ಕರ್ಹಾಲ್ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧೆ ಹಿಂದೆ "ಪಂಚತಂತ್ರ"!?
ಲಕ್ನೋ, ಜನವರಿ 20: ಉತ್ತರಪ್ರದೇಶ ಮೈನ್ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಖಿಲೇಶ್ ಯಾದವ್ ಸ್ಪರ್ಧಿಸುವುದು ಪಕ್ಕಾ ಆಗಿದೆ. ಮೊದಲ ಬಾರಿ ರಾಜ್ಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಸ್ಪಿ ಮುಖ್ಯಸ್ಥ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಲವು ಕಾರಣಗಳಿವೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮೈನ್ಪುರಿ ಸದರ್, ಕನೌಜ್ನ ಛಿಬ್ರಮೌ, ಅಜಂಗಢದ ಗೋಪಾಲ್ಪುರ ಅಥವಾ ಸಂಭಾಲ್ನ ಗುನ್ನೌರ್ನಿಂದ ಸ್ಪರ್ಧಿಸಬಹುದು ಎಂಬ ಬಗ್ಗೆ ಊಹಾಪೋಹಗಳು ಹರದಾಡುತ್ತಿದ್ದವು. ಈಗ ಎಲ್ಲ ಊಹಾಪೋಹಗಳಿಗೆ ಉತ್ತರ ಸಿಕ್ಕಿದೆ. ಅವರು ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವೇ ಘೋಷಿಸಿದೆ.
ZEE News Opinion Poll: ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾರಿಗೆ ಮತದಾರರ ಮಣೆ?
ರಾಜ್ಯದಲ್ಲಿ ಮುಂಬರುವ ಫೆಬ್ರವರಿ 20 ರಂದು ಕರ್ಹಾಲ್ನಲ್ಲಿ ಮತದಾನ ನಡೆಯಲಿದ್ದು, ಅಖಿಲೇಶ್ ಯಾದವ್ ಇದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣಗಳೇನು?, ಈ ಕ್ಷೇತ್ರ ಆಯ್ಕೆ ಹಿಂದಿನ ಪ್ರಮುಖ ಉದ್ದೇಶವೇನು?, ಕರ್ಹಾಲ್ ಕ್ಷೇತ್ರದ ವಿಶೇಷತೆಗಳೇನು ಎಂಬುದನ್ನು ಮುಂದೆ ಓದಿ.

ಕರ್ಹಾಲ್ ಆಯ್ಕೆ ಹಿಂದೆ ಅಖಿಲೇಶ್ ಯಾದವ್ ಪಂಚತಂತ್ರ
1. ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭೆ ಕ್ಷೇತ್ರವು ಸಮಾಜವಾದಿ ಪಕ್ಷದ ಪಾಲಿಗೆ ಸುರಕ್ಷಿತವಾಗಿರಲಿದೆ. ಇದರಿಂದ ಅಖಿಲೇಶ್ ಯಾದವ್ ಕೇವಲ ತಮ್ಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸದೇ ರಾಜ್ಯಾದ್ಯಂತ ಸುತ್ತಿ ಪ್ರಚಾರ ನಡೆಸುವುದಕ್ಕೆ ಸಹಾಯವಾಗಲಿದೆ.
2. ಅಖಿಲೇಶ್ ಯಾದವ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸ್ಪರ್ಧಿಸುವ ಮೈನ್ಪುರಿಯ ಲೋಕಸಭಾ ವ್ಯಾಪ್ತಿಯಲ್ಲಿ ಕರ್ಹಾಲ್ ಒಂದು ವಿಧಾನಸಭೆ ಕ್ಷೇತ್ರವಾಗಿದೆ. ಈ ಹಿಂದೆ ಮೈನ್ಪುರಿಯ ಲೋಕಸಭೆ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್, ಐದು ಬಾರಿ ಸಂಸತ್ತಿಗೆ ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆ ತಂದೆಯ ಭದ್ರಕೋಟೆಯಲ್ಲಿ ಅಖಿಲೇಶ್ ಯಾದವ್ ಸ್ಪರ್ಧಿಸುವುದಕ್ಕೆ ನಿರ್ಧರಿಸಿದ್ದಾರೆ.
3. 2002 ಮತ್ತು 2007ರ ನಡುವಿನ ಐದು ವರ್ಷದಲ್ಲಿ ಬಿಜೆಪಿ ಗೆಲುವನ್ನು ಹೊರತುಪಡಿಸಿದರೆ 1993 ರಿಂದ ಪ್ರತಿ ಚುನಾವಣೆಯಲ್ಲೂ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಗಳೇ ವಿಜಯಮಾಲೆ ಹಾಕಿಸಿಕೊಂಡಿದ್ದಾರೆ.
4. ಕರ್ಹಾಲ್ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಿಜೆಪಿ ಶಾಸಕ ಕೂಡ ನಂತರದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
5. ಕರ್ಹಾಲ್ ಕ್ಷೇತ್ರದಲ್ಲಿ ಸದ್ಯಕ್ಕೆ ಸಮಾಜವಾದಿ ಪಕ್ಷದ ಸೊಬರನ್ ಯಾದವ್ ಶಾಸಕರಾಗಿದ್ದಾರೆ.

ಗೋರಖ್ಪುರದಲ್ಲಿ ಯೋಗಿ V/s ಚಂದ್ರಶೇಖರ್ ಆಜಾದ್
ಗೋರಖ್ಪುರ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುವುದು ಪಕ್ಕಾ ಆಗಿದೆ. ಅದೇ ಕ್ಷೇತ್ರದಲ್ಲಿ ಸಿಎಂ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಈಗ ಸದ್ದು ಮಾಡುತ್ತಿದೆ. ಹಾಲಿ ಸಿಎಂ ವಿರುದ್ಧ ತಾವು ಸ್ಪರ್ಧಿಸುವುದಾಗಿ ಆಜಾದ್ ಟ್ವೀಟ್ ಮೂಲಕ ಗುರುವಾರ ಘೋಷಿಸಿದ್ದಾರೆ. "ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕಾಶಿರಾಮ್, ಚಂದ್ರಶೇಖರ್ ಆಜಾದ್ ಜಿ ಅವರು ಗೋರಖ್ಪುರ ಸದಾರ್ (322) ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ," ಎಂದು ಪಕ್ಷವು ಟ್ವೀಟ್ ಮಾಡಿದೆ ಮತ್ತು ಪತ್ರವೊಂದನ್ನು ಶೇರ್ ಮಾಡಿದೆ.

ಯುಪಿಯಲ್ಲಿ ವಿಧಾನಸಭೆ ಚುನಾವಣೆ ಲೆಕ್ಕ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಮತದಾರರ ತೀರ್ಪು
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.