• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿ.ಪಿ ಯೋಗೇಶ್ವರ್ ಎಂಎಲ್ಸಿ ಸದಸ್ಯತ್ವ ರದ್ದುಗೊಳಿಸಲು ಕಾಂಗ್ರೆಸ್ ಒತ್ತಾಯ

By ಮಡಿಕೇರಿ ಪ್ರತಿನಿಧಿ
|

ಮಡಿಕೇರಿ, ಸೆಪ್ಟೆಂಬರ್ 18: ಬಹುಕೋಟಿ ಹಗರಣದ ಆರೋಪ ಎದುರಿಸುತ್ತಿರುವ ಸಿ.ಪಿ ಯೋಗೇಶ್ವರ್ ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಕೆಪಿಸಿಸಿಯ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಎ.ಎಸ್ ಪೊನ್ನಣ್ಣ ಒತ್ತಾಯಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೆಗಾಸಿಟಿ ಯೋಜನೆಯ ಹಗರಣದಲ್ಲಿ ಸಿಲುಕಿರುವ ಸಿ.ಪಿ ಯೋಗೇಶ್ವರ್ ಅವರಿಗೆ ಮೇಲ್ಮನೆ ಸದಸ್ಯರಾಗಲು ಯಾವುದೇ ಅರ್ಹತೆಗಳಿಲ್ಲದಿದ್ದರೂ ಸಂವಿಧಾನಕ್ಕೆ ವಿರುದ್ಧವಾಗಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲು ಸೆ.25 ರಂದು ಕಾಲಾವಕಾಶ ಕೋರಿದ್ದರೂ, ನಮಗೆ ಯಾವುದೇ ಉತ್ತರ ಬಂದಿಲ್ಲ. ಮಾಹಿತಿ ಹಕ್ಕು ಮೂಲಕ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ನಾಮನಿರ್ದೇಶನವಾದ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದರೆ ಇದಕ್ಕೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಟೀಕಿಸಿದರು.

ವಕೀಲ ಪೊನ್ನಣ್ಣ ಆರೋಪ

ವಕೀಲ ಪೊನ್ನಣ್ಣ ಆರೋಪ

ಎಂಎಲ್ಸಿ ಸಿ.ಪಿ ಯೋಗೇಶ್ವರ್ ಅವರ ವಿರುದ್ಧ 9 ಚಾರ್ಜ್ ಶೀಟ್ ದಾಖಲಾಗಿದ್ದು, ಈಗಲೂ ಅವರು ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಲಾಗಿದೆ ಎಂದು ವಕೀಲ ಪೊನ್ನಣ್ಣ ಆರೋಪಿಸಿದರು.

ಬ್ರಹ್ಮಗಿರಿ ರಕ್ಷಿತಾರಣ್ಯದಲ್ಲಿ rallyಗೆ ಅವಕಾಶ; ಅರಣ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

ಮೇಲ್ಮನೆಗೆ ಸದಸ್ಯರಾಗಿ ನೇಮಕಗೊಳ್ಳುವವರು ಯಾವುದಾದರೊಂದು ಕ್ಷೇತ್ರದಲ್ಲಿ ವಿಶೇಷ ಜ್ಞಾನ ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಯೋಗೇಶ್ವರ್ ಅವರಿಗೆ ಈ ರೀತಿಯ ಯಾವುದೇ ಅರ್ಹತೆಗಳಿಲ್ಲ. ಅಸಂವಿಧಾನಿಕ ರೀತಿಯಲ್ಲಿ ಹಿರಿಯರ ಮನೆ ಪ್ರವೇಶಿಸಿರುವ ಯೋಗೇಶ್ವರ್ ಅವರ ವಿಧಾನ ಪರಿಷತ್ ಸ್ಥಾನವನ್ನು ರದ್ದುಗೊಳಿಸದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಪೊನ್ನಣ್ಣ ಎಚ್ಚರಿಕೆ ನೀಡಿದರು. ಈ ಹಿಂದೆ ಇದ್ದ ಮೈತ್ರಿ ಸರ್ಕಾರವನ್ನು ಬೀಳಿಸಿದಕ್ಕಾಗಿ ವಿಧಾನ ಪರಿಷತ್ ಸ್ಥಾನವನ್ನು ಗಿಫ್ಟ್ ಆಗಿ ನೀಡಲಾಗಿದೆ ಎಂದು ಟೀಕಿಸಿದರು.

