ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ಐಗೆ ಮಾಹಿತಿ ಕೊಟ್ಟರೆ ಒಲಿಯುತ್ತಾ ಪಾಕ್ ಯುವತಿಯ ಪ್ರೀತಿ?

|
Google Oneindia Kannada News

ಲಕ್ನೋ, ಜನವರಿ.20: ಪಾಕಿಸ್ತಾನ ಗುಪ್ತಚರ ಇಲಾಖೆಗೆ ಭಾರತದ ಗೌಪ್ಯ ಮಾಹಿತಿಯನ್ನು ರವಾನೆ ಮಾಡುತ್ತಿದ್ದ ಶಂಕಿತ ಐಎಸ್ಐ ಏಜೆಂಟ್ ನನ್ನು ಉತ್ತರ ಪ್ರದೇಶದ ವಾರಣಸಿಯಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಸಿಬ್ಬಂದಿ ಬಂಧಿಸಿದ್ದಾರೆ.

ವಾರಣಸಿಯ ಚಂದೌಲಿ ಮೂಲದ ಮೊಹದ್ ರಶೀದ್ ಐಎಸ್ಐ ಜೊತೆ ನಂಟು ಹೊಂದಿದ್ದ ಎಂಬ ಶಂಕೆ ಹಿನ್ನೆಲೆ ಬಂಧಿಸಿದ್ದು ಮೊದಲಿಗೆ ವಿಚಾರಣೆ ನಡೆಸಲಾಯಿತು. ಕರಾಚಿ ಮೂಲದ ಯುವತಿ ಜೊತೆ ಪ್ರೀತಿಗೆ ಬಿದ್ದ ರಶಿದ್, ಆಕೆಯನ್ನು ಮದುವೆ ಆಗುವುದಕ್ಕಾಗಿ ಐಎಸ್ಐಗೆ ಮಾಹಿತಿಯನ್ನು ನೀಡುತ್ತಿದ್ದನು ಎಂದು ತಿಳಿದು ಬಂದಿದೆ.

ಪಾತಕಿ ದಾವೂದ್ ಮಾಜಿ ಬಂಟ ಏಜಾಜ್ ನಿಂದ ಸ್ಫೋಟಕ ಮಾಹಿತಿಪಾತಕಿ ದಾವೂದ್ ಮಾಜಿ ಬಂಟ ಏಜಾಜ್ ನಿಂದ ಸ್ಫೋಟಕ ಮಾಹಿತಿ

8ನೇ ತರಗತಿ ಓದಿದ್ದ ರಶಿದ್, ವಾರಣಸಿಯಲ್ಲಿ ಟೈಲರಿಂಗ್ ಘಟಕ ಹಾಗೂ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದನು. 23 ವರ್ಷದ ರಶೀದ್ ನ ತಂದೆ ಮೊಹದ್ ಹಾಗೂ ತಾಯಿ ಶೆಹಜಾದಿ ಬೇಗಂ ವಿಚ್ಛೇದನ ಪಡೆದಿದ್ದು, ನಂತರ ಮರು ವಿವಾಹವಾಗಿದ್ದರು. ರಶೀದ್ ಚಂದೌಲಿಯಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದನು. ಕರಾಚಿಗೆ ಭೇಟಿ ನೀಡಿದ್ದ ವೇಳೆ ಅಲ್ಲಿ ಯುವತಿ ಜೊತೆಗೆ ರಶೀದ್ ಗೆ ಪ್ರೇಮಾಂಕುರ ಆಗುತ್ತದೆ. ಆ ಯುವತಿಯನ್ನು ಮದುವೆ ಆಗುವುದಕ್ಕಾಗಿಯೇ ರಶೀದ್ ಭಾರತದ ಗೌಪ್ಯ ಮಾಹಿತಿಯನ್ನು ಐಎಸ್ಐ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತಿದ್ದ ಎಂದು ತಿಳಿದು ಬಂದಿದೆ.

