• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನ ಕೈ ಪಕ್ಷದಲ್ಲಿ ಶಮನವಾಗದ ಅಸಮಾಧಾನ...

|

ಮಡಿಕೇರಿ, ಸೆಪ್ಟೆಂಬರ್ 16: ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಸೋನಿಯಾ ಗಾಂಧಿಯವರು ಪಕ್ಷದಲ್ಲಿ ಆಡಳಿತ ಸುಧಾರಣೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದು, ಒಂದಷ್ಟು ನಾಯಕರ ಸ್ಥಾನ ಪಲ್ಲಟ ಮಾಡಿರುವುದು ಹೊಸ ಬೆಳವಣಿಗೆಯಾಗಿದೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ದೇ ಆದರೆ, ಪಕ್ಷದ ತಳಮಟ್ಟದಲ್ಲಿರುವ ಗೊಂದಲವೇ ಬಗೆಹರಿಯದೆ ಉಳಿದಿರುವಾಗ ಮೇಲ್ಮಟ್ಟದಲ್ಲಿ ಏನೇ ಬದಲಾವಣೆ ಮಾಡಿದರೂ ಅದು ತಕ್ಷಣಕ್ಕೆ ಪರಿಣಾಮ ಬೀರುತ್ತಾ ಎಂಬುದೇ ಪ್ರಶ್ನೆಯಾಗಿದೆ. ಅದು ಏನೇ ಇರಲಿ, ರಾಜ್ಯಮಟ್ಟದಲ್ಲಿ ನೋಡಿದ್ದೇ ಆದರೆ, ಕಾಂಗ್ರೆಸ್ ನಾಯಕರು ಇನ್ನೂ ಗೊಂದಲದಲ್ಲಿರುವುದು ಎದ್ದು ಕಾಣುತ್ತಿದೆ. ಕೆಲವು ನಾಯಕರಿಗೆ ಜವಾಬ್ದಾರಿ ನೀಡಲಾಗಿದೆಯಾದರೂ ಮತ್ತೆ ಕೆಲ ಹಿರಿಯ ನಾಯಕರನ್ನು ಮೂಲೆ ಗುಂಪಾಗಿ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.

ಸಂಸದರೇ ಎಲ್ಲಿದ್ದೀರಪ್ಪಾ?: ಪ್ರತಾಪ್ ಸಿಂಹ ವಿರುದ್ಧ ಕೊಡಗು ಕಾಂಗ್ರೆಸ್ ಅಸಮಾಧಾನ

 ಆಡಳಿತ ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ತರಾಟೆ

ಆಡಳಿತ ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ತರಾಟೆ

ಕೊರೋನಾ ಸೋಂಕಿನಿಂದ ಅನಾರೋಗ್ಯಕ್ಕೀಡಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ರಾಜ್ಯದಲ್ಲಿ ಮಾದಕ ದ್ರವ್ಯದ ಸುದ್ದಿಗಳು ದಿನಕ್ಕೊಂದು ರೀತಿಯ ಬೆಳವಣಿಗೆಯನ್ನು ಪಡೆಯುತ್ತಿದ್ದರೂ ಸದ್ಯಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಆದರೆ ಪ್ರತಿಪಕ್ಷದ ನಾಯಕನಾಗಿ ಸಿದ್ದರಾಮಯಯ್ಯ ಅವರು ಆಡಳಿತ ಪಕ್ಷದ ನಾಯಕರಿಗೆ ಟಾಂಗ್ ನೀಡುತ್ತಾ ಸದ್ಯ ಸುದ್ದಿಯಲ್ಲಿದ್ದಾರೆ. ಅದು ಅನಿವಾರ್ಯವೂ ಹೌದು.

 ಕೊಡಗಿನಲ್ಲಿ ನೆಲೆಕಾಣದ ಕಾಂಗ್ರೆಸ್

ಕೊಡಗಿನಲ್ಲಿ ನೆಲೆಕಾಣದ ಕಾಂಗ್ರೆಸ್

ಈ ಹಿಂದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಧಿಸಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಅಂತಹ ಜಿಲ್ಲೆಗಳಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್ ನಾಯಕರು ಶತಗತಾಯ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಉದಾಹರಣೆ ಕೊಡಗು.

ಇಂದು ಕೊಡಗು ಬಿಜೆಪಿಯ ಭದ್ರಕೋಟೆಯಾಗಿದೆ. ಆದರೆ ಹಿಂದೆ ಕಾಂಗ್ರೆಸ್‌ನ ಹಿಡಿತದಲ್ಲಿತ್ತು ಎಂಬುದು ಅಷ್ಟೇ ಸತ್ಯ. ಕಾಂಗ್ರೆಸ್ ನಾಯಕರ ಒಳಜಗಳಗಳು, ಜತೆಗೆ ಪಕ್ಷವನ್ನು ಕೊಂಡೊಯ್ಯುವ ಸಮರ್ಥ ನಾಯಕರ ಕೊರತೆ ಕೂಡ ಸದ್ದಿಲ್ಲದೆ ಬಿಜೆಪಿ ಜಿಗಿತುಕೊಳ್ಳಲು ಸಾಧ್ಯವಾಯಿತು. ಕೊಡಗಿನ ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿ ನಾಯಕರೆಲ್ಲರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ ಕರೆದೊಯ್ಯುವ ಪ್ರಯತ್ನವನ್ನು ಕೈ ಪಕ್ಷದ ರಾಜ್ಯ ನಾಯಕರು ಮಾಡಿದರೂ ಯಾವುದೇ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ. ಪರಿಣಾಮ ಮೂಲ ಮತ್ತು ವಲಸಿಗ ಎಂಬ ಕಂದಕವಂತು ಮುಂದುವರೆಯುತ್ತಲೇ ಸಾಗಿದ್ದು, ಇದು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ತೊಡಕುಂಟು ಮಾಡಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

 ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತು

ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತು

ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅನ್ನು ರಾಜ್ಯದಲ್ಲಿ ಸಂಘಟನೆ ಮಾಡಬೇಕೆಂಬ ಹಟಕ್ಕೆ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೊಡಗಿನ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಮತ್ತು ಅಸಮಾಧಾನಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಕೊಡಗು ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ನೆಲೆಯನ್ನು ಭದ್ರಗೊಳಿಸುವತ್ತ ದಾಪುಗಾಲಿಟ್ಟಿದೆ. ಇದೇ ವೇಳೆ ಕೊಡಗಿನಿಂದಲೇ ಪಕ್ಷವನ್ನು ಗಟ್ಟಿಗೊಳಿಸಿಕೊಂಡು ಬರುವ ಕಾಂಗ್ರೆಸ್ ನಾಯಕರ ಆಕಾಂಕ್ಷೆಗೆ ಅಲ್ಲಿನ ಬೆಳವಣಿಗೆಗಳು ತಣ್ಣೀರು ಎರಚಿವೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕೊಡಗಿಗೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಅವರು ಮಡಿಕೇರಿಯ ವ್ಯಾಲಿವ್ಯೂ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಯಾವ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಬದಲಿಗೆ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡು ಕಲಹಕ್ಕೆ ಕಾರಣವಾಗುವುದರೊಂದಿಗೆ ಅಸಮಾಧಾನಗಳು ಭುಗಿಲೆದ್ದಿವೆ. ಇದಕ್ಕೆ ಕಾರಣವೂ ಇದೆ. ಪಕ್ಷಕ್ಕಾಗಿ ದುಡಿದ ನಾಯಕರನ್ನು ಹೊರಗಿಟ್ಟು ಕಾರ್ಯಕಾರಣಿ ಸಭೆ ನಡೆಸಲಾಗಿದೆ ಎಂಬುದು ಕೆಲವು ನಾಯಕರ ಆಕ್ರೋಶ.

 ಕೊಡಗು ಕೈ ಅಧ್ಯಕ್ಷರ ವಿರುದ್ಧವೇ ಆಕ್ರೋಶ

ಕೊಡಗು ಕೈ ಅಧ್ಯಕ್ಷರ ವಿರುದ್ಧವೇ ಆಕ್ರೋಶ

ಮೊದಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ವಿರುದ್ಧ ಒಂದು ವರ್ಗದ ನಾಯಕರು ರೊಚ್ಚಿಗೆದ್ದಿದ್ದು, ಅವರನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ಹೀಗಿರುವಾಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಅವರನ್ನು ಜಿಲ್ಲೆಗೆ ಕರೆಯಿಸಿ ತೇಪೆ ಹಾಕಿ ನಾಯಕರಲ್ಲಿರುವ ಅಸಮಾಧಾನವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗದಿರುವುದನ್ನು ನೋಡಿದರೆ ಕೊಡಗಿನಲ್ಲಿ ಕಾಂಗ್ರೆಸ್‌ಗೆ ಉಳಿಗಾಲ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಕಾಂಗ್ರೆಸ್ ಜಿಲ್ಲಾ ಸಮಿತಿ, ಯುವ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್ ಹೀಗೆ ಹಲವು ಸಮಿತಿಗಳಿದ್ದರೂ ಇವುಗಳ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಅಷ್ಟೇ ಸತ್ಯ. ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಅವರ ನಡುವೆಯೂ ಭಿನ್ನಾಭಿಪ್ರಾಯಗಳಿವೆ. ಇಂತಹ ಭಿನ್ನಾಭಿಪ್ರಾಯಗಳನ್ನು ಅರಿತು ಅದಕ್ಕೆ ತಕ್ಕ ಸಲಹೆ ಸೂಚನೆ ನೀಡಬೇಕಾದ ಕೆಪಿಸಿಸಿ ಕಾರ್ಯಾಧ್ಯಕ್ಷರು ಕೆಲವು ನಾಯಕರನ್ನಷ್ಟೆ ಕರೆದು ಕಾರ್ಯಕಾರಣಿ ಸಭೆ ನಡೆಸಿದರೆ ಅಸಮಾಧಾನಕ್ಕೆ ಇತಿಶ್ರೀ ಹಾಡಲು ಸಾಧ್ಯವೇ ಎಂಬುದು ಪಕ್ಷದೊಳಗಿನ ಕಾರ್ಯಕರ್ತರ ಪ್ರಶ್ನೆಯಾಗಿದೆ.

  Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada
   ರಾಜ್ಯನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

  ರಾಜ್ಯನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

  ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಹೋಗಲು ಜಿಲ್ಲಾಧ್ಯಕ್ಷರೇ ಕಾರಣ ಎಂಬುದಾಗಿ ತಾಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬೊಟ್ಟು ಮಾಡುತ್ತಿದ್ದಾರೆ. ಪಕ್ಷದಲ್ಲಿ ಬಹಳಷ್ಟು ಹಿರಿಯ ನಾಯಕರಿದ್ದಾರೆ. ಆದರೂ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಸಕಾಲದಲ್ಲಿ ರಾಜ್ಯ ನಾಯಕರು ಎಚ್ಚೆತ್ತುಕೊಳ್ಳದೆ ಹೋದರೆ ಕೊಡಗಿನಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂಬುದಂತು ಸತ್ಯ.

  English summary
  Internal fights between congress leaders and lack of capable leader to develop party leads to the dominance of bjp in kodagu district,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X