ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಪ್ಲೀಟ್ ರಿಪೋರ್ಟ್; ಕೊಡಗಿನಲ್ಲಿ ತಗ್ಗಿದ ಮಳೆ: ಇದುವರೆಗೂ ಎಲ್ಲೆಲ್ಲಿ ಏನಾಯ್ತು?

|
Google Oneindia Kannada News

ಮಡಿಕೇರಿ, ಆಗಸ್ಟ್ 12: ಕೊಡಗು ಜಿಲ್ಲೆಯಲ್ಲಿ ಸುಮಾರು ಒಂದು ವಾರಗಳ ಕಾಲ ಧಾರಾಕಾರವಾಗಿ ಸುರಿದು ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದ್ದ ವರುಣದ ಆರ್ಭಟ ಇದೀಗ ತಗ್ಗಿದ್ದು, ಪ್ರವಾಹಕ್ಕೀಡಾಗಿದ್ದ ಪ್ರದೇಶಗಳು ಯಥಾ ಸ್ಥಿತಿಗೆ ಮರಳುತ್ತಿವೆ. ಜಲಾವೃತಗೊಂಡಿದ್ದ ಪ್ರದೇಶಗಳಿಂದ ನೀರು ಹರಿದು ಹೋಗಿದ್ದು ಅನಾಹುತದ ಕುರುಹುಗಳು ಮಾತ್ರ ಉಳಿದು ಹೋಗಿವೆ.

ಪ್ರತಿ ವರ್ಷವೂ ಆಗಸ್ಟ್ ತಿಂಗಳಲ್ಲಿ, ಅದರಲ್ಲೂ ಆಶ್ಲೇಷ ಮಳೆ ಆರ್ಭಟಿಸುವ ಮೂಲಕ ಅನಾಹುತವನ್ನು ತಂದೊಡ್ಡುತ್ತಲೇ ಇದೆ. ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರವಾಹವನ್ನು ತಡೆಯುವುದು ಅಸಾಧ್ಯವೇ. ಈಗಾಗಲೇ ಪ್ರವಾಹ ಏರ್ಪಡುವ ಸ್ಥಳಗಳಲ್ಲಿ ಜನವಸತಿಯಿದ್ದು, ಅವರನ್ನು ಸ್ಥಳಾಂತರಿಸುವುದು ಕಷ್ಟಸಾಧ್ಯವಾಗಿದೆ. ಅದರಲ್ಲೂ ಒಂದೆರಡು ದಿನದಲ್ಲಿ ಕುಂಭದ್ರೋಣ ಮಳೆ ಸುರಿದು ಪ್ರವಾಹ ಏರ್ಪಡುವುದರಿಂದ ತಕ್ಷಣಕ್ಕೆ ಸ್ಥಳಾಂತರವೂ ಅಸಾಧ್ಯವಾಗುತ್ತಿದೆ.