ಪಾಕಿಸ್ತಾನಕ್ಕೆ ಗೌಪ್ಯ ಸಂದೇಶ ರವಾನಿಸುತ್ತಿದ್ದ ಏಜೆಂಟ್

ಪಾಕಿಸ್ತಾನಕ್ಕೆ ಗೌಪ್ಯ ಸಂದೇಶ ರವಾನಿಸುತ್ತಿದ್ದ ಏಜೆಂಟ್

ಕಳೆದ ಮಾರ್ಚ್.2019ರಿಂದಲೂ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐಗೆ ಮೊಹದ್ ರಶೀದ್ ಸಂದೇಶಗಳನ್ನು ರವಾನೆ ಮಾಡುತ್ತಿದ್ದನು. ವಾಟ್ಸಾಪ್ ಮೂಲಕ ಗೌಪ್ಯ ಮಾಹಿತಿಯನ್ನು ಕಳುಹಿಸಿ ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಕಾಶಿ ವಿಶ್ವನಾಥ್ ದೇವಸ್ಥಾನ, ವಾಯುಸೇನೆ ಆಯ್ಕೆ ಮಂಡಳಿ, ಜ್ಞಾನವ್ಯಾಪಿ ಮಸೀದಿ, ಸಂಕಟಮೋಚನ ದೇವಸ್ಥಾನ, ವಾರಣಸಿಯ ಧಶಾಶ್ವಮೇಧಘಾಟ್, ಆಗ್ರಾ ಕೋಟೆ, ನೈನಿ ಬ್ರಿಡ್ಜ್, ಪ್ರಯಾಗ್ ರಾಜ್ ನ ಅರ್ಧ ಕುಂಭಮೇಳ, ಚಂದೌಲಿ ಹಾಗೂ ಅಮೇಥಿಯ ಸಿಆರ್ ಪಿಎಫ್ ಶಿಬಿರ, ಗೋರಖ್ ಪುರ್ ರೈಲ್ವೆ ನಿಲ್ದಾಣ, ದೆಹಲಿಯ ಇಂಡಿಯಾ ಗೇಟ್, ಮಹಾರಾಷ್ಟ್ರದ ನಾಗ್ಪುರ್ ರೈಲ್ವೆ ನಿಲ್ದಾಣಗಳ ಫೋಟೋ ಹಾಗೂ ವಿಡಿಯೋಗಳನ್ನು ಐಎಸ್ಐಗೆ ಇದೇ ಮೊಹದ್ ರಶೀದ್ ರವಾನೆ ಮಾಡಿದ್ದನು ಎನ್ನಲಾಗಿದೆ.

ಸುಳಿವು ಕಂಡು ಹಿಡಿದ ಭಾರತದ ಗುಪ್ತಚರ ಇಲಾಖೆ

ಸುಳಿವು ಕಂಡು ಹಿಡಿದ ಭಾರತದ ಗುಪ್ತಚರ ಇಲಾಖೆ

ಜುಲೈ.2019ರಲ್ಲಿ ವಾರಣಸಿ ಮೂಲದ ವ್ಯಕ್ತಿಯೊಬ್ಬನಿಂದ ಐಎಸ್ಐಗೆ ಮಾಹಿತಿ ರವಾನೆ ಆಗುತ್ತಿರುವ ಬಗ್ಗೆ ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸುಳಿವು ಸಿಕ್ಕಿತು. ಇದರ ಬೆನ್ನಲ್ಲೇ ಶಂಕಿತನ ಪತ್ತೆ ಹಚ್ಚಲು ಉತ್ತರ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯ ತಂಡವನ್ನು ರಚನೆ ಮಾಡಲಾಗಿತ್ತು. ಮೊಬೈಲ್ ನೆಟ್ ವರ್ಕ್ ಹಾಗೂ ಸಂದೇಶಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಮೊದಲಿಗೆ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಪಾಕಿಸ್ತಾನದ ಗುಪ್ತಚರ ಇಲಾಖೆಗೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿರುವ ಅಂಶ ಬೆಳಕಿಗೆ ಬಂದಿದ್ದು, ಆರೋಪಿ ರಶೀದ್ ನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಅಧಿಕಾರಿಗಳು ಬಂಧಿಸಿದ್ದಾರೆ.

