೇಟು ಕೊಟ್ಟ Shilpa Nag | Oneindia Kannada
ಆರಾಧನೆ ವಿಭಿನ್ನ ಉದ್ದೇಶ ಒಂದೇ

ಆರಾಧನೆ ವಿಭಿನ್ನ ಉದ್ದೇಶ ಒಂದೇ

ಬಹಳಷ್ಟು ಗ್ರಾಮಗಳಲ್ಲಿರುವ ದೇವರ ಕಾಡುಗಳ ಉಸ್ತುವಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಂಡಿದ್ದರೂ ವರ್ಷಕ್ಕೊಮ್ಮೆ ಪೂಜೆ ಪುನಸ್ಕಾರವನ್ನು ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಗ್ರಾಮಗಳಲ್ಲಿರುವ ದೇವರ ಕಾಡಿನಲ್ಲಿ ನೆಲೆನಿಂತ ದೇವರನ್ನು ಪೂಜಿಸುವ ಆರಾಧಿಸುವ ಕ್ರಮಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿದ್ದರೂ ಮೂಲ ಉದ್ದೇಶ ಮಾತ್ರ ಒಂದೇ ಆಗಿದ್ದು, ಅದು ಅರಣ್ಯವನ್ನು ಕಾಪಾಡುವುದು ಮತ್ತು ಆ ಮೂಲಕ ಪರಿಸರವನ್ನು ಸಂರಕ್ಷಿಸುವುದೇ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

English summary
Environment Day Special 2021: Since ancient times, Kodagu people has grown up in the companionship of woods, as a worshiper of nature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X