ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಹೆಮ್ಮೆಯ ವರಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 122ನೇ ಜನ್ಮದಿನ

By Coovercolly Indresh
|
Google Oneindia Kannada News

ಮಡಿಕೇರಿ, ಜನವರಿ 28: ಸ್ವತಂತ್ರ ಭಾರತದ ಮೊದಲ ಜನರಲ್ ಮತ್ತು ಫೀಲ್ಡ್ ಮಾರ್ಷಲ್ ಆಗಿದ್ದ ಕೊಡಗಿನ ವರಪುತ್ರ ಕೆ.ಎಂ ಕಾರ್ಯಪ್ಪ ಅವರ ಹೆಸರು ಕೇಳಿದರೆ ಇಂದಿಗೂ ಕೊಡಗಿನ ಯುವಕರ ಶರೀರ ಒಂದು ಕ್ಷಣ ರೋಮಾಂಚನಗೊಳ್ಳುತ್ತದೆ. ಏಕೆಂದರೆ ಕೊಡಗಿನ ಪ್ರತಿ ಮನೆ ಮನೆಯಲ್ಲೂ ಒಬ್ಬ ಯೋಧ ಹುಟ್ಟುತ್ತಾನೆ ಎಂಬ ನಂಬಿಕೆ ಇದೆ.

ಪುಟ್ಟ ಜಿಲ್ಲೆಯಾಗಿದ್ದರೂ ದೇಶಕ್ಕೆ ಕೊಡಗಿನ ಕೊಡುಗೆ ಅನನ್ಯವಾದುದು. ಅದು ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಸಾವಿರಾರು ಯೋಧರು ಇರಬಹುದು, ಕ್ರೀಡಾ ರಂಗಕ್ಕೆ ನೀಡಿರುವ ನೂರಾರು ಕ್ರೀಡಾಪಟುಗಳ ಮೂಲಕ ಅಥವಾ ಐಟಿ-ಬಿಟಿ ಮತ್ತು ಸರ್ಕಾರದ ಉನ್ನತ ಉದ್ಯೋಗ ಹೊಂದಿರುವ ನೂರಾರು ಕೊಡಗಿನವರು ಜಿಲ್ಲೆಯ ಹೆಮ್ಮೆಗೆ ಗರಿ ಮೂಡಿಸಿದ್ದಾರೆ.

ಸಂಬಂಧಿಕರು ಚಿಮ್ಮಾ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು

ಸಂಬಂಧಿಕರು ಚಿಮ್ಮಾ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು

ಇಂತಹ ಹೆಮ್ಮೆಯ ಜಿಲ್ಲೆಯ ರೈತ ಕುಟುಂಬದಲ್ಲಿ 1899ರ ಜನವರಿ 28ರಂದು ಜನ್ಮ ತಳೆದ ಕಾರ್ಯಪ್ಪ ಅವರ 122 ನೇ ಜನ್ಮದಿನವನ್ನು ಕೊಡಗಿನಲ್ಲಿ ಗೌರವ ಪೂರ್ವಕವಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರ ಸಾಮಾಜಿಕ ತಾಣಗಳಲ್ಲೂ ಕಾರ್ಯಪ್ಪ ಅವರ ಫೋಟೋ ರಾರಾಜಿಸುತ್ತಿರುವುದು ಅವರ ಬಗ್ಗೆ ಹೊಂದಿರುವ ಶ್ರೇಷ್ಠ ಗೌರವಕ್ಕೆ ಸಾಕ್ಷಿಯಾಗಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರನ್ನು ಅವರ ಸಂಬಂಧಿಕರು "ಚಿಮ್ಮಾ" ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. ಆದರೆ ಸೇನೆಗೆ ಸೇರ್ಪಡೆಗೊಂಡ ನಂತರ ಬ್ರಿಟಿಷ್ ಅಧಿಕಾರಿಗಳಿಗೆ ಇವರ ಹೆಸರನ್ನು ಉಚ್ಚರಿಸಲು ಸಾಧ್ಯವಾಗದೆ ಕಿಪ್ಪರ್ ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. ಈ ವೀರ ಸೇನಾನಿ 1919 ರಲ್ಲಿ ಭಾರತೀಯ ಸೇನೆಗೆ ಜೂನಿಯರ್ ಅಧಿಕಾರಿಯಾಗಿ ಸೇರ್ಪಡೆಗೊಂಡರು. 1927 ರಲ್ಲಿ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದರು.

ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್

ವೃತ್ತಿಪರ ಬದ್ಧತೆಗಳಿಂದಾಗಿ ದಂಪತಿಗಳು ಬೇರ್ಪಟ್ಟರು

ವೃತ್ತಿಪರ ಬದ್ಧತೆಗಳಿಂದಾಗಿ ದಂಪತಿಗಳು ಬೇರ್ಪಟ್ಟರು

1937 ರಲ್ಲಿ ಸಿಕಂದರಬಾದ್ ನ ಅರಣ್ಯಾಧಿಕಾರಿಯೊಬ್ಬರ ಮಗಳಾದ ಮುತ್ತು ಮಾಚಿಯಾ ಎಂಬವವರನ್ನು ವಿವಾಹವಾದ ಇವರಿಗೆ ನಂದಾ ಕಾರ್ಯಪ್ಪ ಎಂಬ ಪುತ್ರ ಮತ್ತು ನಳಿನಿ ಕಾರ್ಯಪ್ಪ ಎಂಬ ಪುತ್ರಿ ಇದ್ದಾರೆ. ಅವರ ಮಗ ನಂದಾ ಭಾರತೀಯ ವಾಯುಸೇನೆಯಲ್ಲಿ ಸೇರಿಕೊಂಡು ಏರ್ ಮಾರ್ಷಲ್ ಹುದ್ದೆಗೆ ಏರಿದರು. ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಮುತ್ತು ಅವರ ವೈವಾಹಿಕ ಜೀವನವು ಆರಂಭದಲ್ಲಿ ಸಂತೋಷವಾಗಿದ್ದರೂ, ನಂತರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಫೀಲ್ಡ್ ಮಾರ್ಷಲ್ ಕರಿಯಪ್ಪ ಅವರ ವೃತ್ತಿಪರ ಬದ್ಧತೆಗಳಿಂದಾಗಿ ದಂಪತಿಗಳು ಬೇರ್ಪಟ್ಟರು. ದುರದೃಷ್ಟವತಾಶ್ ನಂತರ ಮೂರೇ ವರ್ಷಗಳಲ್ಲಿ ಮುತ್ತು ಅವರು ಅಪಘಾತವೊಂದರಲ್ಲಿ ತೀರಿಕೊಂಡರು. ನಂದಾ ಕಾರಿಯಪ್ಪ ಅವರೂ ಸೇನೆಗೆ ಸೇರಿಕೊಂಡು ಏರ್ ಮಾರ್ಷಲ್ ಆಗಿ ನಿವೃತ್ತರಾದರು.

ಡೆಪ್ಯೂಟಿ ಚೀಫ್ ಆಫ್ ಜನರಲ್ ಸ್ಟಾಫ್ ಆಗಿ ನೇಮಕ

ಡೆಪ್ಯೂಟಿ ಚೀಫ್ ಆಫ್ ಜನರಲ್ ಸ್ಟಾಫ್ ಆಗಿ ನೇಮಕ

1947 ರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು, ಇಂಗ್ಲೆಂಡ್ ನ ಕ್ಯಾಂಬರ್ಲಿಯ ಇಂಪೀರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ತರಬೇತಿ ಕೋರ್ಸ್ ಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಸ್ವಾತಂತ್ರ್ಯದ ನಂತರ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರನ್ನು ಮೇಜರ್ ಜನರಲ್ ಹುದ್ದೆಯೊಂದಿಗೆ ಡೆಪ್ಯೂಟಿ ಚೀಫ್ ಆಫ್ ಜನರಲ್ ಸ್ಟಾಫ್ ಆಗಿ ನೇಮಿಸಲಾಯಿತು.

ಭಾರತೀಯ ಸೈನ್ಯದ ಮೊದಲ ಕಮಾಂಡರ್-ಇನ್-ಚೀಫ್

ಭಾರತೀಯ ಸೈನ್ಯದ ಮೊದಲ ಕಮಾಂಡರ್-ಇನ್-ಚೀಫ್

ಅದರ ನಂತರ, ಅವರು ಪಾಕಿಸ್ತಾನದ ಜತೆ ಯುದ್ಧ ಪ್ರಾರಂಭವಾದಾಗ ಈಸ್ಟರ್ನ್ ಆರ್ಮಿ ಕಮಾಂಡರ್ ಮತ್ತು ವೆಸ್ಟರ್ನ್ ಕಮಾಂಡ್ ಜನರಲ್ ಕಮಾಂಡಿಂಗ್-ಇನ್-ಚೀಫ್ ಆದರು. ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರನ್ನು 1949ರ ಜನವರಿ 15 ರಂದು ಸ್ವತಂತ್ರ ಭಾರತೀಯ ಸೈನ್ಯದ ಮೊದಲ ಕಮಾಂಡರ್-ಇನ್-ಚೀಫ್ ಆಗಿ ನೇಮಿಸಲಾಯಿತು. ಅವರಿಗೆ ಅಮೆರಿಕಾದ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಅವರು 'ಆರ್ಡರ್ ಆಫ್ ದಿ ಲೀಜನ್ ಆಫ್ ಮೆರಿಟ್ ನ ಮುಖ್ಯ ಕಮಾಂಡರ್' ಪ್ರಶಸ್ತಿಯನ್ನು ನೀಡಿದರು.

