ಯಾದವ್ ತಂತ್ರ: ಉತ್ತರ ಪ್ರದೇಶದ ಕರ್ಹಾಲ್ ಸ್ಪರ್ಧೆ ಹಿಂದೆ ಅಖಿಲೇಶ್ ಲೆಕ್ಕಾಚಾರ
ಲಕ್ನೋ, ಜನವರಿ 22: ಉತ್ತರಪ್ರದೇಶ ಮೈನ್ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧೆ ಹಿಂದೆ ಭಾರಿ ರಣತಂತ್ರ ರೂಪಿಸಲಾಗಿದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಆಗಿರುವ ಅಖಿಲೇಶ್ ಯಾದವ್, ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಪ್ರಸ್ತುತ ಮತ್ತು ದೀರ್ಘಾವಧಿಯ ಲೋಕಸಭಾ ಕ್ಷೇತ್ರವಾದ ಮೈನ್ಪುರಿ ವ್ಯಾಪ್ತಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಯಾದವ್ ಬೆಲ್ಟ್ನಲ್ಲಿ ತಮ್ಮ ಪಕ್ಷದ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ಯುಪಿ: ಅಖಿಲೇಶ್ ಯಾದವ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ರಾಮ್ ಗೋಪಾಲ್
ಕಳೆದ 2002ರಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದನ್ನು ಹೊರತುಪಡಿಸಿದರೆ ಕರ್ಹಾಲ್ ಕ್ಷೇತ್ರವು ಮೂರು ದಶಕಗಳಿಂದ ಸಮಾಜವಾದಿ ಪಕ್ಷದ ಹಿಡಿತದಲ್ಲಿದೆ. ಅತಿಹೆಚ್ಚು ಯಾದವ್ ಸಮುದಾಯ ಇರುವ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷವು ಮೊದಲಿನಿಂದಲೂ ಹಿಡಿತ ಕಾಯ್ದುಕೊಳ್ಳುತ್ತಾ ಬಂದಿದೆ. 2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಲೆಯ ನಡುವೆಯೂ ಎಸ್ಪಿ 38,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಯಾದವ್ ಕುಟುಂಬ ಮೂಲ ಊರಾಗಿರುವ ಸೈಫಾಯಿಯಿಂದ ಈ ಕ್ಷೇತ್ರಕ್ಕೆ ಕೇವಲ 15 ನಿಮಿಷಗಳ ಪ್ರಯಾಣದ ಅಂತರವಿದೆ.
ಯಾದವ್ ಸಮುದಾಯಕ್ಕೆ ಸಂದೇಶ ರವಾನಿಸುವ ಯತ್ನ:
ಕರ್ಹಾಲ್ ಕ್ಷೇತ್ರದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಅಖಿಲೇಶ್ ಯಾದವ್ ಆ ಮೂಲಕ ಸುತ್ತಮುತ್ತಿಲಿನ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಯೋಜನೆ ಹಾಕಿಕೊಂಡಿದ್ದಾರೆ. ಸಮಾಜವಾದಿ ಪಕ್ಷವು ಈ ಚುನಾವಣೆಯಲ್ಲಿ ಪಕ್ಷದ ಹಿಂದೆ ಒಟ್ಟುಗೂಡಿಸಲು ಫಿರೋಜಾಬಾದ್ನಿಂದ ಕನೌಜ್ವರೆಗಿನ ಇಡೀ ಯಾದವ್ ಬೆಲ್ಟ್ನಲ್ಲಿ ದೊಡ್ಡ ಸಂದೇಶವನ್ನು ಕಳುಹಿಸಲು ಪ್ರಯತ್ನಿಸುತ್ತಿದೆ.
ಕರ್ಹಾಲ್ ಕ್ಷೇತ್ರ ಆಯ್ಕೆಗೆ ಐದು ಪ್ರಮುಖ ಕಾರಣಗಳು:
1. ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭೆ ಕ್ಷೇತ್ರವು ಸಮಾಜವಾದಿ ಪಕ್ಷದ ಪಾಲಿಗೆ ಸುರಕ್ಷಿತವಾಗಿರಲಿದೆ. ಇದರಿಂದ ಅಖಿಲೇಶ್ ಯಾದವ್ ಕೇವಲ ತಮ್ಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸದೇ ರಾಜ್ಯಾದ್ಯಂತ ಸುತ್ತಿ ಪ್ರಚಾರ ನಡೆಸುವುದಕ್ಕೆ ಸಹಾಯವಾಗಲಿದೆ.
2. ಅಖಿಲೇಶ್ ಯಾದವ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸ್ಪರ್ಧಿಸುವ ಮೈನ್ಪುರಿಯ ಲೋಕಸಭಾ ವ್ಯಾಪ್ತಿಯಲ್ಲಿ ಕರ್ಹಾಲ್ ಒಂದು ವಿಧಾನಸಭೆ ಕ್ಷೇತ್ರವಾಗಿದೆ. ಈ ಹಿಂದೆ ಮೈನ್ಪುರಿಯ ಲೋಕಸಭೆ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್, ಐದು ಬಾರಿ ಸಂಸತ್ತಿಗೆ ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆ ತಂದೆಯ ಭದ್ರಕೋಟೆಯಲ್ಲಿ ಅಖಿಲೇಶ್ ಯಾದವ್ ಸ್ಪರ್ಧಿಸುವುದಕ್ಕೆ ನಿರ್ಧರಿಸಿದ್ದಾರೆ.
3. 2002 ಮತ್ತು 2007ರ ನಡುವಿನ ಐದು ವರ್ಷದಲ್ಲಿ ಬಿಜೆಪಿ ಗೆಲುವನ್ನು ಹೊರತುಪಡಿಸಿದರೆ 1993 ರಿಂದ ಪ್ರತಿ ಚುನಾವಣೆಯಲ್ಲೂ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಗಳೇ ವಿಜಯಮಾಲೆ ಹಾಕಿಸಿಕೊಂಡಿದ್ದಾರೆ.