ರಾಜ್ಯ ಖಜಾನೆ ಖಾಲಿ

ರಾಜ್ಯ ಖಜಾನೆ ಖಾಲಿ

ರಾಜ್ಯ ಸರ್ಕಾರದ ಖಜಾನೆಯಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವೇ ಇಲ್ಲದಾಗಿದೆ. ವೇತನಕ್ಕಾಗಿ 1,800 ಕೋಟಿ ರೂ.ಗಳ ಅಗತ್ಯತೆ ಇದೆ. ತೆರಿಗೆ ಪಾವತಿಯಲ್ಲಿ ರಾಜ್ಯ ಏಳನೇ ಸ್ಥಾನದಲ್ಲಿದೆ, ಆದರೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದ ಪ್ರಮಾಣದಲ್ಲಿ 25ನೇ ಸ್ಥಾನದಲ್ಲಿದೆ ಎಂದು ಪೊನ್ನಣ್ಣ ತಿಳಿಸಿದರು.

ಪೊಲೀಸ್ ಕಮಿಷನರ್ ಗಳ ಕೃಪೆ ಇಲ್ಲದೆ ಡ್ರಗ್ಸ್ ದಂಧೆ ನಡೆಯಲು ಸಾಧ್ಯವಿಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವುದು ತನಿಖೆಯಲ್ಲ, ಕೇವಲ ಪ್ರದರ್ಶನವಷ್ಟೇ ಎಂದು ಟೀಕಿಸಿದರು. ಸತ್ತವರು ಯಾರೆಂದು ತಿಳಿಯದೆ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದಂತೆ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ದೊಡ್ಡ ದೊಡ್ಡ ವ್ಯಕ್ತಿಗಳು ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ನ್ಯಾಯಾಲಯದ ಆದೇಶ ಪಾಲಿಸದ ಅರಣ್ಯ ಇಲಾಖೆ

ನ್ಯಾಯಾಲಯದ ಆದೇಶ ಪಾಲಿಸದ ಅರಣ್ಯ ಇಲಾಖೆ

ಕೊಡಗು ಜಿಲ್ಲೆಯಲ್ಲಿ 2013ರಿಂದಲೇ ಕಾಡಾನೆಗಳ ಹಾವಳಿ ತೀವ್ರತೆಯನ್ನು ಪಡೆದುಕೊಂಡಿದ್ದರೂ, ಅರಣ್ಯ ಇಲಾಖೆ ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ಎ.ಎಸ್ ಪೊನ್ನಣ್ಣ ಇದೇ ಸಂದರ್ಭದಲ್ಲಿ ಆರೋಪಿಸಿದರು.

ಅಂದು ಕೊಡಗಿನಲ್ಲಿ 120 ಕಾಡಾನೆಗಳಿದ್ದವು, ಇಂದು ಅವುಗಳ ಸಂಖ್ಯೆ 168ಕ್ಕೆ ಏರಿಕೆಯಾಗಿರುವ ಬಗ್ಗೆ ಮಾಹಿತಿ ಇದೆ. ಕಾಡಾನೆ ಉಪಟಳದ ಕುರಿತು ಬೆಳೆಗಾರ ನಂದಾಸುಬ್ಬಯ್ಯ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಹಿನ್ನೆಲೆ 2013 ರಲ್ಲಿ ಕೊಡಗು ಜಿಲ್ಲೆಗೆ ಸಿಮೀತವಾಗಿ 13 ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. ಆದರೆ ಇವುಗಳಲ್ಲಿ ಒಂದೇ ಒಂದು ಆದೇಶವನ್ನು ಅರಣ್ಯ ಇಲಾಖೆ ಪಾಲಿಸಲಿಲ್ಲ ಎಂದು ಪೊನ್ನಣ್ಣ ಆರೋಪಿಸಿದರು.

