• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಮ್ಲಜನಕ ಕೊರತೆ: ಯೋಗಿ ಸರ್ಕಾರದ ಹುಳುಕು ಬಹಿರಂಗಪಡಿಸಿದ ಹೈಕೋರ್ಟ್

|

ಲಕ್ನೋ, ಮೇ 12: ಕೋವಿಡ್ ಮಾಹಿತಿ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರ ನೀಡಿರುವ ಅಂಕಿ ಅಂಶಗಳ ದೋಷವನ್ನು ಅಲಹಾಬಾದ್ ಹೈಕೋರ್ಟ್ ಬಹಿರಂಗಪಡಿಸಿದೆ.

ಆಸ್ಪತ್ರೆಯ ಹಾಸಿಗೆಗಳ ಲಭ್ಯತೆಯ ಬಗ್ಗೆ ಸರ್ಕಾರದ ಸಹಾಯವಾಣಿ ಮತ್ತು ಪೋರ್ಟಲ್ ನಡುವೆ ಸರಿಯಾದ ಹೊಂದಾಣಿಕೆಯಿಲ್ಲ,ಕೋವಿಡ್ ಮಾಹಿತಿ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಉತ್ತರ ಪ್ರದೇಶ ಆಡಳಿತ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಯೋಗಿ ಸರ್ಕಾರದ ಹುಳುಕನ್ನು ಕೋರ್ಟ್ ಬಹಿರಂಗಪಡಿಸಿದೆ.

''ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗದೆ ಕೋವಿಡ್‌ ರೋಗಿಗಳ ಸಾವು ಸಂಭವಿಸುತ್ತಿರುವುದು ಅಪರಾಧ ಕೃತ್ಯವಾಗಿದ್ದು ನರಮೇಧಕ್ಕಿಂತ ಕಡಿಮೆಯಲ್ಲ'' ಎಂದು ಕೋರ್ಟ್ ಕಳೆದ ವಾರ ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಯೋಗಿ ಸರ್ಕಾರ ಅಲ್ಲಗೆಳೆದಿತ್ತು. ಆದರೆ, ನ್ಯಾಯಮೂರ್ತಿಗಳಾದ ಅಜಿತ್ ಕುಮಾರ್ ಮತ್ತು ಸಿದ್ಧಾರ್ಥ ವರ್ಮಾ ಅವರಿದ್ದ ಪೀಠ ಮೀರತ್‌ ಮತ್ತು ಲಕ್ನೋ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳ ಕುರಿತು ತನಿಖೆ ನಡೆಸುವಂತೆ ಆದೇಶಿಸಿತ್ತು.

ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಸೂಚನೆ
ಮಂಗಳವಾರ ನಡೆದ ವರ್ಚ್ಯುಯಲ್ ವಿಚಾರಣೆಯ ವೇಳೆ, ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಅಜಿತ್ ಕುಮಾರ್ ಅವರ ನ್ಯಾಯಪೀಠವು ವಕೀಲರಾದ ಅನುಜ್ ಸಿಂಗ್ ಅವರನ್ನು ಕೋವಿಡ್ ಸಹಾಯವಾಣಿ ಸಂಖ್ಯೆಗೆ ಮಧ್ಯಾಹ್ನ ವೇಳೆ ಕರೆ ಮಾಡಲು ಸೂಚಿಸಿತು.

"ಅನುಜ್ ಸಿಂಗ್ ಅವರು ಕೋವಿಡ್ ಸಹಾಯವಾಣಿಗೆ ಮತ್ತೆ ಮತ್ತೆ ಕರೆ ಮಾಡಿದರೂ, ಲೈನ್ ಕಾರ್ಯನಿರತವಾಗಿದೆ ಎಂಬ ಸಂದೇಶ ಬಂದಿದೆ. ಆದಾಗ್ಯೂ, ಅಂತಿಮವಾಗಿ ಸಂಪರ್ಕ ಸಾಧ್ಯವಾದಾಗ, ಯಾವುದೇ ಲೆವಲ್ -2 (ಅಥವಾ) ಲೆವಲ್ -3 ಹಾಸಿಗೆ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ, ಆದರೆ ಪ್ರಕರಣದ ವಿಚಾರಣೆಯ ಸಮಯದಲ್ಲಿಆನ್‌ಲೈನ್ ಪೋರ್ಟಲ್ ಗಮನಿಸಿದಾಗ ಅಲ್ಲಿ ಲೆವಲ್ -2 ಮತ್ತು ಲೆವಲ್ -3 ವಿಭಾಗದಲ್ಲಿ ಹಾಸಿಗೆಗಳ ಖಾಲಿ ಇರುವುದು ಪತ್ತೆಯಾಗಿದೆ''ಎಂದು ವಿಚಾರಣೆಯ ಸಂದರ್ಭದಲ್ಲಿ ಪ್ರಕ್ರಿಯೆ, ದಾಖಲೆಗಳ ಪ್ರಕಾರ ಹೈಕೋರ್ಟ್ ಗಮನಿಸಿದೆ.

