ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಜುಲೈ 25: ಕೊಡಗಿನಲ್ಲೀಗ ಆಟಿ(ಕಕ್ಕಡ) ಆರಂಭವಾಗಿದೆ. ಕಕ್ಕಡ ತಿಂಗಳೆಂದರೆ ಕೊಡಗಿನವರ ಮಟ್ಟಿಗೆ ಬಿಡುವಿಲ್ಲದ ದುಡಿಮೆಯ ಕಾಲ. ಸದಾ ಸುರಿಯುವ ಮಳೆ... ಕೊರೆಯುವ ಚಳಿ.. ಮುಂಜಾನೆಯಿಂದ ಸಂಜೆಯವರೆಗೂ ಮಳೆಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯಬೇಕಾದ ಅನಿವಾರ್ಯತೆ.

ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿಯನ್ನು ಆಟಿ(ಕಕ್ಕಡ) ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧವಾಗಿದ್ದು, ಕೃಷಿ ಕೆಲಸಗಳಿಗೆ ಜನ ಹೆಚ್ಚಿನ ಆದ್ಯತೆ ನೀಡುವುದರಿಂದ ಇತರೆ ಎಲ್ಲ ವ್ಯಾಪಾರಗಳು ಕಡಿಮೆಯಾಗುತ್ತವೆ.

ಕೊಡಗಿನಲ್ಲಿ ಮಳೆಯ ರೌದ್ರಾವತಾರಕ್ಕೆ ಬೆಚ್ಚಿದ ಜನರು!ಕೊಡಗಿನಲ್ಲಿ ಮಳೆಯ ರೌದ್ರಾವತಾರಕ್ಕೆ ಬೆಚ್ಚಿದ ಜನರು!

ಬೇರೆ ಕಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಭತ್ತದ ಕೃಷಿ ಮಾಡುವುದೇ ಮಳೆಗಾಲದಲ್ಲಿ. ಮಳೆ ಸುರಿದು ಭೂಮಿಯಡಿಯಿಂದ ಜಲ ಹುಟ್ಟಿ ಹರಿದರೆ ಅದರ ನೀರಲ್ಲಿ ಕೃಷಿ ಮಾಡುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಹೀಗಾಗಿ ಮಳೆಗಾಲದಲ್ಲಿ ಭತ್ತದ ಪೈರು ಹಾಕಿ ಅದನ್ನು ನಾಟಿ ನೆಡುತ್ತಾರೆ. ಮಳೆ ಕಡಿಮೆಯಾಗಿ ಬಿಸಿಲು ಬರುತ್ತಿದ್ದಂತೆಯೇ ಅಂದರೆ ನವೆಂಬರ್ ಡಿಸೆಂಬರ್ ವೇಳೆಗೆ ಭೂಮಿಯಿಂದ ಉಕ್ಕಿ ಹರಿಯುವ ನೀರು ಕಡಿಮೆಯಾಗುತ್ತದೆ. ಆ ವೇಳೆಗೆ ಭತ್ತದ ಫಸಲು ಕೊಯ್ಲಿಗೆ ಸಿದ್ಧವಾಗುತ್ತದೆ.

ನೀರಿನ ಅನುಕೂಲವಿದ್ದ ಪ್ರದೇಶಗಳಲ್ಲಿ ಭತ್ತದ ಗದ್ದೆಯನ್ನು ಹಿಂದಿನವರು ನಿರ್ಮಿಸಿದ್ದರು. ಅವತ್ತಿನ ಕಾಲದಲ್ಲಿ ವಾಣಿಜ್ಯ ಬೆಳೆಗಳ ಭರಾಟೆ ಇರಲಿಲ್ಲ. ದಟ್ಟವಾದ ಮರಕಾಡು ಇದ್ದಿದ್ದರಿಂದ ಅಲ್ಲಿ ಕಾಫಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಲ್ಲೆಡೆಯೂ ಏಲಕ್ಕಿ ತೋಟಗಳು ಇದ್ದವು. ಅವುಗಳಿಗೆ ದಟ್ಟ ಮರಕಾಡು ಜತೆಗೆ ಹೆಚ್ಚಿನ ಮಳೆಯೂ ಏಲಕ್ಕಿಗೆ ಅಗತ್ಯವಿತ್ತು. ಆ ದಿನಗಳಲ್ಲಿ ಏಲಕ್ಕಿ ಕೊಡಗಿನ ಬೆಳೆಗಾರರಿಗೆ ಹಣ ತರುವ ಏಕೈಕ ಬೆಳೆಯಾಗಿತ್ತು.

ಒಂದಾನೊಂದು ಕಾಲದಲ್ಲಿ...

ಒಂದಾನೊಂದು ಕಾಲದಲ್ಲಿ...

