• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗು; ರೆಸಾರ್ಟ್ ಗಾಗಿ ನಡೆಯಿತಾ ಮರಗಳ ಮಾರಣಹೋಮ?

|

ಮಡಿಕೇರಿ, ಜೂನ್ 7: ಕೊಡಗಿನ ಪರಿಸರದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಮತ್ತು ಹಣದ ದುರಾಸೆಗೆ ಬಿದ್ದು, ರೆಸಾರ್ಟ್, ಹೋಂಸ್ಟೇ ಹೆಸರಿನಲ್ಲಿ ನಡೆದ ನಿರಂತರ ಅತ್ಯಾಚಾರಕ್ಕೆ ಪ್ರಕೃತಿ ಕಳೆದ ವರ್ಷ ಪಡೆದ ಕಂದಾಯ ಕಣ್ಣ ಮುಂದೆಯೇ ಇದೆ. ಹೀಗಿರುವಾಗ ಆಂಧ್ರದ ಉದ್ಯಮಿಯೊಬ್ಬರು ಸುಮಾರು 68 ಎಕರೆ ಜಾಗವನ್ನು ಖರೀದಿಸಿ ಸುಮಾರು 890 ಮರಗಳನ್ನು ನೆಲಕ್ಕುರುಳಿಸಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮನೆಯ ಅವಶ್ಯಕತೆಗೆ, ರಸ್ತೆ ಮಾಡುವ ವೇಳೆ ಮರ ಕಡಿಯಲು ಅನುಮತಿ ನೀಡದೆ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆ, ಇಷ್ಟೊಂದು ಮರಗಳನ್ನು ನೆಲಕ್ಕುರುಳಿಸುವಾಗ ಕಣ್ಣುಮುಚ್ಚಿ ಕುಳಿತಿರುವುದನ್ನು ನೋಡಿದರೆ ಇದರ ಹಿಂದೆ ಕಾಣದ ಕೈಗಳ ಕೈವಾಡವಿರುವುದು ಸ್ಪಷ್ಟವಾಗುತ್ತಿದೆ.

ಹಿರಿಯರು ಆಸ್ತಿ ಮಾಡಿ ಕಾಫಿ, ಏಲಕ್ಕಿ ಬೆಳೆದು ತೋಟವೇ ತಮ್ಮ ಬದುಕು ಎಂಬಂತೆ ನಂಬಿಕೊಂಡು ಕೃಷಿ ಮಾಡುತ್ತಾ ಜೀವನ ಸಾಗಿಸಿಕೊಂಡು ಬಂದಿದ್ದರು. ಆದರೆ ಇತ್ತೀಚೆಗಿನ ತಲೆಮಾರು ತೋಟವನ್ನು ಅಭಿವೃದ್ಧಿಗೊಳಿಸುವ ಬದಲಾಗಿ ದೂರದ ಊರಿನ ಉದ್ಯಮಿ, ರಾಜಕಾರಣಿಗಳಿಗೆ ಮಾರಿ ಒಂದಷ್ಟು ಹಣವನ್ನು ಪಡೆದು ಊರು ಬಿಡುತ್ತಿರುವ ಸನ್ನಿವೇಶಗಳು ಕಂಡು ಬರುತ್ತಿದ್ದು, ಹತ್ತಾರು ಎಕರೆ ಪ್ರದೇಶವನ್ನು ಖರೀದಿಸುವ ವ್ಯಕ್ತಿಗಳು ಅಲ್ಲಿ ಭದ್ರಕೋಟೆ ನಿರ್ಮಿಸಿಕೊಂಡು ಹಣದ ದುರಾಸೆಗೆ ಬಿದ್ದು ರೆಸಾರ್ಟ್, ಹೋಂಸ್ಟೇ ಮಾಡಿಕೊಂಡು ಹೊರಗಿನಿಂದ ಬರುವವರಿಗೆ ಮೋಜು ಮಸ್ತಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ.

ಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳು..!

