ಉತ್ತರ ಪ್ರದೇಶದಲ್ಲಿ ಎಸ್ಪಿಗೆ ಹೀನಾಯ ಸೋಲು: ಯೋಗಿ ಭವಿಷ್ಯ
ಲಕ್ನೋ, ಜನವರಿ 21: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಹೀನಾಯ ಸೋಲು ಅನುಭವಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಭವಿಷ್ಯ ನುಡಿದ್ದಾರೆ. ಟೈಮ್ಸ್ ನೌಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಆದಿತ್ಯನಾಥ್, ಗೋರಖ್ಪುರದಲ್ಲಿ ತಮ್ಮ ಸ್ಪರ್ಧೆ, ಬಿಜೆಪಿಯ ಅಭ್ಯರ್ಥಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
"ಯುಪಿಯಲ್ಲಿ ಆಡಳಿತ ವಿರೋಧಿತನವಿಲ್ಲ. ನನ್ನ ಮಾತುಗಳನ್ನು ಗುರುತಿಸಿ, ಮಾರ್ಚ್ 10 ರ ನಂತರ ಸಮಾಜವಾದಿ ಪಕ್ಷವು ಸೋಲಲು ಮಾನಸಿಕವಾಗಿ ಸಿದ್ಧವಾಗಿದೆ. ಬಿಜೆಪಿ 300+ ಸೀಟುಗಳನ್ನು ದಾಟಲಿದೆ. ಸಮಾಜವಾದಿ ಪಕ್ಷವು ಹೀನಾಯ ಸೋಲು ಅನುಭವಿಸಲಿದೆ," ಎಂದು ಆದಿತ್ಯನಾಥ್ ಹೇಳಿದ್ದಾರೆ.
ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಸವಾಲ್: ಬಂಧುತ್ವದ ಮೇಲೆ ಟಿಕೆಟ್ ನೀಡಲು ಒತ್ತಾಯ
ಅಯೋಧ್ಯೆಯಿಂದ ಯೋಗಿ ಸ್ಪರ್ಧಿಸುವ ಬಗ್ಗೆ ಊಹಾಪೋಹಗಳಿದ್ದವು. ಆದರೆ ಗೋರಖ್ಪುರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥ್ ಕಣಕ್ಕಿಳಿಸಲು ಬಿಜೆಪಿ ಘೋಷಿಸಿದೆ. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೂ ಸಿದ್ಧನಿದ್ದೆ, ಆದರೆ ಪಕ್ಷವು ಗೋರಖ್ಪುರದಿಂದಲೇ ಸ್ಪರ್ಧಿಸುವಂತೆ ಸೂಚಿಸಿದೆ. ಗೋರಖ್ಪುರ ಹೊರತಾಗಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ, ಟೀಕಾಕಾರರು ಮತ್ತಷ್ಟು ತನ್ನ ವಿರುದ್ಧ ಟೀಕಿಸುತ್ತಿದ್ದರು ಎಂದು ಯೋಗಿ ದೂಷಿಸಿದ್ದಾರೆ.
ಅಖಿಲೇಶ್ ಯಾದವ್ ಜಾತಿ ಲೆಕ್ಕಾಚಾರ:
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಜಾತಿ ಲೆಕ್ಕಾಚಾರವನ್ನು ಮಾಡಿಕೊಂಡು ನಂತರದಲ್ಲಿ ಸೀಟು ಹಂಚಿಕೆ ಮಾಡುತ್ತಿದ್ದಾರೆ. ಅವರು ಜಾತಿ ಮತ್ತು ಧರ್ಮದ ವೋಟ್ ಬ್ಯಾಂಕ್ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂಷಿಸಿದ್ದಾರೆ.
ಬಿಜೆಪಿ ಯಾವುದೇ ಕುಟುಂಬವನ್ನು ಒಡೆದಿಲ್ಲ:
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ್, ಬಿಜೆಪಿ ಯಾವುದೇ ಪಕ್ಷ ಅಥವಾ ಕುಟುಂಬವನ್ನು ಒಡೆದಿಲ್ಲ ಎಂದರು. "ಅಖಿಲೇಶ್ ಯಾದವ್ ತಮ್ಮ ಸಂಬಂಧಿಕರನ್ನು ಪಕ್ಷದಲ್ಲಿ ನಿರ್ಲಕ್ಷಿಸಲಾಗಿದೆ. ಎಸ್ಪಿ ಅಡಿಯಲ್ಲಿ ದರೋಡೆಕೋರರು ಅಭಿವೃದ್ಧಿ ಹೊಂದಿದರು. ರಾಜವಂಶದ ಆಡಳಿತಕ್ಕೆ ಒಂದು ಶ್ರೇಷ್ಠ ಉದಾಹರಣೆ, ಎಸ್ಪಿ, ಲೋಹಿಯಾ ಅವರ ಹೆಸರನ್ನು ತೆಗೆದುಕೊಳ್ಳುವ ಎಸ್ಪಿ, ಅವರ ಸಿದ್ಧಾಂತಗಳನ್ನು ಪುಡಿ ಮಾಡಿದೆ. ಆದರೆ ಅಪರ್ಣಾ ಯಾದವ್ ದೂರದೃಷ್ಟಿ ಹೊಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಅನುಸರಿಸುವ ನಿಟ್ಟಿನಲ್ಲಿ ಬಿಜೆಪಿಗೆ ಸೇರಿದ್ದಾರೆ ಎಂದು ಹೇಳಿದರು.
ಗೂಂಡಾಗಳಿಗೆ ಸಮಾಜವಾದಿ ಟಿಕೆಟ್:
ಸಮಾಜವಾದಿ ಪಕ್ಷವು 'ಗಲಭೆಕೋರರು ಮತ್ತು ಗೂಂಡಾಗಳಿಗೆ' ಟಿಕೆಟ್ ನೀಡುತ್ತಿರುವುದಕ್ಕೆ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು. ಭಾರತೀಯ ಜನತಾ ಪಕ್ಷವು ಜಾತಿ ಆಧಾರದಲ್ಲಿ ಟಿಕೆಟ್ ನೀಡುತ್ತಿಲ್ಲ, ಬದಲಿಗೆೆ ಕಡೆಗಣನೆಗೆ ಒಳಗಾದ ನಾಯಕರನ್ನು ಆಹ್ವಾನಿಸುತ್ತಿದೆ ಎಂದರು.
ಉತ್ತರ ಪ್ರದೇಶದಲ್ಲಿ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.