 ತ್ರಿವೇಣಿ ಸಂಗಮದಲ್ಲೂ ನೀರು ಇಳಿಮುಖ

ತ್ರಿವೇಣಿ ಸಂಗಮದಲ್ಲೂ ನೀರು ಇಳಿಮುಖ

ಇದೀಗ ಮಳೆಯ ರಭಸ ಕಡಿಮೆಯಾಗಿರುವುದರಿಂದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಆದರೆ ಮಳೆಯಿಂದ ಮನೆ, ತೋಟ, ಗದ್ದೆಗಳಿಗೆ ಹಾನಿಯಾಗಿದೆ. ಬಹಳಷ್ಟು ಅನಾಹುತಗಳು ಸಂಭವಿಸಿದೆ. ಹೀಗಾಗಿ ಪ್ರತಿ ವರ್ಷವೂ ಮಳೆ ಅನಾಹುತದಿಂದ ಆಸ್ತಿ ಪಾಸ್ತಿ ನಷ್ಟ ಮಾಡಿಕೊಳ್ಳುತ್ತಿರುವ ಜನರ ಗೋಳು ಹೇಳತೀರದಂತಾಗಿದೆ. ಇನ್ನು ಮಳೆಯ ಅಬ್ಬರ ಕಡಿಮೆಯಾಗಿದ್ದು ಒಂದು ದಿನದ ಅವಧಿಯಲ್ಲಿ ಸರಾಸರಿ 22.17 ಮಿ.ಮೀ. ಮಳೆ ಜಿಲ್ಲೆಯಲ್ಲಿ ಸುರಿದಿದೆ. ಅಲ್ಲದೆ ಸುಮಾರು ನಾನೂರು ಮಿ.ಮೀ,ಗಿಂತಲೂ ಹೆಚ್ಚು ಮಳೆ ಸುರಿದಿದ್ದ ಭಾಗಮಂಡಲದಲ್ಲಿ ಸದ್ಯ 47 ಮಿ.ಮೀ. ಮಳೆಯಾಗಿದೆ. ಇದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣವೂ ಇಳಿಮುಖವಾಗಿದ್ದು ಸಂಚಾರ ಆರಂಭವಾಗಿದೆ. ಗರಿಷ್ಠ 2,859 ಅಡಿಗಳ ಜಲಾಶಯದಲ್ಲಿ ಸದ್ಯ 2856.41 ಅಡಿಯಷ್ಟು ನೀರಿದ್ದು, ಜಲಾಶಯಕ್ಕೆ 6054 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನದಿಗೆ 2500, ನಾಲೆಗೆ 200 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ತಲಕಾವೇರಿ ಗುಡ್ಡ ಕುಸಿತ ಪ್ರಕರಣ: ಅರ್ಚಕ ನಾರಾಯಣ್ ಆಚಾರ್ ಮೃತದೇಹ ಪತ್ತೆತಲಕಾವೇರಿ ಗುಡ್ಡ ಕುಸಿತ ಪ್ರಕರಣ: ಅರ್ಚಕ ನಾರಾಯಣ್ ಆಚಾರ್ ಮೃತದೇಹ ಪತ್ತೆ

 ಪ್ರವಾಹದಿಂದ 304 ಮನೆಗಳಿಗೆ ಹಾನಿ

ಪ್ರವಾಹದಿಂದ 304 ಮನೆಗಳಿಗೆ ಹಾನಿ

ಪ್ರವಾಹದಿಂದಾಗಿ ಇದುವರೆಗೆ ಆಗಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಆ ಪ್ರಕಾರ ಮಾನವ ಜೀವ ಹಾನಿ 2, ಜಾನುವಾರು ಹಾನಿ 16, ಕೃಷಿ ಬೆಳೆ 3200 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದರೆ, ತೋಟಗಾರಿಕೆ ಬೆಳೆ ಹಾನಿ ವಿಸ್ತೀರ್ಣ 32500 ಹೆಕ್ಟೇರ್ ಆಗಿದೆ.

ಮಡಿಕೇರಿ 65, ಸೋಮವಾರಪೇಟೆ 133, ವಿರಾಜಪೇಟೆ 106, ಒಟ್ಟು 304 ಮನೆಗಳು ಹಾನಿಯಾಗಿವೆ. ರಾಜ್ಯ ಹೆದ್ದಾರಿ 35.80 ಕಿ.ಮೀ, ಜಿಲ್ಲಾ ಮುಖ್ಯ ರಸ್ತೆಗಳು 26.78 ಕಿ.ಮೀ, ಗ್ರಾಮೀಣ ರಸ್ತೆಗಳು 260.37 ಕಿ.ಮೀ., ನಗರ ಪ್ರದೇಶದ ರಸ್ತೆಗಳು 47 ಕಿ.ಮೀ., ಸೇತುವೆ/ ಕಲ್ವರ್ಟ್ ಗಳು 20, ವಿದ್ಯುತ್ ಕಂಬಗಳು 2012, ವಿದ್ಯುತ್ ಪೂರೈಕೆ ಲೈನ್ 25650 ಕಿ.ಮೀ. ಟ್ರಾನ್ಸ್ ಫಾರ್ಮರ್ ಗಳು 75, ಶಾಲಾ ಕಟ್ಟಡಗಳು 74, ಅಂಗನವಾಡಿಗಳು 13, ಸಮುದಾಯ ಭವನಗಳು 1, ಸಣ್ಣ ನೀರಾವರಿ ಕೆರೆಗಳು 32, ನೀರು ಪೂರೈಕೆ ಮತ್ತು ನೈರ್ಮಲ್ಯ ರಚನೆಗಳು 48, ತಡೆಗೋಡೆಗಳು 18 ಹಾಗೂ 1 ಸರ್ಕಾರಿ ಕಟ್ಟಡಕ್ಕೆ ಹಾನಿಯಾಗಿದೆ.

