ಕೊಡಗಿನಲ್ಲಿ ಮಳೆಗಾಲ ಬಿರುಸು, ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ
ಮಡಿಕೇರಿ, ಜುಲೈ 3: ಕೊಡಗಿನಲ್ಲಿ ಕೊನೆಯ ಪಾದದ ಆರಿದ್ರಾ ಮಳೆ ಚುರುಕು ಪಡೆದುಕೊಂಡಿದ್ದರಿಂದ ತೊರೆ, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಾರಂಭಿಸಿದ್ದು, ಪರಿಣಾಮ ಪ್ರವಾಹದ ಭೀತಿ ಎದುರಾಗಿದೆ. ಇದೆಲ್ಲದರ ನಡುವೆ ಹಾರಂಗಿ ಜಲಾಶಯವು ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಬಾಗಿನ ಅರ್ಪಿಸಿದ್ದಾರೆ.
ಕೇವಲ ಮಳೆಯೊಂದೇ ಸುರಿಯುವುದಾಗಿದ್ದರೆ, ಜನರು ಅದಕ್ಕೆ ಹೆದರುತ್ತಿರಲಿಲ್ಲ. ಆದರೆ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಇಲ್ಲಿವರೆಗೆ ಸುರಿದ ಮಳೆಯ ಪ್ರಮಾಣ ಸುಮಾರು 167 ಮಿ. ಮೀ. ನಷ್ಟು ಕಡಿಮೆಯಿದೆ. ಕಳೆದ ವರ್ಷವೂ ಮುಂಗಾರು ಆರಂಭದ ದಿನಗಳು ಬಿರುಸಿನಿಂದ ಕೂಡಿರಲಿಲ್ಲ. ಹಿಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿತ್ತು. ಹೀಗಾಗಿ ಹೆಚ್ಚಿನ ಅನಾಹುತಗಳು ಸಂಭವಿಸಿರಲಿಲ್ಲ.
ಭೂಕಂಪನ ಮಹಾಮಳೆಯ ಮುನ್ಸೂಚನೆಯಾ?... ಅವತ್ತು ಹಾಗೆಯೇ ಆಗಿತ್ತು!
ಈ ಬಾರಿ ಮೇ ತಿಂಗಳಲ್ಲಿ ಥೇಟ್ ಮಳೆಗಾಲದಂತೆಯೇ ಮಳೆ ಸುರಿದಿತ್ತು. ಬಳಿಕ ಮಳೆ ನಿಧಾನವಾಗಿ ಸುರಿಯುತ್ತಾ ಇದೀಗ ಬಿರುಸು ಪಡೆದುಕೊಳ್ಳುತ್ತಿದೆ. ಮೃಗಶಿರಾ ಸೇರಿದಂತೆ ಇನ್ನುಳಿದ ಎಲ್ಲ ಮಳೆಗಳು ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಮಳೆಯ ನಕ್ಷತ್ರಗಳಾಗಿರುವುದರಿಂದ ಅದರಲ್ಲೂ ಆಗಸ್ಟ್ ತಿಂಗಳಿನಲ್ಲಿಯೇ ಈ ಹಿಂದೆ ಹೆಚ್ಚಿನ ಭೂಕುಸಿತಗಳು ಸಂಭವಿಸಿರುವುದರಿಂದ ಮುಂದಿನ ದಿನಗಳು ಎಲ್ಲಿ ಭಯಾನಕವಾಗಿ ಬಿಡುತ್ತವೆಯೋ ಎಂಬ ಭಯ ಪ್ರತಿಯೊಬ್ಬರನ್ನು ಕಾಡಲಾರಂಭಿಸಿದೆ.
Infographics: ಕರ್ನಾಟಕದಲ್ಲಿ ಜುಲೈ 4ರವರೆಗೂ ಚುರುಕಿನ ಮಳೆ

ಮಳೆಗಾಲವೆಂದರೆ ಭಯದ ಪರಿಸ್ಥಿತಿ
2018ರ ನಂತರದ ಮಳೆಗಾಲಗಳು ಕೊಡಗಿನ ಜನರ ಪಾಲಿಗೆ ಭಯ, ಆತಂಕ ಹುಟ್ಟಿಸುವ ಮಳೆಗಾಲಗಳಾಗಿ ಪರಿಣಮಿಸಿದ್ದು, ಮಳೆಗಾಲವನ್ನು ಭಯದಲ್ಲಿಯೇ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಕೊಡಗು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದಾಗಿ ಸಮತಟ್ಟು ಪ್ರದೇಶಗಳನ್ನು ಹುಡುಕಿ ಅಥವಾ ಬೆಟ್ಟ ಪ್ರದೇಶವನ್ನು ಸಮತಟ್ಟು ಮಾಡಿ ಮನೆ ನಿರ್ಮಿಸಿದ್ದು, ಈಗ ಸೃಷ್ಟಿಸಿರುವ ಭೂಕಂಪನ ಮುಂದೆ ಯಾವ ಅನಾಹುತವನ್ನು ತಂದೊಡ್ಡಬಹುದೋ ಗೊತ್ತಿಲ್ಲ.

ಮಡಿಕೇರಿ ತಾಲೂಕಿನಲ್ಲೂ ಭಾರಿ ಮಳೆ
ಮಳೆ ಬಿರುಸು ಪಡೆದುಕೊಳ್ಳುತ್ತಿದ್ದು, ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 53.01 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 779.73 ಮಿ. ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 946.74 ಮಿ. ಮೀ ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ. ಇನ್ನು ಮಡಿಕೇರಿ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ ಒಂದು ದಿನದ ಅವಧಿಯಲ್ಲಿ 100.25 ಮಿ. ಮೀ. ಮಳೆ ಸುರಿದಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 25.87 ಮಿ. ಮೀ. ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 32.90 ಮಿ. ಮೀ. ಮಳೆಯಾಗಿದೆ.

ಶೀಘ್ರವೇ ಜಲಾಶಯ ಭರ್ತಿ
ಇನ್ನೊಂದೆಡೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗುತ್ತಿದ್ದು, ಮಳೆಯಾಗುತ್ತಿದ್ದು, ಗರಿಷ್ಠ 2,859 ಅಡಿಗಳ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 2856.52 ಅಡಿಗಳಷ್ಟಿದೆ. ಕಳೆದ ವರ್ಷ ಇದೇ ದಿನ 2841.55 ಅಡಿಗಳಷ್ಟಿತ್ತು. ಜಲಾಶಯಕ್ಕೆ 4321 ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಶೀಘ್ರವೇ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಜಲಾಶಯದಿಂದ ಸುಮಾರು ಹತ್ತು ಸಾವಿರ ಕ್ಯೂಸೆಕ್ ನೀರನ್ನು ಬಿಡುವ ಸಾಧ್ಯತೆಯಿದೆ.

ಜಲಾಶಯದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ
ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಐ. ಕೆ. ಪುಟ್ಟಸ್ವಾಮಿ ಸೂಚನೆ ನೀಡಿದ್ದಾರೆ.
ಇದೆಲ್ಲದರ ನಡುವೆ ಹಾರಂಗಿ ಜಲಾಶಯ ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಶನಿವಾರ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಹಾರಂಗಿ ಜಲಾಶಯದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ, ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.