4. ಕರ್ಹಾಲ್ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಿಜೆಪಿ ಶಾಸಕ ಕೂಡ ನಂತರದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
5. ಕರ್ಹಾಲ್ ಕ್ಷೇತ್ರದಲ್ಲಿ ಸದ್ಯಕ್ಕೆ ಸಮಾಜವಾದಿ ಪಕ್ಷದ ಸೊಬರನ್ ಯಾದವ್ ಶಾಸಕರಾಗಿದ್ದಾರೆ.
2019ರಲ್ಲಿ ಹಿಡಿತ ಕಳೆದುಕೊಂಡಿದ್ದ ಸಮಾಜವಾದಿ:
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಜೊತೆಗಿನ ಮೈತ್ರಿಯ ಹೊರತಾಗಿಯೂ ಸಮಾಜವಾದಿ ಪಕ್ಷವು ಯಾದವ್-ಬೆಲ್ಟ್ ಭದ್ರಕೋಟೆಯ ಸ್ಥಾನಗಳಾದ ಫಿರೋಜಾಬಾದ್, ಬದೌನ್, ಇಟಾವಾ ಮತ್ತು ಕನೌಜ್ನಲ್ಲಿ ಸೋಲು ಕಂಡಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಎರಡು ಸಂಸದೀಯ ಸ್ಥಾನಗಳನ್ನು ಗೆದ್ದಿತ್ತು.
2017 ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಫಿರೋಜಾಬಾದ್ ಜಿಲ್ಲೆಯ ಐದು ಸ್ಥಾನಗಳಲ್ಲಿ ಕೇವಲ ಒಂದು, ಬದೌನ್ನಲ್ಲಿ ಆರು ಸ್ಥಾನಗಳಲ್ಲಿ ಒಂದು, ಇಟಾವಾ ಜಿಲ್ಲೆಯ ಮೂರರಲ್ಲಿ ಒಂದು ಮತ್ತು ಕನ್ನೌಜ್ ಜಿಲ್ಲೆಯ ಮೂರರಲ್ಲಿ ಒಂದು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಇದರ ಹೊರತಾಗಿ ಮೈನ್ಪುರಿ ಜಿಲ್ಲೆಯಲ್ಲೂ ಬಿಜೆಪಿ ನಾಲ್ಕರಲ್ಲಿ ಒಂದನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಬಿಜೆಪಿ ಮುಷ್ಠಿಯಿಂದ ಪಡೆಯುವ ಯೋಜನೆ:
ಕರ್ಹಾಲ್ನಿಂದ ಅಖಿಲೇಶ್ ಯಾದವ್ ಸ್ಪರ್ಧಿಸುವುದು ಮತ್ತು ಶಿವಪಾಲ್ ಸಿಂಗ್ ಯಾದವ್ ಜೊತೆಗಿನ ಹೊಂದಾಣಿಕೆಯೊಂದಿಗೆ ಸಮಾಜವಾದಿ ಪಕ್ಷವು ತನ್ನ ಭದ್ರಕೋಟೆಯ ಪ್ರದೇಶವನ್ನು ಬಿಜೆಪಿಯಿಂದ ಮರಳಿ ಪಡೆಯಬಹುದು ಎಂದು ಯೋಜನೆ ಹಾಕಿಕೊಂಡಿದೆ.
ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿಯೂ ಗೆಲುವಿಗೆ ರಣತಂತ್ರ ರೂಪಿಸುತ್ತಿದೆ. ಅಖಿಲೇಶ್ ಅವರ ಚಿಕ್ಕಪ್ಪ ಹಾಗೂ ಫಿರೋಜಾಬಾದ್ನ ಸಿರಸ್ಗಂಜ್ನ ಹಾಲಿ ಶಾಸಕ ಹರಿ ಓಂ ಯಾದವ್, 2017ರಲ್ಲಿ ಜಿಲ್ಲೆಯಲ್ಲಿ ಗೆದ್ದ ಪಕ್ಷದ ಏಕೈಕ ಶಾಸಕರಾಗಿದ್ದರು. ಆದರೆ, ಇದೀಗ ಅವರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಲಿದ್ದಾರೆ. ಆಡಳಿತ ಪಕ್ಷವು ಕನೌಜ್ನಿಂದ ಮಾಜಿ ಐಪಿಎಸ್ ಅಧಿಕಾರಿ ಮತ್ತು ದಲಿತ ಹಿನ್ನಲೆಯುಳ್ಳ ಅಸೀಮ್ ಅರುಣ್ ಎಸ್ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಮುಲಾಯಂ ಸಿಂಗ್ ಗೆಲುವಿನಲ್ಲೂ ಮತಗಳ ಅಂತರ:
ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಮೈನ್ಪುರಿ ಲೋಕಸಭಾ ಕ್ಷೇತ್ರದಲ್ಲಿಯೂ ಸಹ ಗೆಲುವಿನ ಮತಗಳ ಅಂತರ ಕಡಿಮೆ ಆಗಿರುವುದನ್ನು ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಉಲ್ಲೇಖಿಸಿದ್ದಾರೆ. 2014ರಲ್ಲಿ 3.21 ಲಕ್ಷಕ್ಕೂ ಹೆಚ್ಚು ಗೆಲುವಿನ ಅಂತರವನ್ನು ಹೊಂದಿದ್ದ ಮುಲಾಯಂ ಸಿಂಗ್ ಯಾದವ್, ಕಳೆದ 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಬೆಂಬಲದ ಹೊರತಾಗಿಯೂ 94,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.