• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದ ಯೋಗಿ 2.0 ಸರ್ಕಾರದ ಹೊಸ ಸಂಪುಟದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ?

|
Google Oneindia Kannada News

ಲಕ್ನೋ, ಮಾರ್ಚ್ 17: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮತದಾರರು ಎರಡನೇ ಬಾರಿ ಅವಕಾಶ ನೀಡಿದ್ದಾರೆ. ಎರಡನೇ ಅವಧಿಯಲ್ಲಿ ಮಹಿಳಾ ಅಭ್ಯರ್ಥಿಗಳು, ನಿವೃತ್ತ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹಲವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ಯೋಗಿಯ 2.0 ಸರ್ಕಾರದ ಸಂಪುಟದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ನೀಡಬಹುದು ಎಂಬುದರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.

ಮಾರ್ಚ್ 10ರಂದು ಹೊರಬಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಸರ್ಕಾರ ರಚನೆ ಬಗ್ಗೆ ಬಿಜೆಪಿಯಲ್ಲಿ ಹಲವು ಸುತ್ತಿನ ಸಭೆ ನಡೆಸಲಾಗಿದೆ. ಜಾತಿ ಸಮೀಕರಣ, ವಿದ್ಯಾರ್ಹತೆ, ಉದ್ಯೋಗದ ಅನುಭವ ಮತ್ತು ಸರ್ಕಾರಿ ಉದ್ಯೋಗ ನಿಭಾಯಿಸಿದ ಹಿನ್ನಲೆಯನ್ನು ಅವಲೋಕಿಸಿ ಸಂಪುಟ ರಚನೆ ಮಾಡಲು ಚಿಂತಿಸಲಾಗುತ್ತಿದೆ. ಇದರ ಮಧ್ಯೆ ಯುಪಿಯಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದು, ಸಂಪುಟದಲ್ಲಿ ಮಹಿಳೆಯರಿಗೂ ಸ್ಥಾನ ಕಲ್ಪಿಸುವ ಸವಾಲು ಎದುರಾಗಿದೆ.

ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಂತೆ ಬಿಜೆಪಿಗೆ ಸೇರ್ಪಡೆಯಾದ ಹಲವು ನಾಯಕರು ಗೆಲುವು ಸಾಧಿಸಿದ್ದಾರೆ. ಇಂಥ ಶಾಸಕರನ್ನು ಸರ್ಕಾರದ ಭಾಗವಾಗಿ ಮಾಡಿಕೊಳ್ಳುವ ಅನಿವಾರ್ಯತೆಯೂ ಇದೆ. ಇದರ ಜೊತೆಗೆ ಜಾತಿ ಮತ್ತು ಪ್ರಾದೇಶಿಕ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಶಾಸಕರಿಗೆ ಸಚಿವ ಸ್ಥಾನ ನೀಡುವ ನಿಟ್ಟಿನಲ್ಲಿ ಬಿಜೆಪಿಯು ಆಲೋಚಿಸುತ್ತಿದೆ. ಹಾಗಿದ್ದರೆ ಬಿಜೆಪಿಯವರ ತಲೆಯಲ್ಲಿ ಸರ್ಕಾರ ರಚನೆ ಬಗ್ಗೆ ಏನು ಓಡುತ್ತಿದೆ. ಸಂಪುಟದಲ್ಲಿ ಯಾರಿಗೆ ಮಂತ್ರಿಗಿರಿ ಸಿಗುತ್ತೆ ಎಂಬುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ 2.0 ಸರ್ಕಾರದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ?ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ 2.0 ಸರ್ಕಾರದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ?