 ಜಿಲ್ಲೆಯ 60 ಗ್ರಾಮಗಳಲ್ಲಿ ಪ್ರವಾಹ

ಜಿಲ್ಲೆಯ 60 ಗ್ರಾಮಗಳಲ್ಲಿ ಪ್ರವಾಹ

ಪ್ರವಾಹದಿಂದಾಗಿ ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಚೇರಂಗಾಲ, ಕೋರಂಗಾಲ, ಅಯ್ಯಂಗೇರಿ, ತಾವೂರು, ತಣ್ಣಿಮಾನಿ, ಸಣ್ಣ ಪುಲಿಕೋಟು, ಬೇಂಗೂರು, ಕಡಿಯತ್ತೂರು, ಬಿ.ಬಾಡಗ, ಪದಕಲ್ಲು, ಬೇತು, ಎಮ್ಮೆಮಾಡು, ಬಲಮುರಿ, ನಾಪೋಕ್ಲು, ಬೆಟ್ಟಗೇರಿ, ಐಕೊಳ, ದೊಡ್ಡಪುಲಿಕೋಟು, ಹೊದ್ದೂರು, ಹೊದವಾಡ, ಕಿಗ್ಗಾಲು, ಎಸ್.ಕಟ್ಟೆಮಾಡು(ಪರಂಬು ಪೈಸಾರಿ) ಒಟ್ಟು 22 ಗ್ರಾಮಗಳು, ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಗುಹ್ಯ, ಕೊಂಡಂಗೇರಿ, ಹಚ್ಚಿನಾಡು, ನಾಲ್ಕೇರಿ, ಹೈಸೊಡ್ಲೂರು, ಬಲ್ಯಮಂಡೂರು, ಬಿರುನಾಣಿ, ತೆರಾಲು, ಅರುವತ್ತೊಕ್ಲು, ನಿಡುಗುಂಬ, ಹಾತೂರು, ಮೈತಾಡಿ, ಬಾಳೆಲೆ ಒಟ್ಟು 14 ಗ್ರಾಮಗಳು, ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮದ ಕುವೆಂಪು ಬಡಾವಣೆ, ತಮ್ಮಣ್ಣಶೆಟ್ಟಿ ಬಡಾವಣೆ, ಗುಮ್ಮನಕೊಲ್ಲಿ, ಬಸವನಹಳ್ಳಿ, ಮಾದಾಪಟ್ಟಣ, ಬೈಚನಹಳ್ಳಿ, ಕೂಡ್ಲೂರು(ನಿಸರ್ಗ ಬಡಾವಣೆ) ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ, ಅತ್ತೂರುನಲ್ಲೂರು (ಕೊಟ್ಟಗೇರಿ ಪೈಸಾರಿ). ಒಟ್ಟು 10 ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ. ಪಟ್ಟಣ ಪಂಚಾಯತಿ ಕುಶಾಲನಗರ ಸಾಯಿ ಬಡಾವಣೆ, ಬಸಪ್ಪ, ತ್ಯಾಗರಾಜ ರಸ್ತೆ, ವಿವೇಕಾನಂದ, ರಸೂಲ್, ಶೈಲಜ, ಇಂದಿರಾ ಬಡಾವಣೆ, ದಂಡಿನಪೇಟೆ, ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ, ಬಿದ್ದಪ್ಪ, ನಿಜಾಮುದ್ದೀನ್, ನಿಂಗೇಗೌಡ, ಯೋಗಾನಂದ, ತಾವರೆಕೆರೆ ಬಳಿ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಒಟ್ಟು 14 ಗ್ರಾಮಗಳು. ಒಟ್ಟು ಪ್ರವಾಹ ಪೀಡಿತ ಪ್ರದೇಶಗಳು 60 ಆಗಿವೆ.

ಮಡಿಕೇರಿ: ಅರಣ್ಯ ಇಲಾಖೆ ತೋಡಿದ ಇಂಗುಗುಂಡಿಯೇ ಗುಡ್ಡ ಕುಸಿತಕ್ಕೆ ಕಾರಣವಾಯಿತಾ?ಮಡಿಕೇರಿ: ಅರಣ್ಯ ಇಲಾಖೆ ತೋಡಿದ ಇಂಗುಗುಂಡಿಯೇ ಗುಡ್ಡ ಕುಸಿತಕ್ಕೆ ಕಾರಣವಾಯಿತಾ?

