ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯ ಆರ್ಭಟಕ್ಕೆ ಬೆಚ್ಚಿ ಬಿದ್ದಿದೆ ಕೊಡಗು ಜಿಲ್ಲೆ...

|
Google Oneindia Kannada News

ಮಡಿಕೇರಿ, ಆಗಸ್ಟ್‌ 06: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಒಂದು ದಿನದ ಅವಧಿಯಲ್ಲಿ ಭಾಗಮಂಡಲದಲ್ಲಿ ದಾಖಲೆಯ 486 ಮಿ.ಮೀ ಮಳೆಯಾಗಿದೆ. ಪರಿಣಾಮ ಕಾವೇರಿ ನದಿ ಉಕ್ಕಿಹರಿಯುತ್ತಿದ್ದು ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ತಲಕಾವೇರಿಯ ಬ್ರಹ್ಮಗಿರಿಬೆಟ್ಟ ಮನೆ ಮೇಲೆ ಕುಸಿದು ಅರ್ಚಕ ಕುಟುಂಬ ನಾಪತ್ತೆಯಾಗಲು ಕಾರಣವಾಗಿದೆ.

ಗುರುವಾರ ಹಗಲು ವೇಳೆ ಒಂದಷ್ಟು ಬಿಡುವು ನೀಡಿದೆಯಾದರೂ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 177.07 ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗಿನ 1298.78 ಮಿ.ಮೀ, ಮಳೆ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಸುಮಾರು 200 ಮಿ.ಮೀ ಮಳೆ ಜಾಸ್ತಿಯಾಗಿದೆ. ಒಂದೇ ದಿನದಲ್ಲಿ ಮಡಿಕೇರಿ ತಾಲೂಕಿನಲ್ಲಿ 238.75 ಮಿ.ಮೀ. ವಿರಾಜಪೇಟೆ ತಾಲೂಕಿನಲ್ಲಿ 157.25 ಮಿ.ಮೀ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 135.20 ಮಿ.ಮೀ.ಮಳೆ ಸುರಿದಿದೆ.

ಕುಂಭದ್ರೋಣ ಮಳೆ: ಕೊಡಗಿನಾದ್ಯಂತ ಪ್ರವಾಹ ಭೀತಿ, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತಕುಂಭದ್ರೋಣ ಮಳೆ: ಕೊಡಗಿನಾದ್ಯಂತ ಪ್ರವಾಹ ಭೀತಿ, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ

2,859 ಅಡಿಯ ಹಾವೇರಿ ಜಲಾಶಯದಲ್ಲಿ 2855.16 ಅಡಿಯಷ್ಟು ನೀರಿದೆ. ಜಲಾಶಯಕ್ಕೆ 9081 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 11,811 ಕುಸೆಕ್ ನೀರನ್ನು ನದಿಗೂ ಹಾಗೂ 300 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗುತ್ತಿದೆ.

 ಪರಿಹಾರ ಕೇಂದ್ರಕ್ಕೆ ಜನರ ಸ್ಥಳಾಂತರ

ಪರಿಹಾರ ಕೇಂದ್ರಕ್ಕೆ ಜನರ ಸ್ಥಳಾಂತರ

ಇನ್ನು ಕುಂಭದ್ರೋಣ ಮಳೆ ಮತ್ತು ಬಿರುಗಾಳಿಯಿಂದಾಗಿ ಸಾಕಷ್ಟು ಹಾನಿಯುಂಟಾಗಿದೆ. ಜಿಲ್ಲೆಯ ಹಲವು ಕಡೆ ರಸ್ತೆಗೆ ಬಿದ್ದ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹೆದ್ದಾರಿಗಳಲ್ಲಿ ಬರೆ ಕುಸಿದಿರುವುದನ್ನು ತೆರವುಗೊಳಿಸಿ, ಸುಗಮ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡುವಲ್ಲಿ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ ಹಾಗೆಯೇ ವಿರಾಜಪೇಟೆಯ ನೆಹರು ನಗರ, ಅಯ್ಯಪ್ಪ ಸ್ವಾಮಿ ಬಡಾವಣೆ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