ಸಂಪುಟ ರಚನೆ ವೇಳೆ ಜಾತಿ ಮತ್ತು ಪ್ರಾದೇಶಿಕ ಸಮಾನತೆ

ಸಂಪುಟ ರಚನೆ ವೇಳೆ ಜಾತಿ ಮತ್ತು ಪ್ರಾದೇಶಿಕ ಸಮಾನತೆ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2.0 ಸರ್ಕಾರದ ಸಂಪುಟ ರಚನೆ ವೇಳೆ ಹಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ವಿದ್ಯಾರ್ಹತೆ, ಉದ್ಯೋಗದ ಹಿನ್ನೆಲೆ, ಜಾತಿ ಮತ್ತು ಪ್ರಾದೇಶಿಕ ಸಮಾನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಪುಟ ರಚನೆ ಮಾಡುವುದಕ್ಕೆ ಬಿಜೆಪಿ ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎಲ್ಲ ಬೆಳವಣಿಗೆಳನ್ನು ನೋಡಿಕೊಳ್ಳುವುದಕ್ಕಾಗಿ ಬಿಜೆಪಿಯ ಸಂಸದೀಯ ಮಂಡಳಿಯು ಇಬ್ಬರು ವೀಕ್ಷಕರನ್ನು ನೇಮಿಸಿದೆ.

ಯೋಗಿ ಸಂಪುಟದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ

ಯೋಗಿ ಸಂಪುಟದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ

ಮೂರು ಬಾರಿ ಸಮಾಜವಾದಿ ಪಕ್ಷದಿಂದ ಗೆಲುವು ಸಾಧಿಸಿದ ಕನ್ನೌಜ್ ಸಾದರ್ ಕ್ಷೇತ್ರದ ಶಾಸಕ ಅನಿಲ್ ಕುಮಾರ್ ಅವರನ್ನು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಆಸಿಮ್ ಅರುಣ್ ಸೋಲಿಸಿದ್ದಾರೆ. ಕಳೆದ ಜನವರಿ ತಿಂಗಳಿನಲ್ಲಿ ಬಿಜೆಪಿ ಸೇರುವುದಕ್ಕಾಗಿ ಆಸಿಮ್ ಅರುಣ್, ಐಪಿಎಸ್ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಿಸಿದ್ದರು.

ಅದೇ ರೀತಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಮಾಜಿ ಐಎಎಸ್ ಅಧಿಕಾರಿ ಎಕೆ ಶರ್ಮಾ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ವರ್ಷ ಇದೇ ಎಕೆ ಶರ್ಮಾರನ್ನು ಯುಪಿಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದ ವೇಳೆ ಎಕೆ ಶರ್ಮಾ ಅವರ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದರು.

ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ ಕೂಡ ಸಂಪುಟದ ಸಚಿವರಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. 2010ರಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ ಪ್ರಕರಣ ಮತ್ತು 2ಜಿ ಸ್ಪಕ್ಟ್ರಂ ಪ್ರಕರಣಗಳ ತನಿಖೆ ನಡೆಸಿದ ಇವರು, ಲಕ್ನೋದ ಸರೋಜಿನಿ ನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿ ಅಭಿಷೇಕ್ ಮಿಶ್ರಾ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಉಕ್ಕು ಸಚಿವ ಆರ್‌ಸಿಪಿ ಸಿಂಗ್ ಕೂಡ ಮಾಜಿ ಅಧಿಕಾರಿಗಳೇ ಆಗಿದ್ದಾರೆ.

ಯೋಗಿ 2.0 ಸಂಪುಟದಲ್ಲಿ ಮಹಿಳೆಯರಿಗೆ ಆದ್ಯತೆ

ಯೋಗಿ 2.0 ಸಂಪುಟದಲ್ಲಿ ಮಹಿಳೆಯರಿಗೆ ಆದ್ಯತೆ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2.0 ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಗಳು ಹೆಚ್ಚಾಗಿವೆ. ದೇಶಾದ್ಯಂತ ಬಿಜೆಪಿ ಗೆಲುವಿನಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಪಕ್ಷದ ನಂಬಿಕೆಯಾಗಿದೆ. ಪ್ರಸ್ತುತ ಯುಪಿ ಸಂಪುಟದಲ್ಲಿ ನಾಲ್ಕು ಮಹಿಳೆಯರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಆದರೆ 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ನಾಲ್ಕಕ್ಕಿಂತ ಹೆಚ್ಚು ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಬರುವ ಸಂಪುಟದಲ್ಲಿ ಹೊಸದಾಗಿ ಆಯ್ಕೆ ಆಗಿರುವ ಬಿಜೆಪಿ ಶಾಸಕಿ ಅಪರ್ಣಾ ಯಾದವ್ ಮತ್ತು ರಾಯ್ ಬರೇಲಿ ಬಿಜೆಪಿ ಶಾಸಕಿ ಅದಿತಿ ಸಿಂಗ್ ಅವರಿಗೆ ಮಂತ್ರಿಗಿರಿ ಸಿಗುವುದು ಬಹುತೇಕ ಖಾತ್ರಿ ಆಗಿದೆ.