ಪ್ರತಿಯೊಬ್ಬರೂ ಭತ್ತದ ಕೃಷಿ ಮಾಡುತ್ತಿದ್ದರು. ಕೂಡು ಆಳುಗಳಾಗಿ ಒಬ್ಬರಿಗೆ ಮತ್ತೊಬ್ಬರು ಸಹಕರಿಸುತ್ತಾ ಭತ್ತದ ನಾಟಿ ಕೆಲಸವನ್ನು ಮುಗಿಸುತ್ತಿದ್ದರು. ಶ್ರೀಮಂತರು ಮಾತ್ರ ಆಳುಗಳನ್ನಿಟ್ಟು ಕೆಲಸ ಮಾಡಿಸುತ್ತಿದ್ದರು. ಉಳಿದಂತೆ ಸಣ್ಣಪುಟ್ಟ ರೈತರು ಕೂಡು ಆಳುಗಳಾಗಿ ಕೆಲಸ ಮಾಡುತ್ತಾ ಮುಂದುವರೆಯುತ್ತಿದ್ದರಿಂದ, ಜತೆಗೆ ಮನೆಯಲ್ಲಿ ಹೆಚ್ಚಿನ ಜನರಿದ್ದುದರಿಂದ ಅವರೆಲ್ಲರೂ ಕೃಷಿ ಕೆಲಸವನ್ನು ಚಿಕ್ಕಂದಿನಿಂದಲೇ ಕೆಲಸವನ್ನು ಮಾಡುತ್ತಿದ್ದರಿಂದ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಜತೆಗೆ ಭತ್ತದ ಕೃಷಿಯನ್ನು ಎಲ್ಲರೂ ಒಟ್ಟಾಗಿ ಸಂತೋಷದಿಂದ ಸಂಭ್ರಮದಿಂದ ಮಾಡುತ್ತಿದ್ದರು.

ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!

ಮಳೆಗಾಲದ ರೌದ್ರತೆ ಮರೆತಿದ್ದ ಜನರು!

ಮಳೆಗಾಲದ ರೌದ್ರತೆ ಮರೆತಿದ್ದ ಜನರು!

ಆದರೆ ಬದಲಾದ ಕಾಲಮಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆಯೇ ಸರಿಯಾಗಿ ಸುರಿಯದಿದ್ದಾಗ ಜನರಿಗೆ ಆಟಿ ತಿಂಗಳ ಮಳೆಗಾಲದ ರೌದ್ರತೆ ಮರೆತು ಹೋಗಿತ್ತು. ಜತೆಗೆ ಲಾಭ ನಷ್ಟಗಳ ಲೆಕ್ಕಾಚಾರದಿಂದಾಗಿ ಭತ್ತದ ಕೃಷಿ ಮಾಡುವುದೇ ಸಮಸ್ಯೆಯಾಗಿ ಜತೆಗೆ ನಷ್ಟವಾಗಿ ಪರಿಣಮಿಸ ತೊಡಗಿತು. ಹೀಗಾಗಿ ಕೆಲವರು ಅವುಗಳನ್ನು ತೋಟವಾಗಿ ಪರಿವರ್ತಸಿದರೆ ಮತ್ತೆ ಕೆಲವರು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಿದರು ಮತ್ತೆ ಕೆಲವರು ಕೃಷಿ ಮಾಡದೆ ಪಾಳು ಬಿಟ್ಟರು. ಈಗ ಕೆಲವೇ ಕೆಲವರು ಮಾತ್ರ ಭತ್ತದ ಕೃಷಿಯನ್ನು ಮಾಡುವಂತಾಗಿದೆ. ಇದರಿಂದ ಆಟಿ ತಿಂಗಳ ಆ ಸಂಭ್ರಮ ಸದ್ದಿಲ್ಲದೆ ಮರೆಯಾಗುತ್ತಿದೆ.

ಆಟಿ-ನಾಟಿ ಕೂಡುಕೂಟ

ಆಟಿ-ನಾಟಿ ಕೂಡುಕೂಟ

ಇದನ್ನು ಮತ್ತೆ ಮೇಳೈಸುವಂತೆ ಮಾಡುವ ಮತ್ತು ಈಗಿನ ಯುವ ಜನಾಂಗಕ್ಕೆ ಆಟಿ ತಿಂಗಳ ವೈಭವವನ್ನು ತಿಳಿಸುವ, ಭತ್ತದ ಕೃಷಿಯತ್ತ ಒಲವು ತೋರುವ ನಿಟ್ಟಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಕುಕ್ಕೇರ ಕುಟುಂಬಸ್ಥರ ಸಹಯೋಗದಲ್ಲಿ ದೇವಸ್ತೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಆಟಿ-ನಾಟಿ ಕೂಡುಕೂಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಮನಸೆಳೆಯಿತು.

ಧಾರಾಕಾರ ಮಳೆಗೆ ಅಂಜದೆ ಕೊರೆಯುವ ಚಳಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವ ಮೂಲಕ ಆಟಿ-ನಾಟಿ ಕೂಡುಕೂಟ ಯಶಸ್ವಿಯಾಗುವಂತೆ ಮಾಡಿದರು.

ಕೊಡಗಿನ ಜಾನಪದ ಸೊಗಡು

ಕೊಡಗಿನ ಜಾನಪದ ಸೊಗಡು

ಈ ವೇಳೆ ನಡೆದ ಹಲವು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಸ್ಪರ್ಧಿಗಳು ಹಳ್ಳಿ ಹೈದರು ನಾವೇನು ಕಡಿಮೆಯಿಲ್ಲ ಎಂಬುದನ್ನು ಸಾರಿದರು. ಬೆಳಿಗ್ಗೆಯಿಂದ ಮುಸ್ಸಂಜೆಯ ತನಕ ನಡೆದ ಕಾರ್ಯಕ್ರಮವು ಕೊಡಗಿನ ಜಾನಪದ ಸೊಗಡು, ಕ್ರೀಡಾಭಿಮಾನ, ಸಂಸ್ಕೃತಿಗೆ ಸಾಕ್ಷಿಯಾಯಿತು. ಕೆಸರುಗದ್ದೆಯನ್ನೇ ಕ್ರೀಡಾಂಗಣವನ್ನಾಗಿ ಮಾಡಿಕೊಂಡ ಕ್ರೀಡಾಪಟುಗಳು ಹತ್ತು ಹಲವು ಕ್ರೀಡೆಗಳನ್ನು ಆಡಿ ಖುಷಿಪಟ್ಟರು.

ಸಂಭ್ರಮ ನೀಡಿದ ವಿವಿಧ ಸ್ಪರ್ಧೆಗಳು

ಸಂಭ್ರಮ ನೀಡಿದ ವಿವಿಧ ಸ್ಪರ್ಧೆಗಳು

ಇಲ್ಲಿ ಸೋಲುಗೆಲುವಿಗಿಂತ ಪಾಲ್ಗೊಳ್ಳುವಿಕೆ ಎದ್ದು ಕಂಡಿತು. ಸಣ್ಣಮಕ್ಕಳಿಗೆ ಕಾಳು ಹೆಕ್ಕುವುದು, ಓಟದ ಸ್ಪರ್ಧೆ, ಪುರುಷರಿಗೆ, ಮಹಿಳೆಯರಿಗೆ ಕೂಡ ಓಟದ ಸ್ಪರ್ಧೆ ನಡೆಯಿತು. ಕೆಸರು ತುಂಬಿದ ಗದ್ದೆಯಲ್ಲಿ ಎದ್ದು ಬಿದ್ದು ಓಡುವ ಮೂಲಕ ಎಲ್ಲರ ಗಮನಸೆಳೆದರು. ಇದಲ್ಲದೆ ಹಗ್ಗಜಗ್ಗಾಟ ಎಲ್ಲರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಬಲಿಷ್ಠ ತಂಡಗಳು ನಿಂತು ಶಕ್ತಿ ಪ್ರದರ್ಶಿಸುತ್ತಿದ್ದರೆ ಅತ್ತ ತಮ್ಮ ತಂಡಗಳನ್ನು ಹುರಿದುಂಬಿಸುತ್ತಿದ್ದ ಘೋಷಣೆ ಮುಗಿಲನ್ನು ಮುಟ್ಟುತ್ತಿತ್ತು.

ಸಂಭ್ರಮಕ್ಕೆ ಸಾಕ್ಷಿಯಾದ ಗಣ್ಯರು

ಸಂಭ್ರಮಕ್ಕೆ ಸಾಕ್ಷಿಯಾದ ಗಣ್ಯರು

ಗೋಣಿಚೀಲದಲ್ಲಿ ಗಂಡ ಹೆಂಡತಿಯನ್ನು ಕೆಸರಿನಲ್ಲಿ ಎಳೆಯುವುದು, ಕಾಯಿ ಕೀಳುವ ಅಂಬುಕಾಯಿಸ್ಪರ್ಧೆ ಹಿಂದಕ್ಕೆ ನಡೆಯುವುದು, ಅಗೆ(ಪೈರು) ತೆಗೆಯುವುದು, ನಾಟಿ ನೆಡುವುದು, ಥ್ರೋಬಾಲ್ ಮುಂತಾದ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ. ಜಯರಾಂ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

English summary
Aati masa(Kakkada) has started from July 17th to August 18th. People in Kodagu concentrate on agriculture on this period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X