ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.35ರಷ್ಟು ಓಟ್ ಪಡೆದರೆ ಗದ್ದುಗೆ; ಉತ್ತರ ಪ್ರದೇಶದಲ್ಲಿ ಹೇಗಿದೆ ಜಾತಿ ಲೆಕ್ಕಾಚಾರ?

|
Google Oneindia Kannada News

ನವದೆಹಲಿ, ಜನವರಿ 29: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲು ಜಾತಿ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಪ್ರತಿಬಾರಿ ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರ ಉಳಿಸಿಕೊಳ್ಳಲು, ಮತ್ತೊಂದು ಪಕ್ಷ ಅಧಿಕಾರ ಕಳೆದುಕೊಳ್ಳಲು ಈ ಜಾತಿ ವಿಚಾರ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ.

"ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅಂದಿನ ಪರಿಸ್ಥಿತಿ ನಿರ್ವಹಣೆಗಾಗಿ ಜವಾಹರ್ ಲಾಲ್ ನೆಹರೂ ಅವರು ನೀಡಿದ ಹೊಸ ಹೆಸರು ತೃಪ್ತಿಕರವಾಗಿರಲಿಲ್ಲ. ಇತರೆ ಹಿಂದುಳಿದ ವರ್ಗಗಳು ಎನ್ನುವ ಪಟ್ಟಿಯಲ್ಲಿ ಅಸ್ಪೃಶ್ಯರು ಮತ್ತು ಬುಡಕಟ್ಟು ಜನಾಂಗವನ್ನು ಹೊರತುಪಡಿಸಿ ಉಳಿದವರನ್ನು ಸೇರಿಸಾಗಿತ್ತು. ಆದರೆ ಇಲ್ಲಿ ವರ್ಗ ಎಂಬ ಪದವು ವಿಶೇಷವಾಗಿ ಜಾತಿಯ ದೃಷ್ಟಿಕೋನದಿಂದ ಅಂತರ ಕಾಯ್ದುಕೊಳ್ಳಲು ನೀಡಿದ ಹೆಸರಾಗಿತ್ತು," ಎಂದು ಫ್ರೆಂಚ್ ರಾಜಕೀಯ ವಿಜ್ಞಾನಿ ಮತ್ತು ಭಾರತಶಾಸ್ತ್ರಜ್ಞ ಕ್ರಿಸ್ಟೋಫ್ ಜಾಫ್ರೆಲಾಟ್ ಈ ಜಾತಿ ಮತ್ತು ವರ್ಗಗಳ ಲೆಕ್ಕಾಚಾರದ ಬಗ್ಗೆ ಬರೆದಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022ರಲ್ಲಿ ಎರಡೂ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿವೆ. ಇತರೆ ಹಿಂದುಳಿದ ವರ್ಗ ಬೆಂಬಲ ಪಡೆದುಕೊಳ್ಳಲು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಬಿಜೆಪಿಯ ಯೋಗಿ ಆದಿತ್ಯನಾಥ್ ನಡುವೆ ದೀರ್ಘ ಪೈಪೋಟಿ ನಡೆಯುತ್ತಿದೆ. ಒಂದು ವರ್ಗ ಮತ್ತು ಜಾತಿಯ ಬೆಂಬಲ ಪಡೆಯುವುದಕ್ಕಾಗಿ ರಾಜಕಾರಣಿಗಳ ನಡುವಿನ ಸಮರ ಹೇಗಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಸಾಮಾಜಿಕ ನ್ಯಾಯಕ್ಕಾಗಿ ಮಂಡಲ ಸಮಿತಿ

ಸಾಮಾಜಿಕ ನ್ಯಾಯಕ್ಕಾಗಿ ಮಂಡಲ ಸಮಿತಿ

ಉತ್ತರ ಪ್ರದೇಶದಲ್ಲಿ ರಾಜಕೀಯ ಬೆಳವಣಿಗೆ ಹಿನ್ನೆಲೆ ಇತರೆ ಹಿಂದುಳಿದ ವರ್ಗಗಳು ಮೊದಲಿನಿಂದ ಸಮಾಜವಾದಿ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದವು. ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸಾಮಾಜಿಕ ನ್ಯಾಯ ಎಂಬ ಪದವನ್ನು ಪರಿಚಯಿಸಿದರು. 1990ರ ದಶಕದಲ್ಲಿ ಮಂಡಲ ಆಯೋಗವನ್ನು ರಚಿಸಿದ್ದು, ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಂಡಲ ಆಯೋಗದ ವರದಿ ಜಾರಿಗೊಳಿಸುವುದಕ್ಕೆ ಶ್ರಮ ವಹಿಸಿದ್ದರು.