ಸರ್ಕಾರ, ಜಿಲ್ಲಾಡಳಿತ ಅನಧಿಕೃತ ಹೋಂಸ್ಟೇಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಲೇ ಬಂದಿವೆಯಾದರೂ ಹೋಂಸ್ಟೇಗಳು ಮಾತ್ರ ನಾಯಿಕೊಡೆಗಳಂತೆ ಹುಟ್ಟುಕೊಳ್ಳುತ್ತಲೇ ಇವೆ. ಅಷ್ಟೇ ಅಲ್ಲ ದೂರದ ಉದ್ಯಮಿಗಳಿಗೆ ರತ್ನಕಂಬಳಿ ಹಾಸಿ ಸ್ವಾಗತ ಕೋರುತ್ತಿರುವುದು ನಿಜಕ್ಕೂ ದುರ್ದೈವ.

ಕಳೆದ ಒಂದೆರಡು ದಶಕಗಳ ಅವಧಿಯಲ್ಲಿ ಕೊಡಗಿನಲ್ಲಿ ಸಾವಿರಾರು ರೆಸಾರ್ಟ್ ಸೇರಿದಂತೆ ಹೋಂಸ್ಟೇಗಳು ನಿರ್ಮಾಣವಾಗಿವೆ. ಅವು ದಟ್ಟ ಕಾಡು, ತೋಟದ ನಡುವೆ ನಿರ್ಮಾಣವಾಗಿದ್ದು, ಇವುಗಳ ನಿರ್ಮಾಣಕ್ಕಾಗಿ ಸಾವಿರಾರು ಮರಗಳನ್ನು ಬಲಿಕೊಡಲಾಗಿದೆ. ಜತೆಗೆ ಇಲ್ಲಿಗೆ ತೆರಳಲು ದಾರಿ ಮಾಡುವ ಸಂದರ್ಭವೂ ಮರಗಳು ನೆಲಕ್ಕುರುಳಿವೆ. ಪದೇ ಪದೇ ಪ್ರಕೃತಿ ಮೇಲಿನ ಈ ಅತ್ಯಾಚಾರಕ್ಕೆ ಕೊಡಗು ಈಗ ಸಂಕಷ್ಟ ಅನುಭವಿಸುವಂತಾಗಿದೆ. ಸಣ್ಣಪುಟ್ಟ ವಿಚಾರಕ್ಕೆ ಬೊಬ್ಬೆ ಹೊಡೆಯುತ್ತಿದ್ದ ಡೋಂಗಿ ಪರಿಸರವಾದಿಗಳು ನೂರಾರು ಮರಗಳು ನೆಲಕ್ಕುರುಳಿದಾಗ ಮೌನಕ್ಕೆ ಶರಣಾಗಿರುವುದು ಕೂಡ ಅಚ್ಚರಿ ಹುಟ್ಟಿಸುತ್ತಿದೆ.

ಕಳೆದ ವರ್ಷ ಕೊಡಗಿನಲ್ಲಿ ನಡೆದ ಭೂಕುಸಿತ ಮತ್ತು ಅದರಿಂದಾದ ಅನಾಹುತವನ್ನು ಯಾರೂ ಮರೆತಿಲ್ಲ. ಹೀಗಿರುವಾಗಲೇ ಮಡಿಕೇರಿಗೆ ಸಮೀಪದ ಕೆ.ನಿಡುಗಣೆ ಎಂಬ ಗ್ರಾಮದಲ್ಲಿ ಆಂಧ್ರದ ಉದ್ಯಮಿಯೊಬ್ಬರು ಸುಮಾರು 68 ಎಕರೆ ಜಾಗ ಖರೀದಿಸಿ ಈ ಪೈಕಿ 30 ಎಕರೆಯಲ್ಲಿದ್ದ 890 ಮರಗಳನ್ನು ನೆಲಕ್ಕುರುಳಿಸಿದ್ದು, ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂಬುದೇ ಚರ್ಚೆಗೆ ಎಡೆಮಾಡಿಕೊಟ್ಟಿರುವ ವಿಷಯ. ಈ ಬಗ್ಗೆ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ತೆರಳಿದ ಮಾಜಿ ಸಚಿವ ಎಂ.ಸಿ.ನಾಣಯ್ಯ, ನೆಲಕ್ಕುರುಳಿರುವ ಮರಗಳನ್ನು ನೋಡಿ ಬೇಸರಗೊಂಡರು.

ಬರಲಿರುವ ಮುಂಗಾರು ಕೊಡಗಿಗೆ ಒಳಿತು ಮಾಡುವಂತಿರಲಿ!