ನ್ಯಾಯಾಂಗ ನಿಂದನೆ ಮಾಡುತ್ತಲೇ ಬಂದಿದೆ

ನ್ಯಾಯಾಂಗ ನಿಂದನೆ ಮಾಡುತ್ತಲೇ ಬಂದಿದೆ

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಕಾಡಾನೆಗಳಿವೆ ಎನ್ನುವ ಬಗ್ಗೆ ಸರ್ಕಾರ ಮತ್ತು ಖುದ್ದು ಅರಣ್ಯ ಇಲಾಖೆಗೇ ಮಾಹಿತಿ ಇಲ್ಲ. ನ್ಯಾಯಾಲಯದ ಆದೇಶದಂತೆ ಕಾಫಿ ತೋಟಗಳಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಟಾಸ್ಕ್ ಫೋರ್ಸ್ ಮೂಲಕ ಸೆರೆ ಹಿಡಿದು ಪಳಗಿಸಲು ಕ್ರಮ ಕೈಗೊಳ್ಳಬೇಕು. ಕಾಡಾನೆಗಳು ಹೆಚ್ಚಾಗಿ ಕಂಡು ಬರುವ ಸಾರ್ವಜನಿಕ ಪ್ರದೇಶದಲ್ಲಿ ಸೋಲಾರ್ ಬೇಲಿ ಮತ್ತು ಕಂದಕವನ್ನು ನಿರ್ಮಿಸಬೇಕು. ಆದರೆ ಆದೇಶ ನೀಡಿ ಏಳು ವರ್ಷಗಳೇ ಕಳೆದರೂ ಅದು ಪಾಲನೆಯಾಗಿಲ್ಲ. ಕಾಡಾನೆ ಉಪಟಳದ ತೀವ್ರತೆಯನ್ನು ನಿಯಂತ್ರಿಸಲು ನ್ಯಾಯಾಲಯದ ಸಲಹೆಗಳಲ್ಲಿ ಪರಿಹಾರಗಳಿವೆ. ಆದರೆ ಅರಣ್ಯ ಇಲಾಖೆ ಯಾವುದನ್ನು ಕೂಡ ಪಾಲಿಸದೆ ನ್ಯಾಯಾಂಗ ನಿಂದನೆ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದ ಪೊನ್ನಣ್ಣ ಅವರು, ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

ಕೊಡಗು ಕರ್ನಾಟಕದಲ್ಲಿಲ್ಲವೇ?

ಕೊಡಗು ಕರ್ನಾಟಕದಲ್ಲಿಲ್ಲವೇ?

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ ಮಂಜುನಾಥ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿದ್ದು, ಈಗಾಗಲೇ 30 ಮಂದಿ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದು, ಕೊಡಗು ಕರ್ನಾಟಕದಲ್ಲಿಲ್ಲವೇ ಎಂದು ಪ್ರಶ್ನಿಸಿದರು. ರೈತರು, ಕಾರ್ಮಿಕರು, ಚಾಲಕರು, ಬಡವರು, ಉದ್ಯಮಿಗಳು ಸೇರಿದಂತೆ ಎಲ್ಲಾ ವರ್ಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿಯಿಂದ ಭೂಕುಸಿತ ಮತ್ತಿತರ ಅನಾಹುತಗಳು ಸಂಭವಿಸಿ ಗದ್ದೆ, ತೋಟ, ಮನೆಗಳು ಹಾನಿಗೀಡಾಗಿವೆ. ಆದರೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದರು.

  Sandalwood Drug mafia ವಿಚಾರವಾಗಿ Akul , santosh ,yuvarajಗೆ CCB ಬುಲಾವ್ | Oneindia Kannada
  ಭೂಮಿ ಪೂಜೆ ನೆರವೇರಿಸುವುದನ್ನು ನಿಲ್ಲಿಸಲಿ

  ಭೂಮಿ ಪೂಜೆ ನೆರವೇರಿಸುವುದನ್ನು ನಿಲ್ಲಿಸಲಿ

  ಕೊಡಗಿನ ಜನರ ಕಣ್ಣೀರು ಬಿಜೆಪಿ ಸರ್ಕಾರಕ್ಕೆ ಶಾಪವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಉಸ್ತುವಾರಿ ಸಚಿವರು ಕಾಟಾಚಾರಕ್ಕೆ ಸಭೆ ನಡೆಸುವುದು ಮತ್ತು ಶಾಸಕರುಗಳು ಭೂಮಿ ಪೂಜೆ ನೆರವೇರಿಸುವುದನ್ನು ನಿಲ್ಲಿಸಲಿ. ಜನರ ನೈಜ ಸಮಸ್ಯೆಗಳಿಗೆ ಮೊದಲು ಸ್ಪಂದಿಸಲಿ ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಮುಖರಾದ ಟಿ.ಪಿ.ರಮೇಶ್, ಕೆ.ಪಿ.ಚಂದ್ರಕಲಾ ಹಾಗೂ ಎಚ್.ಎಂ ನಂದಕುಮಾರ್ ಉಪಸ್ಥಿತರಿದ್ದರು.

  English summary
  Chairman of the RTI Division of KPCC, AS Ponnanna has demanded that CP Yogeshwar's MLC membership be canceled due to alleged multi-crore scam.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X