ಒಬಿಸಿಗಳಿಗೆ ರಾಜಕೀಯ ಅಧಿಕಾರವನ್ನು ಗೆಲ್ಲಲು ಮಂಡಲ ಅನುವು ಮಾಡಿಕೊಟ್ಟಿತು. 1990ರ ದಶಕದಲ್ಲಿ ಈ ಕಾರ್ಯ ಸಾಧನೆ ಸಾಧ್ಯವಾಯಿತು. ಏಕೆಂದರೆ ಅಷ್ಟರಲ್ಲಿ ಮೇಲ್ಜಾತಿಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸಿದ ಹಿಂದುಳಿದ ವರ್ಗಗಳನ್ನು ಹುರಿದುಂಬಿಸಲಾಗಿತ್ತು. ಅದಾಗಲೇ ಸಾಂಪ್ರದಾಯಿಕವಾಗಿ ಅನುವಂಶೀಯ ರಾಜಕಾರಣಕ್ಕಾಗಿ ಕಾಂಗ್ರೆಸ್ ಅನ್ನು ಮತದಾರರು ದೂರವಿಟ್ಟರು.

ಯುಪಿಯಲ್ಲಿ ಎಲ್ಲ ಪಕ್ಷಗಳ ಮುಖ್ಯಸ್ಥರದ್ದೂ ಓಬಿಸಿ ಹಿನ್ನಲೆ

ಯುಪಿಯಲ್ಲಿ ಎಲ್ಲ ಪಕ್ಷಗಳ ಮುಖ್ಯಸ್ಥರದ್ದೂ ಓಬಿಸಿ ಹಿನ್ನಲೆ

ಉತ್ತರ ಪ್ರದೇಶದಲ್ಲಿ ಪ್ರಸ್ತುತ ಒಟ್ಟು ಜನಸಂಖ್ಯೆ ಪೈಕಿ ಶೇ.54.50ರಷ್ಟು ಜನರು ಓಬಿಸಿಗೆ ಸೇರಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಓಬಿಸಿ ವೋಟ್ ಬ್ಯಾಂಕ್ ಬಹುಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಓಬಿಸಿ ನಾಯಕರಿಗೆ ಹೆಚ್ಚು ಮಣೆ ಹಾಕುತ್ತಿವೆ. ರಾಜ್ಯದಲ್ಲಿ ನಾಲ್ಕೂ ಪ್ರಮುಖ ಪಕ್ಷಗಳ ಮುಖ್ಯಸ್ಥರ ಸ್ಥಾನವನ್ನು ಓಬಿಸಿ ನಾಯಕರಿಗೆ ನೀಡಲಾಗಿದೆ.

ಅತಿಹೆಚ್ಚು ಓಬಿಸಿ ಶಾಸಕರನ್ನು ಹೊಂದಿರುವ ಬಿಜೆಪಿ

ಅತಿಹೆಚ್ಚು ಓಬಿಸಿ ಶಾಸಕರನ್ನು ಹೊಂದಿರುವ ಬಿಜೆಪಿ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೇರಿದ 102 ಶಾಸಕರು ಓಬಿಸಿ ಹಿನ್ನಲೆಯಿಂದ ಬಂದವರೇ ಆಗಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ಅತಿಹೆಚ್ಚು ಶಾಸಕರು ಓಬಿಸಿಯವರೇ ಆಗಿದ್ದಾರೆ. ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಸಮಾಜವಾದಿ ಪಕ್ಷದಲ್ಲಿ ಓಬಿಸಿಗೆ ಸೇರಿದ 12 ಶಾಸಕರಿದ್ದಾರೆ. ಬಹುಜನ ಸಮಾಜವಾದಿ ಪಕ್ಷದಲ್ಲಿ 5 ಮತ್ತು ಅಪ್ನಾ ದಳ ಪಕ್ಷದಲ್ಲಿ ಐವರು ಓಬಿಸಿ ಶಾಸಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಓಬಿಸಿಗೆ ಸೇರಿದ ಒಬ್ಬ ಶಾಸಕರು ಇದ್ದಾರೆ. ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ ನೀಡಿದ ವರದಿ ಪ್ರಕಾರ, ಬಿಜೆಪಿಯು 2009 ಮತ್ತು 2014ರ ನಡುವೆ ಬಿಜೆಪಿಯ ಓಬಿಸಿ ಮತಗಳ ಪಾಲು ಶೇ.12 ರಿಂದ 14ರಷ್ಟು ಹೆಚ್ಚಾಗಿದೆ. ಜಾತಿ ಆಧಾರದ ಮೇಲೆ 2017ರ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಶೇ.45ರಷ್ಟು ಮತಗಳನ್ನು ಗಳಿಸಿಕೊಂಡಿದೆ.