 ಜಿಲ್ಲೆಯ 12 ಕಡೆ ಭೂಕುಸಿತ

ಜಿಲ್ಲೆಯ 12 ಕಡೆ ಭೂಕುಸಿತ

ಮಡಿಕೇರಿ ತಾಲ್ಲೂಕಿನ ಬ್ರಹ್ಮಗಿರಿ (ತಲಕಾವೇರಿ), ಕೋರಂಗಾಲ, ಬೊಟ್ಲಪ್ಪ ಪೈಸಾರಿ (ಕಡಗದಾಳು), ಜೋಡುಪಾಲ, ನೀರುಕೊಲ್ಲಿ, 2ನೇ ಮೊಣ್ಣಂಗೇರಿ, ಕೊಯನಾಡು, ಪೆರಾಜೆ, ನಗರಸಭೆ ಮಡಿಕೇರಿ ದೇಚೂರು, ಸೋಮವಾರಪೇಟೆ ತಾಲ್ಲೂಕು ಪೊನ್ನತ್ಮೊಟ್ಟೆ, ಚೆಟ್ಟಳ್ಳಿ-ಮಡಿಕೇರಿ ರಸ್ತೆ (ಅಬ್ಯಾಲ) ವಿರಾಜಪೇಟೆ ತಾಲ್ಲೂಕು ಮಗ್ಗುಲ (ಅಯ್ಯಪ್ಪಬೆಟ್ಟ) ಒಟ್ಟು 12 ಕಡೆಗಳಲ್ಲಿ ಭೂಕುಸಿತವಾಗಿದೆ.

ಇನ್ನು ನಾಪೋಕ್ಲು 13, ಹೊದವಾಡ 13, ನೆಲ್ಲಿಹುದಿಕೇರಿ 96, ಕಡಗದಾಳು 150, ಬಲಮುರಿ 7, ಕೊಟ್ಟಮುಡಿ 29, ಚೆರಿಯಪರಂಬು 7, ಬಾಳೆಗುಂಡಿ ಗ್ರಾಮ (ವಾಲ್ನೂರು ತ್ಯಾಗತ್ತೂರು) 6, ನಲ್ವತ್ತೆಕರೆ 12, ಬೆಟ್ಟಗೇರಿ 8, ಬೊಟ್ಲಪ್ಪ ಪೈಸಾರಿ, ಕಡಗದಾಳು 51, ಕೈಮಾಡು 5, ನೀರುಕೊಲ್ಲಿ 43, ಮೈತಾಡಿ 40, ಕೊಂಡಂಗೇರಿ 8, ಸಿದ್ದಾಪುರ (ಕುರುಬರ ಗುಂಡಿ) 8, ತಣ್ಣಿಮಾನಿ 50, ಬೆಟ್ಟದಕಾಡು 10, ಅತ್ತೂರುನಲ್ಲೂರು ಕೊಟ್ಟಗೇರಿ ಪೈಸಾರಿ 10, ಬಾಳೆಲೆ 2, ಚಾಮಿಯಾಲ 17, ಒಟ್ಟು 585 ಮಂದಿಯನ್ನು ರಕ್ಷಿಸಲಾಗಿದೆ.

 ಜಿಲ್ಲೆಯಲ್ಲಿ 506 ಜನ ಸಂತ್ರಸ್ತರು

ಜಿಲ್ಲೆಯಲ್ಲಿ 506 ಜನ ಸಂತ್ರಸ್ತರು

ಜಿಲ್ಲೆಯಲ್ಲಿ ಒಟ್ಟು 9 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 217 ಕುಟುಂಬದವರು ಆಶ್ರಯ ಪಡೆದಿದ್ದಾರೆ. 506 ಜನ ಸಂತ್ರಸ್ತರಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಜರಿದಿರುವುದರಿಂದ ಮತ್ತು ಮರ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ತುರ್ತಾಗಿ ಕ್ರಮ ವಹಿಸಬಹುದಾದ ಕಡೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ತುರ್ತು ಕ್ರಮ ವಹಿಸಿ ರಸ್ತೆಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

English summary
Rainfall which was hitting kodagu district since one week is now reduced. Here is a detail of the damage caused by rain in district till now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X