ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ವಿರುದ್ಧ ಪಾಕ್ ಗೆಲುವಿಗೆ ಸಂಭ್ರಮ: ಉತ್ತರಪ್ರದೇಶದಲ್ಲಿ ನಾಲ್ವರ ಬಂಧನ; 7 ಜನರ ವಿರುದ್ಧ ಕೇಸ್

|
Google Oneindia Kannada News

ಲಕ್ನೋ, ಅಕ್ಟೋಬರ್ 28: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೂರು ದಿನಗಳ ಹಿಂದೆ ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನ ಗೆಲುವು ಪಡೆದಿತ್ತು. ಆ ವೇಳೆ ಭಾರತದ ಕೆಲವೆಡೆ ಕೆಲವರು ಸಂಭ್ರಮಾಚರಣೆ ನಡೆಸಿದ್ದು ವರದಿಯಾಗಿತ್ತು.

Recommended Video

Pakistan ಗದ್ದಾಗ ಸಂಭ್ರಮಿಸಿದ ಭಾರತೀಯರಿಗೆ ಸಂಕಷ್ಟ | Oneindia Kannada

ಹಾಗೆಯೇ, ಉತ್ತರಪ್ರದೇಶದಲ್ಲಿ ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ ಆರೋಪದ ಮೇಲೆ ಯುಪಿ ಪೊಲೀಸರು ಐದು ಜಿಲ್ಲೆಗಳಿಂದ ಒಟ್ಟು ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಲ್ವರನ್ನು ಬಂಧಿಸಿರುವುದು ತಿಳಿದುಬಂದಿದೆ. ಈ ಆರೋಪಿಗಳು ಪಂದ್ಯದ ಬಳಿಕ ಪಟಾಕಿ ಸಿಡಿಸಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ವಾಟ್ಸಾಪ್ ಮತ್ತು ಫೇಸ್​ಬುಕ್​ನಲ್ಲಿ ಪಾಕಿಸ್ತಾನ ಪರ ಫೋಟೋ, ಸ್ಟೇಟಸ್ ಹಾಕಿಕೊಂಡಿದ್ದರೆನ್ನಲಾಗಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆಗ್ರಾದಲ್ಲಿ ಪಾಕಿಸ್ತಾನ ಪರ ಹಾಗೂ ಭಾರತ ವಿರೋಧಿ ಘೋಷಣೆ ಕೂಗಿದ ಮೂವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 505(1)ಬಿ, 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

India- Pakistan T20 Cricket: Pro Pakistan Celebration in Uttar Pradesh: Four Arrested

ವಾಟ್ಸಾಪ್​ನಲ್ಲಿ ಪಾಕಿಸ್ತಾನ ಪರ ಸ್ಟೇಟಸ್ ಹಾಕಿದ್ದ ಒಬ್ಬ ವ್ಯಕ್ತಿಯನ್ನು ಲಕ್ನೋ ನಗರದಲ್ಲಿ ಬಂಧಿಸಲಾಗಿದೆ. ಇದೇ ಪಾಕ್ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಬರೇಲಿ ನಗರದ ಇಬ್ಬರ ಮೇಲೂ ಕೇಸ್ ದಾಖಲಾಗಿದೆ. ಫೇಸ್​ಬುಕ್​ನಲ್ಲಿ ಪಾಕಿಸ್ತಾನದ ಧ್ವಜ ಹಾಕಿದ ಕಾರಣಕ್ಕೆ ಬರೇಲಿಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ವಜಾ
ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಪಾಕಿಸ್ತಾನದ ಆಟಗಾರರನ್ನು ಪ್ರಶಂಸಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕಾಶ್ಮೀರದ ಕಾಲೇಜಿನಿಂದ ವಜಾ ಮಾಡಲಾಗಿತ್ತು. ಈ ಮೂವರ ವಿರುದ್ಧ ಜಗದೀಶಪುರ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಬಿಜೆಪಿ ಯುವ ಮುಖಂಡರು ದೂರು ದಾಖಲಿಸಿದ್ದಾರೆ.