ರಾಜ್ಯದಲ್ಲಿ ಇಂದಿಗೂ ಶೇ.66ರಷ್ಟು ಯಾದವರ ಮತಗಳು ಸಮಾಜವಾದಿ ಪಕ್ಷಕ್ಕೆ ಬೀಳುತ್ತಿವೆ. ಆದರೆ ಯಾದವ್ ಮತಗಳ ಹೊರತಾದ ಓಬಿಸಿ ಮತಗಳು ಶೇ.60ರಷ್ಟು ಬಿಜೆಪಿಯನ್ನು ರಕ್ಷಿಸುತ್ತಿವೆ. ಮೇಲ್ಜಾತಿ ಮತ್ತು ಯಾದವ್ ಜಾತಿ ಹೊರತಾಗಿರುವ ಮತಗಳು ಸೇರಿಕೊಂಡು ಬಿಜೆಪಿಗೆ ಅಧಿಕಾರದ ಗದ್ದುಗೆಯನ್ನು ನೀಡಿವೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಪರಿವರ್ತನೆ?

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಪರಿವರ್ತನೆ?

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಂಗೈಯಲ್ಲಿದ್ದ ಓಬಿಸಿ-ಮುಸ್ಲಿಂ ಮತಕ್ಷೇತ್ರಗಳು ನಿಧಾನವಾಗಿ ಸಮಾಜವಾದಿ ಪಕ್ಷದ ಕಡೆಗೆ ಹೊರಳಿದವು. ಇನ್ನೊಂದು ಮುಖದಲ್ಲಿ ದಲಿತ ವೋಟ್ ಬ್ಯಾಂಕ್ ಎನ್ನುವುದು ಬಹುಜನ ಸಮಾಜವಾದಿ ಪಕ್ಷದ ಕಡೆಗೆ ತಿರುಗಿದ್ದನ್ನು ಮರೆಯುವಂತಿಲ್ಲ.

2014ರಲ್ಲಿ ದೇಶದ ಅತ್ಯುನ್ನತ ಓಬಿಸಿ ನಾಯಕ ಎಂದು ಬಿಜೆಪಿಯು ತನ್ನದೇ ಪಕ್ಷದ ನರೇಂದ್ರ ಮೋದಿಯವರನ್ನು ಬಿಂಬಿಸಿತು. ಅಂದು ಸಮಾಜವಾದಿ ಪಕ್ಷದಿಂದ ಯಾದವೇತರ ಓಬಿಸಿ ಮತ್ತು ಬಹುಜನ ಸಮಾಜವಾದಿ ಪಕ್ಷದಿಂದ ಯಾತವ್ ಯೇತರ ಓಬಿಸಿ ಮತಗಳನ್ನು ಬಿಜೆಪಿ ಕಸಿದುಕೊಳ್ಳಲು ಸಾಧ್ಯವಾಯಿತು. ತದನಂತರ 2017ರ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯದ ಬಾವುಟ ಹಾರಿಸಿತು.

ಇದರ ಮಧ್ಯೆ ಬಿಜೆಪಿಯು ಮತ್ತಷ್ಟು ಒಬಿಸಿ ನಾಯಕರ ಹೆಸರನ್ನು ಮುನ್ನಲೆಗೆ ತರುವ ಮೂಲಕ ಪಕ್ಷವು ಬಿಜೆಪಿ ಪರವಾಗಿ ಎಂಬಂತೆ ಬಿಂಬಿಸಿಕೊಳ್ಳಲು ಆರಂಭಿಸಿತು. ಈ ಹಂತದಲ್ಲಿ ನರೇಂದ್ರ ಮೋದಿಯವರ ಜೊತೆಗೆ ಕಲ್ಯಾಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಉಮಾಭಾರತಿ, ದಿವಂಗತ ಗೋಪಿನಾಥ್ ಮುಂಡೆ ಮತ್ತು ಸುಶೀಲ್ ಕುಮಾರ್ ಮೋದಿ ಹೆಸರು ರಾಜಕಾರಣದಲ್ಲಿ ಸದ್ದು ಮಾಡಿತು.