ಹಂತ 2 ಹಾಸಿಗೆಗಳು ಮಧ್ಯಮ ರೋಗಲಕ್ಷಣದ ಕೋವಿಡ್ ರೋಗಿಗಳಿಗೆ; ಹಂತ 3 ಹಾಸಿಗೆಗಳು ಗಂಭೀರ ರೋಗಿಗಳಿಗೆ ಮೀಸಲಾಗಿದೆ.

ದೆಹಲಿಯಿಂದ ಚೆನ್ನೈವರೆಗೆ - ಹಾಸಿಗೆಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಪೋರ್ಟಲ್‌ಗಳನ್ನು ನವೀಕರಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಉತ್ತರ ಪ್ರದೇಶದಲ್ಲೂ ಹಾಸಿಗೆಗಳ ಲಭ್ಯತೆ ಮತ್ತು ನೈಜ ಪರಿಸ್ಥಿತಿಯ ಬಗ್ಗೆ ಸರ್ಕಾರಿ ಪೋರ್ಟಲ್‌ಗಳ ನಡುವಿನ ಹೊಂದಾಣಿಕೆ ವ್ಯತ್ಯಾಸ ದೇಶದ ಇತರೆಡೆಯಂತೆ ಇದೆ.

ದಿನಕ್ಕೆ ಎರಡು ಬಾರಿ ಬೆಳಗ್ಗೆ ಮತ್ತು ಮಧ್ಯಾಹ್ನ ಪೋರ್ಟಲ್ ಅನ್ನು ನವೀಕರಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಕೋರ್ಟ್ ಮುಂದೆ ತಿಳಿಸಿದೆ. ಆದಾಗ್ಯೂ, ಕೆಲವು ರಾಜ್ಯಗಳು ನಾಲ್ಕು, ಆರು ಅಥವಾ ಎಂಟು ಗಂಟೆಗಳ ನಂತರ ತಮ್ಮ ಪೋರ್ಟಲ್‌ಗಳನ್ನು ನವೀಕರಿಸುವುದಾಗಿ ಹೇಳಿಕೊಳ್ಳುತ್ತವೆ.

ಯಾವುದೇ ಖಾಲಿ ಐಸಿಯು ಹಾಸಿಗೆಗಳಿಲ್ಲ ಎಂಬ ಮಾಹಿತಿ
"ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆ (ಲಕ್ನೋ) ಯಲ್ಲಿ 3 ಐಸಿಯು ಹಾಸಿಗೆಗಳು ಖಾಲಿ ಇರುವಂತೆ ಪೋರ್ಟಲ್ ತೋರಿಸಿದೆ (ಭಾನುವಾರ) ಮತ್ತು ಆಸ್ಪತ್ರೆಯನ್ನು ಸಂಪರ್ಕಿಸಿದಾಗ (ಅದೇ ದಿನ) ಯಾವುದೇ ಖಾಲಿ ಐಸಿಯು ಹಾಸಿಗೆಗಳಿಲ್ಲ ಎಂದು ಮಾಹಿತಿ ನೀಡಿದೆ ಎಂದು ವಕೀಲ ಅನುಜ್ ಸಿಂಗ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಕಿಂಗ್ ಜಾರ್ಜ್‌ನ ಹಿರಿಯ ಅಧಿಕಾರಿಯೊಬ್ಬರು ಆಸ್ಪತ್ರೆಯ ಕಂಪ್ಯೂಟರ್ ಆಪರೇಟರ್‌ಗಳಲ್ಲಿ ಹೆಚ್ಚಿನವರು ಕೋವಿಡ್ ಸೋಂಕಿತರು ಮತ್ತು ರಜೆಯಲ್ಲಿದ್ದಾರೆ ಹೀಗಾಗಿ ನವೀಕರಣ ಪ್ರಕ್ರಿಯೆಯನ್ನು ನಿಧಾನವಾಗಿದೆ ಎಂದು ತಿಳಿಸಿದ್ದಾರೆ.

''ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡದಿದ್ದಕ್ಕಾಗಿ ಕೋವಿಡ್ ರೋಗಿಗಳ ಸಾವು ಅಪರಾಧ ಕೃತ್ಯ, ಇದು ನರಮೇಧಕ್ಕಿಂತ ಕಡಿಮೆಯಿಲ್ಲ, ದ್ರವ ವೈದ್ಯಕೀಯ ಆಮ್ಲಜನಕವನ್ನು ಆಸ್ಪತ್ರೆಗೆ ಪೂರೈಕೆ ಮಾಡದಿರುವುದು ಇದಕ್ಕೆ ಹೊಣೆಗಾರರು" ಎಂದು ಆಮ್ಲಜನಕದ ಬಿಕ್ಕಟ್ಟಿನ ಬಗ್ಗೆ, ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆದಿತ್ಯನಾಥ್ ಯಾವುದೇ ಆಮ್ಲಜನಕದ ಕೊರತೆ ಇಲ್ಲ ಎಂದಿದ್ದಾರೆ. ಕಾಳಸಂತೆಯಲ್ಲಿ ಆಮ್ಲಜನಕ ಮಾರಾಟ ಮಾಡುವವರು ಹಾಗೂ "ವದಂತಿಗಳು ಮತ್ತು ಭೀತಿಗಳನ್ನು ಹರಡುವ" ಆಸ್ಪತ್ರೆಗಳ ಮೇಲೆ ಕ್ರಮ ಜರುಗಿಸಲು ಆದೇಶ ನೀಡಿದ್ದಾರೆ. ಆದರೆ, ಇದರಿಂದ ರೋಗಿಗಳ ಬಂಧುಗಳು, ಕೋವಿಡ್ ಸ್ವಯಂಸೇವಕರು ಮತ್ತು ಆಸ್ಪತ್ರೆಗಳಿಗೆ ಬಂಧನ ಮತ್ತು ಬೆದರಿಕೆ ಎದುರಿಸುವ ಪರಿಸ್ಥಿತಿ ಎದುರಾಗಿದೆ.

ನ್ಯಾಯಾಧೀಶರಾದ ವಿ.ಕೆ. ಶ್ರೀವಾಸ್ತವ ಸಾವಿನ ಪ್ರಕರಣ
ಹೈಕೋರ್ಟ್ ನ್ಯಾಯಾಧೀಶರಾದ ವಿ.ಕೆ. ಶ್ರೀವಾಸ್ತವ ಅವರು ಕಳೆದ ವಾರ ಲಕ್ನೋದಲ್ಲಿ ನಿಧನರಾಗಿದ್ದನ್ನು ಉಲ್ಲೇಖಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ ಎಂಬ ವರದಿ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಕೋರಿದೆ.

ನ್ಯಾಯಮೂರ್ತಿ ಶ್ರೀವಾಸ್ತವ ಅವರನ್ನು ಏಪ್ರಿಲ್ 23 ರ ಬೆಳಿಗ್ಗೆ ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು "ಅವರ ಸ್ಥಿತಿ ಹದಗೆಟ್ಟಾಗ ರಾತ್ರಿ 7.30 ರ ಸುಮಾರಿಗೆ (ಅವರನ್ನು) ವೆಂಟಿಲೇಟರ್‌ನಲ್ಲಿ ಇರಿಸಲಾಯಿತು"

"ಅದೇ ರಾತ್ರಿ ಅವರನ್ನು ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಐದು ದಿನಗಳ ಕಾಲ ಐಸಿಯುನಲ್ಲಿದ್ದರು" ಎಂದು ತಿಳಿದು ಬಂದಿದೆ.

ನ್ಯಾಯಮೂರ್ತಿ ಶ್ರೀವಾಸ್ತವ ಅವರಿಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯ ಬಗ್ಗೆ ಅಫಿಡವಿಟ್ ಸಲ್ಲಿಸಿ ಮತ್ತು ಅವರನ್ನು ನೇರವಾಗಿ ಸಂಜಯ್ ಗಾಂಧಿ ಸಂಸ್ಥೆಗೆ ಏಕೆ ಕರೆದೊಯ್ಯಲಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಶ್ ಗೋಯಲ್ ಅವರನ್ನು ನ್ಯಾಯಪೀಠ ಕೇಳಿದೆ.

ಕ್ವಾರಂಟೈನ್ ಕೇಂದ್ರಗಳಲ್ಲಿನ ಕಳಪೆ ಪರಿಸ್ಥಿತಿ ಮತ್ತು ರಾಜ್ಯದಲ್ಲಿ ಅಸಮರ್ಪಕ ಕೋವಿಡ್ ಚಿಕಿತ್ಸೆಯ ಬಗ್ಗೆ ಹೈಕೋರ್ಟ್ ಕಳೆದ ವರ್ಷ ತನ್ನದೇ ಆದ ನಿರ್ದೇಶನದಲ್ಲಿ ಪಿಐಎಲ್ ದಾಖಲಿಸಿದೆ. ಪ್ರಕರಣವನ್ನು ವಾದಿಸಲು ಹೈಕೋರ್ಟ್ ನೇಮಿಸಿರುವ ವಕೀಲರಲ್ಲಿ ಸಿಂಗ್ ಒಬ್ಬರು ಎಂಬುದನ್ನು ಇಲ್ಲಿ ಸ್ಮರಿಸಬಹುದು.(ಮಾಹಿತಿ ಕೃಪೆ: ಟೆಲಿಗ್ರಾಫ್ ಇಂಡಿಯಾ)

English summary
Allahabad High Court has exposed the Uttar Pradesh administration’s claims about the reliability of its Covid information system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X