ಎರಡು ಬಾರಿ ಪಾಕಿಸ್ತಾನದ ಕರಾಚಿಗೆ ಹೋಗಿದ್ದ ರಶೀದ್

ಎರಡು ಬಾರಿ ಪಾಕಿಸ್ತಾನದ ಕರಾಚಿಗೆ ಹೋಗಿದ್ದ ರಶೀದ್

ಇನ್ನು, ವಾರಣಸಿ ಯುವಕನಿಗೂ ಕರಾಚಿಗೂ ಬೆಳೆದ ನಂಟಿನ ಹಿಂದೆ ರೋಚಕ ಕಥೆಯಿದೆ. 2017 ಹಾಗೂ 2018ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಎಂದು ರಶೀದ್ ತೆರಳಿದ್ದನು. ಕರಾಚಿಯ ಆರೆಂಜ್ ಟೌನ್ ನಲ್ಲಿದ್ದ ಚಿಕ್ಕಮ್ಮ ಹಸೀನಾ-ಶಾಗಿರ್ ಅಹ್ಮದ್ ದಂಪತಿ ಹಾಗೂ ಪುತ್ರ ಶಜೇಬ್ ಮನೆಯಲ್ಲೇ ಉಳಿದುಕೊಂಡಿರುತ್ತಾನೆ. ಈ ವೇಳೆ ಸಂಬಂಧಿಕರ ಮನೆಯಲ್ಲಿದ್ದ ಯುವತಿ ಮೇಲೆ ಪ್ರೀತಿ ಚಿಗುರುತ್ತದೆ. ಈ ಯುವತಿಯನ್ನು ಮದುವೆ ಆಗಬೇಕು ಎಂದುಕೊಂಡಿದ್ದ ರಶೀದ್ ಗೆ ತನ್ನ ಸಹೋದರ ಶಜೇಬ್, ಇಬ್ಬರು ಐಎಸ್ಐ ಅಧಿಕಾರಿಗಳನ್ನು ಪರಿಚಯ ಮಾಡಿಸುತ್ತಾನೆ.

ಆಸಿನ್ ಹಾಗೂ ಅಮದ್ ಎಂಬ ಐಎಸ್ಐ ಅಧಿಕಾರಿಗಳ ಭೇಟಿ ವೇಳೆ ರಶೀದ್ ಗೆ ಭರವಸೆ ನೀಡಲಾಗುತ್ತದೆ. ಭಾರತದ ಗೌಪ್ಯ ಮಾಹಿತಿಯನ್ನು ನೀಡಿದರೆ, ಕರಾಚಿಯಲ್ಲಿ ರಶೀದ್ ಪ್ರೀತಿಸಿದ ಯುವತಿ ಜೊತೆ ಮದುವೆ ಮಾಡಿಸುವುದಾಗಿ ಐಎಸ್ಐ ಅಧಿಕಾರಿಗಳು ಭರವಸೆ ನೀಡುತ್ತಾರೆ. ಯುವತಿ ಜೊತೆ ಮದುವೆಯ ಆಸೆಗೆ ಬಿದ್ದು ರಶೀದ್, ದೇಶದ ಗೌಪ್ಯ ಮಾಹಿತಿಯನ್ನೆಲ್ಲ ರವಾನೆ ಮಾಡಿದ್ದಾನೆ.