2017ರ ನಂತರ ಅಖಿಲೇಶ್ ಯಾದವ್ ಕೈಗೆ ಪಕ್ಷದ ಲಾಠಿ

2017ರ ನಂತರ ಅಖಿಲೇಶ್ ಯಾದವ್ ಕೈಗೆ ಪಕ್ಷದ ಲಾಠಿ

ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಖಿಲೇಶ್ ಯಾದವ್ ಕೈಗೆ ಮುಲಾಯಂ ಸಿಂಗ್ ಯಾದವ್ ಪಕ್ಷದ ಉಸ್ತುವಾರಿ ನೀಡಿದರು. ವಿಧಾನಸಭೆ ಚುನಾವಣೆಯಲ್ಲಿ ಬಹಳ ಜಾಗೃತರಾಗಿ ಸಮಾಜವಾದಿ ಪಕ್ಷದ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ. "ಪರಿವಾರವಾದ" ಆರೋಪದ ಹಿನ್ನೆಲೆ ಕುಟುಂಬ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದು, ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಮುಸ್ಲಿಂ ನಾಯಕರಿಂದ ಕೊಂಚ ಅಂತರ ಕಾಯ್ದುಕೊಳ್ಳುತ್ತಿದ್ದು, ಮೌಲಾನಾ ಮುಲಾಯಂ ಎಂಬ ಹಣೆಪಟ್ಟಿ ಅಳಿಸಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಇದರ ಜೊತೆಗೆ ಮೇಲ್ಜಾತಿಯವರ ವಿರೋಧ ಕಟ್ಟಿಕೊಳ್ಳದಂತೆ ಹಿಂದುತ್ವದ ಕುರಿತೂ ಮೃದು ಧೋರಣೆ ಪ್ರದರ್ಶಿಸಲಾಗುತ್ತಿದೆ. ಇದೆಲ್ಲದರ ಹೊರತಾಗಿಯೂ ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷವು ಓಬಿಸಿ ವೋಟ್ ಬ್ಯಾಂಕ್ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸರ್ಕಾರದ ವಿಶ್ವಾಸ

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸರ್ಕಾರದ ವಿಶ್ವಾಸ

ಸಾಮಾಜಿಕ ನ್ಯಾಯ ಎಂಬ ತಳಹದಿಯಲ್ಲಿ ದೊಡ್ಡ ಜಾತಿ ಮತ್ತು ಸಮುದಾಯದ ಬೆಂಬಲದೊಂದಿಗೆ ಏಕಾಂಗಿಯಾಗಿ ಸರ್ಕಾರವನ್ನು ರಚಿಸುವುದಾಗಿ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಮತ್ತು ಬಿಎಸ್‌ಪಿ ಎರಡರಿಂದಲೂ ಯಾದವೇತರ ಒಬಿಸಿ ನಾಯಕರು ಎಸ್‌ಪಿ ಕಡೆಗೆ ಒಲವು ತೋರಿದ್ದಾರೆ. ಅಖಿಲೇಶ್ ಯಾದವ್ ಸಾಂಪ್ರದಾಯಿಕ ಮುಸ್ಲಿಂ-ಯಾದವ್ (M-Y ) ಸಂಯೋಜನೆಯ ಮೇಲೆ ಮಾತ್ರವಲ್ಲದೆ ವಿಶಾಲವಾದ ಸಾಮಾಜಿಕ ನ್ಯಾಯದಡಿಯಲ್ಲಿದ್ದಾರೆ. ಇದರ ಜೊತೆ ತಮ್ಮನ್ನು ಓಬಿಸಿ ನೇತೃತ್ವದಲ್ಲಿ ತಾವೇ ಉತ್ತಮ ಆಯ್ಕೆ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ.

2017ರಲ್ಲಿ ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ ಹೇಗಿತ್ತು?

2017ರಲ್ಲಿ ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ ಹೇಗಿತ್ತು?

ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏನು ಮಾಡಿದೆ. ಈಗ ಏನು ಮಾಡಲು ಪ್ರಯತ್ನಿಸುತ್ತಿದೆ ಎಂಬುದನ್ನು ಅವಲೋಕಿಸಬೇಕಿದೆ. ಈ ಹಿಂದೆ ಯಾದವೇತರ ಒಬಿಸಿ ಮತ್ತು ಜಾತವ್ ಯೇತರ ಎಸ್‌ಸಿಗಳ ಮತಗಳ ಕ್ರೋಢೀಕರಣಕ್ಕೆ ಬಿಜೆಪಿ ತಂತ್ರ ರೂಪಿಸಿತ್ತು. ಶೌಚಾಲಯದಿಂದ ಹಿಡಿದು ಎಲ್‌ಪಿಜಿ ಸಿಲಿಂಡರ್‌ಗಳವರೆಗೆ ಕೇಂದ್ರವು ಪ್ರಾರಂಭಿಸಿದ ವಿವಿಧ ಯೋಜನೆ ಪ್ರಯೋಜನಗಳನ್ನು ಈ ಎಲ್ಲಾ ಸಮುದಾಯಗಳಿಗೆ ನೀಡಲಾಯಿತು.

ಈ ಹಿಂದಿನ ಎಸ್‌ಪಿ ಮತ್ತು ಬಿಎಸ್‌ಪಿ ಆಡಳಿತದಲ್ಲಿ ಯಾದವರು ಹಾಗೂ ಜಾತವರು ಮುಸ್ಲಿಮರೊಂದಿಗೆ ಓಲೈಕೆಯಲ್ಲಿ ಯೋಜನೆಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಭಾವಿಸಿದ ಓಬಿಸಿಗಳ ಒಂದು ವರ್ಗಕ್ಕೆ ಬಿಜೆಪಿಯು ಒಂದು ಭರವಸೆಯನ್ನು ಮೂಡಿಸಿತು. ಎಸ್‌ಪಿ ಆಡಳಿತದ ಅವಧಿಯಲ್ಲಿ ಯಾದವರಿಂದ ನಡೆದ ಗೂಂಡಾ ರಾಜ್ ಕುರಿತು ಯಾದವೇತರ OBC ಜನರು ಸಹ ಅಸಮಾಧಾನಗೊಂಡಿದ್ದರು.

ಉತ್ತರ ಪ್ರದೇಶದಲ್ಲಿ ಯಾವ ವರ್ಗದ ಮತ ಎಷ್ಟು?

ಉತ್ತರ ಪ್ರದೇಶದಲ್ಲಿ ಯಾವ ವರ್ಗದ ಮತ ಎಷ್ಟು?

ಉತ್ತರ ಪ್ರದೇಶದಲ್ಲಿ ಯಾದವರ ನಂತರದ ಸ್ಥಾನದಲ್ಲಿ ಮೌರ್ಯರು ಗುರುತಿಸಿಕೊಂಡಿದ್ದಾರೆ. ಯಾದವೇತರ OBC ವೋಟ್ ಬ್ಯಾಂಕ್‌ಗಳಲ್ಲಿ ಮೌರ್ಯರು ಶೇ. 6-7 ಕುರ್ಮಿಗಳು ಶೇ.5ರಷ್ಟು, ಲೋಧಿ ಶೇ. 3ರಷ್ಟು ಜನಸಂಖ್ಯೆಯನ್ನು ಹೊಂದಿವೆ. ಈ ಪೈಕಿ ಬಿಜೆಪಿಯು ಶೇ.60ರಷ್ಟು ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದೆ. ಅದರಲ್ಲಿ ಶೇ.10ರಷ್ಟು ಬ್ರಾಹ್ಮಣ, ಶೇ.12ರಷ್ಟು ಠಾಕೂರ್ ಮತ್ತು ವೈಶ್ಯ, ಶೇ.33ರಷ್ಟು ಯಾದವೇತರ ಓಬಿಸಿ ಹಾಗೂ ಶೇ.7 ರಿಂದ 10ರಷ್ಟು ಜಾತವೇತರ ಓಬಿಸಿ ಮತಗಳನ್ನು ಪಡೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಕಳೆದ 2017ರಲ್ಲಿ ಬಿಜೆಪಿ ಶೇ. 40ರಷ್ಟು ಮತಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೇ ಸೂತ್ರದ ಮೇಲೆ 2019ರಲ್ಲಿ ಬಿಜೆಪಿಯು ಶೇ.50ರಷ್ಟು ಮತಗಳನ್ನು ಪಡೆದುಕೊಳ್ಳುವ ಯೋಜನೆ ಹಾಕಿಕೊಂಡಿತ್ತು.