ರಾಜಸ್ಥಾನದ ಶಿಕ್ಷಕಿ ಅಮಾನತು
ಭಾರತದ ಸೋಲನ್ನು ಸಂಭ್ರಮಿಸಿ ವಾಟ್ಸಾಪ್​ ಸ್ಟೇಟಸ್​ ಹಾಕಿದ್ದ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಿರುವ ಘಟನೆ ರಾಜಸ್ಥಾನದಿಂದ ವರದಿಯಾಗಿತ್ತು. ಉದಯಪುರದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜೊತೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭಾರತದ ಸೋಲನ್ನು ಸಂಭ್ರಮಿಸಿದ್ದ ಶಿಕ್ಷಕಿ
ಉದಯಪುರದ ನೀರಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಚಿತ್ರವನ್ನು ಹಾಕಿ 'ಜೀತ್ ಗಯೀ...' (ನಾವು ಗೆದ್ದಿದ್ದೇವೆ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.

ಶಿಕ್ಷಕಿ ನಫೀಸಾ ಅಟ್ಟಾರಿ ಅವರ ವಾಟ್ಸಾಪ್ ಸ್ಟೇಟಸ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಶಾಲೆಯ ಆಡಳಿತ ಮಂಡಳಿ ಅವರನ್ನು ವಜಾಗೊಳಿಸಿದೆ. "ನಾವು ಶಿಕ್ಷಕಿಯನ್ನು ವಜಾಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ" ಎಂದು ಸೋಜಾಟಿಯಾ ಚಾರಿಟೇಬಲ್ ಟ್ರಸ್ಟ್‌ನ ಸಭೆಯ ಬಳಿಕ ಶಾಲೆಯ ಅಧ್ಯಕ್ಷ ಮಹೇಂದ್ರ ಸೋಜಾಟಿಯಾ ದೃಢಪಡಿಸಿದ್ದಾರೆ.

ಶಿಕ್ಷಕಿ ವಿರುದ್ಧ ಎಫ್​ಐಆರ್​ ದಾಖಲು
ಭಾರತೀಯ ದಂಡ ಸಂಹಿತೆ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ) ಅಡಿಯಲ್ಲಿ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಂಬಾ ಮಾತಾ ಪೊಲೀಸ್ ಠಾಣೆ ಎಸ್‌ಎಚ್‌ಒ ನರ್ಪತ್ ಸಿಂಗ್ ಹೇಳಿದ್ದಾರೆ.

ಘಟನೆ ತೀವ್ರ ಸ್ವರೂಪ ಪಡೆದುಕೊಂಡ ಬಳಿಕ ಪೋಸ್ಟ್‌ಗಾಗಿ ಕ್ಷಮೆಯಾಚಿಸುವ ವಿಡಿಯೋ ಹೇಳಿಕೆಯನ್ನು ಶಿಕ್ಷಕಿ ಬಿಡುಗಡೆ ಮಾಡಿ, ಯಾರ ಭಾವನೆಯನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದರು.

ಶಿಕ್ಷಕಿ ಹೇಳಿದ್ದೇನು?
"ಯಾರೋ ನನಗೆ ಸಂದೇಶ ಕಳುಹಿಸಿ 'ನೀವು ಪಾಕಿಸ್ತಾನವನ್ನು ಬೆಂಬಲಿಸುತ್ತೀರಾ' ಎಂದು ಕೇಳಿದರು. ಸಂದೇಶವು ಎಮೋಜಿಗಳನ್ನು ಹೊಂದಿದ್ದು ತಮಾಷೆಯಾಗಿತ್ತು. ಅದಕ್ಕೆ, ನಾನು ಹೌದು ಎಂದು ಉತ್ತರಿಸಿದೆ. ಆದರೆ, ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಎಂದು ಅರ್ಥವಲ್ಲ. ನಾನು ಭಾರತೀಯಳು. ನಾನು ಭಾರತವನ್ನು ಪ್ರೀತಿಸುತ್ತೇನೆ. ನಾನು ತಪ್ಪು ಮಾಡಿದ್ದೇನೆ ಎಂದು ತಿಳಿದುಕೊಂಡ ತಕ್ಷಣ, ನಾನು ಸ್ಟೇಟಸ್ ಅಳಿಸಿದ್ದೇನೆ. ಯಾರ ಭಾವನೆಗಳನ್ನೇನಾದರೂ ನೋಯಿಸಿದ್ದರೆ ಕ್ಷಮಿಸಿ,'' ಎಂದು ಶಿಕ್ಷಕಿ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿರುವುದು ವರದಿಯಾಗಿದೆ.

English summary
UP police have filed a case against seven people from five districts over allegations of celebrating Pakistan's victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X