ವಾಟ್ಸಾಪ್ ನಂಬರ್ ಕ್ರಿಯೇಟ್ ಮಾಡಿದ್ದೇ ಮೊಮ್ಮದ್ ರಶೀದ್

ವಾಟ್ಸಾಪ್ ನಂಬರ್ ಕ್ರಿಯೇಟ್ ಮಾಡಿದ್ದೇ ಮೊಮ್ಮದ್ ರಶೀದ್

ಭಾರತೀಯ ಮೂಲದ ಎರಡು ಸಿಮ್ ಕಾರ್ಡ್ ಗಳನ್ನು ಐಎಸ್ಐ ಅಧಿಕಾರಿಗಳಾದ ಆಸಿನ್ ಹಾಗೂ ಅಮದ್ ಗೆ ಸ್ವತಃ ರಶೀದ್ ನೀಡುತ್ತಾನೆ. ಎರಡು ದೂರವಾಣಿ ಸಂಖ್ಯೆಯಲ್ಲಿ ವಾಟ್ಸಾಪ್ ಅನ್ನು ಕೂಡಾ ಕ್ರಿಯೇಟ್ ಮಾಡಿ ನೀಡುತ್ತಾನೆ. ಅಲ್ಲಿಂದ ಮುಂದೆ ದೇಶದಲ್ಲಿನ ಗೌಪ್ಯ ಮಾಹಿತಿ, ಫೋಟೋ, ವಿಡಿಯೋಗಳನ್ನು ರವಾನೆ ಮಾಡುತ್ತಿದ್ದನು. ಹೀಗೆ ಮಾಹಿತಿ ರವಾನೆ ಮಾಡುತ್ತಿದ್ದ ರಶೀದ್ ಗೆ ಕಳೆದ ಮೇ.2019ರಲ್ಲಿ ಪಾಕಿಸ್ತಾನ ಲಾಂಛನವುಳ್ಳ ಟೀ-ಶರ್ಟ್ ಹಾಗೂ ಜೂನ್ ನಲ್ಲಿ 5 ಸಾವಿರ ರುಪಾಯಿ ಸಂಭಾವನೆಯನ್ನು ನೀಡಲಾಗಿತ್ತು.

ರಾಜಸ್ಥಾನದಲ್ಲಿ ಅಂಗಡಿ ತೆರೆಯಲು ಹಣ ನೀಡುವ ಭರವಸೆ

ರಾಜಸ್ಥಾನದಲ್ಲಿ ಅಂಗಡಿ ತೆರೆಯಲು ಹಣ ನೀಡುವ ಭರವಸೆ

ವಾರಣಸಿಯಲ್ಲಿ ಇದ್ದುಕೊಂಡು ಭಾರತದ ಗೌಪ್ಯ ಮಾಹಿತಿ ಕಳುಹಿಸುತ್ತಿದ್ದ ರಶೀದ್ ಕುರಿತಾಗಿ ಇಬ್ಬರು ಐಎಸ್ಐ ಅಧಿಕಾರಿಗಳು ಪಾಕಿಸ್ತಾನ ಗುಪ್ತಚರ ಇಲಾಖೆಯ ಮುಖ್ಯ ಅಧಿಕಾರಿಯ ಜೊತೆಗೆ 2019ರ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಚರ್ಚೆ ನಡೆಸಿದ್ದರು. ಜೋಧಪುರ್ ನ ಸೇನಾ ಶಿಬಿರದ ಬಳಿ ಅಂಗಡಿಯೊಂದನ್ನು ತೆರೆಯಲು ರಶೀದ್ ಗೆ 1 ಲಕ್ಷ ರುಪಾಯಿ ಹಣ ನೀಡಬೇಕು. ಹೀಗೆ ಅಂಗಡಿ ತೆರೆದ ರಶೀದ್, ಸೇನಾ ಚಟುವಟಿಕೆಗಳ ಮಾಹಿತಿ ನೀಡಬೇಕು ಎಂದು ತಿಳಿಸಿದ್ದರು. ಇದಕ್ಕಾಗಿ ಪ್ರತಿ ತಿಂಗಳು ರಶೀದ್ ಗೆ 10 ರಿಂದ 15 ಸಾವಿರ ರುಪಾಯಿ ಸಂಭಾವನೆ ನೀಡುವ ಬಗ್ಗೆ ಚರ್ಚಿಸಿದ್ದರು ಎಂದು ಹೇಳಲಾಗುತ್ತಿದೆ.

English summary
A Man Send Information To Pakistani Intelligence Agencies For Married The Lover In Karachi. UP ATS Team Arrested Who Link With ISI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X