ರಾಜ್ಯದಲ್ಲಿ ಜಾತಿವಾರು ಮತಗಳ ಲೆಕ್ಕಾಚಾರ ಹೇಗಿದೆ?

ರಾಜ್ಯದಲ್ಲಿ ಜಾತಿವಾರು ಮತಗಳ ಲೆಕ್ಕಾಚಾರ ಹೇಗಿದೆ?

ಉತ್ತರ ಪ್ರದೇಶದಲ್ಲಿ ಒಂದು ಅಂದಾಜಿನ ಪ್ರಕಾರಸ, ಸುಮಾರು ಶೇ.25 ರಿಂದ 27ರಷ್ಟು ಸಾಮಾನ್ಯ ಜಾತಿಯ (ಶೇ.10 ಬ್ರಾಹ್ಮಣರು ಮತ್ತು ಶೇ.7ರಷ್ಟು ಠಾಕೂರರು ಸೇರಿ), ಶೇ. 39-40ರಷ್ಟು ಓಬಿಸಿಗಳು (ಶೇ.7-9ರಷ್ಟು ಯಾದವರು, ಶೇ.4ರಷ್ಟು ನಿಶಾದ್‌ಗಳು ಸೇರಿದಂತೆ), ಶೇ.20ರಷ್ಟು ಎಸ್‌ಸಿ ಮತ್ತು ಎಸ್‌ಟಿಗಳು ಮತ್ತು ಶೇ.16-19ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ.

ಉತ್ತರ ಪ್ರದೇಶದಲ್ಲಿ ಮೇಲ್ಜಾತಿಗಳು, ಮುಸ್ಲಿಮರು, ಯಾದವೇತರ OBCಗಳು, ಯಾದವರು ಮತ್ತು ಜಾತವರು ಪ್ರಮುಖ ಐದು ಮತ ಬ್ಯಾಂಕ್ ಆಗಿವೆ. ರಾಜ್ಯದಲ್ಲಿ ಈ ಹಿಂದೆ ಕೇವಲ ಎರಡು ಗುಂಪುಗಳ ಶೇ.30ರಷ್ಟು ವೋಟ್ ಬ್ಯಾಂಕ್ ಮೂಲಕ ಸರ್ಕಾರವನ್ನು ರಚಿಸಲು ಸಾಧ್ಯವಾಗುತ್ತಿತ್ತು. ಅದೇ ರೀತಿ 2012ರಲ್ಲಿ ಮುಸ್ಲಿಂ ಮತ್ತು ಯಾದವರ ಮತ ಬೆಂಬಲವನ್ನು ಪಡೆದು ಸಮಾಜವಾದಿ ಪಕ್ಷವು ಸರ್ಕಾರವನ್ನು ರಚಿಸಿತ್ತು. ಅದಕ್ಕೂ ಮೊದಲು 2007ರಲ್ಲಿ ಮುಸ್ಲಿಂ ಮತ್ತು ಜಾತವ್ ಮತಗಳ ಬೆಂಬಲವನ್ನು ಪಡೆದ ಬಹುಜನ ಸಮಾಜವಾದಿ ಪಕ್ಷವು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.

ಉತ್ತರ ಪ್ರದೇಶದಲ್ಲಿ ಶೇ.35ರಷ್ಟು ಮತ ಪಡೆದರೆ ಗದ್ದುಗೆ

ಉತ್ತರ ಪ್ರದೇಶದಲ್ಲಿ ಶೇ.35ರಷ್ಟು ಮತ ಪಡೆದರೆ ಗದ್ದುಗೆ

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಜಾತಿ ವೋಟ್ ಬ್ಯಾಂಕ್ ಒಡೆದು ಹೋಗಿದೆ. ಬಿಜೆಪಿಯಲ್ಲಿ ಸಚಿವ ಸ್ಥಾನದಲ್ಲಿದ್ದ ಮೂವರು ನಾಯಕರು ಈಗ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಇದರ ಹೊರತಾಗಿ ಕಾಂಗ್ರೆಸ್ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಸೈಡ್ ಲೈನ್ ಆಗಿವೆ. ಎರಡು ಪಕ್ಷಗಳ ನಡುವೆಯಷ್ಟೇ ಚುನಾವಣಾ ಪೈಪೋಟಿ ನಡೆಯುತ್ತಿದೆ ಎಂದು ಅಖಿಲೇಶ್ ಯಾದವ್ ಹೇಳುತ್ತಿದ್ದಾರೆ.

