ಜ್ಞಾನವಾಪಿ ಮಸೀದಿಯಲ್ಲಿ ನಮಾಜ್ಗೆ ಅಡ್ಡಿಯಾಗಬಾರದು: ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ/ಲಕ್ನೋ, ಮೇ 18: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಶಿವಲಿಂಗ ಪತ್ತೆಯಾಗಿರುವ ಪ್ರದೇಶವನ್ನು ರಕ್ಷಿಸಬೇಕು. ಆದರೆ, ಮುಸ್ಲಿಮರು ನಮಾಜ್ ಮಾಡುವುದಕ್ಕೆ ಮಸೀದಿಗೆ ಬರಲು ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ವಾರಣಾಸಿ ಮ್ಯಾಜಿಸ್ಟ್ರೇಟ್ಗೆ ತಿಳಿಸಿದೆ.
ಮಸೀದಿಯಲ್ಲಿ ನಿಖರವಾಗಿ ಯಾವ ಕಡೆ ಶಿವಲಿಂಗ ಪತ್ತೆಯಾಗಿದೆ ಎಂಬುದನ್ನು ತಿಳಿಸಿ ಎಂದು ವಾರಣಾಸಿ ಆಡಳಿತವನ್ನು ಕೇಳಿರುವ ಸುಪ್ರೀಂ ಕೋರ್ಟ್, ಆ ಪ್ರದೇಶವನ್ನು ರಕ್ಷಿಸಬೇಕು ಎಂದು ಮಂಗಳವಾರ ಹೇಳಿದೆ.
ಜ್ಞಾನವಾಪಿ ಮಸೀದಿ ಪ್ರಕರಣ: ಸುಪ್ರೀಂ ಕೋರ್ಟ್ನಲ್ಲಿ ಮಹತ್ವದ ವಿಚಾರಣೆ
ಮಸೀದಿ ಸಂಕೀರ್ಣದ ಚಿತ್ರೀಕರಣವನ್ನು ನಿಲ್ಲಿಸುವಂತೆ ವಾರಣಾಸಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಪಿ.ಎಸ್. ನರಸಿಂಹ ಅವರಿದ್ದ ನ್ಯಾಯಪೀಠವು ಜಿಲ್ಲಾಡಳಿತವನ್ನು ಪ್ರಶ್ನಿಸಿದೆ.
"ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ?" ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕೇಳಿದರು.
"ನಾವು ವರದಿಯನ್ನು ನೋಡಿಲ್ಲ" ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉತ್ತರಿಸಿದರು ಮತ್ತು ಹೆಚ್ಚಿನ ಮಾಹಿತಿಗಳೊಂದಿಗೆ ಹಾಜರಾಗಲು ನಾಳೆಯವರೆಗೆ ಕಾಲಾವಕಾಶ ಕೋರಿದರು.
ಜ್ಞಾನವ್ಯಾಪಿಯಲ್ಲಿರುವುದು ಶಿವಲಿಂಗವಲ್ಲ, ಕಾರಂಜಿ: ಒವೈಸಿ
'ನಮಾಜ್ ಮಾಡಲು (ಪ್ರಾರ್ಥನೆ) ಬಂದವರು ತಮ್ಮ ಪಾದಗಳಿಂದ ಸ್ಪರ್ಶಿಸಬಾದರೆಂದು, ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದಂತೆ ಶಿವಲಿಂಗ' ಪತ್ತೆಯಾದ ಸ್ಥಳದಲ್ಲಿ ನಿರ್ಬಂಧ ವಿಧಿಸಲಾಗಿದೆ. ಶಿವಲಿಂಗವು ಕೊಳದಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಈ ಕೊಳವನ್ನು ನಮಾಜ್ಗೆ ಮುನ್ನ 'ವಾಜೂ' ಅಥವಾ ಶುದ್ಧೀಕರಣದ ಆಚರಣೆಗಳಿಗೆ ಬಳಸಲಾಗುತ್ತಿದೆ ಎಂದು ಮೆಹ್ತಾ ಮಾಹಿತಿ ನೀಡಿದರು.

ಕಾಶಿ ವಿಶ್ವನಾಥ ಮಂದಿರದ ಸಮೀಪದಲ್ಲಿ ಇರುವ ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಕೊಳದ ಹತ್ತಿರ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಕಕ್ಷಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿಕೆ ನೀಡಿದ ಬೆನ್ನಲ್ಲೇ, ಸ್ಥಳೀಯ ನ್ಯಾಯಾಲಯ ಆ ಜಾಗವನ್ನು ಸೀಲ್ ಮಾಡುವಂತೆ ಆದೇಶ ನೀಡಿತ್ತು. ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವೇಶ ಕೋರಿ ಸಲ್ಲಿಸಿದ್ದ ಮನವಿಯ ನಂತರ ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿ ಸಂಕೀರ್ಣದಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ "ಶಿವಲಿಂಗ" ಕಂಡುಬಂದಿದೆ ಎಂದು ಹೇಳಲಾಗಿದೆ.
ಚಿತ್ರೀಕರಣದ ಸಂದರ್ಭದಲ್ಲಿ ಸಿಕ್ಕಿದ ವಸ್ತುವು ಕಾರಂಜಿಯ ಬಿಡಿಭಾಗವೇ ಹೊರತು ಶಿವಲಿಂಗವಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ತಿಳಿಸಿದೆ.
ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಮುಸ್ಲಿಂ ಅರ್ಜಿದಾರರು, ಸಂಕೀರ್ಣದ ಸಮೀಕ್ಷೆ ನಡೆಸಿದ ಸಮಿತಿಯ ವರದಿಯನ್ನು ಇನ್ನೂ ಸಲ್ಲಿಸದಿರುವಾಗ ಸಿಟಿ ಕೋರ್ಟ್ ಆ ಸ್ಥಳವನ್ನು ಸೀಲ್ ಮಾಡಲು ಹೇಗೆ ಆದೇಶಿಸಿತು ಎಂದು ಪ್ರಶ್ನಿಸಿದರು.