ಹೊಸ ಮುಖಗಳಿಗೆ ಮಣೆ ಹಾಕಲು ಯೋಗಿ ಚಿಂತನೆ

ಹೊಸ ಮುಖಗಳಿಗೆ ಮಣೆ ಹಾಕಲು ಯೋಗಿ ಚಿಂತನೆ

ಉತ್ತರ ಪ್ರದೇಶ ಬಿಜೆಪಿಯ 2.0 ಸರ್ಕಾರದ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಯೋಗಿ ಆದಿತ್ಯನಾಥ್ ಮುಂದಾಗಿದ್ದಾರೆ. ವಿಧಾನಸಭೆ ಚುನಾವಣೆ ಅಖಾಡದಲ್ಲಿ ಸ್ಪರ್ಧಿಸಿದ ಹಿಂದಿನ ಸರ್ಕಾರದ 11 ಸಚಿವರು ಸೋಲು ಕಂಡಿದ್ದಾರೆ. ಇದರಿಂದ ಖಾಲಿ ಆಗಿರುವ ಸಚಿವರ ಕುರ್ಚಿಯಲ್ಲಿ ಹೊಸ ಮುಖಗಳನ್ನು ತಂದು ಕೂರಿಸಲು ಚಿಂತನೆ ನಡೆದಿದೆ. ಒಂದು ವೇಳೆ ಹಾಗಾದರೆ, ಅಮಿತ್ ಅಗರ್ವಾಲ್, ಬೇಬಿ ರಾಣಿ ಮೌರ್ಯ, ಅಂಜುಲಾ ಮಹೌರ್, ರಾಜೇಶ್ ತ್ರಿಪಾಠಿ, ಕೃಷ್ಣ ಪಾಸ್ವಾನ್, ಹಾಗೂ ನಿಶಾದ್ ಪಕ್ಷದ ಮುಖ್ಯಸ್ಥ ಡಾ. ಸಂಜಯ್ ನಿಶಾದ್, ಆಶಿಶ್ ಸಿಂಗ್ ಪಟೇಲ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ಬಿಜೆಪಿಯ ಹಿರಿಯ ಶಾಸಕ ಪಂಕಜ್ ಸಿಂಗ್ ಕೂಡ ಯೋಗಿ ಆದಿತ್ಯನಾಥ್ ಸಂಪುಟದ ಭಾಗವಾಗಲಿದ್ದಾರೆ. ಇದುವರೆಗೂ ನೋಯ್ಡಾದ ಯಾವೊಬ್ಬ ನಾಯಕರೂ ಕೂಡ ಯೋಗಿ ಸಂಪುಟದಲ್ಲಿ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆ 2017 ಮತ್ತು 2022ರ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪಂಕಜ್ ಸಿಂಗ್ ಅವರಿಗೆ ಮಂತ್ರಿಗಿರಿ ಒಲಿದು ಬರುವ ನಿರೀಕ್ಷೆಗಳು ಹೆಚ್ಚಾಗಿವೆ.

ಯುಪಿಯಲ್ಲಿ 255 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿ

ಯುಪಿಯಲ್ಲಿ 255 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿ

2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ರಾಜ್ಯದ 75 ಜಿಲ್ಲೆಗಳ 403 ಕ್ಷೇತ್ರಗಳಲ್ಲಿ ಸರ್ಕಾರ ರಚಿಸುವುದಕ್ಕೆ ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಆದರೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.

ಯೋಗಿ ಆದಿತ್ಯನಾಥ
Know all about
ಯೋಗಿ ಆದಿತ್ಯನಾಥ
English summary
Women, Bureaucrats, New Faces Will Enter Into Yogi 2.0 Cabinet: Here’s The List of Probable Ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X