ರಾಜ್ಯದಲ್ಲಿ 2022ರಲ್ಲಿ ಶೇ.35ರಷ್ಟು ವೋಟ್ ಬ್ಯಾಂಕ್ ಬೆಂಬಲವನ್ನು ಪಡೆದುಕೊಂಡ ಪಕ್ಷವೇ ಸರ್ಕಾರವನ್ನು ರಚಿಸಲು ಸಾಧ್ಯವಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಓಬಿಸಿ ನಾಯಕರನ್ನು ಕ್ರೂಢೀಕರಿಸುವುದರ ಮೂಲಕ ಓಬಿಸಿ ಮತಗಳನ್ನು ಸೆಳೆಯಲು ಸಮಾಜವಾದಿ ಪಕ್ಷವು ಪ್ರಯತ್ನಿಸುತ್ತಿದೆ. ಇನ್ನೊಂದು ಕಡೆ ಪಕ್ಷವನ್ನು ತೊರೆದ ನಾಯಕರು ಅಪ್ರಸ್ತುತ ಎಂದು ಬಿಜೆಪಿ ವಾದಿಸುತ್ತಿದೆ.

ಯೋಗಿ ಸರ್ಕಾರದ ಬಗ್ಗೆ ಸ್ವಾಮಿ ಪ್ರಸಾದ್ ಮೌರ್ಯ ಬೇಸರ

ಯೋಗಿ ಸರ್ಕಾರದ ಬಗ್ಗೆ ಸ್ವಾಮಿ ಪ್ರಸಾದ್ ಮೌರ್ಯ ಬೇಸರ

ರಾಜ್ಯದಲ್ಲಿ ದಲಿತರು, ಹಿಂದುಳಿದ ವರ್ಗಗಳು, ನಿರುದ್ಯೋಗಿ ಯುವಕರು, ರೈತರು ಮತ್ತು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ ಸ್ವಾಮಿ ಪ್ರದಾಸ್ ಮೌರ್ಯ ಮತ್ತು ದಾರಾ ಸಿಂಗ್ ಚೌಹಾಣ್ ಯೋಗಿ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿಯಿಂದ ಹೊರ ನಡೆದ ಮೂವರು ನಾಯಕರನ್ನು ಅಖಿಲೇಶ್ ಯಾದವ್ ಸ್ವಾಗತಿಸಿಕೊಂಡರು.

ಸ್ವಾಮಿ ಪ್ರಸಾದ್ ಮೌರ್ಯ ಎಷ್ಟು ಪರಿಣಾಮಕಾರಿಯಾಗಿರಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣೆದುರಿಗಿವೆ. ಅವರು ಮಾಯಾವತಿ ಪರ ನಿಂತಾಗ 2007ರಲ್ಲಿ ಬಿಎಸ್ ಪಿ ಅಧಿಕಾರಕ್ಕೆ ಬಂದಿತು. 2017ರಲ್ಲಿ ಬಿಜೆಪಿಗೆ ಬಂದ ವೇಳೆ ಪಕ್ಷಕ್ಕೆ ಅಧಿಕಾರ ಭಾಗ್ಯ ಒಲಿಯಿತು. ಉತ್ತರ ಪ್ರದೇಶದ ಒಬಿಸಿ ರಾಜಕೀಯದಲ್ಲಿ ಅವರನ್ನು "ದೊಡ್ಡ ಮುಖ" ಎಂದು ಪರಿಗಣಿಸಲಾಗುತ್ತದೆ. ಆದರೆ ಅವರ ಬೆಂಬಲದ ನೆಲೆಯು ಪೂರ್ವ ಉತ್ತರ ಪ್ರದೇಶಕ್ಕೆ ಸೀಮಿತವಾಗಿದೆ. ಸುಮಾರು 50-60 ವಿಧಾನಸಭಾ ಕ್ಷೇತ್ರಗಳಲ್ಲಿ ಅವರ ಪ್ರಭಾವ ಇದೆ ಎಂದು ಹೇಳಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

English summary
Uttar Pradesh elections 2022: SP's Akhilesh Yadav and CM Yogi Adityanath to go neck and neck to take advantage of Other Backward Classes (OBCs). Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X