ಈ ಕುರಿತಂತೆ ಮಾಹಿತಿ ನೀಡಿದ ಅವರು, ಕೆ.ನಿಡುಗಣೆ ಗ್ರಾಮದಲ್ಲಿ ಆಂಧ್ರದ ರೆಡ್ಡಿಯೊಬ್ಬರು ಜಾಗ ಖರೀದಿಸಿದ್ದಾರೆ. ಆ ಜಾಗದಲ್ಲಿ ರೆಸಾರ್ಟ್ ನಿರ್ಮಾಣ ಮಾಡುವ ಯೋಜನೆ ಇದ್ದು, ಅದಕ್ಕಾಗಿ ಮರಗಳನ್ನು ಕಡಿಯಲಾಗಿದೆ. ಈ ಪೈಕಿ 30 ಎಕರೆಯನ್ನು ಅಭಿವೃದ್ಧಿಪಡಿಸಿ ಹೌಸಿಂಗ್ ಬೊರ್ಡ್ ಗೆ ನೀಡಲಾಗುವುದಾಗಿ ಹೇಳಲಾಗುತ್ತಿದೆ. ಅಲ್ಲದೆ ಈ 30 ಎಕರೆ ಪ್ರದೇಶದಲ್ಲಿರುವ ಮರಗಳನ್ನು ಕಡಿಯಲು ಜಾಗದ ಮಾಲೀಕ ಅನುಮತಿ ಕೋರಿದ್ದು, ಅದಕ್ಕೆ ಕೆಲವು ಅರಣ್ಯ ಅಧಿಕಾರಿಗಳು ಹಸಿರು ನಿಶಾನೆ ತೋರಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಮಾಲೀಕ 890 ಮರಗಳ ಮಾರಣ ಹೋಮ ಮಾಡಿದ್ದಾರೆ. ಇದು ರೆಸಾರ್ಟ್ ನಿರ್ಮಾಣಕ್ಕಾಗಿ ಮಾಡಿದ ಮರ ಹನನ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ತಕ್ಷಣ ಮರ ಕಡಿಯುವುದನ್ನು ನಿಲ್ಲಿಸಬೇಕು ಮತ್ತು ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಕೊಡಗು : ಭೂ ಕುಸಿತದ ಭೀತಿ, ಹೋಂ ಸ್ಟೇ ಬುಕ್ಕಿಂಗ್ ಸ್ಥಗಿತ

ಹಾಗೆ ನೋಡಿದರೆ ಎಂ.ಸಿ.ನಾಣಯ್ಯ ಅವರು ಮೊದಲಿನಿಂದಲೂ ಕೊಡಗಿನಲ್ಲಿ ನಡೆಯುತ್ತಿರುವ ರೆಸಾರ್ಟ್ ಮತ್ತು ಹೋಂಸ್ಟೇ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದು ಕೊಡಗಿಗೆ ಮಾರಕ ಎಂಬುದನ್ನು ಈ ಹಿಂದೆಯೇ ಹೇಳಿದ್ದರು. ಆದರೆ ಪ್ರಭಾವಿಗಳೇ ರೆಸಾರ್ಟ್‌ಗಳನ್ನು ನಡೆಸುತ್ತಾ ರಾಜಕೀಯವಾಗಿಯೂ ಪ್ರಭಾವ ಬೀರುತ್ತಿರುವುದರಿಂದ ರೆಸಾರ್ಟ್‌ಗಳ ನಿರ್ಮಾಣಕ್ಕೆ ಕಡಿವಾಣ ಹಾಕುವುದು ಕಷ್ಟ ಸಾಧ್ಯವಾಗಿದೆ.

ಪ್ರಕೃತಿ ಒಮ್ಮೆ ಮುನಿದರೆ ಏನಾಗುತ್ತದೆ ಎಂಬುದನ್ನು ಕಳೆದ ವರ್ಷವೇ ತೋರಿಸಿದೆ. ಆದರೂ ಇಲ್ಲಿನ ಜನಕ್ಕೆ ಬುದ್ದಿ ಬಾರದಿರುವುದೇ ಬೇಸರದ ಸಂಗತಿ. ಇವೆಲ್ಲಾ ಕೊನೆಯಾಗುವುದಾದರೂ ಎಂದಿಗೆ?

English summary
In the name of the resortS AND Homestays, people are pressurising nature. Meanwhile, an Andhra businessman buys about 68 acres of land and overturned 890 trees in nidaguni in madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more