 ಭೋರ್ಗರೆಯುತ್ತಿರುವ ಜಲಪಾತಗಳು

ಭೋರ್ಗರೆಯುತ್ತಿರುವ ಜಲಪಾತಗಳು

ಜಿಲ್ಲೆಯಲ್ಲಿರುವ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿದ್ದು, ಬಲಮುರಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಮಲ್ಲಳ್ಳಿ, ಅಬ್ಬಿ, ಇರ್ಪು, ಚೇಲಾವರ ಸೇರಿದಂತೆ ಹಲವು ಜಲಪಾತಗಳು ಭೋರ್ಗರೆಯುತ್ತಿವೆ. ಆಗಸ್ಟ್ 1ರ ಶನಿವಾರ 15.51 ಮಿ.ಮೀ ಇದ್ದ ಸರಾಸರಿ ಮಳೆ, ಆಗಸ್ಟ್ 2ರ ಭಾನುವಾರದಂದು 11.53 ಮಿ.ಮೀಗೆ ಇಳಿಕೆ ಕಂಡಿತು. ಆದರೆ ಸೋಮವಾರದ ವೇಳೆಗೆ ಮುಂಗಾರು ಬಿರುಸುಗೊಂಡಿದ್ದರಿಂದ ಆಗಸ್ಟ್ 3ರಂದು ಜಿಲ್ಲಾ ಸರಾಸರಿ ಮಳೆ 50.92 ಮಿ.ಮೀ ಗೆ ಏರಿಕೆ ಕಂಡಿದ್ದು, ಬಳಿಕ ಮತ್ತಷ್ಟು ಚುರುಕುಗೊಂಡು ಆಗಸ್ಟ್ 4ರಂದು 106.12 ಮಿ.ಮೀಗೆ ಏರಿತು. ಆಗಸ್ಟ್ 5ರ ಬುಧವಾರ 142.59 ಮಿ.ಮೀ. ಮಳೆ ದಾಖಲಾಯಿತು. ಆಗಸ್ಟ್ 6ರ ಗುರುವಾರದ ವೇಳೆಗೆ 162.4 ಮಿ.ಮೀಗೆ ಏರಿಕೆ ಕಂಡಿದೆ. ಇದರಿಂದ ಅನಾಹುತಗಳು ಒಂದರ ಮೇಲೊಂದರಂತೆ ನಡೆಯುತ್ತಿವೆ.

ಕೊಡಗಿನಲ್ಲಿ ಅಬ್ಬರಿಸುತ್ತಿರುವ ಮುಂಗಾರು: ಜಿಲ್ಲಾಡಳಿತ ಅಲರ್ಟ್ಕೊಡಗಿನಲ್ಲಿ ಅಬ್ಬರಿಸುತ್ತಿರುವ ಮುಂಗಾರು: ಜಿಲ್ಲಾಡಳಿತ ಅಲರ್ಟ್

 ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬದವರು ಕಣ್ಮರೆ

ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬದವರು ಕಣ್ಮರೆ

ಭಾಗಮಂಡಲ ವ್ಯಾಪ್ತಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದೆ. ಸದ್ಯಕ್ಕೆ ಪ್ರಾಥಮಿಕ ಮಾಹಿತಿ ಪ್ರಕಾರ, ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುವುದಾಗಿ ತಿಳಿದುಬಂದಿದೆ. ಇನ್ನೊಬ್ಬ ಅರ್ಚಕರು ತಲಕಾವೇರಿಯ ಮನೆಯಲ್ಲಿಯೇ ಕುಟುಂಬದೊಂದಿಗೆ ವಾಸವಿದ್ದರು. ಹೀಗಾಗಿ ಕುಟುಂಬದ ನಾಲ್ವರು ಕಾಣೆಯಾಗಿರಬಹುದು ಎಂದು ಹೇಳಲಾಗಿದೆ. ಸದ್ಯ ರಕ್ಷಣಾ ತಂಡವು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದೆ.

 ಅಪಾಯಮಟ್ಟದಲ್ಲಿ ಹರಿಯುತ್ತಿರುವ ನದಿಗಳು

ಅಪಾಯಮಟ್ಟದಲ್ಲಿ ಹರಿಯುತ್ತಿರುವ ನದಿಗಳು

ಮಳೆಯಿಂದಾಗಿ ಕುಶಾಲನಗರದ ಕುವೆಂಪು ಬಡಾವಣೆ, ಸಾಯಿ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಮಡಿಕೇರಿ-ಸೋಮವಾರಪೇಟೆ ರಸ್ತೆ, ಸಂಪಿಗೆಕಟ್ಟೆ, ಪಿಂಟೋಟರ್ನ್ ಬಳಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದು, ವಿದ್ಯುತ್ ಕಂಬಗಳು ತುಂಡಾಗಿವೆ. ಈ ಪ್ರದೇಶದಲ್ಲಿ ತೆರವು ಕಾರ್ಯ ಪ್ರಗತಿಯಲ್ಲಿದೆ. ಬೇತ್ರಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಮಡಿಕೇರಿ-ಪ್ರಾದೇಶಿಕ ಸಾರಿಗೆ ಕಚೇರಿ ರಸ್ತೆ ಮಾರ್ಗದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡದವರಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಎಮ್ಮೆಮಾಡು ಗ್ರಾ.ಪಂ.ವ್ಯಾಪ್ತಿಯ ಮನೆ ಮೇಲೆ ಬುಧವಾರ ರಾತ್ರಿ ಮರ ಬಿದ್ದು ಮನೆಗೆ ಹಾನಿಯಾಗಿದೆ. ಈ ಮನೆಯ ಎಲ್ಲಾ ಸದಸ್ಯರನ್ನು ಬುಧವಾರ ರಾತ್ರಿಯೇ ಅವರ ಸಂಬಂಧಿಕರ ಮನೆಗಳಿಗೆ ಕಳುಹಿಸಲಾಗಿದೆ ಹಾಗೂ ಅವರ ಮನೆಯ ವಸ್ತುಗಳನ್ನು ಪಕ್ಕದ ಮನೆಗೆ ಸಾಗಿಸಲಾಗಿದೆ

