ಕೊಡಗು ಜಿಲ್ಲಾಧಿಕಾರಿಯಾಗಿ ಚಾರುಲತ ಸೋಮಲ್ ಅಧಿಕಾರ ಸ್ವೀಕಾರ
ಮಡಿಕೀರಿ, ಜನವರಿ 23: ಕೊಡಗು ಜಿಲ್ಲಾಧಿಕಾರಿಯಾಗಿ ಚಾರುಲತ ಸೋಮಲ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ.
ತಮ್ಮ ಸೇವಾವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಂದಾಗಿ ಜನಮಾನಸದಲ್ಲಿ ಹೆಸರುವಾಸಿಯಾಗಿರುವ ಅಧಿಕಾರಿ ಚಾರುಲತ ಸೋಮಲ್ ಅವರು ಶನಿವಾರ ಪ್ರಭಾರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭನ್ವರ್ ಸಿಂಗ್ ಮೀನಾ ಅವರಿಂದ ಅಧಿಕಾರ ಸ್ವೀಕರಿಸಿದರು.
ಕೊಡಗು ತೊರೆದು ದೀರ್ಘ ರಜೆಗೆ ಡಿಸಿ ಅನ್ನಿಸ್ ಕಣ್ಮಣಿ ಜಾಯ್
ಅವರ ಸಿಇಒ ಅಧಿಕಾರವಧಿಯಲ್ಲಿ ಕೊಡಗಿನ ಜಿಲ್ಲಾ ಪಂಚಾಯತ್ ಕಟ್ಟಡ ಹಾಗೂ ನೂತನ ನ್ಯಾಯಾಲಯದ ಕಾಮಗಾರಿಯಾಗುತ್ತಿರುವ ಕೆ.ನಿಡುಗಡೆ ಗ್ರಾಮದ ಸ್ಥಳಗಳ ಅಕ್ರಮ ಒತ್ತುವರಿಯನ್ನು ದಿಟ್ಟತನದಿಂದ ತೆರವುಗೊಳಿಸಿ, ಸರಕಾರದ ವಶಪಡಿಸಿಕೊಂಡ ಕೀರ್ತಿ ಅವರದ್ದಾಗಿದೆ.
ತಮ್ಮ ಪ್ರಾಮಾಣಿಕತೆ ಹಾಗು ನಿಸ್ವಾರ್ಥ ಸೇವೆಯಿಂದ ಕೊಡಗಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಚಾರುಲತ ಸೋಮಲ್, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನದಂತೆ ಕಾಡಿದ್ದರು. ಜನಾನೂರಾಗಿ ಆಗಿ ಸೈ ಎನಿಸಿಕೊಂಡಿದ್ದ ಚಾರುಲತ ಸೋಮಲ್ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಗ್ರಪಂಕ್ತಿಯಲ್ಲಿರುತ್ತಿದ್ದರು.
ಈ ಹಿಂದೆ ಕೊಡಗು ಜಿಲ್ಲಾ ಪತ್ರಕರ್ತರ ವೇದಿಕೆಯ ಆಶ್ರಯಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದ ಯಶಸ್ವಿಗೆ ಇವರ ಕೊಡುಗೆ ಅಪಾರ. ಅಂದಿನ ವಿನೂತನ ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿರುವ ಡಾ.ಎಂ.ಆರ್ ರವಿಯವರು ಭಾಗಿಯಾಗಿದ್ದರು.
ಈಗಾಗಲೇ ಕೊಡಗಿನಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಚಾರುಲತ ಸೋಮಲ್ ಅಂದೇ ವಿನೂತನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದರು.
ನಿಷ್ಠಾವಂತ, ಖಡಕ್ ಅಧಿಕಾರಿ ಹಾಗೂ ಕಾನೂನು ಪಾಲಕಿ ಎಂಬ ಹೆಗ್ಗಳಿಯೊಂದಿಗೆ ಕೊಡಗಿನಿಂದ ನಿರ್ಗಮಿಸಿದ್ದ ಇವರು ಇದೀಗ ಜಿಲ್ಲಾಧಿಕಾರಿಗಳಾಗಿ ಕೊಡಗಿಗೆ ಮರಳಿದ್ದಾರೆ.
ಈ ಬದಲಾದ ಪರಿಸ್ಥಿತಿಯಲ್ಲಿ ಎರಡು ಮಹಾಮಳೆ, ಗುಡ್ಡಕುಸಿತ ಹಾಗೂ ಕೋವಿಡ್ನಿಂದ ತತ್ತರಿಸಿರುವ ಕೊಡಗಿನ ಅಭಿವೃದ್ಧಿ ಅವರ ಮುಂದಿರುವ ಸವಾಲುಗಳಾಗಿವೆ.