ಇಂದಿಗೂ ಯುವ ಜನಾಂಗಕ್ಕೆ ಸ್ಪೂರ್ತಿ

ಇಂದಿಗೂ ಯುವ ಜನಾಂಗಕ್ಕೆ ಸ್ಪೂರ್ತಿ

ಭಾರತ ಸರ್ಕಾರವು 1986ರಲ್ಲಿ ಕಾರ್ಯಪ್ಪ ಅವರಿಗೆ ಫೀಲ್ಡ್ ಮಾರ್ಷಲ್ ಶ್ರೇಣಿಯನ್ನು ನೀಡಿ ಗೌರವಿಸಿತು. 1965ರ ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಅವರ ಮಗ ನಂದಾ ಅವರು ಪಾಕಿಸ್ತಾನದ ಸೇನೆಗೆ ಸೆರೆ ಸಿಕ್ಕರು. ಆಗ ಸೇನಾಧಿಕಾರಿ ಒಬ್ಬರು ಪಾಕಿಸ್ತಾನದ ಸೇನೆಯ ಜನರಲ್ ಜತೆ ಮಾತಾಡಿದರೆ ಮಗನನ್ನು ಬಿಡುಗಡೆ ಮಾಡಬಹುದು ಎಂದು ಸಲಹೆ ಕೊಟ್ಟರು. ಆಗ ಕಾರ್ಯಪ್ಪ ಅವರು ತಾವು ಪ್ರಭಾವ ಬೀರುವುದಕ್ಕೆ ನಿರಾಕರಿಸಿದ್ದಲ್ಲದೆ, ಎಲ್ಲ ಯುದ್ಧ ಕೈದಿಗಳಂತೆಯೇ ನನ್ನ ಮಗನನ್ನೂ ನೋಡಿಕೊಳ್ಳಲಿ ಎಂದು ಹೇಳಿದ ಘಟನೆ ಇಂದಿಗೂ ಯುವ ಜನಾಂಗಕ್ಕೆ ಸ್ಪೂರ್ತಿ ಆಗಿದೆ.

ವೀರ ಸೇನಾನಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ

ವೀರ ಸೇನಾನಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ

ತಮ್ಮ ಬಹುತೇಕ ಸೇನೆಯ ಸೇವೆಯನ್ನು ರಜಪೂತ್ ರೆಜಿಮೆಂಟ್ ನಲ್ಲಿ ಸಲ್ಲಿಸಿದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರು, ಜನವರಿ 14, 1953 ರಂದು ನಿವೃತ್ತರಾದರು. ನಿವೃತ್ತಿಯ ನಂತರ ಅವರು 1956 ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗೆ ಭಾರತೀಯ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಆರೋಗ್ಯವು 1991ರಲ್ಲಿ ಕ್ಷೀಣಿಸಲು ಪ್ರಾರಂಭಿಸಿತು. ಅವರು ಸಂಧಿವಾತ ಮತ್ತು ಹೃದಯದ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರು ಮೇ 15, 1993 ರಂದು ಬೆಂಗಳೂರು ಕಮಾಂಡ್ ಆಸ್ಪತ್ರೆಯಲ್ಲಿ ನಿದ್ರೆಯಲ್ಲಿ ನಿಧನರಾದರು. ಅವರ ಮೃತ ದೇಹವನ್ನು ಎರಡು ದಿನಗಳ ನಂತರ ಕೊಡವ ವಿಧಿ ವಿಧಾನಗಳೊಂದಿಗೆ ಮಡಿಕೇರಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಶಿಸ್ತಿಗೆ ಹೆಸರಾಗಿದ್ದ ಕಾರ್ಯಪ್ಪ ಅವರು ಜೀವನದಲ್ಲಿ ಎಂದಿಗೂ ತಾವು ನಂಬಿದ್ದ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಚೈನ್ ಸ್ಮೋಕರ್ ಆಗಿದ್ದ ಅವರು ಸಮಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಇಂದಿಗೂ ಈ ವೀರ ಸೇನಾನಿಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ.

English summary
Born on January 28, 1899 in a farmer's family in Kodagu district, KM Cariappa's 122nd birthday is being celebrated by honor in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X