 ರಸ್ತೆಗೆ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆ

ರಸ್ತೆಗೆ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆ

ಗೋಣಿಕೊಪ್ಪ-ಪಾಲಿಬೆಟ್ಟ ಮಾರ್ಗದ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಮಾದಾಪುರ ಹೊಸತೋಟದ ಬಳಿಯ ಎಂ.ಎಲ್.ಎ ಬಸ್ ನಿಲ್ದಾಣದಲ್ಲಿ ಬೃಹತ್ ಮರ ತೆರವುಗೊಳಿಸಲಾಗಿದೆ. ಎಮ್ಮೆಮಾಡು ಗ್ರಾಮದ ಪಡಿಯಣಿ ಭಾಗದ ಕೊಯಮ್ಮ ಅವರ ಮನೆಯು ಕಾವೇರಿ ಹೊಳೆಯ ಹಿನ್ನೀರಿನಲ್ಲಿ ಮುಳುಗಿದೆ. ಮನೆಯ ಎಲ್ಲಾ ಸದಸ್ಯರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಅವರ ಮನೆಯ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಎಮ್ಮೆಮಾಡುವಿನ ಗ್ರಾಮದ ದೊಡ್ಡ ಮಸೀದಿ ಹಿಂಭಾಗದ ಮನೆಗೆ ಕಾವೇರಿ ಹೊಳೆ ನೀರು ಬಂದಿದ್ದು, ಕುಟುಂಬದವರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ವಿರಾಜಪೇಟೆ ತಾಲೂಕಿನ ನಾಲ್ಕೇರಿ ರಸ್ತೆ ಮಾರ್ಗ 7ರಿಂದ 10 ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದ್ದು, ತೆರವು ಕಾರ್ಯವನ್ನು ಮಾಡಲಾಗುತ್ತಿದೆ. ಈ ನಡುವೆ ನೆಲ್ಯಹುದಿಕೇರಿ ಬೆಟ್ಟದ ಕಾಡು ಗ್ರಾಮದ 150 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

 ವಿರಾಜಪೇಟೆಗೆ ಸಂಚಾರ ನಿರ್ಬಂಧ

ವಿರಾಜಪೇಟೆಗೆ ಸಂಚಾರ ನಿರ್ಬಂಧ

ಮಡಿಕೇರಿ-ವಿರಾಜಪೇಟೆ ರಸ್ತೆಯ ಬೇತ್ರಿಯಲ್ಲಿ ಕಾವೇರಿ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಬೇತ್ರಿ ಸೇತುವೆ ಮೇಲಿನ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸಾರ್ವಜನಿಕರು ಮೂರ್ನಾಡು - ಕೊಂಡಂಗೇರಿ-ಹಾಲುಗುಂದ-ವಿರಾಜಪೇಟೆ, ಮಡಿಕೇರಿ- ಮರಗೋಡು- ಕೊಂಡಂಗೇರಿ- ಹಾಲುಗುಂದ- ವಿರಾಜಪೇಟೆ, ಕುಶಾಲನಗರ-ಗುಡ್ಡೆಹೊಸೂರು- ನೆಲ್ಲಿಹುದಿಕೇರಿ- ಸಿದ್ದಾಪುರ- ಅಮ್ಮತ್ತಿ- ವಿರಾಜಪೇಟೆ, ಸುಂಟಿಕೊಪ್ಪ- ಚೆಟ್ಟಳ್ಳಿ- ನೆಲ್ಲಿಹುದಿಕೇರಿ- ಸಿದ್ದಾಪುರ-ಅಮ್ಮತ್ತಿ-ವಿರಾಜಪೇಟೆ ಬದಲಿ ಮಾರ್ಗಗಳನ್ನು ಬಳಸಲು ಸೂಚನೆ ನೀಡಲಾಗಿದೆ. ಆಗಸ್ಟ್ 7 ರವರೆಗೂ ಹೆಚ್ಚಿನ ಮಳೆ ಮುಂದುವರೆಯಲಿದ್ದು, ನದಿ ಪಾತ್ರದ ಜನತೆ, ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿರುವ ಜನರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.

 ಮೂರು ಕಡೆ ಪರಿಹಾರ ಕೇಂದ್ರ ಸ್ಥಾಪನೆ

ಮೂರು ಕಡೆ ಪರಿಹಾರ ಕೇಂದ್ರ ಸ್ಥಾಪನೆ

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲೆಯ ಮೂರು ಭಾಗಗಳಲ್ಲಿ 3 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 20 ಕುಟುಂಬದ 48 ಜನರಿಗೆ ಆಶ್ರಯ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಆಹಾರ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

English summary
Rain continues in kodagu district. 486 mm rain has been recorded in one day. Bhagamandala submerged by cauvery river deluge
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X