ಮೇಲ್ಛಾವಣಿ ಕುಸಿತ: ಜ್ಯೂನಿಯರ್ ಎಂಜಿನಿಯರ್ ಸೇರಿ ಮೂವರ ಬಂಧನ
ಮುರದ್ ನಗರ, ಜನವರಿ 04: ಉತ್ತರ ಪ್ರದೇಶದ ಮುರದ್ನಗರದಲ್ಲಿರುವ ಸ್ಮಶಾನದ ಮೇಲ್ಛಾವಣಿ ಕುಸಿತಕ್ಕೆ ಸಂಬಂಧಿಸಿದಂತೆ ಜ್ಯೂನಿಯರ್ ಎಂಜಿನಿಯರ್ ಸೇರಿ ಮೂವರನ್ನು ಬಂಧಿಸಲಾಗಿದೆ.
ಛಾವಣಿ ಕುಸಿದು ಮೃತಪಟ್ಟವರ ಕುಟುಂಬಸ್ಥರು ಕಟ್ಟಡದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವುದರಿಂದ ಹೀಗಾಗಿದೆ ಎಂದು ಆರೋಪಿಸಿದ್ದಾರೆ.
ಗಾಜಿಯಾಬಾದ್: ಮೇಲ್ಛಾವಣಿ ಕುಸಿತ, ಹಲವು ಮಂದಿ ಸಾವು
ಘಟನೆ ಬಗ್ಗೆ ವರದಿ ಕೇಳಿದ್ದೇನೆ, ಘಟನೆಗೆ ನಿಖರ ಕಾರಣ ತಿಳಿದುಕೊಳ್ಳಲು ಮತ್ತು ನಿಖರತೆ ಪಡೆಯಲು ರಾಜ್ಯಾಡಳಿತಕ್ಕೆ ಸೂಕ್ತ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕೆಲಸದಲ್ಲಿ ನಿರ್ಲಕ್ಷ್ಯ, ಕರ್ತವ್ಯ ಲೋಪ ಆರೋಪದ ಮೇಲೆ ಕಿರಿಯ ಎಂಜಿನಿಯರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಡಿಯೊ ಹೇಳಿಕೆಯನ್ನು ಹೊರಡಿಸಿದ್ದು, ಜಿಲ್ಲಾಡಳಿತ ಮತ್ತು ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಅವರಿಗೆ ಸೂಚನೆ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಸ್ಮಶಾನದ ಚಾವಣಿ ಕುಸಿದು ಮೃತಪಟ್ಟಿರುವವರ ಸಂಖ್ಯೆ 23 ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.
ಮಳೆಯಿಂದ ರಕ್ಷಿಸಿಕೊಳ್ಳಲು ಸ್ಮಶಾನದಲ್ಲಿದ್ದ ಸಂಕೀಣವೊಂದರ ಕೆಳಗೆ 25ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಈ ವೇಳೆ ಜೋರಾಗಿ ಮಳೆ ಬೀಳುತ್ತಿದ್ದರಿಂದ ಚಾವಣಿ ಕುಸಿದಿದ್ದು ಅದರ ಕೆಳಗೆ ನಿಂತಿದ್ದವರ ಪೈಕಿ ಈ ವರೆಗೂ 23 ಮಂದಿ ಮೃತಪಟ್ಟಿದ್ದರೆ 40 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.